ಧೋ ಎಂದು ಪೃಥ್ವಿಯನ್ನೇ ಕಬಳಿಸುವೋಪಾದಿಯಲ್ಲಿ ವರುಣನ ಆರ್ಭಟ. ದಟ್ಟ ಕಾಡು. ಹೆಚ್ಚಾಗಿ ಅದು ನಮ್ಮೂರು. ನಂಗೆ ಆ ಪ್ರದೇಶದ ಇಂಚಿಂಚೂ ಗೊತ್ತೆಂಬ ಹೆಗ್ಗಳಿಕೆಯಿದೆ. ಅಲ್ಲಿ ಏರ್ಪಾಟಾಗಿದ್ದು ರಸಪ್ರಶ್ನೆ ಸ್ಪರ್ಧೆ! ಪ್ರಪಂಚದ ಮೂಲೆ ಮೂಲೆಯಿಂದ ವಿವಿಧ ಹಂತಗಳಲ್ಲಿ ವಿಜಯಿಗಳಾಗಿ ಇಲ್ಲಿ ಆಗಮಿಸಿದ್ದಾರೆ ಸ್ಪರ್ಧಿಗಳು. ಆದರೆ ಅಚ್ಚರಿಯೆಂದರೆ ಹಾಗೆ ಬಂದವರೆಲ್ಲರ ಕೈನಲ್ಲೂ ಮಾರುದ್ದದ್ದ ಹಗ್ಗ! ಬುಡ ಸ್ಪರ್ಧಿಗಳ ಕೈನಲ್ಲಾದರೆ, ತುದಿ ಎಮ್ಮೆ, ಕೋಣಗಳ ಕತ್ತಿನಲ್ಲಿ. ಅವುಗಳೆಲ್ಲವುಗಳ ಕೋಡು ಮಾತ್ರ ಒಂದೇ ಥರ! ದೊಡ್ಡದು..ಅವು ಯಾಕೋ ಗೊತ್ತಿಲ್ಲ.ಸ್ಪರ್ಧೆ ಶುರುವಾಗೇ ಬಿಟ್ಟಿತು. ಪ್ರಶ್ನೆ ಕೇಳುತ್ತಿದ್ದವ ಉದ್ದನೆಯ ಕಿರೀಟ, ನೀಲಿ ನಿಲುವಂಗಿ ಧರಿಸಿದ್ದ. ಅವ ನಮ್ಮೂರಿನವನಂತೂ ಅಲ್ಲ. ಅಂತಹ ಮಳೆ ಹೊಯ್ಯುತ್ತಿದ್ದರೂ ಯಾರ ಮೈಯೂ ನೆನೆಯದಂತೆ ವ್ಯವಸ್ಥೆ ಮಾಡಿದ್ದು ಅವನೇ. ಹಾಗಂತ ಮೇಗಡೆ ಯಾವ ಸೂರಿನ ಸೃಷ್ಟಿಯೂ ಆಗಿಲ್ಲ. ಆದರೂ ಯಾರಿಗೂ ಈ ವ್ಯವಸ್ಥೆ ವಿಶೇಷವಿನಿಸುತ್ತಿಲ್ಲ. ಉಪಸ್ಥಿತರಿದ್ದ ನೂರೆಂಟು ಸ್ಪರ್ಧಿಗಳು, ಜೊತೆಗೆ ಅವರು ತಂದಿದ್ದ ಕೋಣ, ಎಮ್ಮೆಗಳು ಅಲ್ಲದೇ ನಮ್ಮೂರಿನ ಬಹುತೇಕ ಎಲ್ಲಾ ಹಿರಿ ಕಿರಿ ತಲೆಗಳೂ ಕಾತರರಾಗಿ ಸುತ್ತ ನೆರೆದಿದ್ದಾರೆ. ಮೂರು-ನಾಲ್ಕು ಹಂತವನ್ನು ದಾಟಿ ಸ್ಪರ್ಧೆ ಮುಂದುವರೆಯುತ್ತಿತ್ತು. ಸುಮ್ಮನೇ ನಿಂತಿದ್ದ ಕೋಣವೊಂದು ಚಡಪಡಿಸಿತು. ಇದ್ದಕ್ಕಿದ್ದಂತೆ ಎಲ್ಲಾ ಎಮ್ಮೆ, ಕೋಣಗಳಿಗೂ ಇದು ಸಾಂಕ್ರಾಮಿಕವಾಯಿತು. ಇದ್ದಕ್ಕಿಂದಂತೆ ಎಲ್ಲವೂ ಮಾಲೀಕರ ಕೈನಿಂದ ತಪ್ಪಿಸಿಕೊಂಡು ಯದ್ವಾ ತದ್ವಾ ಓಡತೊಡಗಿದವು. ಹದಿನೆಂಟೋ ಇಪ್ಪತ್ತೋ ಜನರ ಮೈಮೇಲೆ ಎರಗಿದ ಅವುಗಳು ಕೆಂಬಣ್ಣ ಚೆಲ್ಲಿದವು. ಸುತ್ತ ನಿಂತವರಿಗೆಲ್ಲಾ ಒಂದು ಕ್ಷಣದ ಗಾಬರಿಗೆ ಮಾತ್ರ ಅವಕಾಶವಿದ್ದುದು. ಪರಿಸ್ಥಿತಿಯ ಅರಿವು ಮುಟ್ಟಿದ ಅವರುಗಳೆಲ್ಲಾ ಅಂಡಿಗೆ ಕಾಲು ಹಚ್ಚಿ ಕೋಣ, ಎಮ್ಮೆಗಳಿಗೆ ಸೆಡ್ಡು ಹೊಡೆಯುವರಂತೆ ಓಡ ಹತ್ತಿದರು. ಸಿಕ್ಕ ಸಿಕ್ಕಲ್ಲಿ ಅವಿತು ಕೂತರು. ಅಂತಹ ಸಂದರ್ಭದಲ್ಲೂ ನಾನು ಗಮನಿಸಿದ್ದೇನೆಂದರೆ ಎತ್ತು, ಕೋಣಗಳಿಗೆ ನಿರ್ದೇಶಿಸುತ್ತಿದವ ಕಿರೀಟ, ನೀಲಿ ನಿಲುವಂಗಿ ತೊಟ್ಟವ. ಆದರೆ ಆ ಕುರಿತು ನಿಂತು ಯೋಚಿಸಲು ಸಮಯವನ್ನು ವೆಚ್ಚ ಮಾಡುವುದು ಮೂರ್ಖತನವೆಂದೆನಿಸಿ ಓಟ ಕಿತ್ತಿದ್ದೆ.
ಒಬ್ಬೊಬ್ಬರದೇ ಸ್ವರ ಭೂಮಿಯ ಸಮತಟ್ಟಿನಿಂದ ಉಪಕ್ರಮಿಸಿ, ಮರಗಿಡಗಳನ್ನು ದಾಟಿ, ಮೋಡಗಳನ್ನು ಹಾದು ಅನತಿ ದೂರದಲ್ಲಿ ಪರಿಸಮಾಪ್ತಿಯಾಗುತ್ತಿತ್ತು! ನಾನು ನಿಶ್ಚಯಿಸಿಕೊಂಡಂತೆ, ನನಗೆ ಮೊದಲೇ ತಿಳಿದ್ದಿದ್ದ, ಕೋಣ, ಎಮ್ಮೆಗಳ್ಯಾವುದೂ ಬರಲಾಗದ ಎತ್ತರದ ಧರೆಯ ಇಕ್ಕಟ್ಟಿನ ಸ್ಥಳದಲ್ಲಿ ನಾಜೂಕಾಗಿ ನಿಂತಿದ್ದೆ. ಅಲ್ಲಿಗೆ ಮತ್ತೊಬ್ಬ ಮನುಷ್ಯನ ಆಗಮನವೂ ಅಪಾಯಕಾರಿಯಾಗಿತ್ತು. ನಿಂತಿದ್ದ ನೆಲವೇ ಕುಸಿಯುವ ಭಯವಿತ್ತು. ಸಮಯ ಸರಿದಂತೆ ಆಕಾಶದೆತ್ತರದ ಕೂಗುಗಳು ಕಡಿಮೆಯಾದವು. ಅಲ್ಲಲ್ಲಿ ಕೊನೆಯ ನರಳಿಕೆಗಳು ಮಾತ್ರ ಕಿವಿ ಮುಟ್ಟುತ್ತಿದ್ದವು. ನಿಧಾನವಾಗಿ ಅವು ಕೂಡ ನಿಂತು ಹೋದವು.
ನಾನು ಭದ್ರವೆಂಬ ಭಾವ ನನಗಿತ್ತು. ಅಷ್ಟರಲ್ಲಿ ಕಾಣಿಸಿಕೊಂಡವನು ಅದೇ ಕಿರೀಟ, ನೀಲಿ ನಿಲುವಂಗಿ ತೊಟ್ಟವನು. ಅರೆ! ಅವನಿಗೆ ಕಿರೀಟವಿದ್ದಲ್ಲೀಗ ಕೋಡು ಕಾಣಿಸುತ್ತಿದೆ!! ಖಂಡಿತವಾಗಿ ಆತ ಬರುತ್ತಿರುವುದು ನನ್ನನ್ನೇ ಇರಿಯಲು ಎಂದು ಥರಗುಟ್ಟಿದೆ. ನಿಂತ ಜಾಗದಿಂದ ಒಂದೇ ಉಸುರಿಗೆ ಬದುಕಿದರೆ ಬದುಕಲಿ ಎಂದುಕೊಂಡು ಕಣ್ಮುಚ್ಚಿ ಅಲ್ಲಿಂದ ಹಾರಿದವನು ಹೋಗಿ ಬಿದ್ದಿದ್ದು ಕೊಟ್ಟಿಗೆಗೆ! ಆದರೆ ಅಲ್ಲಿ ಎಮ್ಮೆ ಕೋಣಗಳಿರಲಿಲ್ಲ. ಬಿಳಿ ಬಣ್ಣದಲ್ಲಿ ಮಿಂದೆದ್ದು ಬಂದಂತಿದ್ದ ಸಾವಿರಾರು ಹಸುಗಳು!! ಅವುಗಳೆಲ್ಲದರ ಬಣ್ಣವೂ ಬಿಳಿಯೇ!!! ಬಿದ್ದಲ್ಲೇ ಮಲಗಿದೆ. ಅಲ್ಲೇ ನಿದ್ದೆ ಹತ್ತಿತು.
ಮರುದಿನ ಶಾಲೆಗೆ ಹೊರಟಿದ್ದೆ. ಇವತ್ತು ಮಳೆಯಿರಲಿಲ್ಲ, ಹಿಮ ಸುರಿಯುತ್ತಿತ್ತು. ದಾರಿಯಲ್ಲೊಂದು ಭೀಮಾಕಾರದ ಲಾರಿ, ಎದುರಿಗೆ ನವ ಜೋಡಿಯಿರುವ ಕಾರನ್ನು ಅಟ್ಟಿಸಿ ನಡೆದಂತಿತ್ತು. ಒಂದರೆಕ್ಷಣ ತಬ್ಬಿಬ್ಬಾದೆ. ಆತ ಅವನೇ? ಹೌದು. ಹೌದು ಅದು ಆತನೇ! ಲಾರಿಯನ್ನು ಓಡಿಸುತ್ತಿದ್ದವ ಕಿರೀಟ, ನೀಲಿ ನಿಲುವಂಗಿ ತೊಟ್ಟಿದ್ದ!! ತಕ್ಷಣ ಕಾರಿನಲ್ಲಿದ್ದವರಿಗೆ ಕೇಳಿಸಲಿ ಎಂದುಕೊಂಡು ಹೋ ಎಂದು ಅರಚಿದೆ. ಅಮ್ಮ ಬಂದು ಶಾಲೆಗೆ ಹೊತ್ತಾಯಿತು, ಹೋಗಲ್ವಾ? ಎಂದು ಗದರಿದಳು !!!
(ಕನಸುಗಳಿಗೆ ಬುಡವಿಲ್ಲ, ತುದಿಯಿಲ್ಲ, ಅರ್ಥ ಸಂಭಂಧವಿಲ್ಲ ಅಥವಾ ಎಲ್ಲವೂ ಇವೆ. ಬಿದ್ದ ಕನಸುಗಳಲ್ಲಿ ಬಹಳಷ್ಟು ಮರೆತು ಹೋಗುವುದೂ ನಿಜ. ಹೀಗೆ ಇತ್ತೀಚೆಗೆ ನನಗೆ ಬಿದ್ದ ಕನಸನ್ನು ಯಥಾವತ್ತಾಗಿ ಬ್ಲಾಗಿಗೆ ತುರುಕುತ್ತಿದ್ದೇನೆ, ಹಾಗೇ ಓದಿಕೊಳ್ಳಿ) ಲೇಖನದ ಕಟ್ಟ ಕೊನೆಯ ಸಾಲನ್ನು ಹೊರತುಪಡಿಸಿ ಉಳಿದವೆಲ್ಲಾ ಸತ್ಯ(?)