Posts tagged ‘ನೆಲ’

ಮುಂಗಾರಿನಾಭಿಷೇಕಕೆ ಮಿದುವಾಯಿತು ನೆಲವು…

ಮಳೆ ಬರೇ ಮಳೆಯಲ್ಲ! ಅದೊಂದು ಸುಮಧುರ ಕಾವ್ಯ, ದಿಗಂತದಾಚೆಗೆ ದೊರೆಯಬಹುದಾದ ಅನುಭೂತಿ, ಸೃಷ್ಟಿಯ ಸುಂದರ ದೃಶ್ಯಾವಳಿಗಳ ಮುಖವಾಣಿ, ಬದುಕು ಮತ್ತದರ ಬವಣೆಗಳನ್ನು ಮರೆಯಿಸುವ ತಾಕತ್ತುಳ್ಳ ಜಾದೂಗಾರ…ಮತ್ತಿನ್ನೇನೋ… 
ಅದು ಭಾವನೆಗಳ ಕೇಂದ್ರವೂ ಹೌದು ಭಕುತಿಯದ್ದೂ ಸರಿ.  ಮನುಷ್ಯ ಮತ್ತು ಮಳೆಯ ನಡುವಿನ ನಂಟು ಕೇವಲ ಕನಸು, ಕನವರಿಕೆ, ನೆನಪುಗಳಿಗಷ್ಟೇ ಸಂಬಂಧಿಸಿದ್ದಲ್ಲ. ಅದು ಜೀವಂತಿಕೆಯ, ಉಮೇದಿನ ಚಿಲುಮೆ. ಭೂಮಿಯ ಕ್ಯಾನ್‌ವಾಸ್ ಮೇಲೆ ಮುಗಿಲ ಕುಂಚ ಚಿಮುಕಿಸುವ ಬಣ್ಣದ ಗೊಂಚಲು. 
ವರ್ಷ ಋತುವಿನ ಮೊದಲ ಮೋಡ ಆಗಸದಲ್ಲಿ ಇಣಿಕಿದ್ದನ್ನು ಕಂಡು ಖುಷಿ ಪಡದ ಮಂದಿಯಿದ್ದಾರೆಯೇ? ಮಂದಿಯ ಮಾತು ಬಿಡಿ. ಮೊದಲ ಮಳೆಯ ಮುಂಚಿನ ಹನಿಗೆ ಚಿಪ್ಪಿನೊಳಗಣ ಮೆದು ಜೀವಿಯೂ ಉಸಿರು ಬಿಗಿ ಹಿಡಿದು ಬಾಯಿ ಬಿಡುತ್ತಂತೆ! ಉಳುವ ಯೋಗಿ ಮತ್ತವನ ಹೊಲವೂ ಬಾಯ್ಬಿಟ್ಟು ನಿಂತು ಕಾಯುವವರ ಸಾಲಿಗೆ ಸೇರಿಕೊಳ್ಳುತ್ತದೆ. ಮಳೆ, ಮತ್ತದು ಹಿಡಿಯುವ ಮಗುರೂಪಿ ರಚ್ಚೆ ತುಸು ಬೇಗನೇ ಕಿರಿ ಕಿರಿ ಹುಟ್ಟಿಸುತ್ತದಾದರೂ ಅದು ಉಳಿದೆರಡು ಕಾಲಗಳ ಬೇಸರಕ್ಕೆ ಸಮವಲ್ಲ.     
ಬೇಸಿಗೆಯ ಬಿಸಿಲಿನಲ್ಲಿ ಕಾದು, ಬಿರುಕಾಗಿ ನಿಂತ ನೆಲದ ಮುಕ್ತಿಗೆ ವರುಣನ ಆಗಮನವಾಗಲೇ ಬೇಕು. ಮೊದಲ ಮಳೆಗೆ ಮಿದುವಾಗುವ ನೆಲವು ಚಿಮ್ಮಿಸುವ ಘಮ್ಮನೆ ವಾಸನೆಯೂ ಬಲು ಹಿತ. ಅಂದ ಹಾಗೆ ಮಳೆಯ  ವೈಖರಿ ನಿಖರವೇನಲ್ಲ. ಮಳೆಯೆಂಬುದು ಒಂದೆಡೆ ತಲೆದೂಗಿಸುವ ಭಾವಗೀತೆ, ಮತ್ತೊಂದೆಡೆ ಮೈ ಮರೆಯಿಸುವ ಶಾಸ್ತ್ರೀಯ, ಇನ್ನೊಂದೆಡೆ ಅಬ್ಬರಿಸುವ, ಹುಚ್ಚೆಬ್ಬಿಸುವ, ಕುಣಿಸುವ ವೆಸ್ಟರ್ನ್ ಕೂಡ!
ಬಯಲು ಸೀಮೆಯ ಮಳೆ ಪ್ರಕೃತಿಯ ಪೊರೆಯುವ ಉದ್ದೇಶವಿರುವ ತುಂತುರಾಗಬಹುದಷ್ಟೇ. ಆದರೆ ಮಲೆನಾಡಿನ ಮಳೆಯ ಆರ್ಭಟ ಬಲು ಜೋರು.
ತೀರ್ಥಳ್ಳಿ ಗೌಡ, ಭಟ್ಟರ ಅಡಿಕೆ ತೋಟಗಳ ಬೇಲಿ ತಡಿಕೆ
ದಾಟಿ ಬುಡದಡಿಯ ಮೌನದ ಮಡಿಕೆ
ಗಳ ಮಡಿಗೊಳಿಸಿ ಶಬ್ದದಿಂದ
ಕಬ್ಬು ಭತ್ತವ ಥಳಿಸಿ,
ಬೆಟ್ಟಗಳನಳಿಸಿ,
ಸೋಂಭೇರಿ ಬಿಸಿಲ ಹೊಡೆದಟ್ಟಿ
ಬಾನಗಲ ಬಿಡಾರಗಳ ಕಟ್ಟಿ…
ಇದು ನಿಸಾರರು ಕಂಡ ಮಲೆನಾಡಿನ ಸಂಜೆ ಮಳೆ. ಭೋರಿಡುವ ಗಾಳಿ, ಗುಡುಗಿ ನಡುಗಿಸುವ ಗುಡುಗು, ಬಾನು-ಭೂಮಿಯನ್ನು ಒಂದಾಗಿಸುವ ಕೋಲ್ಮಿಂಚು, ಛಳ್ಳನೆ ಬೆಳಗುವ ಸಿಡಿಲು, ರೇಜಿಗೆ ಹುಟ್ಟಿಸುವ ಕಚ-ಪಿಚ ಕೆಸರು, ವಾರಕ್ಕೊಮ್ಮೆ ಇಣುಕಿದರೂ ಪ್ರಖರತೆ ಮರೆತ ಸೂರ್ಯ, ಮಳೆಗಾಲ ಬಂದೊಂಡನೆ ವರ್ಷದ ರಜೆ ಹಾಕಿ ಹೊರಡುವ ವಿದ್ಯುತ್… ಇವೆಲ್ಲಾ ಮಳೆಗಾಲದ ಮಲೆನಾಡಿನ ನಿತ್ಯ ಸ್ಥಿಥಿಗಥಿಗಳು. ಅಂತೆಯೇ ಮಳೆಯಿಂದ ರಸ್ತೆಯ ಇಕ್ಕೆಲಗಳ ಕಾಲುವೆಗಳಲ್ಲಿ ತುಂಬಿ ಹರಿಯುವ, ಕೆಂಪು ವರ್ಣದ ನೀರೆಬ್ಬಿಸುವುದು ಜುಳು ಜುಳು ನಾದವನ್ನಲ್ಲ, ಅಬ್ಬರವನ್ನ! ಆದರೆ ಈ ಎಲ್ಲಾ ಸಣ್ಣ ಪುಟ್ಟ ಕಷ್ಟಗಳು ಮಧುರಾತಿ ಮಧುರ ಸಂವೇದನೆಗೆ ಸಹಕಾರಿಗಳು. ಏತನ್ಮಧ್ಯೆ ಮಳೆಯೊಂದಿಗೇ ಪುನಃ ಚಾಲೂ ಆಗುವ ನಾಡೆಂಚಿನ ಶಾಲೆಗಳಿಗೆ ಪುಟ್ಟ ಬಣ್ಣದ ಛತ್ರಿ, ರೇನ್ ಕೋಟ್‌ನೊಡನೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕುವ ಪುಟಾಣಿಗಳು, ಕಂಬಳಿ ಹೊದ್ದು ಹಸಿರ ಬೆಟ್ಟದಲ್ಲಿ ದನ ಮೇಯಿಸುವ ಬಗೆ, ಸಂಜೆಯಾದೊಡನೆ ಗದ್ದಲವೆಬ್ಬಿಸುವ ಮಳೆ ಹುಳುಗಳ ವಾದ್ಯವೃಂದ! ಕಲ್ಪನೆಯೇ ನೆನಪುಗಳನ್ನು ಕೆದಕುವ ಕೆಲಸಕ್ಕೆ ಕೈ ಹಚ್ಚುತ್ತದಲ್ಲವಾ? ಅದೇ ಮಳೆಯ, ಅದರಲ್ಲೂ ಮಲೆನಾಡ ಮಳೆಯ ಕರಾಮತ್ತು. 
    
ಛೇ! ಎನ್ನಿಸುವ ಬೇಸರದ ನಡುವೆ, ಹೊರಗೆ ಜಿಟಿ ಜಿಟಿ ಮಳೆ ಹೊಯ್ಯುತ್ತಿರುವಾಗ, ಅಮ್ಮ ಮಾಡಿಕೊಟ್ಟ ಬೆಚ್ಚಗಿನ ಹಬೆಯಾಡುವ ಕಾಫಿ ಸೇವನೆಯ ಅದ್ಭುತ ಅನುಭವ ಮಳೆಗಾಲದಲ್ಲಷ್ಟೇ ಸಾಧ್ಯ ತಾನೇ? ಹಳೆಯ ನೋಟ್ ಬುಕ್ಕಿನ ಒಂದೊಂದೇ ಪುಟವನ್ನು ಕತ್ತರಿಸಿ, ಒಂದು ಕಡೆ ಊನವಾದ ದೋಣಿ ಮಾಡಿ ಅದರೊಳಗೊಂದು ಚಿಕ್ಕ ಕಲ್ಲಿಟ್ಟು ಹರಿಯುವ ನೀರಿನಲ್ಲಿ ತೇಲಿಬಿಡುವ ಆಸೆಯೂ ಮಳೆಯೊಂದಿಗೆ ಮತ್ತೆ ಕುಡಿಯೊಡೆಯುತ್ತದೆ. 
ಸುರಿಯುವುದರೊಂದಿಗೆ ಮನಸುಗಳನ್ನೂ ಒದ್ದೆ ಮಾಡುವ ಮಳೆಯೆಂಬ ಲಗಾಟಿಕೋರನೆಬ್ಬಿಸುವ ದಾಂಧಲೆಗೂ ಲೆಕ್ಕವಿಲ್ಲವೆನ್ನಿ! ಆದುದರಿಂದಲೇ ಮಳೆ ಕೆಲವೊಮ್ಮೆ ಯಾರಿಗೂ ಬೇಡದ, ಎಲ್ಲರೂ ತೆಗಳುವ ಬಿಕನಾಶಿಯಾಗಿಬಿಡುತ್ತದೆ. 
ಕಂಪೆಬ್ಬಿಸುವ ವರ್ಷಧಾರೆಗೊಂದು ಚರಣ ಹಾಡುತ್ತಾ, ಮೈ ಮನಸುಗಳನ್ನು ಆರ್ದ್ರಗೊಳಿಸುವ ಮಳೆ ಸುರಿವ ರೀತಿಗೆ ಅದರ ಬೆರಗಿಗೆ ಬಾಗುತ್ತಾ, ಸೃಷ್ಟಿಯ ಸುಂದರ ರೂಪಕಗಳ ಅಭಿವ್ಯಕ್ತಿಯಲ್ಲಿ ಚಿಣ್ಣಾಟವಾಡುವ ಮಗುವಾಗುತ್ತಾ, ಹರಿವ ಕೆಂಪು ಕೋಡಿಯನ್ನು ಸುಮ್ಮನೇ ನೋಡುತ್ತಾ ಹಾಗೇ ಒಮ್ಮೆ ಒದ್ದೆಯಾಗಿಬಿಡೋಣ ಬನ್ನಿ.

(ಮೊನ್ನೆ ಅಧಿಕೃತವೆಂಬಂತೆ ಮೈಸೂರಲ್ಲಿ ಮಳೆಗಾಲ ಶುರುವಾದ ಸಂದರ್ಭದಲ್ಲಿ ಒಂದಷ್ಟು ಖಾಯಂ ಕಾಡುವ ಸಂಗತಿಗಳಿಗೆ ಜೀವ ಬಂತು. ಮಲೆನಾಡ ನಮ್ಮನೆ ಕರೆಯಿತು! ಈ ನಡುವೆ ದಾಖಲಾದ ಬರಹವಿದು)