ವಿಸ್ತಾರ ದಿಗಂತದ ಅಂಚನ್ನು ಚುಂಬಿಸೋ ಅಗಾಧ ಜಲರಾಶಿ, ಗುಳೆ ಬರುವ ನೂರೆಂಟು ಪ್ರಬೇಧದ ಹಕ್ಕಿಗಳ ಪಕ್ಷಿಕಾಶಿ, ಇವೆಲ್ಲವುಗಳ ನಡುವೆ ದೋಣಿಯೇರಿ ಹೊರಟರೆ ಖುಶಿಯೋ ಖುಶಿ. ಏಷ್ಯಾದ ಅತಿ ದೊಡ್ಡ ಉಪ್ಪು ನೀರಿನ ಸರೋವರವೆಂಬ ಖ್ಯಾತಿ ಹೊತ್ತ ‘ಚಿಲ್ಕಾ’ ಸರೋವರದ ನಡುವಿನ ಒಂದಿಷ್ಟು ಹಸಿ ನೆನಪುಗಳು.

ಭಾರತದ ಪೂರ್ವ ಕಡಲಿನಂಚಿನ ನಾಡು ಓರಿಸ್ಸಾ. ದೇವಾಲಯಗಳ ನಗರವೆಂದೇ ಪ್ರಸಿದ್ಧವಾದ ಭುವನೇಶ್ವರ ಇಲ್ಲಿನ ರಾಜಧಾನಿ. ಇಲ್ಲಿಂದ ಸರಿ ಸುಮಾರು ನೂರು ಕಿಲೋ ಮೀಟರುಗಳ ಅಂತರಕ್ಕಿದೆ ಚಿಲ್ಕಾ ಸರೋವರ. ಇಲ್ಲಿಂದ ಪುರಿಗೆ ಒಂದು ಒಂದೂವರೆ ಗಂಟೆಯ ಪ್ರಯಾಣವಷ್ಟೆ. ಮೂವತ್ತು ಜನರಿದ್ದ ನಮ್ಮ ತಂಡ, ವಾಸ್ತವ್ಯ ಹೂಡಿದ್ದ ಪುರಿಯಿಂದ ಮುಂಜಾವಿನ ಶುರುವಿಗೇ ಹೊರಟು ನಸುಕು ಹರಿವಷ್ಟರಲ್ಲಿ ಕೋನಾರ್ಕದ ‘ಸೂರ್ಯ’ ದರ್ಶನಕ್ಕೆ ಹಾಜರಾಗಿದ್ದೆವು. ಕೋನಾರ್ಕದ ಭೇಟಿಯ ನಂತರ ಪುರಿಗೆ ವಾಪಸಾಗುವ ನಮ್ಮ ಯೋಜನೆಯನ್ನು ಬದಲಾಯಿಸಿದ್ದು ನಮ್ಮೊಡನೆ ಹರಟೆ, ಹಾಡುಗಳಲ್ಲಿ ಒಂದಾಗಿಯೂ ಅನಾಮಿಕವಾಗಿಯೇ ಉಳಿದ ನಮ್ಮ ಬಸ್‌ನ ಕ್ಲೀನರ್. ಮುಂಜಾವಿಗೇ ಎದ್ದಿದ್ದ ನಮಗೇನೋ ಪುನಃ ಪುರಿಗೆ ಹೋಗಿ ಗಡದ್ದಾಗಿ ನಿದ್ದೆ ತೆಗೆಯುವ ಕುರಿತು ವಿಪರೀತ ಆಸಕ್ತಿ ಇತ್ತು. ಆದರೆ ಚಿಲ್ಕಾದಲ್ಲಿ ಡಾಲ್ಫಿನ್‌ಗಳು ಕಾಣ ಸಿಗುತ್ತವೆ ಎಂಬ ಕ್ಲೀನರ್‌ನ ಮಾತೇ ಚಿಲ್ಕಾ ಸರೋವರದತ್ತ ನಮ್ಮ ಚಿತ್ತ ತಿರುಗಿಸಿದ್ದು. ಡಿಸ್ಕವರಿಗಳಲ್ಲಿ ಕಂಡ ಮುದ್ದಾದ ಡಾಲ್ಫಿನ್‌ಗಳ ಆಕರ್ಷಕ ಜಿಗಿತ ನಮ್ಮ ಕಣ್ಣುಗಳಲ್ಲಿ ಗಿರಗಿಟ್ಲೆಯಾಗಿತ್ತು. ಸರಿ, ನಮ್ಮ ಬಸ್ ಚಿಲ್ಕಾದತ್ತ ಮುಖ ಮಾಡಿತು.

ನಡು ಮದ್ಯಾಹ್ನದ ಹೊತ್ತಿಗೆ ನಾವು ಚಿಲ್ಕಾ ಸೇರಿದ್ದೆವು. ಎಲ್ಲರ ಹೊಟ್ಟೆಗಳೂ ಹಸಿವಿಗೆ ಚುರುಗುಟ್ಟುತ್ತಿತ್ತು. ಆ ಹೋಟೆಲ್‌ನ ಹೆಸರ ಬುಡದಲ್ಲಿ ‘ವೆಜ್ ಅಂಡ್ ನಾನ್‌ವೆಜ್’ ಎಂಬುದನ್ನು ಕಂಡದ್ದೇ ತಡ ನಮ್ಮ ವೆಜ್ ಟ್ರೂಪ್‌ನವರ ಮುಖಗಳು ಕಿರಿದಾಯ್ತು. ಆದರೂ ಚಿಲ್ಕಾದಲ್ಲಿ ಮತ್ತೆಲ್ಲೂ ಸಸ್ಯಾಹಾರಿ ಹೋಟೆಲ್‌ಗಳಿಲ್ಲವೆಂಬ ತಿಳಿವು ನಮ್ಮನ್ನು ಆ ಹೋಟೆಲ್‌ಗೇ ನುಗ್ಗಿಸಿತ್ತು. ಸಸ್ಯಾಹಾರಿಗಳಿಗೆಲ್ಲಾ ಮತ್ತೊಂದು ಕೊಠಡಿಯ ವ್ಯವಸ್ಥೆಯೂ ಆಯಿತು. ಅಂತೂ ಎಲ್ಲಾ ಮುಗಿಸಿ ಒಂದೆರಡು ಕಿಲೋ ಮೀಟರುಗಳಷ್ಟು ಒಳ ಸಾಗಿ ಸರೋವರದ ತೀರಕ್ಕೆ ಬಂದೆವು. ಮೂರು ತಾಸಿನ ವಿಹಾರಕ್ಕೆ, ಹತ್ತು ಜನರಿಗೆ ಏಳುನೂರು ರೂಪಾಯಿಗಳನ್ನು ತೆತ್ತು ಮಷಿನ್ ಬೋಟ್ ಒಂದನ್ನು ಏರಿದ್ದೂ ಆಯ್ತು.

ನೀರ ಮೇಲೂ ವಿಸ್ಮಯ ಲೋಕವೊಂದರ ಅನಾವರಣ ಸಾಧ್ಯ ಎಂಬ ಕಲ್ಪನೆ ಅವತ್ತು ನನ್ನೆದುರೇ ತೆರೆದುಕೊಳ್ಳುವ ಸಂಧಿಕಾಲವೆನಿಸಿತ್ತು. ತೀರದಲ್ಲೇ ಒಂದೆರಡು ಸುತ್ತು ಹಾಕಿದ ನಮ್ಮ ದೋಣಿ ನಡೆಸುವವ ಡಾಲ್ಫಿನ್‌ಗಳು ಇಲ್ಲೇ ಕಾಣಬಹುದು ನೋಡಿ ಎಂದ. ಅವನು ತೋರಿಸಿದೆಡೆ ಕತ್ತು ತಿರುಗಿಸುವಷ್ಟರಲ್ಲಿ ಅವು ಮಾಯವಾಗುತ್ತಿದ್ದವು. ಡಾಲ್ಫಿನ್‌ಗಳ ತುಂಟಾಟ, ಅವುಗಳ ಸರ್ಕಸ್‌ನ ಕುರಿತು ಏನೇನೋ ಕಲ್ಪಿಸಿಕೊಂಡಿದ್ದ ನಮಗೆ ನಿರಾಶೆಯಾಗಿದ್ದು ಸುಳ್ಳಲ್ಲ. ನೀರಿನಿಂದ ಮೇಲೆ ಬರಲೂ ಅವು ನಾಚುತ್ತಿದ್ದಂತೆ ಅನಿಸಿತು. ಆದರೂ ಒಂದು ಡಾಲ್ಫಿನ್ (ಅರ್ಧ ಎನ್ನುವುದೇ ಸೂಕ್ತವೇನೋ!) ನನ್ನ ಕ್ಯಾಮರಾದೊಳಗೆ ಬಂಧಿಯಾಗಿ ನನ್ನ ಹಿಗ್ಗನ್ನು ಹೆಚ್ಚಿಸಿತ್ತು. ಇಷ್ಟೊತ್ತಿಗೆ ಸೂರ್ಯ ಪಶ್ಚಿಮದ ಕಡೆ ವಾಲಿದ್ದ. ನಾವೂ ಅತ್ತಲೇ ಹೊರಟೆವು! ಒಂದು ಬದಿಗೆ ಅದ್ಯಾವುದೋ ಯಂತ್ರ ಸಿಕ್ಕಿಸಿ ಉದ್ದನೆಯ ಕೋಲಿನಿಂದ ದಿಕ್ಕು ನಿರ್ಧರಿಸುತ್ತಾ ಚಲಿಸುವ ಆ ಬೋಟ್ ನೇಸರನ ಒಡ್ಡೋಲಗಕ್ಕೇ ನಮ್ಮನ್ನು ಕರೆದೊಯ್ಯುವ ‘ತೇರಿ’ನಂತೆ ಕಂಡಿತು. ಸಾಕಷ್ಟು ವಿಸ್ತಾರವಾಗಿರುವ  ‘ಚಿಲ್ಕಾ ಸರೋವರ’, ಸಾಗರವೆನಿಸಿದ್ದು ಆಗಲೇ. ಅಲ್ಲಲ್ಲಿ ಸಿಗುವ ನಡುಗಡ್ಡೆಗಳಲ್ಲಿನ ಪಕ್ಷಿಗಳ ಕಲರವ ಸೂರ್ಯನಿಗೆ ಕೋರುವ ಶುಭವಿದಾಯದಂತೆ ಭಾಸವಾಗತೊಡಗಿತು. ದೊಡ್ಡ ಮಟ್ಟದಲ್ಲಿ ಮೀನುಗಾರಿಕೆಯೂ ನಡೆಯುವ ಸರೋವರದಲ್ಲಿ ಆ ಸಲುವಾಗಿಯೇ  ನಡು ನಡುವೆ ನೆಟ್ಟ ಕಂಬದ ಸಾಲುಗಳು ಕಣ್ಣೆದುರಿಗಿನ ಕಲಾಕೃತಿಯ ಭಾಗವಾದಂತೆ ಅನ್ನಿಸಿತು. ಆ ಕಂಬದ ಮೇಲೇ ಠಿಕಾಣಿ ಊರಿರುವ ತರಹೇವಾರಿ ಹಕ್ಕಿಗಳೂ ಸಹ.


ನಂತರ ನಾವು ಸೀದಾ ಸಾಗಿದ್ದು ‘ಹನಿಮೂನ್ ದ್ವೀಪ’ ವೆಂದು ಕರೆಯಲ್ಪಡುವ ಪ್ರದೇಶಕ್ಕೆ. ಮರಳಿನ ಗುಡ್ಡವದು. (ನಮ್ಮ ತಲಕಾಡನ್ನು ನೆನಪಿಸುವಂತಿದೆ) ಅಲ್ಲಿ ಬೋಟ್ ನಿಲ್ಲಿಸಿ ತಿರುಗಾಡಲು ಒಂದಿಷ್ಟು ಸಮಯ ಘೋಷಿಸಲಾಯಿತು. ಅಲ್ಲಿ ಕೂಡ ಅನೇಕ  ಪುಟ್ಟ, ಪೆಟ್ಟಿಗೆ ದುಕಾನುಗಳಿವೆ. ಎಳನೀರು ಮಾರುವವರು, ಫೀಷ್ ಫ್ರೈ ಎಂದು ಕಿರಿಚುವವರು ಎಲ್ಲರೂ ಅಲ್ಲಿದ್ದಾರೆ. ನಡುವೆ ಒಂದೆಡೆ ಸೇರಿದ್ದ ಗುಂಪೊಂದು ನಮ್ಮ ತಂಡವನ್ನೂ ಸೆಳೆಯಿತು. ಅಲ್ಲಿ ಟಬ್ ಒಂದರಲ್ಲಿ ಚಿಪ್ಪುಗಳ ರಾಶಿ ಹಾಕಿಕೊಂಡು ಕುಳಿತ ಕಪ್ಪುಕಲೆಗಳ ಮುಖದವ ‘ಟೆನ್ ರುಪೀಸ್ ಫಾರ್ ಒನ್ ಪರ್ಲ್’ ಎಂದು ವ್ಯಾಪಾರ ಕುದುರಿಸುತ್ತಿದ್ದ. ಅವನ ಮುಂದೆಲ್ಲಾ ಒಡೆದ ಚಿಪ್ಪುಗಳು ಹರಡಿ ಬಿದ್ದಿತ್ತು. ಗಿರಾಕಿಗಳು ಅಕ್ಷರಶಃ ಕ್ಯೂ ನಿಂತಿದ್ದರು! ಮುತ್ತುಗಳು ಬಿಕರಿಯಾಗಿ ಪ್ರವಾಸಿಗಳ ಕೈ ಸೇರುತ್ತಿತ್ತು. ಚಿಪ್ಪಿನೊಳಗಿನ ಪುಟಾಣಿ ಮೆತ್ತನೆಯ ಹುಳುಗಳು ಮರಳು ಸೇರುತ್ತಿದ್ದವು!

ಪುನಃ ನಾವು ಬೋಟ್‌ನ ಬಳಿ ತಲುಪುವಷ್ಟರಲ್ಲಿ ಸೂರ್ಯನ ಸವಾರಿ ಮತ್ತಷ್ಟು ಮುಂದೆ ಹೋಗಿತ್ತು. ಈಗ ನಾವು ಮುಳುಗುತ್ತಿರುವ ಸೂರ್ಯನಿಗೆ ವಿಮುಖವಾಗಿ ಹೊರಟೆವು ಮತ್ತು ತಿರುಗಿ ಕುಳಿತೆವು! ಅಚ್ಚರಿಯೆಂಬಂತೆ ನೂರಾರು ಡಾಲ್ಫಿನ್‌ಗಳ ದಂಡು ದೂರದಲ್ಲಿ ಕಂಡಂತಾಗಿ ಎಲ್ಲರೂ ಅತ್ತ ದಿಟ್ಟಿಸಿದರೆ ಅಲ್ಲಿಯೂ ನಮಗೆ ನಿರಾಶೆಯೇ ಕಾದಿತ್ತು. ಅವೆಲ್ಲಾ ಸರಾಗವಾಗಿ ನೀರಿನಲ್ಲಿ ಈಜುತ್ತಿರುವ ಎಮ್ಮೆಗಳು! ಇಷ್ಟೊತ್ತಿಗಾಗಲೇ ಸೂರ್ಯ ತನ್ನ ಮೊಹರುಗಳನ್ನು ಸರೋವರದ ನೀರಿನ ಮೇಲೆಲ್ಲಾ ಒತ್ತಲು ಪ್ರಾರಂಬಿಸಿದ್ದ. ಒಟ್ಟಾರೆ ದೃಶ್ಯದಲ್ಲಿ ನಾವೂ ಒಂದಾಗಿ, ಈ ಕ್ಷಣ ನಿರಂತರವಾಗಿರಬಾರದೇಕೆ ಎಂದೆನಿಸಲು ಶುರುವಾಗಿತ್ತು. ನಡುಗಡ್ಡೆಗಳ ಮೇಲೆ ಗುಡಿಸಲು ಕಟ್ಟಿಕೊಂಡು, ದಿನದ ಫಸಲನ್ನು ಗುಡ್ಡೆ ಹಾಕಿ, ಭವಿಷ್ಯವನ್ನು ತಮ್ಮ ಹರಕು ಬಲೆಗಳ ನಡುವೆ ದಿಟ್ಟಿಸಿ ಕುಳಿತಿದ್ದ ಬೆಸ್ತರ ಮುಖಗಳು ಬಾಡಿದಂತಿದ್ದವು. ಕೂಡಲೇ ನಮ್ಮ ದೋಣಿ ನಡೆಸುವವನ ಮುಖ ನೋಡಿದೆ. ಆತ ಅದೇನು ಅರ್ಥ ಮಾಡಿಕೊಂಡನೋ ತಿಳಿಯದು. ಇದ್ದಕ್ಕಿದ್ದಂತೆ ಕಿರು ನಕ್ಕು ಓಡಿಯಾ ಮಿಶ್ರಿತ ಹರಕು ಹಿಂದಿಯಲ್ಲಿ ‘ನನಗೆ ದಿನಕ್ಕೆ ನೂರು ಸಂಬಳ. ಬರುವ ಪ್ರವಾಸಿಗರು ಕೊಡುವ ಟಿಪ್ಸ್ ಸೇರಿ ಬದುಕು ಚೆಂದಾಗೇ ಇದೆ’ ಎಂದಾಗ ನಾನು ಮತ್ತೊಮ್ಮೆ ನನ್ನ ನೋಟದ ಕುರಿತು ಚಿಂತಿಸಬೇಕಾಯ್ತು!

ಮೂರು ತಾಸಿನ ಬೋಟಿಂಗ್ ಸುದೀರ್ಘ ಜೀವನದ ವಿಹಾರಕ್ಕೆ ಒಂದಿಷ್ಟು ನೆನಪುಗಳ ಬುತ್ತಿ ಕಟ್ಟಿಕೊಟ್ಟಿತ್ತು. ಅದನ್ನು ಹೊತ್ತುಕೊಂಡು ಬಸ್ಸಿನ ಬುಡ ಸೇರುವಷ್ಟರಲ್ಲಿ ಸಂಜೆ ಆರೂವರೆಯಾಗಿತ್ತು. ಅವತ್ತೇ ರಾತ್ರಿ ಎಂಟರ ರೈಲ್ವೆಗೆ ಪುರಿಯಿಂದ ಕಲ್ಕತ್ತಾಗೆ (ಅದ್ಯಾಕೋ ಕೋಲ್ಕತ್ತಾಗಿಂತ ಕಲ್ಕತ್ತಾ ಎಂಬ ಹೆಸರೇ ಆಪ್ಯಾಯ) ತೆರಳಲು ನಮ್ಮ ಮುಂಗಡ ಸೀಟುಗಳು ನಿಗದಿಯಾಗಿದ್ದವು.(ಅಂದು ಪುರಿಯಿಂದ ಕಲ್ಕತ್ತಾಗೆ ಹೋದ ರೈಲ್ವೆ ಯಾನ ಯಾವತ್ತಿಗೂ ಮರೆಯದಂತದ್ದು, ಆ ಉಪದ್ವ್ಯಾಪಗಳನ್ನು ಮತ್ತೊಮ್ಮೆ ನೆನೆಪಿಸಿಕೊಳ್ಳುವೆ) ಅದೇ ದುಗುಡದಲ್ಲಿದ್ದ ನನಗೆ ಪುನಃ ಅವತ್ತು ಚಿಲ್ಕಾ ನೆನಪಾಗಲೇ ಇಲ್ಲ!

ನಂತರ ಬಹಳಷ್ಟು ಸಂಜೆಗಳು ಸರಿದು ಹೋಗಿವೆ. ಅವುಗಳ ನಡುವಿನ ಅನೇಕ ಸಂಜೆಗಳನ್ನು ನಾನು ಕಳೆದಿದ್ದು ಚಿಲ್ಕಾದಲ್ಲಿ, ಅರ್ಥಾತ್ ಅಲ್ಲಿನ ನೆನಪುಗಳಲ್ಲಿ!

(ಕೆಂಡಸಂಪಿಗೆಯಲ್ಲಿ ‘ಅಂದ ಕಾಲತ್ತಿಲ್’ ಬಂದ ನನ್ನ ಬರಹವಿದು . ನಾನು ಚಿಲ್ಕಾಗೆ ಹೋಗಿ ಬಂದು ಐದಾರು ಮಳೆಗಾಲಗಳೇ ಆಗಿಹೋಯ್ತು. ಕಾಲೇಜು ದಿನಗಳ ಆ ಪ್ರವಾಸಗಳೆಲ್ಲ ಯಾವತ್ತಿಗೂ ತಂಪೇ ಹೌದು. ಇವತ್ತೂ ಬೆಳಗಿನಿಂದ ಲ್ಯಾವೆಲ್ಲೆ ರಸ್ತೆಯ ನನ್ನ   ಆಫೀಸಿನ ಸುತ್ತ ಮಂಜು ಮಂಜು. ಆಫೀಸಿನಂತೆಯೇ ಮನಸ್ಸೂ. ಅದಕ್ಕೆ ಮತ್ತೆ ಚಿಲ್ಕಾಗೆ ಹೋಗುವ ಬಯಕೆಯಾಗಿದ್ದು…..!)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: