ಪ್ಯಾಲಿಯೋಲಿಥಿಕ್ ಕಾಲದ ಮಧ್ಯ ಅಥವಾ ಉತ್ತರ ಭಾಗದಲ್ಲಿ ಮನುಷ್ಯನ ಚಟುವಟಿಕೆಗಳು ಹೆಚ್ಚು ಅರ್ಥವತ್ತಾದಂತೆ ತೋರುತ್ತವೆ. ಶವ ಸಂಸ್ಕಾರದಂತಹ ಪದ್ಧತಿಗಳು ಆಗಲೇ ಪ್ರಾರಂಭವಾದವು. ಕಲೆಯ ಮೊದಲ ಮೈಲಿಗಲ್ಲುಗಳೂ ನಮಗೆ ಇಲ್ಲೇ ದಕ್ಕುತ್ತವೆ. ಪ್ಯಾಲಿಯೋಲಿಥಿಕ್ ಕಾಲದ ಕಲಾವಿದರು ಕಲ್ಲು, ದಂತ, ಮರ, ಮೂಳೆಗಳಲ್ಲಿ ಶಿಲ್ಪಗಳನ್ನು ರಚಿಸುತ್ತಿದ್ದರು. ಸಾಮಾನ್ಯವಾಗಿ ಈ ಶಿಲ್ಪಗಳು ಕಣ್ಣಿಗೆ ಕಾಣುವ ಪ್ರಪಂಚದ ಸಂಗತಿಗಳ ಪುನರ್ ಸೃಷ್ಟಿ ಮಾತ್ರವೇ ಆಗಿತ್ತು.
ಮರ, ಮೂಳೆ, ಕಲ್ಲಿನ ಆಯುಧಗಳನ್ನು ಬಳಸುವ ಕಲೆ ಮಾನವನಿಗಾಗಲೇ ಸಿದ್ಧಿಸಿತ್ತು. ಚಿಕ್ಕ ಚಿಕ್ಕ ಕುಟುಂಬಗಳಾಗಿ ಹಂಚಿ ಹೋಗಿದ್ದ ಮಾನವ ಜನಾಂಗ ಆಹಾರವನ್ನು ಅರಸಿಕೊಂಡು ಸರ್ವದಾ ಅಲೆಮಾರಿಗಳಾಗಿ ಕಾಲ ಕಳೆಯುತ್ತಿದ್ದವು. ಹಾಗಾಗಿಯೇ ಆತ ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಸುಲಭವಾಗಿ ತನ್ನೊಡನೆ ಸಾಗಿಸಬಹುದಾದ (Portable) ಶಿಲ್ಪಗಳನ್ನು ಸೃಷ್ಟಿಸುತ್ತಿದ್ದನೇನೋ ಎಂದು ಭಾವಿಸಬಹುದು. ನಾವು ಹೀಗೆ ಊಹಿಸುವ ಸಂಭವನೀಯತೆಯೊಡನೆ ಅಚ್ಚರಿಯ ಅಂಶವೊಂದು ಥಳುಕು ಹಾಕಿಕೊಳ್ಳುತ್ತದೆ. ಅದು ಅವತ್ತಿನ ಮಾನವನಿಗೂ ಇದ್ದಿರಬಹುದಾದ ಭಾವಸ್ಪುರಣೆ. ನಿರ್ಜೀವ ವಸ್ತುಗಳೂ (ಆ ಕಾಲದಲ್ಲಿ ಹೇಗೋ ಏನೋ..!) ಮನುಷ್ಯನ ಮನದಲ್ಲಿ ಪಡೆಯುವ ಸ್ಥಾನ ಕುತೂಹಲ ಹುಟ್ಟಿಸುತ್ತದೆ. (ರಾಬರ್ಟ್ ಜ್ಹೆಮೆಕೀಸ್ ನಿರ್ದೇಶನದ “ಕಾಸ್ಟ್ ಅವೇ” ಚಿತ್ರ ನಿಮಗೆ ನೆನಪಿರಬಹುದು. ಟಾಮ್ ಹ್ಯಾಂಕ್ಸ್ ರ ಅದ್ಭುತವಾದ ನಟನೆಯ ಈ ಚಿತ್ರದಲ್ಲಿ ಕೇವಲ ಕಣ್ಣು, ಬಾಯಿ ಬರೆದ, ಒಡೆದ ಫುಟ್ಬಾಲ್ ತುಂಡು ಕಥಾನಾಯಕನ ನಿತ್ಯ ಸಂಗಾತಿಯಾಗಿರುತ್ತದೆ.)


ಈ ಅವಧಿಯ ಬಹುಮುಖ್ಯ ಶಿಲ್ಪ “Venus of Willendorf”. ಆಸ್ಟ್ರಿಯಾದ ಕ್ರೆಮ್ ಪಟ್ಟಣದ ‘ದನುಬೆ’ ನದಿ ಸಮೀಪದ ವಿಲ್ಲೆನ್ದಾರ್ಫ್ ಎಂಬಲ್ಲಿ ದೊರಕಿರುವ ಈ ಶಿಲ್ಪ 11 .1 ಸೆಂಟಿ ಮೀಟರಿನಷ್ಟು ಚಿಕ್ಕದು. 1908 ರಲ್ಲಿ Josef Szombathy ಎಂಬುವವರಿಂದ ಪತ್ತೆಯಾದ ಇದು ಕ್ರಿ.ಪೂ 24 ರಿಂದ 22,000 ವರ್ಷಗಳ ನಡುವಿನದೆಂದು ಒಂದು ಅಂದಾಜು. ಬಹುಷಃ ಬೇರೆ ಯಾವುದೋ ಪ್ರಾಂತ್ಯದಲ್ಲಿ ತಯಾರಾದ ಶಿಲ್ಪ ಇದಿರಲಿಕ್ಕೂ ಸಾಕು. ಪ್ಯಾಲಿಯೋಲಿಥಿಕ್ (ಹಳೆ ಶಿಲಾಯುಗದಲ್ಲಿ ಮೂರು ಭಾಗಗಳು: 1.ಪ್ಯಾಲಿಯೋಲಿಥಿಕ್ 2.ಮೆಸೋಲಿಥಿಕ್ 3.ನಿಯೋಲಿಥಿಕ್ ) ಕಾಲದ ಬಹು ಮುಖ್ಯ ಶಿಲ್ಪವಾಗಿ ಇದು ಗುರುತಿಸಲ್ಪಡುತ್ತದೆ. ‘Venus of Berekhat ram’ (35 ಮಿಲೀ ಮೀಟರ್ ಉದ್ದದ, ಇಸ್ರೇಲ್-ಸಿರಿಯಾದ ಗೊಲಾನ್ ಘಟ್ಟ ಸಾಲಿನ ‘ಬೇರೆಖಾತ್ ರಾಮ್’ ಎಂಬಲ್ಲಿ ದೊರಕಿದ ಮುಖವಿಲ್ಲದ, ಮಹಿಳೆಯದಿರಬಹುದೆಂದು ಊಹಿಸಬಹುದಾದ ಶಿಲ್ಪ), ‘Venus of  Tan-Tan’ (6  ಸೆಂಟಿ ಮೀಟರ್ ಉದ್ದದ ಮೊರಾಕ್ಕೋ ದೇಶದ ‘ಡ್ರಾ’ ನದಿ ತೀರದಲ್ಲಿ ಸಿಕ್ಕಿದ ಮುಖವಿಲ್ಲದ ಶಿಲ್ಪ) ಗಳಿಗಿಂತ ‘ವೀನಸ್ ಆಫ್ ವಿಲ್ಲೆನ್ದಾರ್ಫ್’ ಹೆಚ್ಚು ಸ್ಪಷ್ಟವಾಗಿಯೂ, ಸುಂದರವಾಗಿಯೂ, ನೈಪುಣ್ಯಗಳಿಂದ ಕೂಡಿದ್ದೂ ಆಗಿದೆ. ಪ್ರಸ್ತುತ ವಿಯೆನ್ನಾದ ಪ್ರಾಕೃತಿಕ ಕಲಾ ಸಂಗ್ರಹಾಲಯದಲ್ಲಿ ಭದ್ರವಾಗಿರುವ ಈ ಕಲಾಕೃತಿ ನುರಿತ ಶಿಲ್ಪಿಯೊಬ್ಬನಿಂದಲೇ ಸಿದ್ಧವಾಗಿದ್ದಿರಬಹುದೆಂದು ನಂಬಬಹುದು. ಏಕೆಂದರೆ ಲೈಮ್ ಸ್ಟೋನ್ ನಿಂದ ತಯಾರಾಗಿರುವ ಈ ಶಿಲ್ಪದಲ್ಲಿ ಕೆಲವು ಸೂಕ್ಷ್ಮ ಕೆತ್ತನೆಗಳಿವೆ. ಈ ಕೆತ್ತನೆಗಳಿಗೆ ಅನೇಕ ಉಪಕರಣಗಳ ಬಳಕೆಯೂ ಆದಂತೆ ತೋರುತ್ತದೆ. ಅಲ್ಲದೇ ಆ ಶಿಲ್ಪಿಗೆ ದೇಹದ ಅವಯವಗಳ ರೂಪು, ಅಳತೆಯ ಕುರಿತು ನಿಖರವಾದ ಜ್ಞಾನವೂ ಇರಬಹುದು. ಶಿಲ್ಪವನ್ನು ಕೆತ್ತಿದ ನಂತರ ಅದಕ್ಕೆ ಉಜ್ಜಿ ಮೆರುಗು ನೀಡಲಾಗಿದೆ. ವಿಲ್ಲೆನ್ದಾರ್ಫ್ ನ ಈ ಶಿಲ್ಪ ವೃತ್ತಾಕಾರವಾದ ಭಾಗಗಳಿಂದ ಕೂಡಿದೆ. ಈ ಶಿಲ್ಪದ ತಲೆ, ಸ್ತನ, ಹೊಟ್ಟೆ, ತೊಡೆ ಇತ್ಯಾದಿ ಭಾಗಗಳು ಜಾಸ್ತಿಯೇ ಎನ್ನಿಸುವಷ್ಟು ದೊಡ್ಡದಾಗಿದೆ. ಹೊಕ್ಕಳನ್ನು ಆಳವಾಗಿ ಕೊರೆಯಲಾಗಿದೆ. ಶಿಲ್ಪದ ಮುಖದ ಬಾಗ ಸ್ಪಷ್ಟವಾಗಿಲ್ಲದೆ, ತಲೆಯ ಮೇಲೆ ಕೊರೆದಿರುವ ಸುರುಳಿ ಚಿತ್ತಾರಗಳೇ ಅರ್ಧ ಮುಖವನ್ನೂ ತುಂಬಿದೆ. ಗಾಲ್ಫ್ ಚೆಂಡಿನಾಕಾರದ ಇದು ಏಳು ಮಡಿಕೆಗಳಾಗಿ ಹೆಣಿಗೆ ಹಾಕಿದ ಜಡೆಯೂ ಇರಬಹುದು. ಇದರ ಪ್ರತಿ ಮಡಿಕೆಗಳು ಗಾತ್ರದಲ್ಲಿ ವ್ಯತ್ಯಾಸವನ್ನು ಹೊಂದಿವೆ. ತಲೆಯ ಮೇಲಿನ ಮಡಿಕೆ ಗುಲಾಬಿಯಾಕಾರದ ಕೆತ್ತನೆಯಾಗಿದೆ. ಈ ಮಾದರಿಯು ಚರ್ಮ ಅಥವಾ ನಾರಿನಿಂದ ಮಾಡಿದ ಟೋಪಿಯೂ ಆಗಿರಬಹುದೆಂಬ ವಾದವಿದೆ.

ಇನ್ನುಳಿದಂತೆ ಈ ಶಿಲ್ಪದ ಮೊಣಕಾಲ ನೆರಿಗೆಗಳು ಹೆಚ್ಚು ಸಹಜವೆನ್ನಿಸುವಂತಿವೆ. ವೀನಸ್ ಆಫ್ ವಿಲ್ಲೆನ್ದಾರ್ಫ್ ಆಫ್ರಿಕಾದ ಬುಷ್ಮೆನ್, ಹೊತ್ತೆನ್ತೊಸ್, ಪಿಗ್ಮಿಸ್ ಬುಡಕಟ್ಟು ಜನಾಂಗದ ವೈಶಿಷ್ಟ್ಯಗಳಿಗೆ ಹೋಲುತ್ತದೆ. ಶಿಲ್ಪಕ್ಕೆ ಕಾಲುಗಳಿಲ್ಲ. ಅವನ್ನು ಹಾಗೆಯೇ ಕೆತ್ತಲಾಗಿದೆಯೋ ಅಥವಾ ‘ಕಾಲ’ನ ಹೊಡೆತಕ್ಕೆ ಅವು ನಾಶವಾಗಿವೆಯೋ ಎಂಬುದು ನಿಗೂಢ. ಇತರೆ ಪ್ಯಾಲಿಯೋಲಿಥಿಕ್ ಶಿಲ್ಪಗಳಿಗಿಂತ ಇದು ಸುಂದರವಾಗಿದ್ದು, ದಡೂತಿ ಮಹಿಳೆಯೊಬ್ಬಳ ಯಥಾವತ್ತಾದ ಚಿತ್ರಣದಂತಿದೆ. ನೇರ ಭುಜದಿಂದ ಶುರುವಾದ ಈಕೆಯ ಕೈಗಳು ಸ್ತನಗಳ ಮೇಲೆ ಸುತ್ತುವರಿದಿವೆ. ಕೈಬೆರಳುಗಳು, ಮಣಿಕಟ್ಟಿನ ಬಳಿ ತೊಟ್ಟಿರುವ ಬಳೆಯಂತಹ ವಸ್ತುಗಳು ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಣುವಂತಿವೆ. ಸ್ತನ ಮತ್ತು ಹೊಟ್ಟೆಯ ಭಾಗವನ್ನು ನೋಡಿದರೆ ಅದರಲ್ಲಿ ಸಹ ಒಂದು ಮುಖದ ಆಕೃತಿ ಅಡಕವಾದಂತೆ ಇದೆ. ಇದು ಉದ್ದೇಶಪೂರ್ವಕವಾಗಿ ಕೆತ್ತಿದ್ದಲ್ಲ ಎಂಬುದರ ಕುರಿತು ಸಹಮತವಿದೆ. (ಸೋಮನಾಥಪುರದ ಮತ್ತು ಕೆಲವು ಹೊಯ್ಸಳ ವಿಷ್ಣು ಶಿಲ್ಪಗಳಲ್ಲಿ ಉದರದ ಭಾಗ ಗೋವಿನಂತೆ ಕಾಣುವುದು. ಈ ಕುರಿತು ಕೆ.ಎನ್. ಗಣೇಶಯ್ಯನವರ ಪ್ರಸಿದ್ಧ ಕಥೆಯೂ ಇದೆ.) ಇದು ಸಂತಾನ ದೇವತೆಯೇ? ಎಂಬುದರ ಕುರಿತು ಇತಿಹಾಸಜ್ಞರಲ್ಲಿ ದ್ವಂಧ್ವಗಳಿವೆ. ವೀನಸ್ ಕುರಿತಾದ ಅಧ್ಯಯನಗಳು ಮುಂದುವರಿದಿವೆ. ಹೇಗೂ ಇರಲಿ, ಮಾನವ ಇತಿಹಾಸ ಪ್ರಾರಂಭದ ಕಲಾ ಸೃಷ್ಟಿಯ ಕುರಿತಾದ ಸಾಕಷ್ಟು ಕುತೂಹಲವನ್ನು ವೀನಸ್ ಆಫ್ ವಿಲ್ಲೆನ್ದಾರ್ಫ್ ತಣಿಸುತ್ತದೆ.

(ಕ್ಲಿಕ್ಕಿಸಿದರೆ ಚಿತ್ರ ಹೆಚ್ಚು ಸ್ಪಷ್ಟ)

(ಚಿತ್ರ ಕೃಪೆ: Don Hitchcock ಮತ್ತು ಇತರೆ ಅಂತರ್ಜಾಲ ತಾಣಗಳು)

Comments on: "‘ವಿಲ್ಲೆಂಡಾರ್ಫ್’ನ ‘ವೀನಸ್’" (4)

  1. ಪ್ರವೀಣ,
    ನನ್ನ ಅತ್ಯಂತ ಮೆಚ್ಚಿನ ಸಿನೆಮಾ ಒಂದಿದೆ..”ದ ಥರ್ಟೀಂತ್ ವಾರಿಯರ್” ಅಂತ, ಆಂಟೋನಿಯೋ ಬ್ಯಾಂಡೆರಾಸ್ ಅಭಿನಯದ್ದು. ಅದರಲ್ಲಿ ಇದೇ ರೀತಿಯ ಪ್ರತಿಮೆಯ ಬಳಕೆಯಾಗಿದೆ. ಮಾತೃದೇವತೆಯ ಆರಾಧನೆ, ಮಾತೃಪ್ರಧಾನ ಪದ್ಧತಿಗಳು ಬಳಕೆಯಲ್ಲಿದ್ದ ಬುಡಕಟ್ಟುಗಳಲ್ಲಿ ಈ ರೀತಿಯ ಪ್ರತಿಮೆಗಳ ಬಳಕೆ ಹೆಚ್ಚು. ಒಳ್ಳೆ ಲೇಖನ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: