Posts tagged ‘ರಸಲ್ ಮಾರ್ಕೆಟ್’

ತಿರುವುಗಳಲ್ಲಿ ಕಳೆದು ಹೋಗುತ್ತಾ…

ಎರಡು ದಿನದಿಂದ ಹುಚ್ಚು ಹತ್ತಿದವನಂತೆ ಶಿವಾಜಿನಗರದ ಗಲ್ಲಿಗಳನ್ನು ತಡಕಾಡುತ್ತಿದ್ದೇನೆ. ಹೊಸದಾಗಿ ಕೊಂಡ ಅಕ್ವೇರಿಯಂ ಅಂದಗಾಣಿಸುವುದೇ ನೆಪವಾಗಿ ಪ್ರತಿ ದಿನ ಸಂಜೆ ಆಪೀಸು ಮುಗಿಸಿ ಹೊಸ ಗಲ್ಲಿಗಳನ್ನು ಹುಡುಕುವ ಒಳ್ಳೆಯ ಸಾಹಸ ಮಾಡುವುದು ನನಗೆ ರಾಶಿ ಮಜಾ ಅನ್ನಿಸುತ್ತಿದೆ. ಮೊನ್ನೆ ಹೋಗುತ್ತಾ ಮೀನು ಹುಡುಕುವುದೇ, ತಿರುಗುವ ಉದ್ದೇಶವಾಗಿತ್ತು. ಶಿವಾಜಿನಗರದ ಸುತ್ತ ತೆಳುವಾಗಿ ಹರಡಿಕೊಂಡ ಮೀನಿನಂಗಡಿಗಳನ್ನು ಒಂದೊಂದೇ ಎಡತಾಕುತ್ತಾ ಹೊಸದಾಗಿ ಮತ್ಯಾವ ಪ್ರಾಣಿಗಳನ್ನು ನಾನಿರೋ ಪರಿಸ್ಥಿತಿಯಲ್ಲಿ ಸಾಕಬಹುದು ಎಂದು ಯೋಚಿಸುತ್ತಿದ್ದರೂ ಬಣ್ಣದ ಮೀನುಗಳೇ ತಲೆಯಲ್ಲಿ ಬಾಲ ಬಡಿಯುತ್ತಿದ್ದವು. ತಟ್ಟನೆ ರವೀಂದ್ರರ ‘ಶಾಂತಿ ನಿಕೇತನ’ ನೆನಪಾಗಿಬಿಟ್ಟಿತು.
ನಾಲ್ಕೋ ಐದೋ ವರ್ಷಕ್ಕೆ ಮೊದಲು ಶಾಂತಿ ನಿಕೇತನಕ್ಕೆ ದಿಕ್ಕುಗೆಟ್ಟ ವಲಸಿಗರಂತೆ ದಾಂಗುಡಿಯಿಟ್ಟಾಗ  ಪುಟ್ಟ ಮಣ್ಣಿನ ಪಾಟುಗಳಲ್ಲಿ ಮೊಸರು ಮಾರುತ್ತಿದ್ದರು. ಅಲ್ಲಿನ ಕ್ಯಾಂಟೀನಿನಲ್ಲಿ ಮದ್ಯಾಹ್ನದ ಊಟಕ್ಕೆ ಹೋದಾಗ ರುಚಿಯಾದ ಅಚ್ಚ ಹಳದಿ ಕಲರಿನ ದಾಲ್ ಇತ್ತು. ಖುಷಿಯಾಗಿ ಒಂದೆರಡು ತುತ್ತು ಹೊಟ್ಟೆಗಿಳಿಸುತ್ತಿದ್ದಂತೆ ಪಕ್ಕದಲ್ಲಿದ್ದ ಪಲ್ಯ ಚಳಕ್ಕನೆ ಹೊಳೆಯಿತು! ಕೈ ಹಾಕಿದರೆ ಸಿಕ್ಕಿದ್ದೇ ಮೀನ ಪೀಸು! ಪಕ್ಕಾ ಶಾಖಾಹಾರಿ ಊಟವೆಂದು ನಮಗೆ ಪಸೆ ಹಾಕಿದ ತಲೆ ಕೆರದುಕೊಳ್ಳುತ್ತಿದ್ದವ ಅವತ್ತು ಎಡ ಮಗ್ಗುಲಲ್ಲೆದ್ದಿರಬೇಕು. ಆದರೆ ಆಮೇಲಷ್ಟೇ ನಮಗೆ ಗೊತ್ತಾಗಿದ್ದು. ಕೋಲ್ಕತ್ತಾ ಜನಕ್ಕೆ ಮೀನು ಅಪ್ಪಟ ಸಸ್ಯಾಹಾರ. ಅಲ್ಲಿಂದಾಮೇಲೆ ನಾನು ತಿಂದಿದ್ದು ಬಿಸ್ಕತ್ ಮತ್ತು ಶಾಂತಿನಿಕೇತನದ ಕುಖ್ಯಾತ ಹುಡಿ ಧೂಳನ್ನು ಮಾತ್ರ! ಹಾಗಾಗಿ ಮೀನಿನೊಡನೆ ಸಹಾ ನೆನಪುಗಳ ಬೆಸುಗೆ ನನಗಿವೆಯಲ್ಲಾ ಎಂದು ಸುಮ್ಮನೆ ಖುಷಿಪಟ್ಟೆ ಮೊನ್ನೆದಿನ.
ಇಡೀ ಭಾರತವನ್ನೇ ರೈಲಿನಲ್ಲಿ ಕಂಡೆ, ಬಸ್ಸಿನಲ್ಲಿ ಕಂಡೆ ಎಂಬೆಲ್ಲಾ ಬಡ ಪದಗಳನ್ನು ಜೋಡಿಸುತ್ತಿದ್ದವರನ್ನು ನೆನೆದು ‘ನಾನು ಶಿವಾಜಿನಗರದಲ್ಲಿ ಅದನ್ನು ಕಂಡೆ’ ಎಂದು ಅವರಿಗೆಲ್ಲ ಮನಸ್ಸಲ್ಲೇ ಸಂದೇಶ ಮುಟ್ಟಿಸಿದೆ. ಮತ್ತು ಹಾಗನಿಸಿದ್ದು ಅದೆಷ್ಟು ಅರ್ಥಪೂರ್ಣ ಅಂದುಕೊಂಡು, ಕತ್ತಲಿದ್ದಿದ್ದರಿಂದ ನಕ್ಕುಬಿಟ್ಟೆ. ಅಂದ ಹಾಗೆ ಅಲ್ಲಿನ ರಸಲ್ ಮಾರ್ಕೆಟಿನ  ಮೊದಲ ಅಂಗಡಿಯ ಹೆಸರು ಶ್ರೀ ವಿನಾಯಕ ಫ್ಲವರ್ ಸ್ಟಾಲ್! ಇನ್ನೊಂದು ವಿಶೇಷ ಕೇಳಿ. 1927 ರಲ್ಲಿ ಕಣ್ಣುಬಿಟ್ಟ ರಸಲ್ ಮಾರ್ಕೆಟ್, 1882 ರಷ್ಟು ಹಿಂದೆ ಕಟ್ಟಿದ ಮತ್ತು ರಾಜ್ಯದ ಏಕೈಕ ಪುಟ್ಟ ಬೆಸೆಲಿಕಾಳನ್ನು ಪೂಜಿಸುವ, ಬೆಂಗಳೂರಿನ ಅತಿ ಹಳೆಯ ಚರ್ಚ್  ಸೇಂಟ್ ಮೇರಿ ಬೆಸಲಿಕಾ ಚರ್ಚಿನ ತುಸು ಕೆಳಕ್ಕೆ ಚಾಚಿಕೊಂಡಿದೆ. ರಸೆಲ್ ಮಾರ್ಕೆಟ್ ನಲ್ಲಿ ಸಿಗುವ ವಸ್ತು ವೈವಿಧ್ಯಗಳೇ ಕುತೂಹಲ ಹುಟ್ಟಿಸುವಂತಿದೆ. ಮೀನಾಕ್ಷಿ ಕೊಯಲ್ ರಸ್ತೆ, ಚಾಂದಿನಿ ಚೌಕ್ ರಸ್ತೆ, ಜುಮ್ಮಾ ಮಸೀದಿ ರಸ್ತೆ ಎಲ್ಲವೂ ಒಂದರೊಳಗೊಂದು ಥಳುಕು ಹಾಕಿಕೊಂಡು ಶಿವಾಜಿನಗರವನ್ನು ಶೃಂಗರಿಸಿವೆ. ನೀವು ಊಹಿಸಿಕೊಳ್ಳಿ, ನಾನು ಗ್ರಹಿಸಿದಂತೆ ಶಿವಾಜಿನಗರ ಹೀಗಿದೆ. ಸುತ್ತ ಒಂದು ಪದರ ಮುಸಲ್ಮಾನರದ್ದು, ನಡುವಿನ ಬಹಳಷ್ಟು ಮಳಿಗೆಗಳು ಹಿಂದೂ ತಮಿಳರದ್ದು. ಮತ್ತು ನಡುವಿನ ಬಹಳಷ್ಟು ಮನೆಗಳು ಸಾಮಾನ್ಯವಾಗಿ ಕ್ರಿಶ್ಚಿಯನ್ನರದ್ದು. ಇಂತಹ ಹಲವು ವೈರುಧ್ಯಗಳು ತುಂಬಿ ಶಿವಾಜಿನಗರ ಅಚ್ಚರಿಯ ತಾಣವಾಗಿ ನನ್ನನ್ನು ಮತ್ತೆ ಕರೆಯುವಂತಿದೆ.


ದನದ ದೇಹವನ್ನು ನೇತು ಬಿಟ್ಟಿರುವ, ನಂಗೆ ಮತ್ತು ನನ್ನಂತವರಿಗೆ ಕರಾಳವೆನಿಸುವ ಅಂಗಡಿಯಲ್ಲೇ ಉಪ್ಪು, ಕೊತ್ತುಂಬರಿ ಸೊಪ್ಪು ಹಾಕಿ ಹದವಾಗಿರುವ ಮಜ್ಜಿಗೆಯೂ ಸಿಗುತ್ತದೆ. ನಡು ನಡುವೆ ಶ್ರೀ ವೆಂಕಟೇಶ್ವರ ಆಯಿಲ್ ಶಾಪ್, ಅಬ್ದುಲ್ ರೆಹಮಾನ್ ಮಿಲ್ಕ್ ದುಕಾನ್ ಎಲ್ಲವೂ ಬಯಲು ಗದ್ದೆಯ ನಡುವಿನ ಮರಗಳಂತೆ ಎದ್ದು ಕಾಣುತ್ತವೆ. ರಸಲ್ ಮಾರುಕಟ್ಟೆ, ಬೀಫ್ ಮಾರುಕಟ್ಟೆಯ ಸುತ್ತಣ ಜಾಗದಲ್ಲಿ ಬರಿ ಹಿಂದಿ, ತಮಿಳುಗಳಷ್ಟೇ ಗಿಲಿಗಿಲಿಯೆನ್ನುತ್ತವೆ. ಕನ್ನಡದಲ್ಲಿ ದಾರಿ ಕೇಳಿದ ನಂಗೆ ಎಲ್ಲೂ ಅದು ಗೀಟಲಿಲ್ಲ. ರಸೆಲ್ ಮಾರುಕಟ್ಟೆಯ ಕೂಗಳತೆಯ ದೂರದಲ್ಲೇ ಬೀಫ್ ಮಾರುಕಟ್ಟೆಯಿದೆ. ಆಸುಪಾಸು ಹೆಜ್ಜೆಯಿಡುತ್ತಿದ್ದಂತೆ ಅಲ್ಲೆಲ್ಲ ಪಸರಿಸಿರೋ ಕಮಟು ಘಮಲು ನಮ್ಮದೇ ಬೆವರ ನಾತವೋ ಎಂಬಂತೆ ಹಿಂಬಾಲಿಸುತ್ತದೆ. ಇನ್ ಫ್ಯಾಂಟರೀ ರಸ್ತೆಯ ನೆಲ ಮಹಡಿಯಲ್ಲಿರುವ ‘ವೆಟ್ ಪೆಟ್‘ ಅಂಗಡಿಯಲ್ಲಿ ಅನೇಕ ಸಾಕು ಪಕ್ಷಿ, ಪ್ರಾಣಿ, ಜಲಚರಗಳು ಸಿಗುತ್ತವೆ. ಅದೇ ಹೆಸರಿಟ್ಟುಕೊಂಡ ಅಂಗಡಿ ಬೀಫ್ ಮಾರುಕಟ್ಟೆಯ ಬಲ ಪಾರ್ಶ್ವದಲ್ಲೂ ಇದೆ. ಆದರೆ ಅದು ಮತ್ತಷ್ಟು ಅಗಾಧ. ಪುಟ್ಟ ಬೆಕ್ಕು, ಕುನ್ನಿಮರಿಗಳು, ಸುಂಡಿಲಿ ಇತ್ಯಾದಿಗಳು, ಬಾತು, ಹಮ್ಮಿಂಗ್, ಪಾರಿವಾಳಗಳು, ಹತ್ತೆಂಟು ಸಾವಿರ ಬೆಲೆಬಾಳುವ ಮೀನಕುಲ ಎಲ್ಲವೂ ಅಲ್ಲಿ ಓಡಾಡಿಕೊಂಡಿರುತ್ತವೆ. ಮೆದು ಮನಸ್ಸಿನವರಿಗೆ ಇವೆಲ್ಲ ಕಿರಿಕಿರಿ ಹಿಂಸೆ ಎನಿಸುವುದೇನೋ ಸರಿಯೇ. ಆದರೆ ಅಲ್ಲಿ ಸಿಗುವ ತಾಜಾ ಜೀವನ ಶೈಲಿ ನಮ್ಮನ್ನೇ ಮರೆಸುವುದು. ಅಲ್ಲಿನ ಮೆತ್ತಿಯ ಮೇಲೆ ಪಾಚಿ ಹಿಡಿದು ಗಲೀಜಾದ ನೀರಲ್ಲಿ ಗಟ್ಟಿ ಜೀವದ ಮೀನುಗಳು ಬದುಕುತ್ತವೆ. ಐವತ್ತೋ, ಅರವತ್ತೋ ತೆತ್ತರೆ ಅಲ್ಲಿನ ಕೆಲ ಮೀನುಗಳಿಗೆ ಶಿವಾಜಿನಗರದ ಸಂಗ ಖಾಯಂ ಆಗಿ ತಪ್ಪುತ್ತದೆ. ಅಲ್ಲಿನ ಅಕ್ವೇರಿಯಂಗಳಲ್ಲಿರುವ ‘ಕಿಸ್ಸಿಂಗ್ ಗೌರಾಮಿ’ ಎಂಬ ಚೆಂದದ ಹೆಸರಿಟ್ಟುಕೊಂಡ ಮೀನುಗಳಿಗೆ ತಮ್ಮ ಹೆಸರ ಅರ್ಥ ತಿಳಿದುಕೊಳ್ಳೋ ಹುಮ್ಮಸ್ಸೂ ಇರಲಿಕ್ಕಿಲ್ಲ. (ನಿಜವೇನೆಂದರೆ ಈ ಮೀನುಗಳು ತುಟಿ ತಾಗಿಸಿ ಎದುರು ಬದುರಾಗುವ ನಿಜವಾದ ಉದ್ದೇಶ ಬೇರೆಯದೇ ಇದೆಯಂತೆ. ಪರಸ್ಪರ ಸಾಮರ್ಥ್ಯ ನಿರೂಪಣೆಯೇ ಇದಕ್ಕೆ ಕಾರಣವಂತೆ…) ಆ ಕಿರಿ ಓಣಿಯಲ್ಲಿ ಅಕ್ಕ ಪಕ್ಕ ತುಂಬಿಕೊಂಡಿರೋ ಮಾರಾಟದ ಎಲ್ಲ ಜೀವಗಳೂ ನಮ್ಮನ್ನೇ ಕ್ಷೀಣವಾಗಿ ನೋಡಿ ಆರ್ತಿಸಿದಂತೆ ಕಂಡರೆ ಅವುಗಳ ಮೇಲೆ ಪ್ರೀತಿ ಹುಟ್ಟುವುದಕ್ಕಿಂತ, ಅಂತಹ ಸ್ಥಿತಿಯನ್ನೂ ಆಸ್ವಾದಿಸುವ ಬುದ್ಧಿ ಹುಟ್ಟುವ ನಮ್ಮ ಮೇಲೆ ನಮಗೇ ಕನಿಕರ ಹುಟ್ಟಬಹುದೇನೋ…!  ಈ ಯಾವ ಸಂಗತಿಗಳೂ ಅಲ್ಲಿ ನೆನಪಾಗದಿದ್ದುದು ನನ್ನನ್ನು ಮತ್ತಷ್ಟು ನೀಚನನ್ನಾಗಿಸಿ ನಂತರ ಈಗ ಕಾಡುತ್ತಿದೆ.

ಅಲ್ಲಿನ ಹುಡಿಗಳನ್ನೆಲ್ಲ ಹಚ್ಚಿಕೊಂಡು ವಾಪಸ್ ಅದೇ ದಾರಿಯಲ್ಲೇ ಬರುವ ಮನಸ್ಸಾಗದೇ ಹೊಸ ದಾರಿ ಹುಡುಕ ಹೊರಟರೆ ಹೊಸ ಪ್ರಪಂಚವೇ ಎದುರಾಯಿತು. ಗಲ್ಲಿಗಳಲ್ಲಿ ನುಗ್ಗುತ್ತಾ ಬಂದವನಿಗೆ ಕಾರು, ಸ್ಕೂಟರುಗಳ ಬಿಡಿ ಭಾಗಗಳು  ಮುಕ್ಕಾಗಿ, ತುಕ್ಕು ಹಿಡಿದು ಕುಯ್ಯೋ ಮರ್ರೂ ಎನ್ನುತ್ತಿದ್ದ ಜಾಗ ಸಿಕ್ಕಿತು. ಇದೇ ಶಿವಾಜಿನಗರಕ್ಕೆ ಒಂದು ಹಂತದ ಕುಖ್ಯಾತಿ ಬರಲು ಕಾರಣವಾದ ಪ್ರದೇಶವಿರಬಹುದು. ಬೆಂಗಳೂರಲ್ಲಿ ರಾತ್ರೋ ರಾತ್ರಿ ಕಾಣೆಯಾಗುವ ವಾಹನಗಳು ಎಲ್ಲವನ್ನೂ ಕಳಕೊಂಡು ಕೊನೆಗೆ ಸೊನ್ನೆಯಾಗುವುದು ಇಲ್ಲೇ ಎಂಬುದು ಚಾಲ್ತಿಯ ಮಾತು. ಹಾಗಾಗಿ ವೈಪರೀತ್ಯ ಸನ್ನಿವೇಶಗಳಿಗೆ ಸಿದ್ಧನಾಗುವ ಹುಸಿ ಹುಂಬನಂತೆ ಮುರುಟಿಕೊಂಡು ಹೆಜ್ಜೆ ಹಾಕಿದ್ದೆ. ಅಂತಹ ವಿಶೇಷಗಳೇನೂ ಸಿಗದೇ ಬಣ್ಣದ ಟಾರ್ಪಾಲುಗಳಿಂದ ಮರೆಯಾಗಿ ಅಲ್ಲಲ್ಲಿ ಮಾತ್ರ ಇಣುಕುತ್ತಿದ್ದ ವಾಹನದ ಬಾಗಗಳನ್ನೇ ಇದು ಎಂತ ಖದೀಮನದ್ದಿರಬಹುದು, ಆತನಿಗೆ ಎಂತಹ ಗಡ್ದವಿರಬಹುದು, ಕಳಕೊಂಡ ಆತ ಹೇಗೆ ರೋಧಿಸಿರಬಹುದು ಎಂದೆಲ್ಲ ಹುಚ್ಚು ಹುಚ್ಚಾಗಿ ಯೋಚಿಸುತ್ತ ನಾನು ಹಾದಿ ಹಿಡಿದೆ. ದಾರಿಯ ಇಕ್ಕಟ್ಟಾದ ಗಲ್ಲಿಗಳಲ್ಲಿ ಮಕ್ಕಳ ಉಚ್ಚೆಯಷ್ಟು ಚಿಕ್ಕದಾದ ಧಾರೆಯ ನೀರ ನಲ್ಲಿಗಳ ಬುಡದಲ್ಲಿ ಕೆಂಪು, ಹಸಿರು ಕೊಡಗಳು ತಮ್ಮ ಸರದಿಗೆ ಕಾಯುತ್ತಾ ಆಕಳಿಸುತ್ತಿದ್ದವು. ಸಂಧಿಗಳ ನಡುವಿನ ಮನೆಗಳಲ್ಲಿನ ಏಸು ಮೂರ್ತಿಗೆ ಹತ್ತಿಸಿದ ಮೇಣದ ಬತ್ತಿ ಆಚೆಗೂ ಈಚೆಗೂ ಅಲ್ಲಾಡುತ್ತಾ ನನ್ನ ತಲೆಯಲ್ಲೇ ಕುಣಿಯುತ್ತಿತ್ತು. ನಂತರ ನಾನು ಬೆಸೆಲಿಕಾ ಚರ್ಚ್ ಕಮಾನಿನ ಸಂಧಿಯಲ್ಲೇ ನುಗ್ಗಿ ಈಚೆ ಬಂದೆ.

ಆಗಲೇ ವಿವೇಕಾನಂದರೂ, ದಿನೇಶ್ ಮಟ್ಟು ಬರಹವೂ, ಪ್ರತಿಕ್ರಿಯೆಗಳೂ ಇತರೆ ವಾದ ವಿವಾದಗಳೂ ಮತ್ತೆ ಸುಮ್ಮನೆ ನೆನಪಾಗಿ ಮತ್ತೆ ಮರೆತು ಹೋದವು. ಕ್ಷುಲ್ಲಕನಾಗಿರುವುದೇ ಸೌಭಾಗ್ಯ ಅನಿಸಿತು!
ಮುಂದಿನ ಸಾರಿ ಈ ಗಲ್ಲಿಗಳಲ್ಲಿ ಕಳೆಯುವಾಗ ಕ್ಯಾಮರಾ ಕೈಲಿರಲೇ ಬೇಕೆಂದುಕೊಂಡು ನಾನು ಮಲ್ಲೇಶ್ವರದ ಬಸ್ಸಿಗೆ ಕಾಯುತ್ತಾ ನಿಂತೆ.

ಚಿತ್ರಗಳು: ಅಂತರ್ಜಾಲ