Posts tagged ‘ಮಾತೆಯ ದಿನ’

ಮಾತೆಯೆಂದೊಡೆ ಮಮತೆಯಿರಲಿ

ಅಮ್ಮಾ ಎಂದರೆ ಏನೋ ಹರುಷವು… ನಮ್ಮ ಬಾಳಿಗೆ ನೀನೇ ದೈವವು… ಅಮ್ಮನ ಬೆಚ್ಚನೆ ಮಡಿಲಿನ ನೆನಪು ಈಗಾಗಲೇ ಆಗಿರಬೇಕಲ್ವಾ? ಬಾಲ್ಯದ ಆರ್ದೃ ನೆನಪುಗಳ ಬುಟ್ಟಿ ಬಿಚ್ಚಿ ನೋಡಿ. ಅಮ್ಮನಿಲ್ಲದೇ ಕುಡಿಯೊಡೆದ ಕನಸುಗಳೊಂದೂ ಸಿಗದು. ಅಮ್ಮನ ನೆರವಿಲ್ಲದೇ ಸಾಧಿಸಿದ ಕೆಲಸಗಳೂ ವಿರಳ.
        
ಅಪ್ಪನ ಪ್ರವಾಹದಂತ ಕೋಪಕ್ಕೆ ತುತ್ತಾಗಿ ಅಳುಮೋರೆ ಮಾಡಿಕೊಂಡು ಮೂಲೆಗೆ ಮೊರೆ ಹೊಕ್ಕಾಗ ರಮಿಸಿದ, ಕಷ್ಟದ ಪರೀಕ್ಷೆ ಎದುರಿಸಿ ಬಂದು ಫೇಲಾಗುವ ಭೀತಿಯಲ್ಲಿದ್ದಾಗ ಧೈರ್ಯ ತುಂಬಿದ, ಮೊದಲ ಸಲ ಬೀಡಿ ಸೇದಿ ಸಿಕ್ಕಿ ಬಿದ್ದಾಗ ಬಾಸುಂಡೆ ಬರುವಂತೆ ಬಾರಿಸಿದರೂ ಅಪ್ಪನ ಬಳಿ ಹೇಳದೇ ತಿಳಿ ಹೇಳಿದ, ಸೈಕಲ್ ಕಲಿಯಲು ಹೋಗಿ ಬಿದ್ದು ಕಾಲಿಗೆ ಭಯಂಕರ ಗಾಯವಾದಾಗ ಮುಲಾಮು ತಿಕ್ಕುತ್ತಾ ಸಮಾಧಾನಿಸಿದ ಎಲ್ಲರ ಪ್ರೀತಿಯ ಅಮ್ಮ ಮನಸಿನಿಂದ ಮರೆಯಾಗುವುದು ಸಾಧ್ಯವೇ? ತಾಯಿಯೆಂಬ ಧೀಃ ಶಕ್ತಿಯ ಮಹತ್ವವೇ ಅಂಥಹುದು.

ಅಂತಹ ಅಮ್ಮನನ್ನು ಮತ್ತೆ ನೆನೆಸಿಕೊಳ್ಳುವ ದಿನ ಬಂದಿದೆ. ಹೌದು. ಮೇ ೧೧ ವಿಶ್ವ ಅಮ್ಮಂದಿರ ದಿನ. ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವನ್ನಾಗಿ ಆಚರಿಸುವುದು ಲೋಕರೂಢಿ. ಈ ಅಭ್ಯಾಸಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಗ್ರೀಕರು. ಗ್ರೀಕ್ ದೇವತೆಯಾದ ರೆಯಾಳನ್ನು ಸಮಸ್ತ ಜಗತ್ತಿನ ಮಾತೆಯೆಂದು ನಂಬಲಾಗಿತ್ತು. ನಂತರ ಇಂಗ್ಲೆಂಡ್‌ನಲ್ಲಿ ಕ್ರಿ.ಶ ೧೬೦೦ ರಿಂದ ಪ್ರತೀ ವರ್ಷದ ಒಂದು ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸುವ ಪದ್ಧತಿಗೆ ನಾಂದಿ ಹಾಡಲಾಯಿತು. ದೂರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಆ ದಿನದಂದು ತಾಯಿಯನ್ನು ನೋಡಲು ವಿಶೇಷ ಉಡುಗೊರೆ, ಸಿಹಿತಿಂಡಿಗಳೊಡನೆ ಬರುತ್ತಿದ್ದರೆಂಬುದು ಚರಿತ್ರೆ.

ಆದರೂ ಪಶ್ಚಿಮ ವರ್ಜೀನಿಯಾದ ಗ್ರಾಫ್ಟನ್ ಊರಿನವಳಾದ ಆಯ್ಯನಾ ಜರ್ವೀಸ್ ಎಂಬಾಕೆ ಅಮ್ಮಂದಿರ ದಿನಕ್ಕೆ ಹೊಸ ಭಾಷ್ಯ ಬರೆಯುವವರೆಗೂ ಅದು ನಿಯಮಿತವಾಗಿ ಆಚರಿಸಲ್ಪಟ್ಟಿರಲೇ ಇಲ್ಲ. ಆಕೆ  ೧೯೦೮ರಲ್ಲಿ ಅಮ್ಮನ ಸವಿ ನೆನಪಿಗಾಗಿ ಚರ್ಚ್ ಒಂದನ್ನು ನಿರ್ಮಿಸಿದಳು. ಆನಂತರ ಫಿಲಡೆಲ್ಫಿಯಾಗೆ ತೆರಳಿದ ಜರ್ವೀಸ್ ಅಲ್ಲಿನ ಪ್ರಮುಖರಿಗೆ ಅಮ್ಮಂದಿರ ದಿನವನ್ನು ಆಚರಿಸಿ ಅದನ್ನು ರಾಷ್ಟ್ರೀಯ ದಿನವೆಂದು ಘೋಷಿಸಲು ವಿನಂತಿಸಿಕೊಂಡಳು. ಈ ವಿನಂತಿಯ ಕರೆಗೆ ಓಗೊಟ್ಟ ಅಧ್ಯಕ್ಷ ವುಡ್ರೋ ವಿಲ್ಷನ್ ಪ್ರತೀ ವರ್ಷದ ಮೇ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವೆಂದು ಘೋಷಿಸಿದರು.

ನಿಧಾನವಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಅಮ್ಮಂದಿರ ದಿನ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದವು. ಹೀಗೆ ಚಾಲ್ತಿಗೆ ಬಂದ ಅಮ್ಮಂದಿರ ದಿನಾಚರಣೆ ಅನೇಕ ರಾಷ್ಟ್ರಗಳಲ್ಲಿ ಅದ್ದೂರಿಯಾಗಿಯೇ ಆಚರಿಸಲ್ಪಡುತ್ತದೆ. ಆದರೆ ಅಮ್ಮಂದಿರ ದಿನದ ಆಚರಣೆಯಲ್ಲೂ ಭಾರತ ಬಡರಾಷ್ಟ್ರವೆಂದೇ ಗುರುತಿಸಿಕೊಳ್ಳುತ್ತಿರುವುದು ವಿಷಾದನೀಯ. 

ತಂದೆ, ತಾಯಂದಿರ ಕೂದಲು ಬೆಳ್ಳಗಾಗುತ್ತಿದ್ದಂತೆ ಬೆಳೆದು ನಿಂತ ಮಗ ಅವರನ್ನು ಕಡೆಗಣಿಸಲು ಶುರುವಿಟ್ಟುಕೊಳ್ಳುತ್ತಾನೆ. ಹೆಂಡತಿಯೊಡನೆ ಸೇರಿಕೊಂಡು ಜನ್ಮವಿತ್ತ ತಂದೆ-ತಾಯಿಯರ ಮೇಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾನೆ. ಕಡಿಮೆ ಬೆಲೆಯ ವೃದ್ಧಾಶ್ರಮಗಳಿಗಾಗಿ ಅರಸಿ ಅವರನ್ನು ಸಾಗು ಹಾಕಲು ಪ್ರಯತ್ನಿಸುತ್ತಾರೆ. ಇಂತಹ ದೇಶದಲ್ಲಿ ತಾಯಂದಿರ ದಿನವನ್ನು ನೆನಪಿಟ್ಟುಕೊಂಡು ಆಡಂಬರದಿಂದ ಆಚರಿಸುವುದು ಹೇಗೆ ಹೇಳಿ? ಪರಿಸ್ಥಿತಿ ಬದಲಾಗಬೇಕು. ತಾಯಿಯೆಂಬ ಕಣ್ಣೆದುರಿನ ದೇವತೆಯನ್ನು ಕೊನೆಯವರೆಗೂ ಪ್ರೀತ್ಯಾದರಗಳಿಂದ ನೋಡಿಕೊಳ್ಳುವುದು ಪ್ರತೀ ಮಕ್ಕಳ ಕರ್ತವ್ಯವಾಗಬೇಕು. ಹೆಂಡತಿ ಬರುವವರೆಗಿನ ಅಕ್ಕರೆಯ ಅಮ್ಮ ಖಾಯಂ ಪ್ರೀತಿಯ ಅಮ್ಮನಾಗೇ ಇರಬೇಕು. ನಮ್ಮನ್ನು ಮಮಕಾರದಿಂದ ಪೋಷಿಸಿದ ಅಮ್ಮನಿಗೆ ವಯಸ್ಸಾದಾಗ ಕೈಲಾಗದವಳೆಂದು ಗಣಿಸದೇ ಕೊನೆಗಾಲದವರೆಗೂ ಪ್ರೀತಿಯನ್ನು ಪರತ್ ಮಾಡುತ್ತಿರಬೇಕು. ಅಕ್ಕರೆಯ ಅವ್ವ ಇಂದಿನ ಬಿಜಿ ಬದುಕಿನ ನಡುವೆ ಕಳೆದು ಹೋಗದಿರಲೆಂಬ ಆಶಯ ನಮ್ಮದಾಗಲಿ. ತಾಯಂದಿರ ದಿನಕ್ಕೆ ಮಹತ್ವ ದೊರಕುವುದು. ಆಗಲೇ… ಏನಂತೀರಾ?