ದಟ್ಟ ಕಾಡ ನಡುವಲ್ಲಿ, ಪಾಳು ಅರಮನೆಯಲ್ಲಿ, ಮಾಟಗಾತಿ ಮುದುಕಿಗೆ ವಶವಾಗಿ, ಆಗಾಗ ಒಂದೊಂದು ಪ್ರಾಣಿರೂಪಕ್ಕೆ ಬದಲಾಗಿ, ಇದ್ದೂ ಸತ್ತಂತೆ ಜೀವನ ತಳ್ಳುತ್ತಿದ್ದ ಉದ್ದ ಕೂದಲ ರಾಜಕುಮಾರಿಯ ಕಥೆಯನ್ನು ನನ್ನ ಮಾವ ಬಂದಾಗಲೆಲ್ಲ ಕಾಡಿಸಿ ಕೇಳುತ್ತಿದ್ದೆವು. ಕಥೆಯ ರಾಜಕುಮಾರಿಯ ದಟ್ಟ ಕರಿ ಕೂದಲನ್ನು ನಮ್ಮಮ್ಮನ ಪುಟ್ಟ ಜಡೆಗೆ ಹೋಲಿಸಿ ಮಜಾ ತೆಗೆದುಕೊಳ್ಳುತ್ತಿದ್ದ ದಿನಗಳವು. ಪ್ರತಿ ಸಾರಿ ಮಾವ ಬಂದಾಗ ಹೇಳುತ್ತಿದ್ದ ಗುಂಪು ಕಥೆಗಳಲ್ಲಿ ಒಂದಾದರೂ ರಾಜಕುವರಿಯ ಕಥೆ ಇರಲೇ ಬೇಕಿತ್ತು. ಅವೆಲ್ಲವೂ ಒಂದಾನೊಂದು ಕಾಲದಲ್ಲಿ… ದಟ್ಟ ಕಾಡಿನ ಮಧ್ಯ… ಪಾಳು ಬಿದ್ದ ಬಂಗಲೆಯಲ್ಲಿ… ಎಂತಲೇ ಶುರುವಾಗುತ್ತಿತ್ತು. ಒಂದೇ ಕಥೆಗೆ ಹೊಸ ಮಜಲುಗಳನ್ನು ಸೇರಿಸಿ ಅದನ್ನು ಅಂದಗಾಣಿಸುವುದರಲ್ಲಿ ಮಾವ ನಿಷ್ಣಾತರಾಗಿದ್ದರು. ಹಾಗಾಗಿ ನಾವು ಕೇಳುತ್ತಿದ್ದ ಕಥೆಗಳೆಲ್ಲವೂ ಒಂದೇ ಕಥೆಯ ಬೇರೆ ಬೇರೆ ಮಗ್ಗಲುಗಳಾಗಿದ್ದವೋ ಎಂಬ ಅನುಮಾನ ನಂಗೆ ‘ಈಗ’ ಕಾಡುತ್ತದೆ. ವೀರ ರಾಜಕುಮಾರನಾಗಿ ಹೋಗಿ ಮಾಟಗಾತಿಯನ್ನು ವಧಿಸಿ, ರಾಜಕುಮಾರಿಯನ್ನು ಹಾರುವ ಕುದುರೆಯಲ್ಲಿ (‘Clash of The Titan’  ಸಿನಿಮಾದಲ್ಲಿನ ಹಾರುವ ಕಪ್ಪು ಕುದುರೆ ನನಗೆ ಮಾವನ ಕಥೆಗಳನ್ನು ಬಹು ಆಪ್ತವಾಗಿ ನೆನಪಿಸಿತ್ತು.) ರಕ್ಷಿಸಿ ತರುವ ಕನಸು, ಕಥೆ ಕೇಳಿದ ರಾತ್ರಿ ಬೀಳುತ್ತಿತ್ತು ಎಂಬುದೇ ಮಾವನ ಕಥನ ಶಕ್ತಿಯನ್ನು ಇವತ್ತಿಗೂ ಅಭಿಮಾನಪೂರಿತವಾಗಿಸಿವೆ.

ಹಾಗೆಂದೇ ನನಗೆ, ಇವತ್ತಿಗೂ ಎನಿಮೇಟೆಡ್ ಸಿನಿಮಾಗಳು ವಿಪರೀತ ಖುಷಿಕೊಡುತ್ತವೆ. ಇದೆ ಹುಚ್ಚಿನಲ್ಲಿ ಮೊನ್ನೆ ನೋಡಿದ ಸಿನಿಮಾ ‘Tangled’. ‘ಸಿಕ್ಕು’ ಎಂಬರ್ಥ ಬರುವ ಈ ಸಿನಿಮಾ ತುಂಬಾ ಸರಳವಾಗಿದೆ. ಆದರೆ ಚಿತ್ರದ ಮುಖ್ಯಪಾತ್ರ, ನಾಯಕಿ ‘Rapunzel’, ಕ್ರೂರ ಹೆಂಗಸು(?) ಗೊಥೆಲ್ಲಳ ಜಾಲದಲ್ಲಿ ಸಿಕ್ಕಿಕೊಂಡಿದ್ದಾಳೆ. ಗೊಥೆಲ್ ತನ್ನ ಯೌವ್ವನವನ್ನು ಎಂದಿಗೂ ಉಳಿಸಿಕೊಳ್ಳುವ ಕಾಮನೆಯಲ್ಲಿ ಬಂಧಿ. ರಪುನ್ಜೆಲ್ಲಳ ಅಪ್ಪ-ಅಮ್ಮ ಅಂದರೆ ದೊರೆ ಮತ್ತು ಆತನ ರಾಣಿ ಮಗಳ ನೆನಪಿನಲ್ಲಿ ಸದಾ ಸಿಲುಕಿಕೊಂಡಿರುತ್ತಾರೆ. ಕಥಾನಾಯಕ, ಡಕಾಯಿತ Flynn Rider ಕದ್ದಾದರೂ ಸೈ ಕಾಸು ಮಾಡಿಕೊಳ್ಳುವ ದುರಾಸೆಯಲ್ಲಿ ಮುಳುಗಿದ್ದವ ಮುಂದೊಮ್ಮೆ ರಪುನ್ಜೆಲ್ಲಳ ಪ್ರೇಮದಲ್ಲಿ ಸಿಕ್ಕಿಕೊಳ್ಳುತ್ತಾನೆ. ಹೀಗೆ ಮನುಷ್ಯನ ಬಯಕೆಗಳು, ಭಂಢತನಗಳು, ತಿಳಿ ಸೌಮ್ಯವಾದ ಭಾವನೆಗಳು ಎಲ್ಲವೂ ಹದವಾಗಿ ಸೇರಿ ‘Tangled’ ಹುಟ್ಟಿದೆ. ರಮಣೀಯವಾದ ಫ್ಯಾಂಟಸೀ ಕಥೆಯನ್ನು ಚಿತ್ರಕಥೆಗೆ ಆಯ್ದುಕೊಳ್ಳಲಾಗಿದೆ. ಸಿನಿಮಾವನ್ನು ಸಮರ್ಥವಾಗಿಸಲು ಬೇಕಾದ ಅನೇಕ ಅಂಶಗಳನ್ನು ಕಥೆಯೇ ಕೊಟ್ಟಂತಿದೆ.

‘Tangled’ ನ ಕಥೆ ಸಂಕ್ಷಿಪ್ತವಾಗಿ ಇಷ್ಟೇ.

ಸೂರ್ಯನ ಕಿರಣ ಬಿದ್ದು ಹುಟ್ಟಿದ ಬೆಳಗುವ ಹೂವೊಂದು ಮುದುಕಿಯೊಬ್ಬಳಿಗೆ ಮತ್ತೆ ಯುವತಿಯಾಗುವ ಸೌಭಾಗ್ಯ ಕಲ್ಪಿಸುತ್ತದೆ. ಬಹು ಕಾಲದ ನಂತರ ಒಮ್ಮೆ, ರಾಜಭಟರ ಹುಡುಕು ಕಂಗಳಿಗೆ ಆ ಹೂವು ಬಿದ್ದು, ಅದು ಗರ್ಭಿಣಿ ರಾಣಿಯ ರೋಗ ಗುಣಪಡಿಸಿ, ಬಂಗಾರದ ಕೂದಲಿನ ಪುಟ್ಟ ಕೂಸಿನ ಜನ್ಮಕ್ಕೆ ಕಾರಣವಾಗುತ್ತದೆ. ಪುಟ್ಟಿಯ ಬಂಗಾರದ ಕೂದಲಿಗೆ ಬೆಳಗುವ ಹೂವಿನ ಗುಣ ಲಭಿಸಿ, ಅದೇ ಕಾರಣವಾಗಿ ಮುದುಕಿ ಮಗುವನ್ನು ಅಪಹರಿಸಿ ಮತ್ತೆ ಯುವತಿಯಾಗುತ್ತಾಳೆ. ನಂತರ ರಾಜಕುಮಾರಿ ರಪುನ್ಜೆಲ್ಲಳ ವನವಾಸ ಶುರು. ಸುಂದರ ಪರಿಸರದ, ಅತಿ ಸುಂದರ ವೀಕ್ಷಣಾ ಗೋಪುರದ ಆದರೆ ಜೈಲಿನಂತ ಮನೆಯಲ್ಲಿ ರಪುನ್ಜೆಲ್ ದೊಡ್ಡವಳಾಗುತ್ತಾಳೆ. ಮುದುಕಿ ಹೊರನೋಟಕ್ಕೆ ಮತ್ತಷ್ಟು ಸುಂದರಳಾಗುತ್ತಲೇ ಹೋಗುತ್ತಾಳೆ! ಮುಂದೆ ನಾಯಕನ ಆಗಮನ, ಒಂದಿಷ್ಟು ಸಸ್ಪೆನ್ಸ್, ಥ್ರಿಲ್ಲಿಂಗ್, ಅಡ್ವೆಂಚರ್, ಕಾಮಿಡಿ ಮತ್ತೆ ಕೊನೆಗೆ ಶುಭಂ…!

‘ಮಠ’ ಗುರುಪ್ರಸಾದ್ ಹೇಳುತ್ತಿದ್ದ ಮಾತು. “ನಮ್ಮಲ್ಲಿ ಕೆಟ್ಟ ಚಿತ್ರಗಳು ಅಂತೇನಿಲ್ಲ. ಕೆಟ್ಟ ಸ್ಕ್ರಿಪ್ಟ್ ಗಳು ಇವೆಯಷ್ಟೇ. ಕಥೆಯನ್ನು ನಿಭಾಯಿಸುವ, ದೃಶ್ಯ ಮಾಧ್ಯಮದಲ್ಲಿ ಅದನ್ನು ಸಮರ್ಥವಾಗಿ ಕಟ್ಟಿಕೊಡುವ ಕಲೆ ಸಿದ್ಧಿಸಿದರೆ ಎಂತಹ ಸಿನಿಮಾವನ್ನಾದರೂ ನೆನಪಿನಲ್ಲುಳಿವಂತೆ ಮಾಡಬಹುದು.” ಇದು ಅಹುದಹುದು ಎಂದು ಮತ್ತೊಮ್ಮೆ ಅನ್ನಿಸಿದ್ದು Tangled ನೋಡುವಾಗ. (ಅವತಾರ್ ನೋಡಿ ಕಣ್ಣೀರಿಟ್ಟಾಗಲೂ ಹೀಗನ್ನಿಸಿತ್ತು!) ಸಾಮಾನ್ಯವಾಗಿ ‘ಗೊಂಬೆಗಳು ಕಚಪಿಚಗುಟ್ಟುವ ಚಿತ್ರಗಳು’ ಎಂದು ತಿರಸ್ಕಾರಕ್ಕೊಳಗಾಗುವ ಎನಿಮೇಟೆಡ್ ಸಿನಿಮಾಗಳ ಸಾಧ್ಯತೆ ದೃಶ್ಯರೂಪದಲ್ಲಿ ಹೆಚ್ಚೆಂದರೂ ಮಾನವನ ಅರಿವು, ಭಾವಗಳ ಜೊತೆ ತೀಕ್ಷ್ಣವಾಗಿ ಪ್ರತಿಸ್ಪಂದಿಸದ, ನಮ್ಮ ಬಾಹ್ಯಾನುಭಾವಕ್ಕೆ ನೇರವಾಗಿ ದಕ್ಕದ ಕಾರಣಕ್ಕೋ ಏನೋ ಅವು ಆವರಣದ ತುಂಬಾ ಹರಡಿಲ್ಲ. ಹಾಗಾಗಿಯೇ ಅವು ಒಂದು ವರ್ಗಕ್ಕೆ ಮಾತ್ರ ದಕ್ಕುವ ಮಾಧ್ಯಮವಾಗಿ ಉಳಿದಿರಬೇಕು. ಪೂರ್ಣ ಪ್ರಮಾಣದ Tangled, Ice age, How to Train Your Dragon, Up ‘ ನಂತಹ 3D ಎನಿಮೇಟೆಡ್ ಚಿತ್ರಗಳ ಕಥೆಯೇ ಹೀಗಾದರೆ 2D ಸಿನಿಮಾಗಳನ್ನು ಪ್ರೀತಿಸುವರೆಷ್ಟು ಮಂದಿ?

ಈ ಕ್ಲೀಷೆಗಳನ್ನೆಲ್ಲ ಮರೆತು Tangled ನೋಡಬೇಕು. ಅಥವಾ Tangled ಈ ಕ್ಲೀಷೆಗಳನ್ನು ಮರೆಸುತ್ತದೆಂದರೂ ಆಶ್ಚರ್ಯವಿಲ್ಲ. ನಮ್ಮೆಲ್ಲರ ಬಾಲ್ಯದ ಚಂಪಕ, ಬಾಲಮಂಗಳ ಚಿತ್ರಕಥೆಗಳ ರಾಜಕುಮಾರಿ ಇವಳೇ ಆಗಿದ್ದಿರಬಹುದೇನೋ ಎಂದು ನಂಬಿಕೆ ಹುಟ್ಟಿಸುವಷ್ಟು ಮುದ್ದಾದ ಪಾತ್ರ, ಪ್ರತಿಮೆ ರಪುನ್ಜೆಲ್ಲಳದ್ದು. ನೂರಕ್ಕೂ ಹೆಚ್ಚು ಅನಿಮೇಟರ್ ಗಳ ಶ್ರಮ Tangled ಸಿನಿಮಾಕ್ಕಿದೆ. ವಾಲ್ಟ್ ಡಿಸ್ನಿ ನಿರ್ಮಾಣದ ಐವತ್ತನೆಯ ಚಿತ್ರ ಇದು. ಎನಿಮೇಟೆಡ್ ಚಿತ್ರಗಳ ಇತಿಹಾಸದಲ್ಲೇ ಅತೀ ಹೆಚ್ಚು ಬಜೆಟ್ ನ ಚಿತ್ರವೆಂಬ ಖ್ಯಾತಿಯೂ Tangled ಬೆನ್ನಿಗಿದೆ. ಈ ಎಲ್ಲ ರೆಕ್ಕೆ ಪುಕ್ಕಗಳ ಜೊತೆ Tangled ಅತ್ಯುತ್ತಮ ಚಿತ್ರವಾಗಿ ನಿಲ್ಲುತ್ತದೆ. ಚಿತ್ರದ ಮುಖ್ಯರಸ ಹಾಸ್ಯ. ಅದರೊಂದಿಗೆ ಗಾಢವಾದ ವಿಷಾದ ಮತ್ತು ರೋಮಾನ್ಸ್ ಬೆರೆತು ಚಿತ್ರ ಕಳೆಗಟ್ಟಿದೆ. ರಪುನ್ಜೆಲ್ಲಳ ಮಾತು ಅಮೆರಿಕಾದ ಪ್ರಸಿದ್ಧ ಗಾಯಕಿ, ನಟಿ, ಗೀತ ರಚನೆಗಾರ್ತಿ, ವಸ್ತ್ರ ವಿನ್ಯಾಸಕಿ ಮತ್ತು ಇವೆಲ್ಲವೂ ಒಬ್ಬಳೇ ಆಗಿರುವ Mandy Mooreರದ್ದು. ಚಿತ್ರದ ತುಂಬೆಲ್ಲ ಅವರ ಚಟುವಟಿಕೆಯ ಮಾತನ್ನು ಕೇಳುವುದೇ ಚಂದ. ಮೊದಲೇ ಈ ವಿಷಯ ತಿಳಿದಿದ್ದರೆ ರಪುನ್ಜೆಲ್ಲಳನ್ನು ನೋಡುವಾಗೆಲ್ಲ ಮ್ಯಾಂಡಿ ನೆನಪಾಗುವ ಅಪಾಯವಿದೆ! (ಬಸವಲಿಂಗಯ್ಯನವರ ದೀರ್ಘ ನಾಟಕದ ನಂತರ ‘ಮಲೆಗಳಲ್ಲಿ ಮದುಮಗಳು’ ಓದುವಾಗೆಲ್ಲ ನಾಟಕದ ಪಾತ್ರಗಳೇ ಕಣ್ಮುಂದೆ ಹಾಯುವ ಬೇಸರ ನನಗೆ ಕಾಡಿದ್ದುಂಟು.) Tangled ನಲ್ಲಿ ಕೆಲವು ಆರ್ದ್ರ ಭಾವಗಳನ್ನು ಬಿಂಬಿಸುವ ಪರಿ ಅಚ್ಚರಿಗೊಳಿಸುತ್ತದೆ. ಇಡೀ ಚಿತ್ರವನ್ನು ಎಲ್ಲೂ ಕತ್ತರಿಸಿ ‘ಈ ಭಾಗ ಅನವಶ್ಯಕ’ ಎಂದು ನಿರ್ಧರಿಸುವ ಅವಕಾಶ ನಮಗಿಲ್ಲ ಎಂಬುದೇ ಚಿತ್ರದ ಹೆಚ್ಚುಗಾರಿಕೆ.

ಚಿತ್ರದ ಕುರಿತಂತೆ ನನಗನ್ನಿಸಿದ್ದಿಷ್ಟು:

* ಒಂದು ನಿರ್ದಿಷ್ಟ ಹಾಡಿಗೆ ಮಾತ್ರ ಬಂಗಾರದ ಹೂ ಬೆಳಗುತ್ತದೆ. ಆ ಹಾಡು ಗೊಥೆಲ್ ಗೆ  ಹೇಗೆ ತಿಳಿಯಿತು ಎಂಬುದು, ಮಗು ರಪುನ್ಜೆಲ್ಲಳನ್ನು ಮದರ್ ಗೊಥೆಲ್ ಅಷ್ಟು ಸುಲಭಕ್ಕೆ ಅರಮನೆಯ ಅಂತಃಪುರದಿಂದ ಹೊತ್ತುಕೊಂಡು ಹೋಗುವುದು ಹೀಗೆ ಕೆಲವು ವಿಷಯಗಳು ಗೊಂದಲ ಮೂಡಿಸುತ್ತವೆ. ಹಾಗಾದಾಗಲೆಲ್ಲ ಸಿನಿಮಾವನ್ನು ಸಿನಿಮಾವಾಗಿಯೇ ನೋಡಿ ಆನಂದಿಸಬೇಕೆಂಬುದನ್ನು ಮತ್ತೆ ನೆನಪಿಸಿಕೊಳ್ಳಬೇಕು!

* ಸರಿಸುಮಾರು ಎಪ್ಪತ್ತು ಅಡಿಯ ತನ್ನ ಕೂದಲ ಜೊತೆ ಹೆಣಗುತ್ತಾ ಅದರ ಕುರಿತು ಹೆಮ್ಮೆಯಿಟ್ಟುಕೊಂಡು  ಅದನ್ನೇ ಬಳಸಿಕೊಂಡು ಆ ಪುಟ್ಟ ಗೋಪುರದ ಮನೆಯಲ್ಲಿ ತನ್ನ ಸುಖವನ್ನು ಕಂಡುಕೊಳ್ಳುವ ರಪುನ್ಜೆಲ್ ಳನ್ನು ಒಂದು ಚಿಕ್ಕ ಹಾಡಿನಲ್ಲಿ ಚಿತ್ರಿಸಲಾಗಿದೆ. ಆ ಇಡೀ ಹಾಡನ್ನು ಮತ್ತೆ Rewind ಮಾಡಿ ನೋಡುವ, ಕೇಳುವ ಮನಸ್ಸಾಗದಿದ್ದರೆ ಹೇಳಿ!

* ಅರಿವು ತಿಳಿದ ಮೇಲೆ ಮೊಟ್ಟಮೊದಲು ಭೂ ಸ್ಪರ್ಶ ಮಾಡುವಾಗ ರಪುನ್ಜೆಲ್ ಕಾಲನ್ನು ಹಸಿರು ತುಂಬಿದ ನೆಲಕ್ಕೂರುವ ಸಂಧರ್ಭ. ಆ ಸಮಯದ ದುಗುಡ, ಕಾತುರ, ಅಪರಿಮಿತ ಉತ್ಸಾಹವನ್ನು ಸ್ಲೋ ಮೋಶನ್ ತಂತ್ರದಲ್ಲಿ ಚಿತ್ರಿಸಲಾಗಿದ್ದು, ಚಿತ್ರದ ಪರಿಣಾಮಕಾರಿ ಭಾಗವಾಗಿ ನಿಲ್ಲುವಂತಿದೆ. ಆ ಕ್ಷಣದ ಬಳಿಕ ನೆಲಕ್ಕಿಳಿದ ರಪುನ್ಜೆಲ್ ಮತ್ತೆ ಚೈತನ್ಯದ ಚಿಲುಮೆಯಾಗುತ್ತಾಳೆ. ಹುಲ್ಲು, ನೀರು, ಮರ, ಕಾಡುಗಳೆಲ್ಲವೂ ಅನೂಹ್ಯ ಲೋಕದ ವಿಸ್ಮಯವೆಂದೇ ಭಾವಿಸುವ ಆಕೆ ಹಾಡಿ, ಕುಣಿದು, ಸುಖಾ ಸುಮ್ಮನೆ ಬಿದ್ದು, ಎದ್ದು ಅನುಭವಿಸಿದಷ್ಟೂ ಮುಗಿಯದ ಸಂತಸಕ್ಕೆ ಪಕ್ಕಾಗುತ್ತಾಳೆ. ಫ್ಹ್ಲೈನ್ ಮೂಕನಾಗಿ ಈ ಘಟನೆಗಳಿಗೆ ಸಾಕ್ಷಿಯಾಗುತ್ತಾನೆ. ರಮ್ಯವೆನಿಸುವ ಈ ಸನ್ನಿವೇಶಕ್ಕೆ ನೋಡುಗನನ್ನೂ ಒಮ್ಮೆ ಮೈ ಮರೆಸುವ ತಾಕತ್ತಿದೆ.

* ಪುಟ್ಟ ಗೋಸುಂಬೆ ಮತ್ತು ದೊಡ್ಡ ಬಿಳಿ ಕುದುರೆಗಳ ಚೆಲ್ಲಾಟಗಳು ಚಿತ್ರದುದ್ದಕ್ಕೂ ಮುದ ಕೊಡುತ್ತವೆ. ಸ್ವಾಮಿನಿಷ್ಠ ಕುದುರೆ ಮತ್ತು ಫ್ಲೈನ್ ನಡುವಿನ ಘರ್ಷಣೆ ಒಂದು ಹಂತದಲ್ಲಿ ಕುತೂಹಲದ ಉಪ್ಪರಿಗೆ ಹತ್ತಿಸುತ್ತದೆ! ಬಣ್ಣ ಬಣ್ಣದ ಗೋಸುಂಬೆಯ ಮೇಲೂ ಪ್ರೀತಿ ಹುಟ್ಟುತ್ತದೆ! ಚಿತ್ರದ ಅಂತಿಮ ಘಟ್ಟದಲ್ಲಿ ಮದರ್ ಗೊಥೆಲ್ ಅಳಿಯಲು ಮುಖ್ಯ ಕಾರಣವಾಗುವುದು ಇದೇ Chameleon. ರಪುನ್ಜೆಲ್ ಮತ್ತು ಗೋಸುಂಬೆಯ ನಡುವಿನ ಸಂವಹನ ನಮ್ಮಲ್ಲಿ ಸಂವೇದನೆಗಳನ್ನೆಬ್ಬಿಸುವಂತಿದೆ. ಅಂತೆಯೇ ಕುದುರೆ ಮತ್ತು ಇತರ ಪಾತ್ರಗಳದ್ದು.

* ಚಿತ್ರ ವಾಚ್ಯವಾಯಿತೇನೋ ಎಂದು ಅನ್ನಿಸಲಿಕ್ಕೆ ಬಿಡದಂತೆ ಥ್ರಿಲ್ಲಿಂಗ್ ದೃಶ್ಯಗಳ ಹೆಣಿಕೆಯಾಗಿದೆ. (ಜಗತ್ತಿನ ಅತ್ಯುತ್ತಮ 50 ಅನಿಮಟೆಡ್ ಚಿತ್ರಗಳ ಯಾದಿಯಲ್ಲಿ 6 ನೇ ಸ್ಥಾನದಲ್ಲಿರುವ ‘Up‘ ಚಿತ್ರ ಮನೋಜ್ಞವಾಗಿದ್ದರೂ ಹೆಚ್ಚಿದ ಮಾತುಗಾರಿಕೆಯಿಂದ ಅಲ್ಲಲ್ಲಿ ಸೊರಗಿದೆ ಎಂಬುದು ನನ್ನ ಭಾವನೆ.) ಹಿನ್ನೆಲೆ ದೃಶ್ಯಾವಳಿಗಳು, ಮೆಲು (ಅಗತ್ಯಕ್ಕೆ ತಕ್ಕಂತೆ) ಸಂಗೀತ ಮುದ ಕೊಡುತ್ತವೆ.

* ಕೆಲ ರಾತ್ರಿಯ ಸಂಧರ್ಭದ ಸನ್ನಿವೇಶಗಳು flat ಎನ್ನಿಸುತ್ತವೆ. ಹಿನ್ನೆಲೆ ದೃಶ್ಯಗಳಲ್ಲಿ ಬಳಸಿದ ಬೂದು ನೀಲಿ ಬಣ್ಣ ಗಾಢ ನೀಲಿಯಾಗಿದ್ದ ಪಕ್ಷದಲ್ಲಿ ಹೆಚ್ಹು ಪರಿಣಾಮಕಾರಿ ರಾತ್ರಿಯ ಚಿತ್ರಣ ಸಾಧ್ಯವಿತ್ತೇನೋ. ರಪುನ್ಜೆಲ್ ಬದುಕಿನ ದೊಡ್ಡ ಕನಸು ಹಾರುವ ಕಾಗದದ ದೀಪಗಳ ವೀಕ್ಷಣೆ. ಅದು ಫ್ಲೈನ್ ನಿಂದ ಸಾಕಾರವಾಗುತ್ತದೆ. ರಪುನ್ಜೆಲ್ ಆ ಇಡೀ ಸಂದರ್ಭಕ್ಕೆ ಒಳಗೊಳ್ಳುತ್ತಾಳೆ. ಚಿತ್ರದ ಗ್ರಾಫ್ ತುದಿ ಮುಟ್ಟಬೇಕಾಗಿದ್ದು ಇಲ್ಲೇ.  ನೆಮ್ಮದಿಯ, ನೀರವ ಹಾಗೆಯೇ ನೀರ ಮೇಲೆ ಒಂದು ಮಹತ್ ಕ್ಷಣಕ್ಕಾಗಿ ಅವರಿಬ್ಬರೂ ಸುಂದರ ದೋಣಿಯಲ್ಲಿ ಕಾದು ಕೂರುತ್ತಾರೆ. ಆದರೆ ಆ ಇಡೀ ದೃಶ್ಯ ವೀಕ್ಷಕ ಹುಟ್ಟಿಸಿಕೊಂಡ ಕಲ್ಪನೆಗಳನ್ನು ಅರೆ ಮಾತ್ರ ತಣಿಸುತ್ತದೆ!  ಒಂದಾದ ಮೇಲೊಂದರಂತೆ ಆಗಸ ತುಂಬುವ ಹಾರುವ ದೀಪ ತಟ್ಟೆಗಳು ಮತ್ತದೇ ಬೂದು ಬಣ್ಣದ ಹಿನ್ನೆಲೆಯಲ್ಲಿ ಮಂಕಾಗುತ್ತವೆ. ಆ ದೃಶ್ಯ ಮತ್ತಷ್ಟು ಬಣ್ಣಗಳಲ್ಲಿ ಸಂಯೋಜಿತವಾಗಿದ್ದರೆ ಅದರ ಸೊಗಸೇ ಬೇರೆಯಿತ್ತು. ಬಹುಷಃ ಹಿನ್ನೆಲೆ ಸಂಗೀತವೂ ಈ ಸಮಯದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿರಬೇಕಿತ್ತೇನೋ. ಹಾಗಿದ್ದರೂ ನಮ್ಮ ಸ್ಮರಣೆಯಲ್ಲಿ ಈ ದೃಶ್ಯ ಮರೆಯಾಗುವುದಿಲ್ಲ!

* ಫ್ಯಾಂಟಸೀ ಕಥೆಯಾದರೂ ಕೆಲವು ದೃಶ್ಯಗಳ ಹೊರತಾಗಿ ಎಲ್ಲೂ ಇದು ಅಸಹಜ ಎಂಬ ಭಾವ ಮೂಡುವುದಿಲ್ಲ. (ಸಹಜವಾದ ಕನ್ನಡ, ತಮಿಳು, ತೆಲುಗು ಮತ್ತಿತ್ಯಾದಿ ಚಿತ್ರಗಳಲ್ಲಿ ‘ದೈವ ಮಾನವರು’ ಕಾಣಿಸಿಕೊಂಡು ಚಿತ್ರವನ್ನು ಅಂದಗಾಣಿಸಿದಂತೆ :))

* “I See the Light” ಮತ್ತು “I’ve Got a Dream” ಎಂಬಿತ್ಯಾದಿ ಪದ್ಯಗಳು ಮತ್ತೆ ಮತ್ತೆ ಗುನುಗುವಂತಿದೆ.

* ಎಲ್ಲಾ ಪಾತ್ರಗಳ ಅಭಿವ್ಯಕ್ತಿ ತೀವ್ರತರದ್ದು ಮತ್ತು ಸರಳವಾಗಿ ಅನಿಮಟೆಡ್ ಸಿನಿಮಾಕ್ಕಿದು ಅಗತ್ಯ ಕೂಡ. ದುಖ, ಕ್ರೂರತೆ, ಕೋಪ ಮುಖ್ಯವಾಗಿ ನಗು ಪಾತ್ರಗಳ ಮುಖದಲ್ಲಿ ಸರಾಗವಾಗಿ ಉಕ್ಕುತ್ತವೆ. ನೋಡುಗನನ್ನು ಚಿತ್ರದ ಪರಿಧಿಗೆ ಎಳೆದುಕೊಳ್ಳುತ್ತವೆ.

ಇಂತಹ ಪಟ್ಟಿಯನ್ನು Tangled ಚಿತ್ರದ ಕುರಿತಾಗಿ ಮಾಡಿ, ಸಾಧ್ಯವಾದಷ್ಟು ಹಿಗ್ಗಿಸಬಹುದಾದರೂ ಯಾವ ಮಾದರಿಗಳೂ ಇಲ್ಲದೆಯೆ ಚಿತ್ರ ನೋಡಿದಾಗಿನ ಅನುಭವವೇ ಲೇಸೆನ್ನುವವನು ನಾನು. ಇನ್ನು ಕೆಲವು ಸಿನಿಮಾಗಳಿವೆ. ಅವುಗಳನ್ನು ಆ ಸಿನಿಮಾ ಹುಟ್ಟಿದ ಸಂದರ್ಭ, ನಿರ್ದೇಶಕನ ಮನಸ್ಥಿತಿ, ಆತನ ಹಿನ್ನೆಲೆ ಎಲ್ಲವನ್ನೂ ಗಮನಿಸಿ ನೋಡಿದಾಗ ಹೆಚ್ಚು ಹೃದ್ಯವೆನಿಸಬಹುದು. (ಇರಾನಿನ ಮೊಹಿಸಿನ್ ಮಕ್ಮಲ್ಬಫ್ ಸಿನಿಮಾಗಳು ಇತ್ಯಾದಿ) ಹಾಗಾಗಿ ಇಷ್ಟು ಮಾತ್ರ ಹೇಳಬಲ್ಲೆ. Tangled ನಿಮ್ಮ ನೋಡಲೇಬೇಕಾದ ಜಗತ್ತಿನ ಸಿನಿಮಾಗಳ ಪಟ್ಟಿಯಲ್ಲಿ ಇರಬೇಕಾದ್ದು.

(ಸಾಂಗತ್ಯದ ನಾವಿಕರ ಅನುಮತಿ ಮೇರೆಗೆ ಮತ್ತೆ ಇಲ್ಲೂ ಇದಿದೆ…!)

‘ರುಪರ್ಟ್ ಮರ್ಡೋಕ್’ ಮೊನ್ನೆ ಮೊನ್ನೆ ತಾನೇ ಬಿಳುಚಿಕೊಂಡಿದ್ದನ್ನು ಕಂಡಾಯಿತು. ಮಾಧ್ಯಮ ಸಂಬಂಧಿ ನೈತಿಕತೆಗಳಿಗೆಲ್ಲ ಇತಿಶ್ರಿಯಿಡದೇ  ಅಂತಹ ಸಾಮ್ರಾಜ್ಯ ಕಟ್ಟುವುದು ಅಸಾಧ್ಯವೆಂಬ ಅರಿವು ಯಾರಿಗಿರಲಿಲ್ಲ ಹೇಳಿ? ಮರ್ಡೋಕ್ ನ ಕಥೆ ಒತ್ತಟ್ಟಿಗಿರಲಿ. ಬಹಳಷ್ಟು ಪ್ರಾದೇಶಿಕ ಮಾಧ್ಯಮಗಳೂ ಇದಕ್ಕೆ ಒಗ್ಗಿ ಹೋಗಿದ್ದಾವೆ, ನನ್ನನ್ನೂ ಸೇರಿದಂತೆ ಅನೇಕರಿಗೆ ಈ ಸಂಗತಿ ಹೊಸದಾಗಿ ಕಾಣುತ್ತಿಲ್ಲ, ಕಾಡುತ್ತಿಲ್ಲ ಎಂಬಲ್ಲಿಗೆ ವರ್ತಮಾನದ ನಮ್ಮೆಲ್ಲರ ದಾರಿ ಸ್ಪಷ್ಟವಾದಂತಾಯ್ತು…! ಇಂಗ್ಲಿಷ್ ಚಿತ್ರವೊಂದನ್ನು ನೋಡಿದ್ದ ನೆನಪು ಅರೆಬರೆಯಾಗಿದೆ. ಹೆಸರು ನೆನಪಿಲ್ಲದ ಆ ಸಿನಿಮಾದಲ್ಲಿ ಪತ್ರಿಕೆಯೊಂದರ ಸಂಪಾದಕನಾಗಿರುವ ಆತನಿಗೆ ಸಹಜ ಸುದ್ದಿ ಬೇಕಾಗಿಲ್ಲ ಅಥವಾ ಓದುಗರು ಅದನ್ನು ಸ್ವೀಕರಿಸಲಾರರು ಎಂಬ ಬಲವಾದ ನಂಬಿಕೆ ಇದ್ದಂತಿದೆ. “ಜನಕ್ಕೆ ಅಚ್ಚರಿಗಳನ್ನು ನೀಡದೆ ತನಗೆ ಲಾಭವಿಲ್ಲ” ಎಂಬುದು ಆತನ ಒನ್ ಲೈನ್ ಅಜೆಂಡಾ..! ಹಾಗಾಗಿ ಆತ ಸುದ್ದಿಗಳನ್ನು ಸೃಷ್ಟಿಸುತ್ತಾನೆ! ತನ್ನಿಮಿತ್ತ ಅನೇಕ ತಲೆಗಳುರುಳುತ್ತವೆ, ಅಸ್ಥಿರತೆಗಳು ಸೃಷ್ಟಿಯಾಗುತ್ತವೆ. ಆತನ ಪತ್ರಿಕೆಗಳು “ಬಿಸಿ ತೊಡದೇವಿನಂತೆ” (!!!) ಖರ್ಚಾಗುತ್ತವೆ. ಮುಂದಿನ ದೃಶ್ಯಗಳು ನನಗೂ ಕಲಸುಮೇಲೋಗರ. ಹಾಗಾಗಿ ಇದನ್ನು ಇಲ್ಲಿಗೆ ನಿಲ್ಲಿಸುತ್ತೇನೆ.
ಇವತ್ತು ಅಂತರ್ಜಾಲ ಸಿಕ್ಕ CNN – Turkey ಗೆಂದು DDB ಮಾಡಿಕೊಟ್ಟ ಸೃಜನಶೀಲ ಜಾಹೀರಾತುಗಳನ್ನು ನೋಡಿ ಇಷ್ಟೆಲ್ಲಾ ಹೇಳುವಂತಾಯಿತು. ವಿಭಿನ್ನ ನೆಲೆಯಲ್ಲಿ ಪ್ರಸ್ತುತಪಡಿಸಿದ ಈ ಜಾಹೀರಾತುಗಳು ಥಟ್ಟನೆ ಗಮನ ಸೆಳೆಯುವಂತಿವೆ. ಅಂದಹಾಗೆ ಮೇಲೆ ಹೇಳಿದ್ದಕ್ಕೂ CNN – Turkey ಯ ಜಾಹೀರಾತಿಗೂ ಯಾವ ಕಾರ್ಯಕಾರಣಭಾವ ಸಂಬಂಧವೂ ಇಲ್ಲ! ಮಾತು ಇಷ್ಟು ಸಾಕು. ಈ ಜಾಹಿರಾತುಗಳನ್ನು ನೀವೂ ನೋಡುವಂತವರಾಗಿ…

ಸ್ಟೀವ್ ಮ್ಯಾಕ್ ಕರ್ರಿ ಜಗತ್ತು ಕಂಡ ಅದ್ಭುತ ಛಾಯಾ ಪತ್ರಕರ್ತ. ಸರ್ವೇ ಸಾಮಾನ್ಯ ವಿಷಯವೂ ಆತನ ಕ್ಯಾಮರಾ ಕಣ್ಣಲ್ಲಿ ಭಿನ್ನವಾಗೇ ಕಾಣುತ್ತದೆಂಬುದು ಆತನ ಹೆಚ್ಚುಗಾರಿಕೆ. 1950 ರಲ್ಲಿ  ಹುಟ್ಟಿದ ಆತ, ಸುತ್ತದ ದೇಶಗಳು ಕಮ್ಮಿ. ಅಫ್ಘಾನಿಸ್ತಾನ-ಸೋವಿಯತ್ ಯುದ್ಧದಲ್ಲಿ ಶುರುವಾದ ಆತನ ಚಿತ್ರ ಸರಣಿಗಳು ಆತನಿಗೆ ಬಹಳಷ್ಟು ಹೆಸರನ್ನು ತಂದುಕೊಟ್ಟವು. ಇರಾನ್-ಇರಾಕ್ ಯುದ್ಧ, ಕಾಂಬೋಡಿಯದ ಅಂತರ್ಯುದ್ಧಗಳು, ಗಲ್ಫ್ ಯುದ್ಧ ಎಲ್ಲವೂ ಸ್ಟೀವ್ ಗೆ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಲು ನೆರವಾದವು…!

ಇಷ್ಟಾಗಿಯೂ ಬಹುಮಟ್ಟಿಗೆ ಸ್ಟೀವ್ ವಿಶ್ವ ವಿಖ್ಯಾತನಾಗಿದ್ದು ‘ನ್ಯಾಷನಲ್ ಜಿಯೋಗ್ರಾಫಿಕ್’ ಗಾಗಿ ತೆಗೆದ ‘ಅಫ್ಘಾನ್ ಹುಡುಗಿ’ಯ ಚಿತ್ರದಿಂದಾಗಿ. ‘ನ್ಯಾಷನಲ್ ಜಿಯೋಗ್ರಾಫಿಕ್’ ಪತ್ರಿಕೆಯ, 1985-ಜೂನ್ ಸಂಚಿಕೆಯಲ್ಲಿ, ಮುಖಪುಟದಲ್ಲಿ ಅಚ್ಚಾದ ಈ ಚಿತ್ರ  ಸಂಚಲನವನ್ನೇ ಸೃಷ್ಟಿಸಿತು. ಅದಾಗಿ ಬಹಳ ವರ್ಷಗಳ ನಂತರ ಪುನಃ ‘ಅಫ್ಘಾನ್ ಹುಡುಗಿ’ಗಾಗಿ ಅರಸಿ ಆಕೆಯನ್ನು ಸ್ಟೀವ್ ಪತ್ತೆ ಮಾಡಿದ್ದು ಮತ್ತೊಂದು ರೋಚಕ ಕಥೆ.


ಈಗ ಮತ್ತೆ ಸ್ಟೀವ್ ನೆನಪಾಗಲು ಕಾರಣವಿಷ್ಟೇ. 2011 ರ ಜಪಾನ್ ನ ಭಯಂಕರ ತ್ಸುನಾಮಿಯ ನಂತರದ ಸನ್ನಿವೇಶಗಳು ಸ್ಟೀವ್ ನ ಕ್ಯಾಮರಾದಲ್ಲಿ ಬಂಧಿಯಾಗಿವೆ. ಮತ್ತೆ ಸಂಕಟದ ಊಟೆ ಒಡೆಯುವಂತೆ ಮಾಡಬಹುದಾದ ಈ ಚಿತ್ರಗಳನ್ನು ಸ್ಟೀವ್ ತನ್ನ ಅಧಿಕೃತ ತಾಣದಲ್ಲಿ upload ಮಾಡಿದ್ದಾನೆ. ಇವತ್ತು ಆ ಫೋಟೋಗಳನ್ನು ನೋಡುತ್ತಾ ಅದ್ಯಾಕೋ ಮನಸ್ಸು ಆರ್ದ್ರವಾಯಿತು. ಸ್ಟೀವ್ ನ ಖಾಸಗೀ ತಾಣಕ್ಕೆ ಲಿಂಕ್ ಇಲ್ಲಿದೆ. ಅಲ್ಲಿ ಬಲಬಾಗದಲ್ಲಿರುವ ಗ್ಯಾಲರಿಗೆ ಹೋಗಿ ಜಪಾನ್ 5 -2011 ರ ಮೇಲೆ ‘ಕ್ಲಿಕ್’ ಮಾಡಿದರೆ ನೇರವಾಗಿ ಜಪಾನ್ ಗೆ ಹೋಗಿಳಿಯಬಹುದು…!

 (ಚಿತ್ರಗಳು ಕಾಣಲು ಸ್ವಲ್ಪ ಕಾಯಬೇಕಾಗಬಹುದು, ತಾಳ್ಮೆಯಿರಲಿ…!)

ವಿಸ್ತಾರ ದಿಗಂತದ ಅಂಚನ್ನು ಚುಂಬಿಸೋ ಅಗಾಧ ಜಲರಾಶಿ, ಗುಳೆ ಬರುವ ನೂರೆಂಟು ಪ್ರಬೇಧದ ಹಕ್ಕಿಗಳ ಪಕ್ಷಿಕಾಶಿ, ಇವೆಲ್ಲವುಗಳ ನಡುವೆ ದೋಣಿಯೇರಿ ಹೊರಟರೆ ಖುಶಿಯೋ ಖುಶಿ. ಏಷ್ಯಾದ ಅತಿ ದೊಡ್ಡ ಉಪ್ಪು ನೀರಿನ ಸರೋವರವೆಂಬ ಖ್ಯಾತಿ ಹೊತ್ತ ‘ಚಿಲ್ಕಾ’ ಸರೋವರದ ನಡುವಿನ ಒಂದಿಷ್ಟು ಹಸಿ ನೆನಪುಗಳು.

ಭಾರತದ ಪೂರ್ವ ಕಡಲಿನಂಚಿನ ನಾಡು ಓರಿಸ್ಸಾ. ದೇವಾಲಯಗಳ ನಗರವೆಂದೇ ಪ್ರಸಿದ್ಧವಾದ ಭುವನೇಶ್ವರ ಇಲ್ಲಿನ ರಾಜಧಾನಿ. ಇಲ್ಲಿಂದ ಸರಿ ಸುಮಾರು ನೂರು ಕಿಲೋ ಮೀಟರುಗಳ ಅಂತರಕ್ಕಿದೆ ಚಿಲ್ಕಾ ಸರೋವರ. ಇಲ್ಲಿಂದ ಪುರಿಗೆ ಒಂದು ಒಂದೂವರೆ ಗಂಟೆಯ ಪ್ರಯಾಣವಷ್ಟೆ. ಮೂವತ್ತು ಜನರಿದ್ದ ನಮ್ಮ ತಂಡ, ವಾಸ್ತವ್ಯ ಹೂಡಿದ್ದ ಪುರಿಯಿಂದ ಮುಂಜಾವಿನ ಶುರುವಿಗೇ ಹೊರಟು ನಸುಕು ಹರಿವಷ್ಟರಲ್ಲಿ ಕೋನಾರ್ಕದ ‘ಸೂರ್ಯ’ ದರ್ಶನಕ್ಕೆ ಹಾಜರಾಗಿದ್ದೆವು. ಕೋನಾರ್ಕದ ಭೇಟಿಯ ನಂತರ ಪುರಿಗೆ ವಾಪಸಾಗುವ ನಮ್ಮ ಯೋಜನೆಯನ್ನು ಬದಲಾಯಿಸಿದ್ದು ನಮ್ಮೊಡನೆ ಹರಟೆ, ಹಾಡುಗಳಲ್ಲಿ ಒಂದಾಗಿಯೂ ಅನಾಮಿಕವಾಗಿಯೇ ಉಳಿದ ನಮ್ಮ ಬಸ್‌ನ ಕ್ಲೀನರ್. ಮುಂಜಾವಿಗೇ ಎದ್ದಿದ್ದ ನಮಗೇನೋ ಪುನಃ ಪುರಿಗೆ ಹೋಗಿ ಗಡದ್ದಾಗಿ ನಿದ್ದೆ ತೆಗೆಯುವ ಕುರಿತು ವಿಪರೀತ ಆಸಕ್ತಿ ಇತ್ತು. ಆದರೆ ಚಿಲ್ಕಾದಲ್ಲಿ ಡಾಲ್ಫಿನ್‌ಗಳು ಕಾಣ ಸಿಗುತ್ತವೆ ಎಂಬ ಕ್ಲೀನರ್‌ನ ಮಾತೇ ಚಿಲ್ಕಾ ಸರೋವರದತ್ತ ನಮ್ಮ ಚಿತ್ತ ತಿರುಗಿಸಿದ್ದು. ಡಿಸ್ಕವರಿಗಳಲ್ಲಿ ಕಂಡ ಮುದ್ದಾದ ಡಾಲ್ಫಿನ್‌ಗಳ ಆಕರ್ಷಕ ಜಿಗಿತ ನಮ್ಮ ಕಣ್ಣುಗಳಲ್ಲಿ ಗಿರಗಿಟ್ಲೆಯಾಗಿತ್ತು. ಸರಿ, ನಮ್ಮ ಬಸ್ ಚಿಲ್ಕಾದತ್ತ ಮುಖ ಮಾಡಿತು.

ನಡು ಮದ್ಯಾಹ್ನದ ಹೊತ್ತಿಗೆ ನಾವು ಚಿಲ್ಕಾ ಸೇರಿದ್ದೆವು. ಎಲ್ಲರ ಹೊಟ್ಟೆಗಳೂ ಹಸಿವಿಗೆ ಚುರುಗುಟ್ಟುತ್ತಿತ್ತು. ಆ ಹೋಟೆಲ್‌ನ ಹೆಸರ ಬುಡದಲ್ಲಿ ‘ವೆಜ್ ಅಂಡ್ ನಾನ್‌ವೆಜ್’ ಎಂಬುದನ್ನು ಕಂಡದ್ದೇ ತಡ ನಮ್ಮ ವೆಜ್ ಟ್ರೂಪ್‌ನವರ ಮುಖಗಳು ಕಿರಿದಾಯ್ತು. ಆದರೂ ಚಿಲ್ಕಾದಲ್ಲಿ ಮತ್ತೆಲ್ಲೂ ಸಸ್ಯಾಹಾರಿ ಹೋಟೆಲ್‌ಗಳಿಲ್ಲವೆಂಬ ತಿಳಿವು ನಮ್ಮನ್ನು ಆ ಹೋಟೆಲ್‌ಗೇ ನುಗ್ಗಿಸಿತ್ತು. ಸಸ್ಯಾಹಾರಿಗಳಿಗೆಲ್ಲಾ ಮತ್ತೊಂದು ಕೊಠಡಿಯ ವ್ಯವಸ್ಥೆಯೂ ಆಯಿತು. ಅಂತೂ ಎಲ್ಲಾ ಮುಗಿಸಿ ಒಂದೆರಡು ಕಿಲೋ ಮೀಟರುಗಳಷ್ಟು ಒಳ ಸಾಗಿ ಸರೋವರದ ತೀರಕ್ಕೆ ಬಂದೆವು. ಮೂರು ತಾಸಿನ ವಿಹಾರಕ್ಕೆ, ಹತ್ತು ಜನರಿಗೆ ಏಳುನೂರು ರೂಪಾಯಿಗಳನ್ನು ತೆತ್ತು ಮಷಿನ್ ಬೋಟ್ ಒಂದನ್ನು ಏರಿದ್ದೂ ಆಯ್ತು.

ನೀರ ಮೇಲೂ ವಿಸ್ಮಯ ಲೋಕವೊಂದರ ಅನಾವರಣ ಸಾಧ್ಯ ಎಂಬ ಕಲ್ಪನೆ ಅವತ್ತು ನನ್ನೆದುರೇ ತೆರೆದುಕೊಳ್ಳುವ ಸಂಧಿಕಾಲವೆನಿಸಿತ್ತು. ತೀರದಲ್ಲೇ ಒಂದೆರಡು ಸುತ್ತು ಹಾಕಿದ ನಮ್ಮ ದೋಣಿ ನಡೆಸುವವ ಡಾಲ್ಫಿನ್‌ಗಳು ಇಲ್ಲೇ ಕಾಣಬಹುದು ನೋಡಿ ಎಂದ. ಅವನು ತೋರಿಸಿದೆಡೆ ಕತ್ತು ತಿರುಗಿಸುವಷ್ಟರಲ್ಲಿ ಅವು ಮಾಯವಾಗುತ್ತಿದ್ದವು. ಡಾಲ್ಫಿನ್‌ಗಳ ತುಂಟಾಟ, ಅವುಗಳ ಸರ್ಕಸ್‌ನ ಕುರಿತು ಏನೇನೋ ಕಲ್ಪಿಸಿಕೊಂಡಿದ್ದ ನಮಗೆ ನಿರಾಶೆಯಾಗಿದ್ದು ಸುಳ್ಳಲ್ಲ. ನೀರಿನಿಂದ ಮೇಲೆ ಬರಲೂ ಅವು ನಾಚುತ್ತಿದ್ದಂತೆ ಅನಿಸಿತು. ಆದರೂ ಒಂದು ಡಾಲ್ಫಿನ್ (ಅರ್ಧ ಎನ್ನುವುದೇ ಸೂಕ್ತವೇನೋ!) ನನ್ನ ಕ್ಯಾಮರಾದೊಳಗೆ ಬಂಧಿಯಾಗಿ ನನ್ನ ಹಿಗ್ಗನ್ನು ಹೆಚ್ಚಿಸಿತ್ತು. ಇಷ್ಟೊತ್ತಿಗೆ ಸೂರ್ಯ ಪಶ್ಚಿಮದ ಕಡೆ ವಾಲಿದ್ದ. ನಾವೂ ಅತ್ತಲೇ ಹೊರಟೆವು! ಒಂದು ಬದಿಗೆ ಅದ್ಯಾವುದೋ ಯಂತ್ರ ಸಿಕ್ಕಿಸಿ ಉದ್ದನೆಯ ಕೋಲಿನಿಂದ ದಿಕ್ಕು ನಿರ್ಧರಿಸುತ್ತಾ ಚಲಿಸುವ ಆ ಬೋಟ್ ನೇಸರನ ಒಡ್ಡೋಲಗಕ್ಕೇ ನಮ್ಮನ್ನು ಕರೆದೊಯ್ಯುವ ‘ತೇರಿ’ನಂತೆ ಕಂಡಿತು. ಸಾಕಷ್ಟು ವಿಸ್ತಾರವಾಗಿರುವ  ‘ಚಿಲ್ಕಾ ಸರೋವರ’, ಸಾಗರವೆನಿಸಿದ್ದು ಆಗಲೇ. ಅಲ್ಲಲ್ಲಿ ಸಿಗುವ ನಡುಗಡ್ಡೆಗಳಲ್ಲಿನ ಪಕ್ಷಿಗಳ ಕಲರವ ಸೂರ್ಯನಿಗೆ ಕೋರುವ ಶುಭವಿದಾಯದಂತೆ ಭಾಸವಾಗತೊಡಗಿತು. ದೊಡ್ಡ ಮಟ್ಟದಲ್ಲಿ ಮೀನುಗಾರಿಕೆಯೂ ನಡೆಯುವ ಸರೋವರದಲ್ಲಿ ಆ ಸಲುವಾಗಿಯೇ  ನಡು ನಡುವೆ ನೆಟ್ಟ ಕಂಬದ ಸಾಲುಗಳು ಕಣ್ಣೆದುರಿಗಿನ ಕಲಾಕೃತಿಯ ಭಾಗವಾದಂತೆ ಅನ್ನಿಸಿತು. ಆ ಕಂಬದ ಮೇಲೇ ಠಿಕಾಣಿ ಊರಿರುವ ತರಹೇವಾರಿ ಹಕ್ಕಿಗಳೂ ಸಹ.


ನಂತರ ನಾವು ಸೀದಾ ಸಾಗಿದ್ದು ‘ಹನಿಮೂನ್ ದ್ವೀಪ’ ವೆಂದು ಕರೆಯಲ್ಪಡುವ ಪ್ರದೇಶಕ್ಕೆ. ಮರಳಿನ ಗುಡ್ಡವದು. (ನಮ್ಮ ತಲಕಾಡನ್ನು ನೆನಪಿಸುವಂತಿದೆ) ಅಲ್ಲಿ ಬೋಟ್ ನಿಲ್ಲಿಸಿ ತಿರುಗಾಡಲು ಒಂದಿಷ್ಟು ಸಮಯ ಘೋಷಿಸಲಾಯಿತು. ಅಲ್ಲಿ ಕೂಡ ಅನೇಕ  ಪುಟ್ಟ, ಪೆಟ್ಟಿಗೆ ದುಕಾನುಗಳಿವೆ. ಎಳನೀರು ಮಾರುವವರು, ಫೀಷ್ ಫ್ರೈ ಎಂದು ಕಿರಿಚುವವರು ಎಲ್ಲರೂ ಅಲ್ಲಿದ್ದಾರೆ. ನಡುವೆ ಒಂದೆಡೆ ಸೇರಿದ್ದ ಗುಂಪೊಂದು ನಮ್ಮ ತಂಡವನ್ನೂ ಸೆಳೆಯಿತು. ಅಲ್ಲಿ ಟಬ್ ಒಂದರಲ್ಲಿ ಚಿಪ್ಪುಗಳ ರಾಶಿ ಹಾಕಿಕೊಂಡು ಕುಳಿತ ಕಪ್ಪುಕಲೆಗಳ ಮುಖದವ ‘ಟೆನ್ ರುಪೀಸ್ ಫಾರ್ ಒನ್ ಪರ್ಲ್’ ಎಂದು ವ್ಯಾಪಾರ ಕುದುರಿಸುತ್ತಿದ್ದ. ಅವನ ಮುಂದೆಲ್ಲಾ ಒಡೆದ ಚಿಪ್ಪುಗಳು ಹರಡಿ ಬಿದ್ದಿತ್ತು. ಗಿರಾಕಿಗಳು ಅಕ್ಷರಶಃ ಕ್ಯೂ ನಿಂತಿದ್ದರು! ಮುತ್ತುಗಳು ಬಿಕರಿಯಾಗಿ ಪ್ರವಾಸಿಗಳ ಕೈ ಸೇರುತ್ತಿತ್ತು. ಚಿಪ್ಪಿನೊಳಗಿನ ಪುಟಾಣಿ ಮೆತ್ತನೆಯ ಹುಳುಗಳು ಮರಳು ಸೇರುತ್ತಿದ್ದವು!

ಪುನಃ ನಾವು ಬೋಟ್‌ನ ಬಳಿ ತಲುಪುವಷ್ಟರಲ್ಲಿ ಸೂರ್ಯನ ಸವಾರಿ ಮತ್ತಷ್ಟು ಮುಂದೆ ಹೋಗಿತ್ತು. ಈಗ ನಾವು ಮುಳುಗುತ್ತಿರುವ ಸೂರ್ಯನಿಗೆ ವಿಮುಖವಾಗಿ ಹೊರಟೆವು ಮತ್ತು ತಿರುಗಿ ಕುಳಿತೆವು! ಅಚ್ಚರಿಯೆಂಬಂತೆ ನೂರಾರು ಡಾಲ್ಫಿನ್‌ಗಳ ದಂಡು ದೂರದಲ್ಲಿ ಕಂಡಂತಾಗಿ ಎಲ್ಲರೂ ಅತ್ತ ದಿಟ್ಟಿಸಿದರೆ ಅಲ್ಲಿಯೂ ನಮಗೆ ನಿರಾಶೆಯೇ ಕಾದಿತ್ತು. ಅವೆಲ್ಲಾ ಸರಾಗವಾಗಿ ನೀರಿನಲ್ಲಿ ಈಜುತ್ತಿರುವ ಎಮ್ಮೆಗಳು! ಇಷ್ಟೊತ್ತಿಗಾಗಲೇ ಸೂರ್ಯ ತನ್ನ ಮೊಹರುಗಳನ್ನು ಸರೋವರದ ನೀರಿನ ಮೇಲೆಲ್ಲಾ ಒತ್ತಲು ಪ್ರಾರಂಬಿಸಿದ್ದ. ಒಟ್ಟಾರೆ ದೃಶ್ಯದಲ್ಲಿ ನಾವೂ ಒಂದಾಗಿ, ಈ ಕ್ಷಣ ನಿರಂತರವಾಗಿರಬಾರದೇಕೆ ಎಂದೆನಿಸಲು ಶುರುವಾಗಿತ್ತು. ನಡುಗಡ್ಡೆಗಳ ಮೇಲೆ ಗುಡಿಸಲು ಕಟ್ಟಿಕೊಂಡು, ದಿನದ ಫಸಲನ್ನು ಗುಡ್ಡೆ ಹಾಕಿ, ಭವಿಷ್ಯವನ್ನು ತಮ್ಮ ಹರಕು ಬಲೆಗಳ ನಡುವೆ ದಿಟ್ಟಿಸಿ ಕುಳಿತಿದ್ದ ಬೆಸ್ತರ ಮುಖಗಳು ಬಾಡಿದಂತಿದ್ದವು. ಕೂಡಲೇ ನಮ್ಮ ದೋಣಿ ನಡೆಸುವವನ ಮುಖ ನೋಡಿದೆ. ಆತ ಅದೇನು ಅರ್ಥ ಮಾಡಿಕೊಂಡನೋ ತಿಳಿಯದು. ಇದ್ದಕ್ಕಿದ್ದಂತೆ ಕಿರು ನಕ್ಕು ಓಡಿಯಾ ಮಿಶ್ರಿತ ಹರಕು ಹಿಂದಿಯಲ್ಲಿ ‘ನನಗೆ ದಿನಕ್ಕೆ ನೂರು ಸಂಬಳ. ಬರುವ ಪ್ರವಾಸಿಗರು ಕೊಡುವ ಟಿಪ್ಸ್ ಸೇರಿ ಬದುಕು ಚೆಂದಾಗೇ ಇದೆ’ ಎಂದಾಗ ನಾನು ಮತ್ತೊಮ್ಮೆ ನನ್ನ ನೋಟದ ಕುರಿತು ಚಿಂತಿಸಬೇಕಾಯ್ತು!

ಮೂರು ತಾಸಿನ ಬೋಟಿಂಗ್ ಸುದೀರ್ಘ ಜೀವನದ ವಿಹಾರಕ್ಕೆ ಒಂದಿಷ್ಟು ನೆನಪುಗಳ ಬುತ್ತಿ ಕಟ್ಟಿಕೊಟ್ಟಿತ್ತು. ಅದನ್ನು ಹೊತ್ತುಕೊಂಡು ಬಸ್ಸಿನ ಬುಡ ಸೇರುವಷ್ಟರಲ್ಲಿ ಸಂಜೆ ಆರೂವರೆಯಾಗಿತ್ತು. ಅವತ್ತೇ ರಾತ್ರಿ ಎಂಟರ ರೈಲ್ವೆಗೆ ಪುರಿಯಿಂದ ಕಲ್ಕತ್ತಾಗೆ (ಅದ್ಯಾಕೋ ಕೋಲ್ಕತ್ತಾಗಿಂತ ಕಲ್ಕತ್ತಾ ಎಂಬ ಹೆಸರೇ ಆಪ್ಯಾಯ) ತೆರಳಲು ನಮ್ಮ ಮುಂಗಡ ಸೀಟುಗಳು ನಿಗದಿಯಾಗಿದ್ದವು.(ಅಂದು ಪುರಿಯಿಂದ ಕಲ್ಕತ್ತಾಗೆ ಹೋದ ರೈಲ್ವೆ ಯಾನ ಯಾವತ್ತಿಗೂ ಮರೆಯದಂತದ್ದು, ಆ ಉಪದ್ವ್ಯಾಪಗಳನ್ನು ಮತ್ತೊಮ್ಮೆ ನೆನೆಪಿಸಿಕೊಳ್ಳುವೆ) ಅದೇ ದುಗುಡದಲ್ಲಿದ್ದ ನನಗೆ ಪುನಃ ಅವತ್ತು ಚಿಲ್ಕಾ ನೆನಪಾಗಲೇ ಇಲ್ಲ!

ನಂತರ ಬಹಳಷ್ಟು ಸಂಜೆಗಳು ಸರಿದು ಹೋಗಿವೆ. ಅವುಗಳ ನಡುವಿನ ಅನೇಕ ಸಂಜೆಗಳನ್ನು ನಾನು ಕಳೆದಿದ್ದು ಚಿಲ್ಕಾದಲ್ಲಿ, ಅರ್ಥಾತ್ ಅಲ್ಲಿನ ನೆನಪುಗಳಲ್ಲಿ!

(ಕೆಂಡಸಂಪಿಗೆಯಲ್ಲಿ ‘ಅಂದ ಕಾಲತ್ತಿಲ್’ ಬಂದ ನನ್ನ ಬರಹವಿದು . ನಾನು ಚಿಲ್ಕಾಗೆ ಹೋಗಿ ಬಂದು ಐದಾರು ಮಳೆಗಾಲಗಳೇ ಆಗಿಹೋಯ್ತು. ಕಾಲೇಜು ದಿನಗಳ ಆ ಪ್ರವಾಸಗಳೆಲ್ಲ ಯಾವತ್ತಿಗೂ ತಂಪೇ ಹೌದು. ಇವತ್ತೂ ಬೆಳಗಿನಿಂದ ಲ್ಯಾವೆಲ್ಲೆ ರಸ್ತೆಯ ನನ್ನ   ಆಫೀಸಿನ ಸುತ್ತ ಮಂಜು ಮಂಜು. ಆಫೀಸಿನಂತೆಯೇ ಮನಸ್ಸೂ. ಅದಕ್ಕೆ ಮತ್ತೆ ಚಿಲ್ಕಾಗೆ ಹೋಗುವ ಬಯಕೆಯಾಗಿದ್ದು…..!)

ಕೆಲ ತಿಂಗಳಿಗೆ ಮೊದಲು ಗೆಳೆಯರೊಡನೆ ರಾಮನಗರಕ್ಕೆ ಹೋಗಿದ್ದೆ. ಅವತ್ತಿನಿಂದಲೂ ರಾಮನಗರದ ಬೆಟ್ಟಗಳನ್ನೆಲ್ಲ ಹತ್ತಿಳಿಯಬೇಕೆಂಬ ಚಟ ಹತ್ತಿಕೊಂಡಿದೆ. ಮುಂಜಾನೆ ಹತ್ತಿದ ರಾಮದೇವರ ಬೆಟ್ಟ, ಅದರೆದುರಿಗಿನ ಗುಹೆಯಿರುವ ಬೆಟ್ಟ ಎಲ್ಲವೂ ದೇಹದ ಬಹುತೇಕ ಬೆವರನ್ನು ಹೀರಿದ್ದವು ಅವತ್ತು.

ಕಳೆದ ತಿಂಗಳು ಆಫೀಸಿನಿಂದ ಮತ್ತೆ ರಾಮನಗರಕ್ಕೆ ಪುಟ್ಟ ಪಿಕ್ ನಿಕ್ ಹೊರಟಾಗ ಅದೇ ಗುಂಗಿನಲ್ಲಿದ್ದೆ.. ಗಡಣದಲ್ಲಿ ಹೋಗಿ ಸುತ್ತುವುದು  ಹೊಸದಲ್ಲದ್ದರಿಂದ ಹೇಳಿಕೊಳ್ಳುವಂತಹ ನಿರೀಕ್ಷೆಗಳಿರಲಿಲ್ಲ. ನಮ್ಮ ಅಪರಿಮಿತ ಉತ್ಸಾಹಗಳನ್ನೆಲ್ಲವೂ ಅದುಮಿಯೇ ಇಡಬೇಕಾದ ಪರಿಸ್ಥಿತಿ ಗುಂಪಿನಲ್ಲಿದ್ದಾಗ ಇರುತ್ತದೆ. ರಾಜಸ್ಥಾನ, ಸಿಕ್ಕಿಂ, ಬಂಗಾಳದ ಟೈಗರ್ ಹಿಲ್ ಹೀಗೆ ಅನೇಕ ಪ್ರವಾಸಗಳಲ್ಲಿ ಇದು ಅನುಭವಕ್ಕೆ ದಕ್ಕಿದೆ. ನನ್ನ ಮಟ್ಟಿಗಂತೂ ಇದು ಚೇತೋಹಾರಿಯಲ್ಲ. ಹೇಳುವವರು, ಕೇಳುವವರು ಇಲ್ಲದೆ ಮಂಗನಂತಾಗುವುದರಲ್ಲೇ ನಿಜವಾದ ಜಂಗಮ ಖುಷಿಯಿರುವುದು….! ಹೀಗಿದ್ದರೂ ರಾಮನಗರದ ಕೆಲ ಚಟುವಟಿಕೆಗಳು ಮಸ್ತಾಗಿದ್ದವು. ಸೂರ್ಯ ಕಂತುವವರೆಗೂ ರಾಮದೇವರ ಬೆಟ್ಟದ ಇನ್ನೊಂದು ಪಾರ್ಶ್ವದಲ್ಲಿ ನಮ್ಮ ಚೇಷ್ಟೆಗಳು ಸಾಗಿದ್ದವು. ಅದರ ಕೆಲವು ಮೆಲುಕುಗಳು ಇಲ್ಲಿವೆ.

                                                                                                    ನಾನು, ರಾಘವೇಂದ್ರ, ಕಲಾವಿದರಾದ ಗುಜ್ಜಾರ್, ಲಕ್ಷ್ಮಿ ನಾರಾಯಣ್ ಜೊತೆಯಾಗಿ…

 


ಮತ್ತೊಮ್ಮೆ ರಾಮನಗರ ಯಾವಾಗ ಕರೆಸಿಕೊಳ್ಳುವುದೋ…..?!!!  🙂

 

ಕೆಲವು ಪ್ರಾಚೀನ  ಕಲಾಕೃತಿಗಳ ಕುರಿತು ಬರೆಯುವ ಹಳೆ ಚಾಳಿಯನ್ನು ಮತ್ತೆ ಮುಂದುವರಿಸುವ ಬಯಕೆಯಾಗಿದೆ. ಸಹಿಸಿಕೊಳ್ಳಿ….!

“ವೀನಸ್ ಆಫ್ ಲಾಸೆಲ್” ಫ್ರಾನ್ಸ್ ನ ‘ಡಾರ್ಡೋನ್’ ಎಂಬಲ್ಲಿ ದೊರೆತಿರುವ ಈ ಅಪೂರ್ವ ಶಿಲ್ಪ, ಕ್ರಿ.ಪೂ 20 ,000 ವರ್ಷಕ್ಕಿಂತಲೂ ಹಳೆಯದೆಂದು ನಂಬಲಾಗಿದೆ. ಕೆಲವರು ಇದು ಕ್ರಿ.ಪೂ 11,000 ದಿಂದ 9,000ದ ನಡುವಿನ ಕಾಲದ್ದಿರಬಹುದೆಂದೂ ತರ್ಕಿಸಿದ್ದಾರೆ. J. G. Lalanne ರಿಂದ 1911 ರಲ್ಲಿ ಈ ಶಿಲ್ಪ ಶೋಧಿಸಲ್ಪಟ್ಟಿತು. ಈ ಶಿಲ್ಪದ ಮೇಲೆ ತಿಳಿ ಕೆಂಪು ವರ್ಣದ ಲೇಪನವಿದೆ. ಬಹುಷಃ ಕೆಂಪು ವರ್ಣ ಮಗುವಿನ ಜನನವನ್ನು, ರಕ್ತವನ್ನು ಬಿಂಬಿಸುವಂತದ್ದು. ಈ ಶಿಲ್ಪದ ಉದರ ಭಾಗ, ಜನನಾಂಗ ಮತ್ತು ಸ್ತನಗಳನ್ನು ಅಗತ್ಯಕ್ಕಿಂತ ತುಸು ದೊಡ್ಡದಾಗಿಯೇ ಕೆತ್ತಲಾಗಿದೆ. ಈ ಶಿಲ್ಪದಲ್ಲಿರುವ ಮಹಿಳೆ ತನ್ನ ಬಲ ಕೈನಲ್ಲಿ ಯಾವುದೋ ಪ್ರಾಣಿಯ ಕೊಂಬನ್ನು ಹಿಡಿದಿದ್ದಾಳೆ. ಕೊಂಬಿನ ಮೇಲಿರುವ ಸೂಕ್ಷ್ಮವಾದ ಅಡ್ಡಗೆರೆಗಳಿಂದ, ಈ ಕೊಂಬು ಕಾಡುಕೋಣದ್ದಿರಬೇಕೆಂದು ತರ್ಕಿಸಬಹುದು. ಈ ಕೋಡು ಅರ್ಧ ಚಂದ್ರಾಕಾರದಲ್ಲಿರುವುದು ಮತ್ತು ಅದರ ಮೇಲೆ ಕೆತ್ತಲಾಗಿರುವ 13 ಅಡ್ಡ ಗೆರೆಗಳು ಚಂದ್ರ ಮತ್ತು ಆತನ 13 ಸ್ತಿತಿಯನ್ನು ಅಥವಾ ಅಧಿಕ ವರ್ಷದ 13 ತಿಂಗಳುಗಳನ್ನು ಸೂಚಿಸುತ್ತದೆ.

Venus of Laussel

ಈ ಶಿಲ್ಪದಲ್ಲಿರುವ ಮಹಿಳೆಯು ಎಡಗೈಯನ್ನು ತನ್ನ ಊದಿರುವ ಹೊಟ್ಟೆಯ ಮೇಲಿಟ್ಟುಕೊಂಡಂತೆ ಕೆತ್ತಲಾಗಿದೆ. ಆಕೆಯ ಕತ್ತು ಚಂದ್ರನೆಡೆಗೆ ತಿರುಗಿಕೊಂಡನ್ತಿದೆ. ಒಟ್ಟಾರೆ ಶಿಲ್ಪವು, ದಿನ ತುಂಬಿದ ಬಸುರಿಯೊಬ್ಬಳು ತನ್ನ ಮುಂದಿನ ದಿನಗಳನ್ನು ಲೆಕ್ಕ ಹಾಕುವಂತೆ ಕಂಡು, ಭಾವನಾತ್ಮಕ ನೆಲೆಯಲ್ಲಿ ಗೆಲ್ಲುತ್ತದೆ. ಕಲಾತ್ಮಕವಾಗಿ ಈ ಶಿಲ್ಪ ಹೆಚ್ಹು ಸುಂದರವಾಗಿಲ್ಲ. ವೀನಸ್ ಆಫ್ ಲಾಸೆಲ್ ಶಿಲ್ಪದ ಜೊತೆ ಜೊತೆಗೆಂಬಂತೆ ಪ್ಯಾಲಿಯೋಲಿಥಿಕ್ ಶಿಲ್ಪಿಗಳು ಕುದುರೆ, ಕಾಡುಕೋಣ, ಎತ್ತು, ಜಿಂಕೆ, ಮ್ಯಾಮತ್, ಗಂಡು ಹಂದಿ, ಖಡ್ಗ ಮೃಗ, ಮೀನು ಮತ್ತು ಹಕ್ಕಿಗಳನ್ನೂ ಸಹ ಕೆತ್ತಿದ್ದಾರೆ. ತಲೆಯನ್ನು ತಿರುಗಿಸಿರುವ ಕಾಡುಕೋಣದ ಆಕೃತಿ ಸಹ ಫ್ರಾನ್ಸ್ ನಲ್ಲಿ ದೊರೆತಿದೆ.

ಬ್ಲಾಗ್, ಫೇಸ್ ಬುಕ್ ಇತ್ಯಾದಿಗಳಿಂದ ದೂರಾಗಿ ಬಹಳಷ್ಟು ದಿನಗಳೇ ಘಟಿಸಿದವು. ಆಗಾಗ ಬ್ಲಾಗಿಗೆ ಏನಾದರೂ ತುರುಕುವ ಮನಸ್ಸಾದರೂ ಹುಮ್ಮಸ್ಸಿರಲಿಲ್ಲ. ಇವತ್ತೇಕೋ ಎಲ್ಲವೂ ಸೇರಿ ಬಂದು ಈ ಪೋಸ್ಟ್ ನಿಮ್ಮ ಮುಂದಿದೆ… 🙂
ಮತ್ತೆ ಸಿಗೋಣ….

ಕಾಲೇಜ್ ದಿನಗಳಲ್ಲಿ ವರ್ಕ್ ಸಬ್ ಮಿಶನ್ ನಾಳೆ ಎನ್ನುವಾಗ ಎದ್ದು ಬಿದ್ದು ಉಳಿದೆಲ್ಲ (ಎಲ್ಲವೂ ಉಳಿದಿರುತ್ತಿದ್ದವು ಎಂಬುದು ಬೇರೆ ಮಾತು…!) ವರ್ಕ್ ಗಳನ್ನೂ ಒಂದೇ ರಾತ್ರಿಯಲ್ಲಿ ಪೂರೈಸುವ “ಪ್ರತಿಭಾವಂತ” ನಾನಾಗಿದ್ದೆ…! ಅಂತ ಹೊತ್ತಿನಲ್ಲೇ ಹುಟ್ಟಿದ ಎರಡು ಜಾಹೀರಾತುಗಳು ಇಲ್ಲಿವೆ…

(ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗುತ್ತದೆ)

ರಾಜಸ್ತಾನದ ಜೈಪುರದ ಪಾರ್ಕೊಂದರಲ್ಲಿ (ಹೆಸರು ನೆನಪಿಲ್ಲ) ಕ್ಲಿಕ್ಕಿಸಿದ ಫೋಟೋ.

ಒಂದಿಷ್ಟು ಚಿತ್ರಿಕೆಗಳು

ಕಂಬನಿ ಕಾಣದಿರಲೆಂದು ಮಳೆಯಲ್ಲಿ ಅಳುತ್ತಿದ್ದವ ಪ್ರತಿ ಹನಿಯಲ್ಲೂ ಅವಳನ್ನೇ ಹುಡುಕುತ್ತಿದ್ದ. ಅವಳು ಕಾಣಲೇ ಇಲ್ಲ. ದಿಗಿಲಾಗಿ ತಲೆಯೆತ್ತಿದ. ಆಕಾಶವಿರಲಿಲ್ಲ ಅಲ್ಲಿ. ಆಕೆಯ ಕಣ್ಣುಗಳಿದ್ದವು!

ಹೀಗೆ ಒಂದು ಬೆಳದಿಂಗಳ ರಾತ್ರಿ ಮಗುವಿಗೆ ತುತ್ತು ಉಣಿಸಲು ತಾಯಿ ಹರ ಸಾಹಸ ಪಡುತ್ತಿದ್ದಳು. ನೀ ತಿನ್ನದಿದ್ದರೆ
 ಚಂದಿರಗೇ ಇವೆಲ್ಲಾ ಎಂದು ಸಣ್ಣಗೆ ಗದರುತ್ತಿದ್ದಳು. ಅವತ್ತು ಚಂದಿರನೇ ಬಂದು ಉಂಡು ಹೋದ ಮತ್ತು ಅವತ್ತಿನಿಂದ ಅವ ಅನಾಥನಾದ!

ಬಂದೂಕುಗಳನ್ನು ನೆಟ್ಟು ಗುಂಡಿನ ಮಳೆಗಾಗಿ ಕಾತರಿಸಿದ್ದೆ. ಬರಗಾಲ ಬಂದಿತು. ಬಂದೂಕುಗಳೆಲ್ಲಾ ಸತ್ತು ಹೋದವು. ಮಳೆ ಬಂದಿತು. ಆದರೆ ಗುಂಡುಗಳದ್ದಲ್ಲ!

ಕಪ್ಪು ಹೊಲವ ತಬ್ಬಿದ ಸೂರ್ಯಕಾಂತಿಯ ಮುಖದ ಮೇಲೆ ಮುಗಿಲಲ್ಲಿ ಮೂಡಿದ ಕಾಮನಬಿಲ್ಲು ಸತ್ತು ತೇಲುತ್ತಿತ್ತು!

(ಕ್ಯಾನ್‌ವಾಸ್‌ನಲ್ಲಿ ಕೆತ್ತುವ ಪೇಂಟಿಂಗ್‌ನಂತ ಸಾಲುಗಳೆಂದರೆ ಅದೇನೋ ಆಕರ್ಷಣೆ. ಅದಕ್ಕೇ ಅವನ್ನು ಚಿತ್ರಿಕೆಗಳು ಅಂತಲೇ ಕರೆಯಬೇಕೆನಿಸಿತು. ಇಂತಹ ಸಾಲುಗಳು ತಾವಾಗೇ ಹುಟ್ಟಿಕೊಳ್ಳುತ್ತವೆ. ನಂತರ ವಲಯವೊಂದನ್ನು ನಿರ್ಮಿಸುತ್ತವೆ.ಮತ್ತೆ ಮತ್ತೆ ಓದಿದಾಗ ಹೊಸ ಅರ್ಥಗಳನ್ನು ನೇಯುತ್ತವೆ. ಅಂತೆಯೇ ಕೆಲವು ಸಾಲುಗಳು ಹುಟ್ಟಿಕೊಂಡಿವೆ. )