ಸಿಕ್ಕುಗಳಿಲ್ಲದ Tangled …!
ದಟ್ಟ ಕಾಡ ನಡುವಲ್ಲಿ, ಪಾಳು ಅರಮನೆಯಲ್ಲಿ, ಮಾಟಗಾತಿ ಮುದುಕಿಗೆ ವಶವಾಗಿ, ಆಗಾಗ ಒಂದೊಂದು ಪ್ರಾಣಿರೂಪಕ್ಕೆ ಬದಲಾಗಿ, ಇದ್ದೂ ಸತ್ತಂತೆ ಜೀವನ ತಳ್ಳುತ್ತಿದ್ದ ಉದ್ದ ಕೂದಲ ರಾಜಕುಮಾರಿಯ ಕಥೆಯನ್ನು ನನ್ನ ಮಾವ ಬಂದಾಗಲೆಲ್ಲ ಕಾಡಿಸಿ ಕೇಳುತ್ತಿದ್ದೆವು. ಕಥೆಯ ರಾಜಕುಮಾರಿಯ ದಟ್ಟ ಕರಿ ಕೂದಲನ್ನು ನಮ್ಮಮ್ಮನ ಪುಟ್ಟ ಜಡೆಗೆ ಹೋಲಿಸಿ ಮಜಾ ತೆಗೆದುಕೊಳ್ಳುತ್ತಿದ್ದ ದಿನಗಳವು. ಪ್ರತಿ ಸಾರಿ ಮಾವ ಬಂದಾಗ ಹೇಳುತ್ತಿದ್ದ ಗುಂಪು ಕಥೆಗಳಲ್ಲಿ ಒಂದಾದರೂ ರಾಜಕುವರಿಯ ಕಥೆ ಇರಲೇ ಬೇಕಿತ್ತು. ಅವೆಲ್ಲವೂ ಒಂದಾನೊಂದು ಕಾಲದಲ್ಲಿ… ದಟ್ಟ ಕಾಡಿನ ಮಧ್ಯ… ಪಾಳು ಬಿದ್ದ ಬಂಗಲೆಯಲ್ಲಿ… ಎಂತಲೇ ಶುರುವಾಗುತ್ತಿತ್ತು. ಒಂದೇ ಕಥೆಗೆ ಹೊಸ ಮಜಲುಗಳನ್ನು ಸೇರಿಸಿ ಅದನ್ನು ಅಂದಗಾಣಿಸುವುದರಲ್ಲಿ ಮಾವ ನಿಷ್ಣಾತರಾಗಿದ್ದರು. ಹಾಗಾಗಿ ನಾವು ಕೇಳುತ್ತಿದ್ದ ಕಥೆಗಳೆಲ್ಲವೂ ಒಂದೇ ಕಥೆಯ ಬೇರೆ ಬೇರೆ ಮಗ್ಗಲುಗಳಾಗಿದ್ದವೋ ಎಂಬ ಅನುಮಾನ ನಂಗೆ ‘ಈಗ’ ಕಾಡುತ್ತದೆ. ವೀರ ರಾಜಕುಮಾರನಾಗಿ ಹೋಗಿ ಮಾಟಗಾತಿಯನ್ನು ವಧಿಸಿ, ರಾಜಕುಮಾರಿಯನ್ನು ಹಾರುವ ಕುದುರೆಯಲ್ಲಿ (‘Clash of The Titan’ ಸಿನಿಮಾದಲ್ಲಿನ ಹಾರುವ ಕಪ್ಪು ಕುದುರೆ ನನಗೆ ಮಾವನ ಕಥೆಗಳನ್ನು ಬಹು ಆಪ್ತವಾಗಿ ನೆನಪಿಸಿತ್ತು.) ರಕ್ಷಿಸಿ ತರುವ ಕನಸು, ಕಥೆ ಕೇಳಿದ ರಾತ್ರಿ ಬೀಳುತ್ತಿತ್ತು ಎಂಬುದೇ ಮಾವನ ಕಥನ ಶಕ್ತಿಯನ್ನು ಇವತ್ತಿಗೂ ಅಭಿಮಾನಪೂರಿತವಾಗಿಸಿವೆ.
ಹಾಗೆಂದೇ ನನಗೆ, ಇವತ್ತಿಗೂ ಎನಿಮೇಟೆಡ್ ಸಿನಿಮಾಗಳು ವಿಪರೀತ ಖುಷಿಕೊಡುತ್ತವೆ. ಇದೆ ಹುಚ್ಚಿನಲ್ಲಿ ಮೊನ್ನೆ ನೋಡಿದ ಸಿನಿಮಾ ‘Tangled’. ‘ಸಿಕ್ಕು’ ಎಂಬರ್ಥ ಬರುವ ಈ ಸಿನಿಮಾ ತುಂಬಾ ಸರಳವಾಗಿದೆ. ಆದರೆ ಚಿತ್ರದ ಮುಖ್ಯಪಾತ್ರ, ನಾಯಕಿ ‘Rapunzel’, ಕ್ರೂರ ಹೆಂಗಸು(?) ಗೊಥೆಲ್ಲಳ ಜಾಲದಲ್ಲಿ ಸಿಕ್ಕಿಕೊಂಡಿದ್ದಾಳೆ. ಗೊಥೆಲ್ ತನ್ನ ಯೌವ್ವನವನ್ನು ಎಂದಿಗೂ ಉಳಿಸಿಕೊಳ್ಳುವ ಕಾಮನೆಯಲ್ಲಿ ಬಂಧಿ. ರಪುನ್ಜೆಲ್ಲಳ ಅಪ್ಪ-ಅಮ್ಮ ಅಂದರೆ ದೊರೆ ಮತ್ತು ಆತನ ರಾಣಿ ಮಗಳ ನೆನಪಿನಲ್ಲಿ ಸದಾ ಸಿಲುಕಿಕೊಂಡಿರುತ್ತಾರೆ. ಕಥಾನಾಯಕ, ಡಕಾಯಿತ Flynn Rider ಕದ್ದಾದರೂ ಸೈ ಕಾಸು ಮಾಡಿಕೊಳ್ಳುವ ದುರಾಸೆಯಲ್ಲಿ ಮುಳುಗಿದ್ದವ ಮುಂದೊಮ್ಮೆ ರಪುನ್ಜೆಲ್ಲಳ ಪ್ರೇಮದಲ್ಲಿ ಸಿಕ್ಕಿಕೊಳ್ಳುತ್ತಾನೆ. ಹೀಗೆ ಮನುಷ್ಯನ ಬಯಕೆಗಳು, ಭಂಢತನಗಳು, ತಿಳಿ ಸೌಮ್ಯವಾದ ಭಾವನೆಗಳು ಎಲ್ಲವೂ ಹದವಾಗಿ ಸೇರಿ ‘Tangled’ ಹುಟ್ಟಿದೆ. ರಮಣೀಯವಾದ ಫ್ಯಾಂಟಸೀ ಕಥೆಯನ್ನು ಚಿತ್ರಕಥೆಗೆ ಆಯ್ದುಕೊಳ್ಳಲಾಗಿದೆ. ಸಿನಿಮಾವನ್ನು ಸಮರ್ಥವಾಗಿಸಲು ಬೇಕಾದ ಅನೇಕ ಅಂಶಗಳನ್ನು ಕಥೆಯೇ ಕೊಟ್ಟಂತಿದೆ.
‘Tangled’ ನ ಕಥೆ ಸಂಕ್ಷಿಪ್ತವಾಗಿ ಇಷ್ಟೇ.
ಸೂರ್ಯನ ಕಿರಣ ಬಿದ್ದು ಹುಟ್ಟಿದ ಬೆಳಗುವ ಹೂವೊಂದು ಮುದುಕಿಯೊಬ್ಬಳಿಗೆ ಮತ್ತೆ ಯುವತಿಯಾಗುವ ಸೌಭಾಗ್ಯ ಕಲ್ಪಿಸುತ್ತದೆ. ಬಹು ಕಾಲದ ನಂತರ ಒಮ್ಮೆ, ರಾಜಭಟರ ಹುಡುಕು ಕಂಗಳಿಗೆ ಆ ಹೂವು ಬಿದ್ದು, ಅದು ಗರ್ಭಿಣಿ ರಾಣಿಯ ರೋಗ ಗುಣಪಡಿಸಿ, ಬಂಗಾರದ ಕೂದಲಿನ ಪುಟ್ಟ ಕೂಸಿನ ಜನ್ಮಕ್ಕೆ ಕಾರಣವಾಗುತ್ತದೆ. ಪುಟ್ಟಿಯ ಬಂಗಾರದ ಕೂದಲಿಗೆ ಬೆಳಗುವ ಹೂವಿನ ಗುಣ ಲಭಿಸಿ, ಅದೇ ಕಾರಣವಾಗಿ ಮುದುಕಿ ಮಗುವನ್ನು ಅಪಹರಿಸಿ ಮತ್ತೆ ಯುವತಿಯಾಗುತ್ತಾಳೆ. ನಂತರ ರಾಜಕುಮಾರಿ ರಪುನ್ಜೆಲ್ಲಳ ವನವಾಸ ಶುರು. ಸುಂದರ ಪರಿಸರದ, ಅತಿ ಸುಂದರ ವೀಕ್ಷಣಾ ಗೋಪುರದ ಆದರೆ ಜೈಲಿನಂತ ಮನೆಯಲ್ಲಿ ರಪುನ್ಜೆಲ್ ದೊಡ್ಡವಳಾಗುತ್ತಾಳೆ. ಮುದುಕಿ ಹೊರನೋಟಕ್ಕೆ ಮತ್ತಷ್ಟು ಸುಂದರಳಾಗುತ್ತಲೇ ಹೋಗುತ್ತಾಳೆ! ಮುಂದೆ ನಾಯಕನ ಆಗಮನ, ಒಂದಿಷ್ಟು ಸಸ್ಪೆನ್ಸ್, ಥ್ರಿಲ್ಲಿಂಗ್, ಅಡ್ವೆಂಚರ್, ಕಾಮಿಡಿ ಮತ್ತೆ ಕೊನೆಗೆ ಶುಭಂ…!
‘ಮಠ’ ಗುರುಪ್ರಸಾದ್ ಹೇಳುತ್ತಿದ್ದ ಮಾತು. “ನಮ್ಮಲ್ಲಿ ಕೆಟ್ಟ ಚಿತ್ರಗಳು ಅಂತೇನಿಲ್ಲ. ಕೆಟ್ಟ ಸ್ಕ್ರಿಪ್ಟ್ ಗಳು ಇವೆಯಷ್ಟೇ. ಕಥೆಯನ್ನು ನಿಭಾಯಿಸುವ, ದೃಶ್ಯ ಮಾಧ್ಯಮದಲ್ಲಿ ಅದನ್ನು ಸಮರ್ಥವಾಗಿ ಕಟ್ಟಿಕೊಡುವ ಕಲೆ ಸಿದ್ಧಿಸಿದರೆ ಎಂತಹ ಸಿನಿಮಾವನ್ನಾದರೂ ನೆನಪಿನಲ್ಲುಳಿವಂತೆ ಮಾಡಬಹುದು.” ಇದು ಅಹುದಹುದು ಎಂದು ಮತ್ತೊಮ್ಮೆ ಅನ್ನಿಸಿದ್ದು Tangled ನೋಡುವಾಗ. (ಅವತಾರ್ ನೋಡಿ ಕಣ್ಣೀರಿಟ್ಟಾಗಲೂ ಹೀಗನ್ನಿಸಿತ್ತು!) ಸಾಮಾನ್ಯವಾಗಿ ‘ಗೊಂಬೆಗಳು ಕಚಪಿಚಗುಟ್ಟುವ ಚಿತ್ರಗಳು’ ಎಂದು ತಿರಸ್ಕಾರಕ್ಕೊಳಗಾಗುವ ಎನಿಮೇಟೆಡ್ ಸಿನಿಮಾಗಳ ಸಾಧ್ಯತೆ ದೃಶ್ಯರೂಪದಲ್ಲಿ ಹೆಚ್ಚೆಂದರೂ ಮಾನವನ ಅರಿವು, ಭಾವಗಳ ಜೊತೆ ತೀಕ್ಷ್ಣವಾಗಿ ಪ್ರತಿಸ್ಪಂದಿಸದ, ನಮ್ಮ ಬಾಹ್ಯಾನುಭಾವಕ್ಕೆ ನೇರವಾಗಿ ದಕ್ಕದ ಕಾರಣಕ್ಕೋ ಏನೋ ಅವು ಆವರಣದ ತುಂಬಾ ಹರಡಿಲ್ಲ. ಹಾಗಾಗಿಯೇ ಅವು ಒಂದು ವರ್ಗಕ್ಕೆ ಮಾತ್ರ ದಕ್ಕುವ ಮಾಧ್ಯಮವಾಗಿ ಉಳಿದಿರಬೇಕು. ಪೂರ್ಣ ಪ್ರಮಾಣದ Tangled, Ice age, How to Train Your Dragon, Up ‘ ನಂತಹ 3D ಎನಿಮೇಟೆಡ್ ಚಿತ್ರಗಳ ಕಥೆಯೇ ಹೀಗಾದರೆ 2D ಸಿನಿಮಾಗಳನ್ನು ಪ್ರೀತಿಸುವರೆಷ್ಟು ಮಂದಿ?
ಈ ಕ್ಲೀಷೆಗಳನ್ನೆಲ್ಲ ಮರೆತು Tangled ನೋಡಬೇಕು. ಅಥವಾ Tangled ಈ ಕ್ಲೀಷೆಗಳನ್ನು ಮರೆಸುತ್ತದೆಂದರೂ ಆಶ್ಚರ್ಯವಿಲ್ಲ. ನಮ್ಮೆಲ್ಲರ ಬಾಲ್ಯದ ಚಂಪಕ, ಬಾಲಮಂಗಳ ಚಿತ್ರಕಥೆಗಳ ರಾಜಕುಮಾರಿ ಇವಳೇ ಆಗಿದ್ದಿರಬಹುದೇನೋ ಎಂದು ನಂಬಿಕೆ ಹುಟ್ಟಿಸುವಷ್ಟು ಮುದ್ದಾದ ಪಾತ್ರ, ಪ್ರತಿಮೆ ರಪುನ್ಜೆಲ್ಲಳದ್ದು. ನೂರಕ್ಕೂ ಹೆಚ್ಚು ಅನಿಮೇಟರ್ ಗಳ ಶ್ರಮ Tangled ಸಿನಿಮಾಕ್ಕಿದೆ. ವಾಲ್ಟ್ ಡಿಸ್ನಿ ನಿರ್ಮಾಣದ ಐವತ್ತನೆಯ ಚಿತ್ರ ಇದು. ಎನಿಮೇಟೆಡ್ ಚಿತ್ರಗಳ ಇತಿಹಾಸದಲ್ಲೇ ಅತೀ ಹೆಚ್ಚು ಬಜೆಟ್ ನ ಚಿತ್ರವೆಂಬ ಖ್ಯಾತಿಯೂ Tangled ಬೆನ್ನಿಗಿದೆ. ಈ ಎಲ್ಲ ರೆಕ್ಕೆ ಪುಕ್ಕಗಳ ಜೊತೆ Tangled ಅತ್ಯುತ್ತಮ ಚಿತ್ರವಾಗಿ ನಿಲ್ಲುತ್ತದೆ. ಚಿತ್ರದ ಮುಖ್ಯರಸ ಹಾಸ್ಯ. ಅದರೊಂದಿಗೆ ಗಾಢವಾದ ವಿಷಾದ ಮತ್ತು ರೋಮಾನ್ಸ್ ಬೆರೆತು ಚಿತ್ರ ಕಳೆಗಟ್ಟಿದೆ. ರಪುನ್ಜೆಲ್ಲಳ ಮಾತು ಅಮೆರಿಕಾದ ಪ್ರಸಿದ್ಧ ಗಾಯಕಿ, ನಟಿ, ಗೀತ ರಚನೆಗಾರ್ತಿ, ವಸ್ತ್ರ ವಿನ್ಯಾಸಕಿ ಮತ್ತು ಇವೆಲ್ಲವೂ ಒಬ್ಬಳೇ ಆಗಿರುವ Mandy Mooreರದ್ದು. ಚಿತ್ರದ ತುಂಬೆಲ್ಲ ಅವರ ಚಟುವಟಿಕೆಯ ಮಾತನ್ನು ಕೇಳುವುದೇ ಚಂದ. ಮೊದಲೇ ಈ ವಿಷಯ ತಿಳಿದಿದ್ದರೆ ರಪುನ್ಜೆಲ್ಲಳನ್ನು ನೋಡುವಾಗೆಲ್ಲ ಮ್ಯಾಂಡಿ ನೆನಪಾಗುವ ಅಪಾಯವಿದೆ! (ಬಸವಲಿಂಗಯ್ಯನವರ ದೀರ್ಘ ನಾಟಕದ ನಂತರ ‘ಮಲೆಗಳಲ್ಲಿ ಮದುಮಗಳು’ ಓದುವಾಗೆಲ್ಲ ನಾಟಕದ ಪಾತ್ರಗಳೇ ಕಣ್ಮುಂದೆ ಹಾಯುವ ಬೇಸರ ನನಗೆ ಕಾಡಿದ್ದುಂಟು.) Tangled ನಲ್ಲಿ ಕೆಲವು ಆರ್ದ್ರ ಭಾವಗಳನ್ನು ಬಿಂಬಿಸುವ ಪರಿ ಅಚ್ಚರಿಗೊಳಿಸುತ್ತದೆ. ಇಡೀ ಚಿತ್ರವನ್ನು ಎಲ್ಲೂ ಕತ್ತರಿಸಿ ‘ಈ ಭಾಗ ಅನವಶ್ಯಕ’ ಎಂದು ನಿರ್ಧರಿಸುವ ಅವಕಾಶ ನಮಗಿಲ್ಲ ಎಂಬುದೇ ಚಿತ್ರದ ಹೆಚ್ಚುಗಾರಿಕೆ.
ಚಿತ್ರದ ಕುರಿತಂತೆ ನನಗನ್ನಿಸಿದ್ದಿಷ್ಟು:
* ಒಂದು ನಿರ್ದಿಷ್ಟ ಹಾಡಿಗೆ ಮಾತ್ರ ಬಂಗಾರದ ಹೂ ಬೆಳಗುತ್ತದೆ. ಆ ಹಾಡು ಗೊಥೆಲ್ ಗೆ ಹೇಗೆ ತಿಳಿಯಿತು ಎಂಬುದು, ಮಗು ರಪುನ್ಜೆಲ್ಲಳನ್ನು ಮದರ್ ಗೊಥೆಲ್ ಅಷ್ಟು ಸುಲಭಕ್ಕೆ ಅರಮನೆಯ ಅಂತಃಪುರದಿಂದ ಹೊತ್ತುಕೊಂಡು ಹೋಗುವುದು ಹೀಗೆ ಕೆಲವು ವಿಷಯಗಳು ಗೊಂದಲ ಮೂಡಿಸುತ್ತವೆ. ಹಾಗಾದಾಗಲೆಲ್ಲ ಸಿನಿಮಾವನ್ನು ಸಿನಿಮಾವಾಗಿಯೇ ನೋಡಿ ಆನಂದಿಸಬೇಕೆಂಬುದನ್ನು ಮತ್ತೆ ನೆನಪಿಸಿಕೊಳ್ಳಬೇಕು!
* ಸರಿಸುಮಾರು ಎಪ್ಪತ್ತು ಅಡಿಯ ತನ್ನ ಕೂದಲ ಜೊತೆ ಹೆಣಗುತ್ತಾ ಅದರ ಕುರಿತು ಹೆಮ್ಮೆಯಿಟ್ಟುಕೊಂಡು ಅದನ್ನೇ ಬಳಸಿಕೊಂಡು ಆ ಪುಟ್ಟ ಗೋಪುರದ ಮನೆಯಲ್ಲಿ ತನ್ನ ಸುಖವನ್ನು ಕಂಡುಕೊಳ್ಳುವ ರಪುನ್ಜೆಲ್ ಳನ್ನು ಒಂದು ಚಿಕ್ಕ ಹಾಡಿನಲ್ಲಿ ಚಿತ್ರಿಸಲಾಗಿದೆ. ಆ ಇಡೀ ಹಾಡನ್ನು ಮತ್ತೆ Rewind ಮಾಡಿ ನೋಡುವ, ಕೇಳುವ ಮನಸ್ಸಾಗದಿದ್ದರೆ ಹೇಳಿ!
* ಅರಿವು ತಿಳಿದ ಮೇಲೆ ಮೊಟ್ಟಮೊದಲು ಭೂ ಸ್ಪರ್ಶ ಮಾಡುವಾಗ ರಪುನ್ಜೆಲ್ ಕಾಲನ್ನು ಹಸಿರು ತುಂಬಿದ ನೆಲಕ್ಕೂರುವ ಸಂಧರ್ಭ. ಆ ಸಮಯದ ದುಗುಡ, ಕಾತುರ, ಅಪರಿಮಿತ ಉತ್ಸಾಹವನ್ನು ಸ್ಲೋ ಮೋಶನ್ ತಂತ್ರದಲ್ಲಿ ಚಿತ್ರಿಸಲಾಗಿದ್ದು, ಚಿತ್ರದ ಪರಿಣಾಮಕಾರಿ ಭಾಗವಾಗಿ ನಿಲ್ಲುವಂತಿದೆ. ಆ ಕ್ಷಣದ ಬಳಿಕ ನೆಲಕ್ಕಿಳಿದ ರಪುನ್ಜೆಲ್ ಮತ್ತೆ ಚೈತನ್ಯದ ಚಿಲುಮೆಯಾಗುತ್ತಾಳೆ. ಹುಲ್ಲು, ನೀರು, ಮರ, ಕಾಡುಗಳೆಲ್ಲವೂ ಅನೂಹ್ಯ ಲೋಕದ ವಿಸ್ಮಯವೆಂದೇ ಭಾವಿಸುವ ಆಕೆ ಹಾಡಿ, ಕುಣಿದು, ಸುಖಾ ಸುಮ್ಮನೆ ಬಿದ್ದು, ಎದ್ದು ಅನುಭವಿಸಿದಷ್ಟೂ ಮುಗಿಯದ ಸಂತಸಕ್ಕೆ ಪಕ್ಕಾಗುತ್ತಾಳೆ. ಫ್ಹ್ಲೈನ್ ಮೂಕನಾಗಿ ಈ ಘಟನೆಗಳಿಗೆ ಸಾಕ್ಷಿಯಾಗುತ್ತಾನೆ. ರಮ್ಯವೆನಿಸುವ ಈ ಸನ್ನಿವೇಶಕ್ಕೆ ನೋಡುಗನನ್ನೂ ಒಮ್ಮೆ ಮೈ ಮರೆಸುವ ತಾಕತ್ತಿದೆ.
* ಪುಟ್ಟ ಗೋಸುಂಬೆ ಮತ್ತು ದೊಡ್ಡ ಬಿಳಿ ಕುದುರೆಗಳ ಚೆಲ್ಲಾಟಗಳು ಚಿತ್ರದುದ್ದಕ್ಕೂ ಮುದ ಕೊಡುತ್ತವೆ. ಸ್ವಾಮಿನಿಷ್ಠ ಕುದುರೆ ಮತ್ತು ಫ್ಲೈನ್ ನಡುವಿನ ಘರ್ಷಣೆ ಒಂದು ಹಂತದಲ್ಲಿ ಕುತೂಹಲದ ಉಪ್ಪರಿಗೆ ಹತ್ತಿಸುತ್ತದೆ! ಬಣ್ಣ ಬಣ್ಣದ ಗೋಸುಂಬೆಯ ಮೇಲೂ ಪ್ರೀತಿ ಹುಟ್ಟುತ್ತದೆ! ಚಿತ್ರದ ಅಂತಿಮ ಘಟ್ಟದಲ್ಲಿ ಮದರ್ ಗೊಥೆಲ್ ಅಳಿಯಲು ಮುಖ್ಯ ಕಾರಣವಾಗುವುದು ಇದೇ Chameleon. ರಪುನ್ಜೆಲ್ ಮತ್ತು ಗೋಸುಂಬೆಯ ನಡುವಿನ ಸಂವಹನ ನಮ್ಮಲ್ಲಿ ಸಂವೇದನೆಗಳನ್ನೆಬ್ಬಿಸುವಂತಿದೆ. ಅಂತೆಯೇ ಕುದುರೆ ಮತ್ತು ಇತರ ಪಾತ್ರಗಳದ್ದು.
* ಚಿತ್ರ ವಾಚ್ಯವಾಯಿತೇನೋ ಎಂದು ಅನ್ನಿಸಲಿಕ್ಕೆ ಬಿಡದಂತೆ ಥ್ರಿಲ್ಲಿಂಗ್ ದೃಶ್ಯಗಳ ಹೆಣಿಕೆಯಾಗಿದೆ. (ಜಗತ್ತಿನ ಅತ್ಯುತ್ತಮ 50 ಅನಿಮಟೆಡ್ ಚಿತ್ರಗಳ ಯಾದಿಯಲ್ಲಿ 6 ನೇ ಸ್ಥಾನದಲ್ಲಿರುವ ‘Up‘ ಚಿತ್ರ ಮನೋಜ್ಞವಾಗಿದ್ದರೂ ಹೆಚ್ಚಿದ ಮಾತುಗಾರಿಕೆಯಿಂದ ಅಲ್ಲಲ್ಲಿ ಸೊರಗಿದೆ ಎಂಬುದು ನನ್ನ ಭಾವನೆ.) ಹಿನ್ನೆಲೆ ದೃಶ್ಯಾವಳಿಗಳು, ಮೆಲು (ಅಗತ್ಯಕ್ಕೆ ತಕ್ಕಂತೆ) ಸಂಗೀತ ಮುದ ಕೊಡುತ್ತವೆ.
* ಕೆಲ ರಾತ್ರಿಯ ಸಂಧರ್ಭದ ಸನ್ನಿವೇಶಗಳು flat ಎನ್ನಿಸುತ್ತವೆ. ಹಿನ್ನೆಲೆ ದೃಶ್ಯಗಳಲ್ಲಿ ಬಳಸಿದ ಬೂದು ನೀಲಿ ಬಣ್ಣ ಗಾಢ ನೀಲಿಯಾಗಿದ್ದ ಪಕ್ಷದಲ್ಲಿ ಹೆಚ್ಹು ಪರಿಣಾಮಕಾರಿ ರಾತ್ರಿಯ ಚಿತ್ರಣ ಸಾಧ್ಯವಿತ್ತೇನೋ. ರಪುನ್ಜೆಲ್ ಬದುಕಿನ ದೊಡ್ಡ ಕನಸು ಹಾರುವ ಕಾಗದದ ದೀಪಗಳ ವೀಕ್ಷಣೆ. ಅದು ಫ್ಲೈನ್ ನಿಂದ ಸಾಕಾರವಾಗುತ್ತದೆ. ರಪುನ್ಜೆಲ್ ಆ ಇಡೀ ಸಂದರ್ಭಕ್ಕೆ ಒಳಗೊಳ್ಳುತ್ತಾಳೆ. ಚಿತ್ರದ ಗ್ರಾಫ್ ತುದಿ ಮುಟ್ಟಬೇಕಾಗಿದ್ದು ಇಲ್ಲೇ. ನೆಮ್ಮದಿಯ, ನೀರವ ಹಾಗೆಯೇ ನೀರ ಮೇಲೆ ಒಂದು ಮಹತ್ ಕ್ಷಣಕ್ಕಾಗಿ ಅವರಿಬ್ಬರೂ ಸುಂದರ ದೋಣಿಯಲ್ಲಿ ಕಾದು ಕೂರುತ್ತಾರೆ. ಆದರೆ ಆ ಇಡೀ ದೃಶ್ಯ ವೀಕ್ಷಕ ಹುಟ್ಟಿಸಿಕೊಂಡ ಕಲ್ಪನೆಗಳನ್ನು ಅರೆ ಮಾತ್ರ ತಣಿಸುತ್ತದೆ! ಒಂದಾದ ಮೇಲೊಂದರಂತೆ ಆಗಸ ತುಂಬುವ ಹಾರುವ ದೀಪ ತಟ್ಟೆಗಳು ಮತ್ತದೇ ಬೂದು ಬಣ್ಣದ ಹಿನ್ನೆಲೆಯಲ್ಲಿ ಮಂಕಾಗುತ್ತವೆ. ಆ ದೃಶ್ಯ ಮತ್ತಷ್ಟು ಬಣ್ಣಗಳಲ್ಲಿ ಸಂಯೋಜಿತವಾಗಿದ್ದರೆ ಅದರ ಸೊಗಸೇ ಬೇರೆಯಿತ್ತು. ಬಹುಷಃ ಹಿನ್ನೆಲೆ ಸಂಗೀತವೂ ಈ ಸಮಯದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿರಬೇಕಿತ್ತೇನೋ. ಹಾಗಿದ್ದರೂ ನಮ್ಮ ಸ್ಮರಣೆಯಲ್ಲಿ ಈ ದೃಶ್ಯ ಮರೆಯಾಗುವುದಿಲ್ಲ!
* ಫ್ಯಾಂಟಸೀ ಕಥೆಯಾದರೂ ಕೆಲವು ದೃಶ್ಯಗಳ ಹೊರತಾಗಿ ಎಲ್ಲೂ ಇದು ಅಸಹಜ ಎಂಬ ಭಾವ ಮೂಡುವುದಿಲ್ಲ. (ಸಹಜವಾದ ಕನ್ನಡ, ತಮಿಳು, ತೆಲುಗು ಮತ್ತಿತ್ಯಾದಿ ಚಿತ್ರಗಳಲ್ಲಿ ‘ದೈವ ಮಾನವರು’ ಕಾಣಿಸಿಕೊಂಡು ಚಿತ್ರವನ್ನು ಅಂದಗಾಣಿಸಿದಂತೆ :))
* “I See the Light” ಮತ್ತು “I’ve Got a Dream” ಎಂಬಿತ್ಯಾದಿ ಪದ್ಯಗಳು ಮತ್ತೆ ಮತ್ತೆ ಗುನುಗುವಂತಿದೆ.
* ಎಲ್ಲಾ ಪಾತ್ರಗಳ ಅಭಿವ್ಯಕ್ತಿ ತೀವ್ರತರದ್ದು ಮತ್ತು ಸರಳವಾಗಿ ಅನಿಮಟೆಡ್ ಸಿನಿಮಾಕ್ಕಿದು ಅಗತ್ಯ ಕೂಡ. ದುಖ, ಕ್ರೂರತೆ, ಕೋಪ ಮುಖ್ಯವಾಗಿ ನಗು ಪಾತ್ರಗಳ ಮುಖದಲ್ಲಿ ಸರಾಗವಾಗಿ ಉಕ್ಕುತ್ತವೆ. ನೋಡುಗನನ್ನು ಚಿತ್ರದ ಪರಿಧಿಗೆ ಎಳೆದುಕೊಳ್ಳುತ್ತವೆ.
ಇಂತಹ ಪಟ್ಟಿಯನ್ನು Tangled ಚಿತ್ರದ ಕುರಿತಾಗಿ ಮಾಡಿ, ಸಾಧ್ಯವಾದಷ್ಟು ಹಿಗ್ಗಿಸಬಹುದಾದರೂ ಯಾವ ಮಾದರಿಗಳೂ ಇಲ್ಲದೆಯೆ ಚಿತ್ರ ನೋಡಿದಾಗಿನ ಅನುಭವವೇ ಲೇಸೆನ್ನುವವನು ನಾನು. ಇನ್ನು ಕೆಲವು ಸಿನಿಮಾಗಳಿವೆ. ಅವುಗಳನ್ನು ಆ ಸಿನಿಮಾ ಹುಟ್ಟಿದ ಸಂದರ್ಭ, ನಿರ್ದೇಶಕನ ಮನಸ್ಥಿತಿ, ಆತನ ಹಿನ್ನೆಲೆ ಎಲ್ಲವನ್ನೂ ಗಮನಿಸಿ ನೋಡಿದಾಗ ಹೆಚ್ಚು ಹೃದ್ಯವೆನಿಸಬಹುದು. (ಇರಾನಿನ ಮೊಹಿಸಿನ್ ಮಕ್ಮಲ್ಬಫ್ ಸಿನಿಮಾಗಳು ಇತ್ಯಾದಿ) ಹಾಗಾಗಿ ಇಷ್ಟು ಮಾತ್ರ ಹೇಳಬಲ್ಲೆ. Tangled ನಿಮ್ಮ ನೋಡಲೇಬೇಕಾದ ಜಗತ್ತಿನ ಸಿನಿಮಾಗಳ ಪಟ್ಟಿಯಲ್ಲಿ ಇರಬೇಕಾದ್ದು.
(ಸಾಂಗತ್ಯದ ನಾವಿಕರ ಅನುಮತಿ ಮೇರೆಗೆ ಮತ್ತೆ ಇಲ್ಲೂ ಇದಿದೆ…!)