Posts tagged ‘ಸಿಲ್ಕ್’

ಚಂದದ ಪೋಸ್ಟರ್, ಡರ್ಟಿ ಪಿಕ್ಚರ್ ..!

ಕಾದು ನೋಡುವ ಸಿನಿಮಾಗಳು ಅನೇಕ ನಿರೀಕ್ಷೆಗಳನ್ನು ಹುಟ್ಟಿಸಿರುವ ಕಾರಣಕ್ಕೇ ಕಾಯುವಂತಿರುತ್ತವೆ! ನಿರೀಕ್ಷೆಗಳಿಲ್ಲದೆ ಸಿನಿಮಾ ನೋಡಬೇಕು, ಒಂದು ಸಿನಿಮಾವನ್ನು ಬೇರೆ ಸಿನಿಮಾಗಳ ಜೊತೆ ಹೊಂದಿಸಿ ನೋಡಬಾರದು, ಈ ಸನ್ನಿವೇಶ ಹಾಗಿರಬೇಕಿತ್ತು, ಆ ತುಣುಕು ಹೀಗಿರಬೇಕಿತ್ತು… ಎಂದೆಲ್ಲ ಹೇಳಿ ನಿಜವಾಗಿ ದಕ್ಕಿದ ಸಿನಿಮಾವನ್ನು ಕೊಲ್ಲಬಾರದು ಎಂಬಿತ್ಯಾದಿಯಾಗಿ ಅದೆಷ್ಟೇ ಅಂದುಕೊಂಡರೂ ಚಿತ್ರ ನೋಡಿ ಅದರ ಗುಂಗು ಕಳೆಯುವಷ್ಟು ಹೊತ್ತು ಅವೆಲ್ಲವೂ ಎಲ್ಲಿ ನೆನಪಿರುತ್ತದೆ? ಮೊನ್ನೆಯೂ ಹಾಗೇ ಆಯಿತು. ತಿಂಗಳುಗಟ್ಟಲೆ ಕಾದು ನೋಡಿದ ಚಿತ್ರ ‘ದ ಡರ್ಟಿ ಪಿಕ್ಚರ್’. ಅದು ಡರ್ಟಿ ಪಿಕ್ಚರ್ ಅನ್ನೋ ಕಾರಣಕ್ಕೇ ನಿರೀಕ್ಷೆಗಳಿದ್ದಿರಬಹುದು ಎಂದು ಯಾರಾದರೂ ಒಂಟಿ ಕಣ್ಣು ಮುಚ್ಚಿ, ತುಂಟ ನಗೆ ನಕ್ಕರೂ ನನ್ನ ತಕರಾರೇನಿಲ್ಲ. 🙂 ಏನ್ಮಾಡೋದು ಸ್ವಾಮೀ ವಯಸ್ಸು…? ಎಂಬ ಉತ್ತರ ಕೊಡಬಲ್ಲೆ!  ಅದೇನೇ ಇರಲಿ, ಒಂದಂತೂ ಸತ್ಯ. ದ ಡರ್ಟಿ ಪಿಕ್ಚರ್ ನೋಡಬೇಕೆಂದುಕೊಂಡಾಗ ಅದರ ಮೊದಲ ಪ್ರತಿಯೂ ಸಿದ್ಧವಾಗಿರಲಿಕ್ಕಿಲ್ಲ… ಸಿಲ್ಕ್ ಸ್ಮಿತಾ ಕಥೆ, ವಿದ್ಯಾ ಬಾಲನ್ ನಟನೆ ಅವೆರಡೇ ಸಂಗತಿಗಳು ಸಾಕಿತ್ತು.

ಆದರೆ….

ಕಳೆದ ಭಾನುವಾರ (ಮೊದಲ ದಿನ, ಮೊದಲ ಶೋ ನೋಡಬೇಕೆಂಬ ಹುರುಪು ನನ್ನಲ್ಲಿರಲಿಲ್ಲವಾದ ನಿಮಿತ್ತ) ಡರ್ಟಿ ಪಿಕ್ಚರ್ಗೆ ಹೋಗುವುದೋ, ಬೇಡವೂ ಎಂಬ ಗೊಂದಲದಲ್ಲಿಯೇ ಹೊರಟಿದ್ದು ಊರ್ವಶಿಗೆ. ಮಧ್ಯೆ ಸಂಸ ಪಕ್ಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಸ್ತಕ ಮಳಿಗೆಯಲ್ಲಿ ಒಂದಷ್ಟು ಜೇಬು ಹಗುರ ಮಾಡಿಕೊಂಡು ಊರ್ವಶಿಯತ್ತ ನಡೆದಾಗ ಸಿನಿಮಾದ ಮೇಕಿಂಗ್ ದೃಶ್ಯ ಮುಗಿದೇ ಹೋಗಿದ್ದು, ಸಪ್ಪೆಯೆನಿಸಿತು. ಆದರೂ ಸಿನಿಮಾ ಶುರುವಾಗುವಷ್ಟರಲ್ಲಿ ಒಳ ಸೇರಿ ಕೃತಾರ್ಥರಾದೆವು! ಅಲ್ಲಿಂದ ಶುರುವಾದ ಡರ್ಟಿ ಪಿಕ್ಚರ್, ಮುಗಿಯುವಷ್ಟರಲ್ಲಿ ಅದೇನೋ ಕಿರಿಕಿರಿ… ಹತಾಶೆ…ಚಿತ್ರ ಹೀಗೇಕೆಂಬ ನೂರೆಂಟು ತಲೆಬಿಸಿ….

ಚಿತ್ರದ ನಡುವಿನ ಇಂಟರ್ವೆಲ್ ನಲ್ಲಿ ಸಿಗರೇಟಿಗೆ ಕಿಡಿ ಹೊತ್ತಿಸಿ ನಿಂತಿದ್ದ ಹೈದ ಹೇಳುತ್ತಿದ್ದ. ವಿದ್ಯಾಬಾಲನ್ ಗಿಂತ ಮಲ್ಲಿಕಾ ಶೆರಾವತ್ ಈ ರೋಲ್ ಗೆ ಸಕ್ಕತ್ತಾಗಿ ಸೂಟ್ ಆಗ್ತಿದ್ಲು ಅಂತ. ಅದು ನನ್ನ ಅಸಮಾಧಾನವೂ ಆಗಿತ್ತು. ಸಿಲ್ಕ್ ಕಣ್ಣುಗಳ ಮಾದಕತೆಯ ಕೆಲವಂಶವೂ ವಿದ್ಯಾಗಿಲ್ಲ. ಅದೆಷ್ಟೇ ತುಂಡು ಬಟ್ಟೆ ತೊಟ್ಟರೂ ಆಕೆಯ ಮುಖದಲ್ಲಿ ಸಿಲ್ಕ್ ಸ್ಮಿತಾಳನ್ನು ಕಲ್ಪಿಸಿಕೊಳ್ಳುವುದು ದುಃಸ್ಸಾಧ್ಯ. ಹಾಗಂತ ನಟನೆಯ ವಿಷಯದಲ್ಲಿ ಈ ಮಾತಿಗೆ ಬೆಲೆಯಿಲ್ಲ. ಅಪರೂಪದ ನಟನೆಗೆ ಬಲವಾಗಿಯೇ ಒಗ್ಗಿಕೊಂಡಂತಿರುವ ವಿದ್ಯಾ ಎಲ್ಲೂ ಎಡವಿಲ್ಲ. ಆದರೆ ಅವಳ ಒಟ್ಟಾರೆ ಛಾಯೆಯೇ ಹಾಗಿದ್ದರೆ ಅವಳೇನು ಮಾಡಿಯಾಳು? ಈ ಮಾತು ಬಿಡಿ. ಇಡೀ ಚಿತ್ರದ ಕುರಿತಾದ ಅಸಹನೆ ಹೊರಳುವುದು ಮುಖ್ಯವಾಗಿ ನಿರ್ದೇಶಕ ಮಿಲನ್ ಮೇಲೆ. ಚಿತ್ರದಲ್ಲಿ ಸಿಲ್ಕ್ ಕೇವಲ ‘ಸೆಕ್ಸಿ ಸಿಲ್ಕ್’ ಎಂಬುದನ್ನು ಬಿಂಬಿಸಲು ಮಿಲನ್ ಲುತ್ರಿಯಾ ಸಾಕಷ್ಟು ಕಸರತ್ತು ಮಾಡಿದ್ದಾರೆ ಎಂಬುದು ಬಹಳಷ್ಟು ದೃಶ್ಯದಲ್ಲಿ ಸಿದ್ಧವಾಗುತ್ತದೆ. ಬಹುಷಃ ಅದೇ ಕಾರಣಕ್ಕೇ ಪೂರ್ತಿ ಸಿನಿಮಾ ಬಣ್ಣದ ಕಾಗದ ಸುತ್ತಿದ ಖಾಲೀ ಡಬ್ಬಿಯಾಗುತ್ತದೆ! ಆದರೆ ಸಿಲ್ಕ್ ಸ್ಮಿತಾಗೂ, ಈ ಸಿನಿಮಾಗೂ ಒಂದು ಹೋಲಿಕೆ ನನಗೆ ಕಂಡಿತು.(ಅನೇಕರಿಗೂ ಅನ್ನಿಸಿರಬೇಕು!) ಕೇವಲ ಸಿಲ್ಕ್ ನೋಡಲು, ಆಕೆಯಿರುವ ಸನ್ನಿವೇಶಗಳು ಬರೋ ಸಮಯಕ್ಕೆ ಜನ ಥೇಟರ್ ಗಳಿಗೆ ಎಡತಾಕುತ್ತಿದ್ದರಂತೆ. ಬರಬರುತ್ತ ಅವೆಲ್ಲವೂ ಅದೇ ರಾಗ, ಅದೇ ಹಾಡು ಎಂಬಂತಾದುದೆ, ಜನ ಸಿಲ್ಕ್ ಕುರಿತು ನಿರುತ್ಸಾಹ ತೋರಲಾರಂಭಿಸಿದರು. ಡರ್ಟಿ ಪಿಕ್ಚರ್ ನಲ್ಲೂ ಅಷ್ಟೇ. ವಿದ್ಯಾಳ ಕಾಯಪ್ರದರ್ಶನ ಬರಬರುತ್ತ ಅಸಹನೆ ಹುಟ್ಟಿಸಲಾರಂಭಿಸುತ್ತದೆ. ಹಾಗಾಗಿಯೇ ಕೆಲವೊಮ್ಮೆ ಚಿತ್ರ ಏಕತಾನತೆಯ ಸುಳಿಗೆ ಸಿಕ್ಕಿದೆ.

1978 ರಲ್ಲಿ ಕನ್ನಡದ ‘ಬೇಡಿ’ಯಿಂದ ಶುರುವಾಗಿ 1996 ರಲ್ಲಿ ತಮಿಳಿನ ‘ಸುಭಾಶ್’ (ವಿಕಿಪೀಡಿಯಾದಲ್ಲಿ ಸಿಕ್ಕ ಮಾಹಿತಿ :)) ತನಕ ಅನಾವರಣಗೊಂಡ ಸಿಲ್ಕ್ ಬದುಕನ್ನು ಒಟ್ಟಾರೆ ಹಿಡಿದಿಡಲು ಮಿಲನ್ ತಿಣುಕಾಡಿದ್ದಾರೆ. ಆಕೆ ಚಿತ್ರರಂಗದ ತೆಕ್ಕೆಗೆ ಬೀಳುವ, ಅಲ್ಲೇ ಬದುಕು-ಭ್ರಮೆಗಳನ್ನು ಕಟ್ಟಿಕೊಳ್ಳುವ, ಕೊನೆಗೆ ಚೆನ್ನೈನ ಅಪಾರ್ಟ್ಮೆಂಟ್ ನಲ್ಲಿ ತನ್ನ ತಾನು ಕೊಂದುಕೊಳ್ಳುವ ಭೀಕರ ಹಂತದವರೆಗೂ ಸಾಗಿಬಂದ ಸಿಲ್ಕ್ ಬಾಳಿನ ಮಜಲುಗಳು ಬಹಳಷ್ಟು ಗಾಢ ಎಂಬುದು ನನ್ನ ತಿಳುವಳಿಕೆ. ಇಡೀ ಚಿತ್ರ ಎಲ್ಲಿಯೂ ಇಂತಹ ತೀವ್ರತೆಯಿಂದ ಆವರಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಕ್ಷಣ ಕ್ಷಣಕ್ಕೂ ಚಪ್ಪಾಳೆ ಗಿಟ್ಟಿಸುವ ಗೊಂಚಲು ಸಂಭಾಷಣೆಗಳಿದ್ದೂ, ಧಾರಾಳ ದೇಹ ಪ್ರದರ್ಶನವಿದ್ದೂ ಸಿನಿಮಾ ಜೊಳ್ಳಾಗಿದೆ… ಸಿಲ್ಕ್ ಸಿನಿಮಾ ರಂಗದ ಮೆಟ್ಟಿಲುಗಳನ್ನು ಏರಿದ, ಅಲ್ಲಿಂದ ಜಾರಿದ ಯಾವೊಂದು ದೃಶ್ಯ ಜೋಡಣೆಯೂ ‘ಹಳಿ’ಯ ಮೇಲಿಲ್ಲ. ಸುಮ್ಮನೆ ಏಕ್ತಾಳ ಒಣ ಧಾರಾವಾಹಿಯನ್ನು ನೋಡಿದಂತೆ ‘ದ ಡರ್ಟಿ ಪಿಕ್ಚರ್’ ನೋಡಿಸಿಕೊಳ್ಳುತ್ತದೆ. ಹ್ಞಾಂ..ಏಕ್ತಾ ಈ ಚಿತ್ರದ ನಿರ್ಮಾಪಕಿ ಎಂಬುದು ಮಧ್ಯೆ ಮಧ್ಯೆ ನೆನಪಾಗುತ್ತಿರುತ್ತದೆ. ಆಕೆ ನಿರ್ಮಾಪಕಿಯೆಂಬ ಕಾರಣಕ್ಕೇ ಸಿನಿಮಾದಲ್ಲಿರುವ ತುಷಾರ್ ಕಪೂರ್, ಪಕ್ಕಾ ಎಡಬಿಡಂಗಿಯಂತೆ ಕಾಣಿಸುತ್ತಾರೆ. (ಅವರ ನಟನೆಯ ದೃಷ್ಟಿಯಿಂದ ಮಾತ್ರ!), ನಾಸಿರುದ್ದೀನ್ ಷಾಗಿನ್ನೂ ವಯಸ್ಸಾಗಿಲ್ಲ. ದೇವಾನಂದ ಇಲ್ಲವಾದ ನಂತರ ಚಿರಯುವಕನ ಸ್ಥಾನ ಇವರಿಗೆ..(!) ಎನ್ನುವಂತೆ ದಕ್ಷಿಣ ಭಾರತದ ಪ್ರಸಿದ್ಧ ನಟರ ಹಿಕ್ಮತಿಗಳನ್ನೆಲ್ಲ ಧಾರಾಳವಾಗಿ ಹೊರಹಾಕಿದ್ದಾರೆ. ಇಮ್ರಾನ್ ಹಶ್ಮಿಗೆ ಜಾಸ್ತಿ ಕೆಲಸ ಇಲ್ಲ. ಇದ್ದಷ್ಟು ಚೊಕ್ಕ. ಇನ್ನುಳಿದಂತೆ ‘ದ ಡರ್ಟಿ ಪಿಕ್ಚರ್’ ಚಿತ್ರವನ್ನು ಮತ್ತೆ ನೆನಪಿಸುತ್ತಿರುವುದು ಬಪ್ಪಿ ಲಹರಿ, ಶ್ರೇಯಾ ಘೋಶಾಲ್ ಜೋಡಿಯ ಊ ಲಾ ಲಾ…. ಹಾಡು. ಹಾಂ..ಮರೆತಿದ್ದೆ…. ಚಿತ್ರದ ಪೋಸ್ಟರ್ ಗಳು ವಾಹ್ ಎನ್ನುವಷ್ಟು ಚೆಂದಕ್ಕಿದೆ 😉