Archive for the ‘Uncategorized’ Category

ಚಂದದ ಪೋಸ್ಟರ್, ಡರ್ಟಿ ಪಿಕ್ಚರ್ ..!

ಕಾದು ನೋಡುವ ಸಿನಿಮಾಗಳು ಅನೇಕ ನಿರೀಕ್ಷೆಗಳನ್ನು ಹುಟ್ಟಿಸಿರುವ ಕಾರಣಕ್ಕೇ ಕಾಯುವಂತಿರುತ್ತವೆ! ನಿರೀಕ್ಷೆಗಳಿಲ್ಲದೆ ಸಿನಿಮಾ ನೋಡಬೇಕು, ಒಂದು ಸಿನಿಮಾವನ್ನು ಬೇರೆ ಸಿನಿಮಾಗಳ ಜೊತೆ ಹೊಂದಿಸಿ ನೋಡಬಾರದು, ಈ ಸನ್ನಿವೇಶ ಹಾಗಿರಬೇಕಿತ್ತು, ಆ ತುಣುಕು ಹೀಗಿರಬೇಕಿತ್ತು… ಎಂದೆಲ್ಲ ಹೇಳಿ ನಿಜವಾಗಿ ದಕ್ಕಿದ ಸಿನಿಮಾವನ್ನು ಕೊಲ್ಲಬಾರದು ಎಂಬಿತ್ಯಾದಿಯಾಗಿ ಅದೆಷ್ಟೇ ಅಂದುಕೊಂಡರೂ ಚಿತ್ರ ನೋಡಿ ಅದರ ಗುಂಗು ಕಳೆಯುವಷ್ಟು ಹೊತ್ತು ಅವೆಲ್ಲವೂ ಎಲ್ಲಿ ನೆನಪಿರುತ್ತದೆ? ಮೊನ್ನೆಯೂ ಹಾಗೇ ಆಯಿತು. ತಿಂಗಳುಗಟ್ಟಲೆ ಕಾದು ನೋಡಿದ ಚಿತ್ರ ‘ದ ಡರ್ಟಿ ಪಿಕ್ಚರ್’. ಅದು ಡರ್ಟಿ ಪಿಕ್ಚರ್ ಅನ್ನೋ ಕಾರಣಕ್ಕೇ ನಿರೀಕ್ಷೆಗಳಿದ್ದಿರಬಹುದು ಎಂದು ಯಾರಾದರೂ ಒಂಟಿ ಕಣ್ಣು ಮುಚ್ಚಿ, ತುಂಟ ನಗೆ ನಕ್ಕರೂ ನನ್ನ ತಕರಾರೇನಿಲ್ಲ. 🙂 ಏನ್ಮಾಡೋದು ಸ್ವಾಮೀ ವಯಸ್ಸು…? ಎಂಬ ಉತ್ತರ ಕೊಡಬಲ್ಲೆ!  ಅದೇನೇ ಇರಲಿ, ಒಂದಂತೂ ಸತ್ಯ. ದ ಡರ್ಟಿ ಪಿಕ್ಚರ್ ನೋಡಬೇಕೆಂದುಕೊಂಡಾಗ ಅದರ ಮೊದಲ ಪ್ರತಿಯೂ ಸಿದ್ಧವಾಗಿರಲಿಕ್ಕಿಲ್ಲ… ಸಿಲ್ಕ್ ಸ್ಮಿತಾ ಕಥೆ, ವಿದ್ಯಾ ಬಾಲನ್ ನಟನೆ ಅವೆರಡೇ ಸಂಗತಿಗಳು ಸಾಕಿತ್ತು.

ಆದರೆ….

ಕಳೆದ ಭಾನುವಾರ (ಮೊದಲ ದಿನ, ಮೊದಲ ಶೋ ನೋಡಬೇಕೆಂಬ ಹುರುಪು ನನ್ನಲ್ಲಿರಲಿಲ್ಲವಾದ ನಿಮಿತ್ತ) ಡರ್ಟಿ ಪಿಕ್ಚರ್ಗೆ ಹೋಗುವುದೋ, ಬೇಡವೂ ಎಂಬ ಗೊಂದಲದಲ್ಲಿಯೇ ಹೊರಟಿದ್ದು ಊರ್ವಶಿಗೆ. ಮಧ್ಯೆ ಸಂಸ ಪಕ್ಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪುಸ್ತಕ ಮಳಿಗೆಯಲ್ಲಿ ಒಂದಷ್ಟು ಜೇಬು ಹಗುರ ಮಾಡಿಕೊಂಡು ಊರ್ವಶಿಯತ್ತ ನಡೆದಾಗ ಸಿನಿಮಾದ ಮೇಕಿಂಗ್ ದೃಶ್ಯ ಮುಗಿದೇ ಹೋಗಿದ್ದು, ಸಪ್ಪೆಯೆನಿಸಿತು. ಆದರೂ ಸಿನಿಮಾ ಶುರುವಾಗುವಷ್ಟರಲ್ಲಿ ಒಳ ಸೇರಿ ಕೃತಾರ್ಥರಾದೆವು! ಅಲ್ಲಿಂದ ಶುರುವಾದ ಡರ್ಟಿ ಪಿಕ್ಚರ್, ಮುಗಿಯುವಷ್ಟರಲ್ಲಿ ಅದೇನೋ ಕಿರಿಕಿರಿ… ಹತಾಶೆ…ಚಿತ್ರ ಹೀಗೇಕೆಂಬ ನೂರೆಂಟು ತಲೆಬಿಸಿ….

ಚಿತ್ರದ ನಡುವಿನ ಇಂಟರ್ವೆಲ್ ನಲ್ಲಿ ಸಿಗರೇಟಿಗೆ ಕಿಡಿ ಹೊತ್ತಿಸಿ ನಿಂತಿದ್ದ ಹೈದ ಹೇಳುತ್ತಿದ್ದ. ವಿದ್ಯಾಬಾಲನ್ ಗಿಂತ ಮಲ್ಲಿಕಾ ಶೆರಾವತ್ ಈ ರೋಲ್ ಗೆ ಸಕ್ಕತ್ತಾಗಿ ಸೂಟ್ ಆಗ್ತಿದ್ಲು ಅಂತ. ಅದು ನನ್ನ ಅಸಮಾಧಾನವೂ ಆಗಿತ್ತು. ಸಿಲ್ಕ್ ಕಣ್ಣುಗಳ ಮಾದಕತೆಯ ಕೆಲವಂಶವೂ ವಿದ್ಯಾಗಿಲ್ಲ. ಅದೆಷ್ಟೇ ತುಂಡು ಬಟ್ಟೆ ತೊಟ್ಟರೂ ಆಕೆಯ ಮುಖದಲ್ಲಿ ಸಿಲ್ಕ್ ಸ್ಮಿತಾಳನ್ನು ಕಲ್ಪಿಸಿಕೊಳ್ಳುವುದು ದುಃಸ್ಸಾಧ್ಯ. ಹಾಗಂತ ನಟನೆಯ ವಿಷಯದಲ್ಲಿ ಈ ಮಾತಿಗೆ ಬೆಲೆಯಿಲ್ಲ. ಅಪರೂಪದ ನಟನೆಗೆ ಬಲವಾಗಿಯೇ ಒಗ್ಗಿಕೊಂಡಂತಿರುವ ವಿದ್ಯಾ ಎಲ್ಲೂ ಎಡವಿಲ್ಲ. ಆದರೆ ಅವಳ ಒಟ್ಟಾರೆ ಛಾಯೆಯೇ ಹಾಗಿದ್ದರೆ ಅವಳೇನು ಮಾಡಿಯಾಳು? ಈ ಮಾತು ಬಿಡಿ. ಇಡೀ ಚಿತ್ರದ ಕುರಿತಾದ ಅಸಹನೆ ಹೊರಳುವುದು ಮುಖ್ಯವಾಗಿ ನಿರ್ದೇಶಕ ಮಿಲನ್ ಮೇಲೆ. ಚಿತ್ರದಲ್ಲಿ ಸಿಲ್ಕ್ ಕೇವಲ ‘ಸೆಕ್ಸಿ ಸಿಲ್ಕ್’ ಎಂಬುದನ್ನು ಬಿಂಬಿಸಲು ಮಿಲನ್ ಲುತ್ರಿಯಾ ಸಾಕಷ್ಟು ಕಸರತ್ತು ಮಾಡಿದ್ದಾರೆ ಎಂಬುದು ಬಹಳಷ್ಟು ದೃಶ್ಯದಲ್ಲಿ ಸಿದ್ಧವಾಗುತ್ತದೆ. ಬಹುಷಃ ಅದೇ ಕಾರಣಕ್ಕೇ ಪೂರ್ತಿ ಸಿನಿಮಾ ಬಣ್ಣದ ಕಾಗದ ಸುತ್ತಿದ ಖಾಲೀ ಡಬ್ಬಿಯಾಗುತ್ತದೆ! ಆದರೆ ಸಿಲ್ಕ್ ಸ್ಮಿತಾಗೂ, ಈ ಸಿನಿಮಾಗೂ ಒಂದು ಹೋಲಿಕೆ ನನಗೆ ಕಂಡಿತು.(ಅನೇಕರಿಗೂ ಅನ್ನಿಸಿರಬೇಕು!) ಕೇವಲ ಸಿಲ್ಕ್ ನೋಡಲು, ಆಕೆಯಿರುವ ಸನ್ನಿವೇಶಗಳು ಬರೋ ಸಮಯಕ್ಕೆ ಜನ ಥೇಟರ್ ಗಳಿಗೆ ಎಡತಾಕುತ್ತಿದ್ದರಂತೆ. ಬರಬರುತ್ತ ಅವೆಲ್ಲವೂ ಅದೇ ರಾಗ, ಅದೇ ಹಾಡು ಎಂಬಂತಾದುದೆ, ಜನ ಸಿಲ್ಕ್ ಕುರಿತು ನಿರುತ್ಸಾಹ ತೋರಲಾರಂಭಿಸಿದರು. ಡರ್ಟಿ ಪಿಕ್ಚರ್ ನಲ್ಲೂ ಅಷ್ಟೇ. ವಿದ್ಯಾಳ ಕಾಯಪ್ರದರ್ಶನ ಬರಬರುತ್ತ ಅಸಹನೆ ಹುಟ್ಟಿಸಲಾರಂಭಿಸುತ್ತದೆ. ಹಾಗಾಗಿಯೇ ಕೆಲವೊಮ್ಮೆ ಚಿತ್ರ ಏಕತಾನತೆಯ ಸುಳಿಗೆ ಸಿಕ್ಕಿದೆ.

1978 ರಲ್ಲಿ ಕನ್ನಡದ ‘ಬೇಡಿ’ಯಿಂದ ಶುರುವಾಗಿ 1996 ರಲ್ಲಿ ತಮಿಳಿನ ‘ಸುಭಾಶ್’ (ವಿಕಿಪೀಡಿಯಾದಲ್ಲಿ ಸಿಕ್ಕ ಮಾಹಿತಿ :)) ತನಕ ಅನಾವರಣಗೊಂಡ ಸಿಲ್ಕ್ ಬದುಕನ್ನು ಒಟ್ಟಾರೆ ಹಿಡಿದಿಡಲು ಮಿಲನ್ ತಿಣುಕಾಡಿದ್ದಾರೆ. ಆಕೆ ಚಿತ್ರರಂಗದ ತೆಕ್ಕೆಗೆ ಬೀಳುವ, ಅಲ್ಲೇ ಬದುಕು-ಭ್ರಮೆಗಳನ್ನು ಕಟ್ಟಿಕೊಳ್ಳುವ, ಕೊನೆಗೆ ಚೆನ್ನೈನ ಅಪಾರ್ಟ್ಮೆಂಟ್ ನಲ್ಲಿ ತನ್ನ ತಾನು ಕೊಂದುಕೊಳ್ಳುವ ಭೀಕರ ಹಂತದವರೆಗೂ ಸಾಗಿಬಂದ ಸಿಲ್ಕ್ ಬಾಳಿನ ಮಜಲುಗಳು ಬಹಳಷ್ಟು ಗಾಢ ಎಂಬುದು ನನ್ನ ತಿಳುವಳಿಕೆ. ಇಡೀ ಚಿತ್ರ ಎಲ್ಲಿಯೂ ಇಂತಹ ತೀವ್ರತೆಯಿಂದ ಆವರಿಸಿಕೊಳ್ಳುವುದಿಲ್ಲ. ಹಾಗಾಗಿಯೇ ಕ್ಷಣ ಕ್ಷಣಕ್ಕೂ ಚಪ್ಪಾಳೆ ಗಿಟ್ಟಿಸುವ ಗೊಂಚಲು ಸಂಭಾಷಣೆಗಳಿದ್ದೂ, ಧಾರಾಳ ದೇಹ ಪ್ರದರ್ಶನವಿದ್ದೂ ಸಿನಿಮಾ ಜೊಳ್ಳಾಗಿದೆ… ಸಿಲ್ಕ್ ಸಿನಿಮಾ ರಂಗದ ಮೆಟ್ಟಿಲುಗಳನ್ನು ಏರಿದ, ಅಲ್ಲಿಂದ ಜಾರಿದ ಯಾವೊಂದು ದೃಶ್ಯ ಜೋಡಣೆಯೂ ‘ಹಳಿ’ಯ ಮೇಲಿಲ್ಲ. ಸುಮ್ಮನೆ ಏಕ್ತಾಳ ಒಣ ಧಾರಾವಾಹಿಯನ್ನು ನೋಡಿದಂತೆ ‘ದ ಡರ್ಟಿ ಪಿಕ್ಚರ್’ ನೋಡಿಸಿಕೊಳ್ಳುತ್ತದೆ. ಹ್ಞಾಂ..ಏಕ್ತಾ ಈ ಚಿತ್ರದ ನಿರ್ಮಾಪಕಿ ಎಂಬುದು ಮಧ್ಯೆ ಮಧ್ಯೆ ನೆನಪಾಗುತ್ತಿರುತ್ತದೆ. ಆಕೆ ನಿರ್ಮಾಪಕಿಯೆಂಬ ಕಾರಣಕ್ಕೇ ಸಿನಿಮಾದಲ್ಲಿರುವ ತುಷಾರ್ ಕಪೂರ್, ಪಕ್ಕಾ ಎಡಬಿಡಂಗಿಯಂತೆ ಕಾಣಿಸುತ್ತಾರೆ. (ಅವರ ನಟನೆಯ ದೃಷ್ಟಿಯಿಂದ ಮಾತ್ರ!), ನಾಸಿರುದ್ದೀನ್ ಷಾಗಿನ್ನೂ ವಯಸ್ಸಾಗಿಲ್ಲ. ದೇವಾನಂದ ಇಲ್ಲವಾದ ನಂತರ ಚಿರಯುವಕನ ಸ್ಥಾನ ಇವರಿಗೆ..(!) ಎನ್ನುವಂತೆ ದಕ್ಷಿಣ ಭಾರತದ ಪ್ರಸಿದ್ಧ ನಟರ ಹಿಕ್ಮತಿಗಳನ್ನೆಲ್ಲ ಧಾರಾಳವಾಗಿ ಹೊರಹಾಕಿದ್ದಾರೆ. ಇಮ್ರಾನ್ ಹಶ್ಮಿಗೆ ಜಾಸ್ತಿ ಕೆಲಸ ಇಲ್ಲ. ಇದ್ದಷ್ಟು ಚೊಕ್ಕ. ಇನ್ನುಳಿದಂತೆ ‘ದ ಡರ್ಟಿ ಪಿಕ್ಚರ್’ ಚಿತ್ರವನ್ನು ಮತ್ತೆ ನೆನಪಿಸುತ್ತಿರುವುದು ಬಪ್ಪಿ ಲಹರಿ, ಶ್ರೇಯಾ ಘೋಶಾಲ್ ಜೋಡಿಯ ಊ ಲಾ ಲಾ…. ಹಾಡು. ಹಾಂ..ಮರೆತಿದ್ದೆ…. ಚಿತ್ರದ ಪೋಸ್ಟರ್ ಗಳು ವಾಹ್ ಎನ್ನುವಷ್ಟು ಚೆಂದಕ್ಕಿದೆ 😉

ಹಸಿರು ಚಿಗುರೂ… ಕೆಂಪು ಸೇಬೂ…

ಬ್ಲಾಗ್, ಫೇಸ್ ಬುಕ್ ಇತ್ಯಾದಿಗಳಿಂದ ದೂರಾಗಿ ಬಹಳಷ್ಟು ದಿನಗಳೇ ಘಟಿಸಿದವು. ಆಗಾಗ ಬ್ಲಾಗಿಗೆ ಏನಾದರೂ ತುರುಕುವ ಮನಸ್ಸಾದರೂ ಹುಮ್ಮಸ್ಸಿರಲಿಲ್ಲ. ಇವತ್ತೇಕೋ ಎಲ್ಲವೂ ಸೇರಿ ಬಂದು ಈ ಪೋಸ್ಟ್ ನಿಮ್ಮ ಮುಂದಿದೆ… 🙂
ಮತ್ತೆ ಸಿಗೋಣ….

ಜಾನಿ ಜಪಾನಿ ಮಂಗಗಳು…!!!

ರಾಜಸ್ತಾನದ ಜೈಪುರದ ಪಾರ್ಕೊಂದರಲ್ಲಿ (ಹೆಸರು ನೆನಪಿಲ್ಲ) ಕ್ಲಿಕ್ಕಿಸಿದ ಫೋಟೋ.

ಕುಲುಮೆಗೊಮ್ಮೆ ಹೋಗಿಬನ್ನಿ

ಹೊಸ ಚಿತ್ರ ಬರೆಯುವ ಮನಸ್ಸಿತ್ತು. ಬ್ರಶ್, ಕ್ಯಾನ್‌ವಾಸ್ ಎಲ್ಲವೂ ಸಿದ್ಧವಿದ್ದವು. ಮೆತ್ತುವುದೊಂದು ಬಾಕಿಯಿತ್ತು. ಈಗ ಅದೂ ಆಗಿದೆ. ‘ಚಿತ್ರ’ ನಿಮ್ಮ ಮುಂದಿದೆ, ‘ಕುಲುಮೆ’ಯೊಟ್ಟಿಗೆ.

ಲಿಂಕ್ ಇಲ್ಲಿದೆ: http://chitrakulume.wordpress.com/

ಸ್ಮಿತೆ ಹಾಗಲ್ಲ !

ಅಟ್ಟದ ಮೇಲೆ ನೇರ
ಬಿದ್ದ ಬಿಸಿಲ ಕೋಲು
ಅಲ್ಲಿನ ಸಂದಿಗೊಂದುಗಳ ನಡುವೆ
ನರಳಿ, ಕೊನೆಗೊಮ್ಮೆ ಹೊರಳಿ
ಅಂಗಳದಲ್ಲಿ ಅರಳುತ್ತಿತ್ತು,
ಸ್ಮಿತೆ ನೆರಳಲ್ಲಿದ್ದಳು!

ಮಾಡಿಗೆ ಅಲ್ಲಲ್ಲಿ ಸಿಕ್ಕಿಸಿದ
ಬೆಳ್ಳಿ ಹಾಳೆಗಳನ್ನು ತೇವವಾಗಿಸಿ
ಅದರ ಇರುವನ್ನೂ
ಸೋಲಿನ ಇತಿಹಾಸವಾಗಿ
ಜೋರುಮಳೆ,
ಸ್ಮಿತೆಯನ್ನು ತೋಯಿಸಲಿಲ್ಲ!

ಕೌದಿಯ ಮೇಲೆರಡು ಕಂಬಳಿ
ಹೊರಗೆ ಚಾಚಿದ ಕುಳಿರ್ಗಾಳಿ
ಅದೆಲ್ಲಿಂದಲೋ ನುಸುಳಿ
ಹಲ್ಲುಗಳ ನಡುವೆ ಕಾದಾಟ
ಮೈಗೆ ಮತ್ತಷ್ಟು ಹೊದಿಕೆಯ ಹಸಿವೆ,
ಸ್ಮಿತೆ ಗಪ್ಪಾಗಿ ನಿದ್ರಿಸಿದ್ದಳು!

ಕೊಲ್ಲಿಯ ಅಲೆಗಳೇ ತಂದು ಕೊಡವಿದ
ಚಿಪ್ಪು ಶಂಖಗಳು !!
ಸ್ಮಿತೆ ಸಮುದ್ರವಾದಳು,
ತೆರೆಯಾದಳು;
ವಿಪರ್ಯಾಸ,
ತೀರಕ್ಕೆ ತಟ್ಟಲೇ ಇಲ್ಲ!!!

 

ಮಧುರ ಸಂಜೆಗೊಂದು ಮಾಲೆ ತೊಡಿಸಿ…

ಒಂದು ಸುಂದರ ಮುಸ್ಸಂಜೆ. ಕೊಂಚ ಸಮಯಕ್ಕೆ ಮುಂಚೆ ತಾನೇ ಹೊತ್ತಿಕೊಂಡ ಜಗಮಗಿಸುವ ವಿದ್ಯುತ್ ದೀಪಗಳು ದೂರದ ಪಟ್ಟಣದಲ್ಲಿ, ಆಗಸದ ತಾರೆಗಳಿಗಿಂತ ತೀವ್ರವಾಗಿ ಕಣ್ಣು ಕೋರೈಸುತ್ತಿವೆ. ಮಿಣ್ಣಗೆ ಮಿನುಗುತ್ತಿರುವ ಪಾರ್ಕಿನ ದೀಪಗಳು ಕಣ್ಣಿಗೆ ರಾಚಿ ಕಿರಿಕಿರಿಯನ್ನುಂಟು ಮಾಡದೇ ಹಿತವಾಗಿದೆ. ಮುಂಜಾನೆ ಹೊಟ್ಟೆಪಾಡಿಗಾಗಿ ದೂರದೆಡೆಗೆ ಸಾಗಿದ ಹಕ್ಕಿಗಳು ತಮ್ಮ ಪರಿವಾರದೊಡನೆ ತಿರುಗಿ ಬರುತ್ತಾ, ಗೂಡಿಗೆ ಸೇರಿ ಮರಿಗಳೀಗೆ ಆಹಾರವುಣ್ಣಿಸುವ ತವಕದಲ್ಲಿ ಕಿಚಿಗುಟ್ಟುತ್ತಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ಹಿಕ್ಕೆಗಳು ಸುರಿಸುತ್ತಾ !
ಪಕ್ಕದ ರಸ್ತೆ ಪಟ್ಟಣಕ್ಕೇ ಹೋಗುತ್ತಾದರೂ ಅಲ್ಲಿ ವಾಹನಗಳ ಆರ್ಭಟ ಅಷ್ಟೊಂದಿಲ್ಲ. ಆಗೊಮ್ಮೆ ಈಗೊಮ್ಮೆ ಹಾದು ಹೋದ ಸರಕು ವಾಹನಗಳು ಚೆಲ್ಲಿದ ಹೊಗೆಯ ಕಮಟು ವಾಸನೆಯಿನ್ನೂ ಅಡರಿಲ್ಲ. ಆದರೆ ನಿಧಾನವಾಗಿ ಮೂಗಿಗೆ ಒತ್ತುತ್ತಿರುವ ಸೂಜಿ ಮಲ್ಲಿಗೆಯದರದ್ದೋ ಎಂಥದರದ್ದೋ ಸುವಾಸನೆ ಕಮಟು ವಾಸನೆಯನ್ನು ಮೀರಿಸುವಂತಿದೆ. ಅನಂದಲ್ಲೊಂದೆಡೆ ಕಾಣುವ ಸುಂದರ ಗೋಪುರಕ್ಕೆ ಹಿಂಡು ಹಿಂಡು ಮೋಡಗಳು ಬಂದು ಮುತ್ತಿಕ್ಕಿ ಮುಂದೆ ಸಾಗುತ್ತಿವೆ. ಆ ಗೋಪುರ, ಅದರಾಚೆಗಿನ ತಿಳಿನೀಲಿ ಮಿಶ್ರಿತ ಮಸುಗು ಪ್ರದೇಶ ಕಲಾವಿದನೊಬ್ಬ ಕ್ಯಾನ್ವಾಸಿನಲ್ಲಿ ಕುಂಚ ಬಣ್ಣಗಳೊಡನೆ ಆಡಿದ ಆಟದಂತಿದೆ. ಪೃಥ್ವಿಯ ಸಾಂಗತ್ಯವನ್ನು ತ್ಯಜಿಸಿ ಸೂರ್ಯದೇವನಿಗೆ ಅದನ್ನು ಕರುಣಿಸುವ ಉದ್ದೇಶವಿಲ್ಲವೆಂಬಂತೆ ಚಂದ್ರ ಮಹಾಶಯ ನಿಧಾನವಾಗಿ ಭೂತಾಯಿಯಿಂದ ದೂರವಾಗಿ ಆಗಸ ಸೇರುವ ಹುನ್ನಾರದಲ್ಲಿದ್ದಾನೆ. ಸೂರ್ಯ ಮುಳುಗಿ ಸಮಯವಾದರೂ ಆತನ ಕಿರಣಗಳಿಂದೆದ್ದ ಬೆಳಕು ಪೂರ್ತಿಯಾಗಿ ಕಳೆದು ಹೋಗದೇ ಆಕಾಶದಲ್ಲೆಡೆ ರಂಗವಲ್ಲಿಗಳನ್ನು ಚಿತ್ತಾರವಾಗಿ ಚಿತ್ರಿಸಿದೆ. ಅದರಲ್ಲೊಂದು ಮೋಡ, ಬಾಯಿಗೆ ಬೆರಳಿಟ್ಟು ಮಲಗಿದ ಮುಗ್ಧ ಮಗುವನ್ನು ಹೋಲುತ್ತಿದೆ. ಪಕ್ಕದಲ್ಲೇ ಇರುವ ಇನ್ನೊಂದು ಮೇಘ ನಿದ್ದೆಗೆ ಜಾರುವ ಮೊದಲು, ಮಗು ಕುಡಿದು ಬಿಟ್ಟ ಹಾಲಿನ ಬಾಟಲಿಯಂತೆ ತೋರುತ್ತಿದೆ !
ಮೆಲುವಾಗಿ ಬೀಸಿದ ತಂಗಾಳಿ, ವೀಣೆಯ ತಂತಿಯನ್ನು ಮೀಟಿದಂತೆ ಸುಂದರ ನಾದವನ್ನು ಎಬ್ಬಿಸುತ್ತಿದೆ. ಗಾಳಿಯಿಂದ ಮರಗಳು ತುಯ್ಡಾಡಿ ಒಂದಕ್ಕೊಂದು ಉಜ್ಜುತ್ತಾ ಗಾಳಿಯ ಸ್ವರಕ್ಕೆ “ಸಾಥ್’ಕೊಡುತ್ತಿವೆ. ಯಾರೋ ಓದಿ ಬಿಸುಟು ಹೋದ ವೃತ್ತಪತ್ರಿಕೆಯೊಂದು ಗಾಳಿಯೊಂದಿಗೆ ಬೆರೆತು ಆಚೀಚೆ ಸುತ್ತುತ್ತಾ ಮಗದೊಂದು ಸ್ವರವನ್ನು ಎಬ್ಬಿಸುತ್ತಿದೆ. ಪಕ್ಕದಲ್ಲಿರುವ ದೃಢಕಾಯ ಮರದ ಬುಡವನ್ನೇ ಆಧಾರವಾಗಿಸಿಕೊಂಡು ಹಬ್ಬಿದ ರಾತ್ರಿ ರಾಣಿ ಹೂವಿನ ಗಿಡ, ಇಂದು ರಾತ್ರಿಯ ರಂಗಸ್ಥಳಕ್ಕೆ ಕಲಾವಿದರನ್ನು ಸಿದ್ಧಪಡಿಸುತ್ತಿದೆ. ಬಿರಿಯಲು ಸಿದ್ಧವಾಗಿ ನಿಂತ ಹೂಗಳ ಭಾರದಿಂದಾಗಿ ಗಿಡದ ಕೊಂಬೆಗಳು ಸ್ವಲ್ಪ ಬಾಗಿದಂತಿದೆ. ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಗಾಳೀ ಸೇವನೆಗೆ ಬಂದ ಸಂತೃಪ್ತ ಜನರು ಈಗಾಗಲೇ ತಿರುಗಿ ನಡೆದಿದ್ದಾರೆ. ಜೀವನದ ತುಂಬೆಲ್ಲಾ ಕಷ್ಟವನ್ನೇ ಕಂಡ, ಕಾಣುತ್ತಿರುವ ಜೀವಗಳು ಇದುವರೆಗೂ ಕುಳಿತು ಭೂತ-ಭವಿಷ್ಯತ್ತನ್ನು ನೆನೆದು ತಿರುಗಿ ಮನೆಗೆ ನಡೆಯುವ ಧಾವಂತದಲ್ಲಿದ್ದಾರೆ. ಅವರಲ್ಲಿ ಕೆಲವರು ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿದ ಖುಷಿಯಲ್ಲಿದ್ದರೆ ಹಲವರು ಬರುವಾಗ ಹೊತ್ತು ತಂದ ಒಣಮುಖ, ಮನಸ್ಸೊಡನೆಯೇ ವಾಪಸಾಗುತ್ತಿದ್ದಾರೆ. ಅಲ್ಲೇ ಇರುವ ನಳವೊಂದು ಅದ್ಹೇಗೋ ಸ್ವಲ್ಪ ಮುರಿದು ಅದರಿಂದ ಚಿಮ್ಮುತ್ತಿದ್ದ ನೀರಿನ ಕಾರಂಜಿ ಆ ನಸುಗತ್ತಲಲ್ಲೂ ಸುಂದರ ದೃಶ್ಯಗಳನ್ನು ಸೃಷ್ಟಿಸುತ್ತಿದೆ.
ಇವೆಲ್ಲದರ ನಡುವೆ ಮೂಲೆಯಲ್ಲಿ ಜಗತ್ತಿನ ಪರಿವೇ ಇಲ್ಲದಂತೆ ಬೆನ್ನು ತಾಗಿಸಿ ಕುಳಿತು ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಯುವ ಪ್ರೇಮಿಗಳು ದೂರ ದಿಗಂತಕ್ಕೆ ದೃಷ್ಟಿ ನೆಟ್ಟು ಭವಿತವ್ಯದ ಸುಂದರ ಕಲ್ಪನೆಯ ಸೌಧಕ್ಕೆ ಕಲಶ ಕೂರಿಸುತ್ತಿದ್ದಾರೆ. ಯಾರ ಹಂಗೂ ಇಲ್ಲದೇ…ಅವರ ಪಿಸುಮಾತಿಗಿಂತ ಎದೆ ಬಡಿತ ಸ್ಪಷ್ಟವಾಗಿ ಕೇಳಿಸುತ್ತಿದೆ. ಈ ಪ್ರೇಮಿಗಳ ಬಳಿಯಲ್ಲೇ ಕೆಳಗೆ ಕುಳಿತ ಕಪ್ಪು ಬೀದಿ ನಾಯಿಯೊಂದು ಮಧ್ಯಾಹ್ನದಿಂದ ಒಂದೇ ಭಂಗಿಯಲ್ಲಿ ಕುಳಿತ ಪ್ರೇಮಿಗಳ ಕೈನಲ್ಲಿರುವ ಪ್ಲಾಸ್ಟಿಕ್ ಚೀಲದಿಂದ ಹೊಮ್ಮುತ್ತಿರುವ “ಎಣ್ಣೆ ತಿಂಡಿ’ ಯ ಘಮಕ್ಕೆ ಮನಸೋತು ಅದನ್ನು ಎಗರಿಸಿಕೊಂಡು ಹೋಗಲು ಆಷಾಢಭೂತಿತನದಿಂದ ಹೊಂಚು ಹಾಕುತ್ತಿದೆ. ಅದಕ್ಕೂ ಗೊತ್ತಿರಬಹುದು, ಪ್ರೇಮಿಗಳಿಬ್ಬರು ಜತೆಯಾದರೆ ಬಾಹ್ಯಲೋಕ ಅವರ ಪಾಲಿಗೆ ಮುಚ್ಚಿಹೋಗುತ್ತದೆ, ಅಂತರಂಗ ಮಾತನಾಡಿಕೊಳ್ಳುತ್ತದೆ ಎಂದು.
-ಈ ಎಲ್ಲ ಸಂಗತಿಗಳು ನಿತ್ಯನಡೆಯುವುದು ತಿಳಿದಿದ್ದರೂ ದಿನಾ ದಿನಾ ಹೊಸತನ್ನು ಹುಡುಕುವ ನೆಪ ಮುಸ್ಸಂಜೆಯನ್ನು ಬೋರಾಗಿಸಿಲ್ಲ, ಬದಲಾಗಿ ಇನ್ನಷ್ಟು ಮುದಗೊಳಿಸಿದೆ ಎಂದರೆ ತಪ್ಪೆನ್ನುವವರೆಷ್ಟು ಮಂದಿ ?

ಸೂರ್ಯ ಮತ್ತು ನಮ್ಮನೆ ಟೆರೇಸು

ಸೂರ್ಯನಿಗೆ ಕಂಪಿಲ್ಲ
ನಮ್ಮನೆ ಟೆರೇಸಿಗಿದೆ
ಬಟ್ಟೆ ತೊಳೆದ ಸೋಪಿನ ಬಿಲ್ಲೆಯದ್ದೋ ?
ಒಣಗಿಸಲಿಟ್ಟಿದ್ದ ಹಪ್ಪಳ, ಸಂಡಿಗೆ ಮಸಾಲೆಗಳದ್ದೋ?
ಅಕ್ಕ ಕೂದಲಿಗೆ ಹಾಕಿದ ಶಾಂಪುವಿನದ್ದೋ?
ಇನ್ನು ಏನೇನೋ?

ಸೂರ್ಯನಂಗಳದ ವಿಸ್ತಾರ
ನಮ್ಮನೆ ಟೆರೇಸಿನ ಅದೆಷ್ಟೋ ಪಾಲು
ಆದರೆ, ಅಲ್ಲಿ ಯಾರೂ ಗಾಳಿಪಟ ಹಾರಿಸುವವರಿಲ್ಲ
ಪಕ್ಕದ್ಮನೆಯಿಂದ ಬಂದು ಅಂತ್ಯಾಕ್ಷರಿಗೆ ಕೂಡಿಕೊಳ್ಳುವವರಿಲ್ಲ

ಸೂರ್ಯ ಎದುರು ಬಂದಾಗ
ನಮ್ಮನೆ ಟೆರೇಸಿಗೆ ನಾಚಿಕೆಯೋ ?
ಅಥವಾ ಚೆಂದ ಕಾಣಿಸುವ ಬಯಕೆಯೋ?
ಯಾಕೆಂದರೆ ಸೂರ್ಯ ಕಂತಿದೊಡನೆ
ಈ ಟೆರೇಸು ಬೆತ್ತಲಾಗುತ್ತದೆ
ಅಮ್ಮ ಒಣಗಿದ ಚಿತ್ತಾರದ ಸೀರೆಗಳನ್ನು ಮಡಚಿಡುತ್ತಾರೆ

ಕೊನೆಗೊಂದು ಮಾತು

ಸೂರ್ಯ ಬೆಳಕ ಹರಡುತ್ತಾನೆ

ನಮ್ಮ ಟೆರೇಸು ಅದನ್ನು ತಡೆಯುತ್ತದೆ

ಗುಡಿಸಲಲ್ಲೇ ಕೂತು
ಈ ಕವನ ಕಟ್ಟುತ್ತಿರುವುದಕ್ಕೆ
ಸೂರ್ಯನ ನೆನಪೇ ಕಾರಣ