Archive for the ‘ಪ್ರಬಂಧ’ Category

ಒಂದಿಷ್ಟು ಚಿತ್ರಿಕೆಗಳು

ಕಂಬನಿ ಕಾಣದಿರಲೆಂದು ಮಳೆಯಲ್ಲಿ ಅಳುತ್ತಿದ್ದವ ಪ್ರತಿ ಹನಿಯಲ್ಲೂ ಅವಳನ್ನೇ ಹುಡುಕುತ್ತಿದ್ದ. ಅವಳು ಕಾಣಲೇ ಇಲ್ಲ. ದಿಗಿಲಾಗಿ ತಲೆಯೆತ್ತಿದ. ಆಕಾಶವಿರಲಿಲ್ಲ ಅಲ್ಲಿ. ಆಕೆಯ ಕಣ್ಣುಗಳಿದ್ದವು!

ಹೀಗೆ ಒಂದು ಬೆಳದಿಂಗಳ ರಾತ್ರಿ ಮಗುವಿಗೆ ತುತ್ತು ಉಣಿಸಲು ತಾಯಿ ಹರ ಸಾಹಸ ಪಡುತ್ತಿದ್ದಳು. ನೀ ತಿನ್ನದಿದ್ದರೆ
 ಚಂದಿರಗೇ ಇವೆಲ್ಲಾ ಎಂದು ಸಣ್ಣಗೆ ಗದರುತ್ತಿದ್ದಳು. ಅವತ್ತು ಚಂದಿರನೇ ಬಂದು ಉಂಡು ಹೋದ ಮತ್ತು ಅವತ್ತಿನಿಂದ ಅವ ಅನಾಥನಾದ!

ಬಂದೂಕುಗಳನ್ನು ನೆಟ್ಟು ಗುಂಡಿನ ಮಳೆಗಾಗಿ ಕಾತರಿಸಿದ್ದೆ. ಬರಗಾಲ ಬಂದಿತು. ಬಂದೂಕುಗಳೆಲ್ಲಾ ಸತ್ತು ಹೋದವು. ಮಳೆ ಬಂದಿತು. ಆದರೆ ಗುಂಡುಗಳದ್ದಲ್ಲ!

ಕಪ್ಪು ಹೊಲವ ತಬ್ಬಿದ ಸೂರ್ಯಕಾಂತಿಯ ಮುಖದ ಮೇಲೆ ಮುಗಿಲಲ್ಲಿ ಮೂಡಿದ ಕಾಮನಬಿಲ್ಲು ಸತ್ತು ತೇಲುತ್ತಿತ್ತು!

(ಕ್ಯಾನ್‌ವಾಸ್‌ನಲ್ಲಿ ಕೆತ್ತುವ ಪೇಂಟಿಂಗ್‌ನಂತ ಸಾಲುಗಳೆಂದರೆ ಅದೇನೋ ಆಕರ್ಷಣೆ. ಅದಕ್ಕೇ ಅವನ್ನು ಚಿತ್ರಿಕೆಗಳು ಅಂತಲೇ ಕರೆಯಬೇಕೆನಿಸಿತು. ಇಂತಹ ಸಾಲುಗಳು ತಾವಾಗೇ ಹುಟ್ಟಿಕೊಳ್ಳುತ್ತವೆ. ನಂತರ ವಲಯವೊಂದನ್ನು ನಿರ್ಮಿಸುತ್ತವೆ.ಮತ್ತೆ ಮತ್ತೆ ಓದಿದಾಗ ಹೊಸ ಅರ್ಥಗಳನ್ನು ನೇಯುತ್ತವೆ. ಅಂತೆಯೇ ಕೆಲವು ಸಾಲುಗಳು ಹುಟ್ಟಿಕೊಂಡಿವೆ. )

ಮುಂಗಾರಿನಾಭಿಷೇಕಕೆ ಮಿದುವಾಯಿತು ನೆಲವು…

ಮಳೆ ಬರೇ ಮಳೆಯಲ್ಲ! ಅದೊಂದು ಸುಮಧುರ ಕಾವ್ಯ, ದಿಗಂತದಾಚೆಗೆ ದೊರೆಯಬಹುದಾದ ಅನುಭೂತಿ, ಸೃಷ್ಟಿಯ ಸುಂದರ ದೃಶ್ಯಾವಳಿಗಳ ಮುಖವಾಣಿ, ಬದುಕು ಮತ್ತದರ ಬವಣೆಗಳನ್ನು ಮರೆಯಿಸುವ ತಾಕತ್ತುಳ್ಳ ಜಾದೂಗಾರ…ಮತ್ತಿನ್ನೇನೋ… 
ಅದು ಭಾವನೆಗಳ ಕೇಂದ್ರವೂ ಹೌದು ಭಕುತಿಯದ್ದೂ ಸರಿ.  ಮನುಷ್ಯ ಮತ್ತು ಮಳೆಯ ನಡುವಿನ ನಂಟು ಕೇವಲ ಕನಸು, ಕನವರಿಕೆ, ನೆನಪುಗಳಿಗಷ್ಟೇ ಸಂಬಂಧಿಸಿದ್ದಲ್ಲ. ಅದು ಜೀವಂತಿಕೆಯ, ಉಮೇದಿನ ಚಿಲುಮೆ. ಭೂಮಿಯ ಕ್ಯಾನ್‌ವಾಸ್ ಮೇಲೆ ಮುಗಿಲ ಕುಂಚ ಚಿಮುಕಿಸುವ ಬಣ್ಣದ ಗೊಂಚಲು. 
ವರ್ಷ ಋತುವಿನ ಮೊದಲ ಮೋಡ ಆಗಸದಲ್ಲಿ ಇಣಿಕಿದ್ದನ್ನು ಕಂಡು ಖುಷಿ ಪಡದ ಮಂದಿಯಿದ್ದಾರೆಯೇ? ಮಂದಿಯ ಮಾತು ಬಿಡಿ. ಮೊದಲ ಮಳೆಯ ಮುಂಚಿನ ಹನಿಗೆ ಚಿಪ್ಪಿನೊಳಗಣ ಮೆದು ಜೀವಿಯೂ ಉಸಿರು ಬಿಗಿ ಹಿಡಿದು ಬಾಯಿ ಬಿಡುತ್ತಂತೆ! ಉಳುವ ಯೋಗಿ ಮತ್ತವನ ಹೊಲವೂ ಬಾಯ್ಬಿಟ್ಟು ನಿಂತು ಕಾಯುವವರ ಸಾಲಿಗೆ ಸೇರಿಕೊಳ್ಳುತ್ತದೆ. ಮಳೆ, ಮತ್ತದು ಹಿಡಿಯುವ ಮಗುರೂಪಿ ರಚ್ಚೆ ತುಸು ಬೇಗನೇ ಕಿರಿ ಕಿರಿ ಹುಟ್ಟಿಸುತ್ತದಾದರೂ ಅದು ಉಳಿದೆರಡು ಕಾಲಗಳ ಬೇಸರಕ್ಕೆ ಸಮವಲ್ಲ.     
ಬೇಸಿಗೆಯ ಬಿಸಿಲಿನಲ್ಲಿ ಕಾದು, ಬಿರುಕಾಗಿ ನಿಂತ ನೆಲದ ಮುಕ್ತಿಗೆ ವರುಣನ ಆಗಮನವಾಗಲೇ ಬೇಕು. ಮೊದಲ ಮಳೆಗೆ ಮಿದುವಾಗುವ ನೆಲವು ಚಿಮ್ಮಿಸುವ ಘಮ್ಮನೆ ವಾಸನೆಯೂ ಬಲು ಹಿತ. ಅಂದ ಹಾಗೆ ಮಳೆಯ  ವೈಖರಿ ನಿಖರವೇನಲ್ಲ. ಮಳೆಯೆಂಬುದು ಒಂದೆಡೆ ತಲೆದೂಗಿಸುವ ಭಾವಗೀತೆ, ಮತ್ತೊಂದೆಡೆ ಮೈ ಮರೆಯಿಸುವ ಶಾಸ್ತ್ರೀಯ, ಇನ್ನೊಂದೆಡೆ ಅಬ್ಬರಿಸುವ, ಹುಚ್ಚೆಬ್ಬಿಸುವ, ಕುಣಿಸುವ ವೆಸ್ಟರ್ನ್ ಕೂಡ!
ಬಯಲು ಸೀಮೆಯ ಮಳೆ ಪ್ರಕೃತಿಯ ಪೊರೆಯುವ ಉದ್ದೇಶವಿರುವ ತುಂತುರಾಗಬಹುದಷ್ಟೇ. ಆದರೆ ಮಲೆನಾಡಿನ ಮಳೆಯ ಆರ್ಭಟ ಬಲು ಜೋರು.
ತೀರ್ಥಳ್ಳಿ ಗೌಡ, ಭಟ್ಟರ ಅಡಿಕೆ ತೋಟಗಳ ಬೇಲಿ ತಡಿಕೆ
ದಾಟಿ ಬುಡದಡಿಯ ಮೌನದ ಮಡಿಕೆ
ಗಳ ಮಡಿಗೊಳಿಸಿ ಶಬ್ದದಿಂದ
ಕಬ್ಬು ಭತ್ತವ ಥಳಿಸಿ,
ಬೆಟ್ಟಗಳನಳಿಸಿ,
ಸೋಂಭೇರಿ ಬಿಸಿಲ ಹೊಡೆದಟ್ಟಿ
ಬಾನಗಲ ಬಿಡಾರಗಳ ಕಟ್ಟಿ…
ಇದು ನಿಸಾರರು ಕಂಡ ಮಲೆನಾಡಿನ ಸಂಜೆ ಮಳೆ. ಭೋರಿಡುವ ಗಾಳಿ, ಗುಡುಗಿ ನಡುಗಿಸುವ ಗುಡುಗು, ಬಾನು-ಭೂಮಿಯನ್ನು ಒಂದಾಗಿಸುವ ಕೋಲ್ಮಿಂಚು, ಛಳ್ಳನೆ ಬೆಳಗುವ ಸಿಡಿಲು, ರೇಜಿಗೆ ಹುಟ್ಟಿಸುವ ಕಚ-ಪಿಚ ಕೆಸರು, ವಾರಕ್ಕೊಮ್ಮೆ ಇಣುಕಿದರೂ ಪ್ರಖರತೆ ಮರೆತ ಸೂರ್ಯ, ಮಳೆಗಾಲ ಬಂದೊಂಡನೆ ವರ್ಷದ ರಜೆ ಹಾಕಿ ಹೊರಡುವ ವಿದ್ಯುತ್… ಇವೆಲ್ಲಾ ಮಳೆಗಾಲದ ಮಲೆನಾಡಿನ ನಿತ್ಯ ಸ್ಥಿಥಿಗಥಿಗಳು. ಅಂತೆಯೇ ಮಳೆಯಿಂದ ರಸ್ತೆಯ ಇಕ್ಕೆಲಗಳ ಕಾಲುವೆಗಳಲ್ಲಿ ತುಂಬಿ ಹರಿಯುವ, ಕೆಂಪು ವರ್ಣದ ನೀರೆಬ್ಬಿಸುವುದು ಜುಳು ಜುಳು ನಾದವನ್ನಲ್ಲ, ಅಬ್ಬರವನ್ನ! ಆದರೆ ಈ ಎಲ್ಲಾ ಸಣ್ಣ ಪುಟ್ಟ ಕಷ್ಟಗಳು ಮಧುರಾತಿ ಮಧುರ ಸಂವೇದನೆಗೆ ಸಹಕಾರಿಗಳು. ಏತನ್ಮಧ್ಯೆ ಮಳೆಯೊಂದಿಗೇ ಪುನಃ ಚಾಲೂ ಆಗುವ ನಾಡೆಂಚಿನ ಶಾಲೆಗಳಿಗೆ ಪುಟ್ಟ ಬಣ್ಣದ ಛತ್ರಿ, ರೇನ್ ಕೋಟ್‌ನೊಡನೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕುವ ಪುಟಾಣಿಗಳು, ಕಂಬಳಿ ಹೊದ್ದು ಹಸಿರ ಬೆಟ್ಟದಲ್ಲಿ ದನ ಮೇಯಿಸುವ ಬಗೆ, ಸಂಜೆಯಾದೊಡನೆ ಗದ್ದಲವೆಬ್ಬಿಸುವ ಮಳೆ ಹುಳುಗಳ ವಾದ್ಯವೃಂದ! ಕಲ್ಪನೆಯೇ ನೆನಪುಗಳನ್ನು ಕೆದಕುವ ಕೆಲಸಕ್ಕೆ ಕೈ ಹಚ್ಚುತ್ತದಲ್ಲವಾ? ಅದೇ ಮಳೆಯ, ಅದರಲ್ಲೂ ಮಲೆನಾಡ ಮಳೆಯ ಕರಾಮತ್ತು. 
    
ಛೇ! ಎನ್ನಿಸುವ ಬೇಸರದ ನಡುವೆ, ಹೊರಗೆ ಜಿಟಿ ಜಿಟಿ ಮಳೆ ಹೊಯ್ಯುತ್ತಿರುವಾಗ, ಅಮ್ಮ ಮಾಡಿಕೊಟ್ಟ ಬೆಚ್ಚಗಿನ ಹಬೆಯಾಡುವ ಕಾಫಿ ಸೇವನೆಯ ಅದ್ಭುತ ಅನುಭವ ಮಳೆಗಾಲದಲ್ಲಷ್ಟೇ ಸಾಧ್ಯ ತಾನೇ? ಹಳೆಯ ನೋಟ್ ಬುಕ್ಕಿನ ಒಂದೊಂದೇ ಪುಟವನ್ನು ಕತ್ತರಿಸಿ, ಒಂದು ಕಡೆ ಊನವಾದ ದೋಣಿ ಮಾಡಿ ಅದರೊಳಗೊಂದು ಚಿಕ್ಕ ಕಲ್ಲಿಟ್ಟು ಹರಿಯುವ ನೀರಿನಲ್ಲಿ ತೇಲಿಬಿಡುವ ಆಸೆಯೂ ಮಳೆಯೊಂದಿಗೆ ಮತ್ತೆ ಕುಡಿಯೊಡೆಯುತ್ತದೆ. 
ಸುರಿಯುವುದರೊಂದಿಗೆ ಮನಸುಗಳನ್ನೂ ಒದ್ದೆ ಮಾಡುವ ಮಳೆಯೆಂಬ ಲಗಾಟಿಕೋರನೆಬ್ಬಿಸುವ ದಾಂಧಲೆಗೂ ಲೆಕ್ಕವಿಲ್ಲವೆನ್ನಿ! ಆದುದರಿಂದಲೇ ಮಳೆ ಕೆಲವೊಮ್ಮೆ ಯಾರಿಗೂ ಬೇಡದ, ಎಲ್ಲರೂ ತೆಗಳುವ ಬಿಕನಾಶಿಯಾಗಿಬಿಡುತ್ತದೆ. 
ಕಂಪೆಬ್ಬಿಸುವ ವರ್ಷಧಾರೆಗೊಂದು ಚರಣ ಹಾಡುತ್ತಾ, ಮೈ ಮನಸುಗಳನ್ನು ಆರ್ದ್ರಗೊಳಿಸುವ ಮಳೆ ಸುರಿವ ರೀತಿಗೆ ಅದರ ಬೆರಗಿಗೆ ಬಾಗುತ್ತಾ, ಸೃಷ್ಟಿಯ ಸುಂದರ ರೂಪಕಗಳ ಅಭಿವ್ಯಕ್ತಿಯಲ್ಲಿ ಚಿಣ್ಣಾಟವಾಡುವ ಮಗುವಾಗುತ್ತಾ, ಹರಿವ ಕೆಂಪು ಕೋಡಿಯನ್ನು ಸುಮ್ಮನೇ ನೋಡುತ್ತಾ ಹಾಗೇ ಒಮ್ಮೆ ಒದ್ದೆಯಾಗಿಬಿಡೋಣ ಬನ್ನಿ.

(ಮೊನ್ನೆ ಅಧಿಕೃತವೆಂಬಂತೆ ಮೈಸೂರಲ್ಲಿ ಮಳೆಗಾಲ ಶುರುವಾದ ಸಂದರ್ಭದಲ್ಲಿ ಒಂದಷ್ಟು ಖಾಯಂ ಕಾಡುವ ಸಂಗತಿಗಳಿಗೆ ಜೀವ ಬಂತು. ಮಲೆನಾಡ ನಮ್ಮನೆ ಕರೆಯಿತು! ಈ ನಡುವೆ ದಾಖಲಾದ ಬರಹವಿದು)

ಮಾತೆಯೆಂದೊಡೆ ಮಮತೆಯಿರಲಿ

ಅಮ್ಮಾ ಎಂದರೆ ಏನೋ ಹರುಷವು… ನಮ್ಮ ಬಾಳಿಗೆ ನೀನೇ ದೈವವು… ಅಮ್ಮನ ಬೆಚ್ಚನೆ ಮಡಿಲಿನ ನೆನಪು ಈಗಾಗಲೇ ಆಗಿರಬೇಕಲ್ವಾ? ಬಾಲ್ಯದ ಆರ್ದೃ ನೆನಪುಗಳ ಬುಟ್ಟಿ ಬಿಚ್ಚಿ ನೋಡಿ. ಅಮ್ಮನಿಲ್ಲದೇ ಕುಡಿಯೊಡೆದ ಕನಸುಗಳೊಂದೂ ಸಿಗದು. ಅಮ್ಮನ ನೆರವಿಲ್ಲದೇ ಸಾಧಿಸಿದ ಕೆಲಸಗಳೂ ವಿರಳ.
        
ಅಪ್ಪನ ಪ್ರವಾಹದಂತ ಕೋಪಕ್ಕೆ ತುತ್ತಾಗಿ ಅಳುಮೋರೆ ಮಾಡಿಕೊಂಡು ಮೂಲೆಗೆ ಮೊರೆ ಹೊಕ್ಕಾಗ ರಮಿಸಿದ, ಕಷ್ಟದ ಪರೀಕ್ಷೆ ಎದುರಿಸಿ ಬಂದು ಫೇಲಾಗುವ ಭೀತಿಯಲ್ಲಿದ್ದಾಗ ಧೈರ್ಯ ತುಂಬಿದ, ಮೊದಲ ಸಲ ಬೀಡಿ ಸೇದಿ ಸಿಕ್ಕಿ ಬಿದ್ದಾಗ ಬಾಸುಂಡೆ ಬರುವಂತೆ ಬಾರಿಸಿದರೂ ಅಪ್ಪನ ಬಳಿ ಹೇಳದೇ ತಿಳಿ ಹೇಳಿದ, ಸೈಕಲ್ ಕಲಿಯಲು ಹೋಗಿ ಬಿದ್ದು ಕಾಲಿಗೆ ಭಯಂಕರ ಗಾಯವಾದಾಗ ಮುಲಾಮು ತಿಕ್ಕುತ್ತಾ ಸಮಾಧಾನಿಸಿದ ಎಲ್ಲರ ಪ್ರೀತಿಯ ಅಮ್ಮ ಮನಸಿನಿಂದ ಮರೆಯಾಗುವುದು ಸಾಧ್ಯವೇ? ತಾಯಿಯೆಂಬ ಧೀಃ ಶಕ್ತಿಯ ಮಹತ್ವವೇ ಅಂಥಹುದು.

ಅಂತಹ ಅಮ್ಮನನ್ನು ಮತ್ತೆ ನೆನೆಸಿಕೊಳ್ಳುವ ದಿನ ಬಂದಿದೆ. ಹೌದು. ಮೇ ೧೧ ವಿಶ್ವ ಅಮ್ಮಂದಿರ ದಿನ. ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವನ್ನಾಗಿ ಆಚರಿಸುವುದು ಲೋಕರೂಢಿ. ಈ ಅಭ್ಯಾಸಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಗ್ರೀಕರು. ಗ್ರೀಕ್ ದೇವತೆಯಾದ ರೆಯಾಳನ್ನು ಸಮಸ್ತ ಜಗತ್ತಿನ ಮಾತೆಯೆಂದು ನಂಬಲಾಗಿತ್ತು. ನಂತರ ಇಂಗ್ಲೆಂಡ್‌ನಲ್ಲಿ ಕ್ರಿ.ಶ ೧೬೦೦ ರಿಂದ ಪ್ರತೀ ವರ್ಷದ ಒಂದು ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸುವ ಪದ್ಧತಿಗೆ ನಾಂದಿ ಹಾಡಲಾಯಿತು. ದೂರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಆ ದಿನದಂದು ತಾಯಿಯನ್ನು ನೋಡಲು ವಿಶೇಷ ಉಡುಗೊರೆ, ಸಿಹಿತಿಂಡಿಗಳೊಡನೆ ಬರುತ್ತಿದ್ದರೆಂಬುದು ಚರಿತ್ರೆ.

ಆದರೂ ಪಶ್ಚಿಮ ವರ್ಜೀನಿಯಾದ ಗ್ರಾಫ್ಟನ್ ಊರಿನವಳಾದ ಆಯ್ಯನಾ ಜರ್ವೀಸ್ ಎಂಬಾಕೆ ಅಮ್ಮಂದಿರ ದಿನಕ್ಕೆ ಹೊಸ ಭಾಷ್ಯ ಬರೆಯುವವರೆಗೂ ಅದು ನಿಯಮಿತವಾಗಿ ಆಚರಿಸಲ್ಪಟ್ಟಿರಲೇ ಇಲ್ಲ. ಆಕೆ  ೧೯೦೮ರಲ್ಲಿ ಅಮ್ಮನ ಸವಿ ನೆನಪಿಗಾಗಿ ಚರ್ಚ್ ಒಂದನ್ನು ನಿರ್ಮಿಸಿದಳು. ಆನಂತರ ಫಿಲಡೆಲ್ಫಿಯಾಗೆ ತೆರಳಿದ ಜರ್ವೀಸ್ ಅಲ್ಲಿನ ಪ್ರಮುಖರಿಗೆ ಅಮ್ಮಂದಿರ ದಿನವನ್ನು ಆಚರಿಸಿ ಅದನ್ನು ರಾಷ್ಟ್ರೀಯ ದಿನವೆಂದು ಘೋಷಿಸಲು ವಿನಂತಿಸಿಕೊಂಡಳು. ಈ ವಿನಂತಿಯ ಕರೆಗೆ ಓಗೊಟ್ಟ ಅಧ್ಯಕ್ಷ ವುಡ್ರೋ ವಿಲ್ಷನ್ ಪ್ರತೀ ವರ್ಷದ ಮೇ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವೆಂದು ಘೋಷಿಸಿದರು.

ನಿಧಾನವಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಅಮ್ಮಂದಿರ ದಿನ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದವು. ಹೀಗೆ ಚಾಲ್ತಿಗೆ ಬಂದ ಅಮ್ಮಂದಿರ ದಿನಾಚರಣೆ ಅನೇಕ ರಾಷ್ಟ್ರಗಳಲ್ಲಿ ಅದ್ದೂರಿಯಾಗಿಯೇ ಆಚರಿಸಲ್ಪಡುತ್ತದೆ. ಆದರೆ ಅಮ್ಮಂದಿರ ದಿನದ ಆಚರಣೆಯಲ್ಲೂ ಭಾರತ ಬಡರಾಷ್ಟ್ರವೆಂದೇ ಗುರುತಿಸಿಕೊಳ್ಳುತ್ತಿರುವುದು ವಿಷಾದನೀಯ. 

ತಂದೆ, ತಾಯಂದಿರ ಕೂದಲು ಬೆಳ್ಳಗಾಗುತ್ತಿದ್ದಂತೆ ಬೆಳೆದು ನಿಂತ ಮಗ ಅವರನ್ನು ಕಡೆಗಣಿಸಲು ಶುರುವಿಟ್ಟುಕೊಳ್ಳುತ್ತಾನೆ. ಹೆಂಡತಿಯೊಡನೆ ಸೇರಿಕೊಂಡು ಜನ್ಮವಿತ್ತ ತಂದೆ-ತಾಯಿಯರ ಮೇಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾನೆ. ಕಡಿಮೆ ಬೆಲೆಯ ವೃದ್ಧಾಶ್ರಮಗಳಿಗಾಗಿ ಅರಸಿ ಅವರನ್ನು ಸಾಗು ಹಾಕಲು ಪ್ರಯತ್ನಿಸುತ್ತಾರೆ. ಇಂತಹ ದೇಶದಲ್ಲಿ ತಾಯಂದಿರ ದಿನವನ್ನು ನೆನಪಿಟ್ಟುಕೊಂಡು ಆಡಂಬರದಿಂದ ಆಚರಿಸುವುದು ಹೇಗೆ ಹೇಳಿ? ಪರಿಸ್ಥಿತಿ ಬದಲಾಗಬೇಕು. ತಾಯಿಯೆಂಬ ಕಣ್ಣೆದುರಿನ ದೇವತೆಯನ್ನು ಕೊನೆಯವರೆಗೂ ಪ್ರೀತ್ಯಾದರಗಳಿಂದ ನೋಡಿಕೊಳ್ಳುವುದು ಪ್ರತೀ ಮಕ್ಕಳ ಕರ್ತವ್ಯವಾಗಬೇಕು. ಹೆಂಡತಿ ಬರುವವರೆಗಿನ ಅಕ್ಕರೆಯ ಅಮ್ಮ ಖಾಯಂ ಪ್ರೀತಿಯ ಅಮ್ಮನಾಗೇ ಇರಬೇಕು. ನಮ್ಮನ್ನು ಮಮಕಾರದಿಂದ ಪೋಷಿಸಿದ ಅಮ್ಮನಿಗೆ ವಯಸ್ಸಾದಾಗ ಕೈಲಾಗದವಳೆಂದು ಗಣಿಸದೇ ಕೊನೆಗಾಲದವರೆಗೂ ಪ್ರೀತಿಯನ್ನು ಪರತ್ ಮಾಡುತ್ತಿರಬೇಕು. ಅಕ್ಕರೆಯ ಅವ್ವ ಇಂದಿನ ಬಿಜಿ ಬದುಕಿನ ನಡುವೆ ಕಳೆದು ಹೋಗದಿರಲೆಂಬ ಆಶಯ ನಮ್ಮದಾಗಲಿ. ತಾಯಂದಿರ ದಿನಕ್ಕೆ ಮಹತ್ವ ದೊರಕುವುದು. ಆಗಲೇ… ಏನಂತೀರಾ?        

ಮಳೆ ನಿಂತು ಹೋದ ಮೇಲೆ…

ಪ್ರೀತಿ ಕಡಲೋ, ಮುಗಿಲೋ, ಮಳೆಯೋ ಮತ್ತಿನ್ನೇನೋ? ನನಗೊಂದೂ ಗೊತ್ತಿಲ್ಲ. ಆದರೆ ಈ ಪರಿಯ ಹೋಲಿಕೆ ಪ್ರೀತಿಯ ಅರ್ಥವನ್ನು ಸೀಮಿತಗೊಳಿಸಬಹ್ಮದೆಂಬ ಭಯ ನನಗೆ ಕಾಡಿದ್ದಿದೆ. ಪ್ರೀತಿಯ ಕುರಿತಾಗಿ ಪ್ಮಟಗಟ್ಟಲೇ, ಗಂಟೆಗಟ್ಟಲೇ ಭಯಂಕರವಾಗಿ ಕೊರೆಯುವವರು, ಕನವರಿಸುವವರ ಎದುರು ನಿಂತು ನಿಜಕ್ಕೂ ಪ್ರೀತಿಯೆಂದರೆ ಅಷ್ಟೇನಾ ಕೇಳಬೇಕೆನಿಸುತ್ತದೆ, ಸುಮ್ಮನಾಗುತ್ತನೆ!

ಸತ್ಯವಾಗಿ ಹೇಳುತ್ತೇನೆ, ನೀನಂದು ನನ್ನ ಮರೆತೆಯೆಂದು ತಿಳಿದ ಕ್ಷಣ ನಾನು ಭೋರ್ಗರೆವ ನದಿಯಾಗಲಿಲ್ಲ. ಜಿಟಿ ಜಿಟಿ ಸುರಿಯುವ ಮಳೆಯಾಗಲಿಲ್ಲ. ತಣ್ಣಗಿರುವ ಧರಣಿಯ ಸ್ಥಿತಿಗೆ ಹೋಲಿಸಬಹುದಿತ್ತಷ್ಟೇ. ನೀನು ಕೋಪಿಸಿಕೊಂಡರೂ ಇನ್ನು ಚಿಂತಿಲ್ಲ! ನಾನು ಹೇಳಬೇಕೆನಿಸಿದ್ದನ್ನೆಲ್ಲಾ ಹೇಳುವವನೇ… ನಿನ್ನೊಡನಿದ್ದಾಗ ನಾನು ಕೆಲವು ಕನಸುಗಳ ಕಟ್ಟಿದ್ದೆ, ಈಗಿಲ್ಲವೇ ಎಂದು ವ್ಯಂಗ್ಯವಾಡುವ ಅವಕಾಶ ನಿನಗಿಲ್ಲ. ಯಾಕೆಂದರೆ ಅಂದು ಕೆಲವಿದ್ದ ಕನಸುಗಳೀಗ ಹಲವಾಗಿವೆ!

ನಾನು ನಿನ್ನನ್ಮಡಿಗೆ, ನಡೆಗೆ, ಚೆಲುವಿಗಿಂತ ಹೆಚ್ಚಾಗಿ ಮನಸೋತದ್ದು ಆ ದಪ್ಪನೆಯ ಪುಸ್ತಕದಲ್ಲಿ ನೀನು ಜತನದಿಂದ ಎತ್ತಿಟ್ಟುಕೊಂಡು, ಮರಿ ಹಾಕುತ್ತದೆಂದು ಕಾಯ್ದಿದ್ದ ನವಿಲುಗರಿಗೆ! ಆ ಕಾಯುವಿಕೆಯಲ್ಲಿನ ಗಾಢತೆಗೆ. ಅದು ಮರಿ ಹಾಕಿತೋ ಇಲ್ಲವೋ ಕಾಣೆ, ಆದರೆ ನಿನ್ನ ಆ ಕಾಳಜಿ ನನ್ನಲ್ಲಿ ಸ್ಪಷ್ಟ ಮೊಹರೊತ್ತಿತ್ತು. ನಕ್ಷತ್ರಗಳನ್ನು ಎಣಿಸಿ, ಗುಣಿಸಿ ಸೋತ, ಆಕಾಶದ ಹರವು ಕಂಡು ಆಸೆಪಟ್ಟ, ಅಗಾಧ ಸಾಗರದ ನಡುವೆ ಕುಳಿತು ಹಾಯಿದೋಣಿಗಾಗಿ ಹಂಬಲಿಸುತ್ತಿದ್ದ ನನಗೆ ನೀನು, ಚಿಗುರುವ ಕನಸಿನ ಸನಿಹದ ಆಸರೆಯ ಮರವಾಗಿ ಕಂಡೆ ಅಷ್ಟೆ.

ಮಳೆ ಹೊಯ್ದು ಹದವಾದ ನೆಲದಲ್ಲಿ ಚಿಗುರು ಕೊನರಿ ಗಿಡವಾಯ್ತು, ಬಳ್ಳಿಯಾಯ್ತು ಮತ್ತು ಹಬ್ಬಿತು. ಆಸರೆಗೆ ಮರವಿದೆಯೆಂಬ ವಿಶ್ವಾಸ ಅದಕ್ಕಿತ್ತು. ನಿಜಕ್ಕೂ ನನಗಿವತ್ತು ಪಚ್ಚೆನಿಸುತ್ತಿದೆ. ಹಾದಿ ಸಿಕ್ಕಿದ ನಾನು ಕೊನೆಯ ಕುರಿತು ಯೋಚಿಸುವುದನ್ನು ಮರೆತು ಬಿಟ್ಟೆನಲ್ಲಾ ಎಂದು. ಹೋಗಲಿ ಬಿಡು, ನನಗಾಗ ಹತ್ತರೊಡನೆ ಹನ್ನೊಂದಾಗಬಾರದೆಂಬ ಮೊಂಡ ತನವೂ ಇತ್ತು. ಈಗಲೂ ಇದೆ. ಆದರೆ ಅದರ ತೀವ್ರತೆಗೆ ರೂಪು ರೇಖೆಗಳನ್ನೆಳೆದಿದ್ದೇನೆ. ನಿನಪಿಡು, ರೇಖೆಗಳೆಲ್ಲಾ ಚೌಕಟ್ಟಾಗಬೇಕೆಂದಿಲ್ಲ. ಚೌಕಟ್ಟು ಅಥವಾ ಮೇರೆಯೆಂಬುದು ವ್ಯಕ್ತಿಯ ಚಲನೆಯನ್ನು ನಿಯಂತ್ರಿಸಿ ಆತನ ವಿಪರಿಮೀತ ಬೆಳವಣಿಗೆಗೆ ತಡೆಯೊಡ್ಡುತ್ತದೆಂಬ ಅಚಲ ವಿಶ್ವಾಸ ನನಗೆ. ನಿಯಂತ್ರಿಸುವಿಕೆ, ಸ್ವಾತಂತ್ರ್ಯವಿಲ್ಲದ ಸ್ಥಿತಿಯ ಇನ್ನೊಂದು ರೂಪು. ಅದು ಬಂಧನ. ಬಂಧನವಿದ್ದಲ್ಲಿ ಬೆಳವಣಿಗೆ ಪೂರ್ವಾಗ್ರಹ ಪೀಡಿತ ತಾನೇ? ನೀನು ಒಪ್ಪಲೇ ಬೇಕು.

ನಾನು ಕವನ ಬರೀತಿದ್ದೆ ನೆನಪಿದೆಯಾ? ಅದೇನ್ ಬರೀತೀಯೋ ಮಾರಾಯಾ? ನಂಗಂತೂ ತಲೆಬುಡ ಅರಿಯೊಲ್ಲ ಅಂದಿದ್ದೆ ನೀನು. ನಾನು ನಕ್ಕಿದ್ದೆ! ಇವತ್ತು ಹೇಳುತ್ತೇನೆ. ನನ್ನೊಳಗಿನ ನಾನು ಹೊರಬಂದು ಮಲಗಿದರೆ ಕವನವಾಗುತ್ತಿತ್ತು. ನನ್ನೊಳಗಿನ ನಾನೇ ಸ್ಪಷ್ಟವಾಗಿಲ್ಲದಿದ್ದ ಕಾರಣ ಬರವಣಿಗೆಯೂ ಅಸ್ಪಷ್ಟವೆನಿಸುತ್ತಿತ್ತು. ಆದ್ದರಿಂದಲೇ ನನ್ನ ಬರಹಗಳು ಹಾಗೇ ಒಂಥರಾ ನಿನ್ನ ಹಾಗೆ!

ನೀನು ಬಾಲ್ಯದ ಹುಡುಗಾಟಗಳನ್ನೆಲ್ಲಾ ದಾಟಿ, ತಾರುಣ್ಯದ ಬಿಸುಪು, ಪ್ರಬುದ್ಧತೆ, ಮತ್ತೊಂದಿಷ್ಟು ಅನುಭವಗಳ ಬತ್ತಳಿಕೆ ಹೊತ್ತಿದ್ದೆ. ಹೊಸ ಹಾದಿಗಳ ಹುಡುಕಿ ಸವೆಸುವ ಪ್ರಯೋಗಶೀಲ ಮನಸ್ಸೂ ನಿಂದಾಗಿತ್ತು. ಪ್ರತಿ ಮುಂಜಾವು ಮೂಡುವ ರವಿ ನಿನ್ನಲ್ಲಿ ಹೊಸ ಕನಸುಗಳ ಅರಳಿಸುತ್ತಿದ್ದ. ಅದನ್ನು ಕಾವಲು ಕಾಯಲು ನಾನಿದ್ದೆನೆಂಬ ಧೈರ್ಯ ನಿನಗೆ ಹುಟ್ಟಲಿಲ್ಲ ಅಷ್ಟೆ. ಅಥವಾ ಇವೆಲ್ಲಕ್ಕೂ ಮಿಗಿಲಾದ ಮತ್ತಿನ್ನೇನೋ ನಿನಗೆ ಬೇಕೆನಿಸಿತು ಇಲ್ಲವೇ ಇವೆಲ್ಲಾ ಸಾಕೆನಿಸಿತು. ನಾನು ಪ್ರತಿಯಾಡುವುದಿಲ್ಲ ಗೆಳತಿ ಅದಕ್ಕೆ. ನನಗೆ ಗೊತ್ತು ಬದುಕು ಬದುಕುವವರಿಚ್ಛೆ! ಬದಲಾಯಿಸುವುದು ಕಷ್ಟ ಸಾಧ್ಯ, ಊಹುಂ ಬದಲಾಯಿಸಲು ಬಾರದು. ಮಾದರಿಯಾಗಬಹುದಷ್ಟೇ.

ಮರಕ್ಕೆ ಬಂದಳಿಕೆ ಬಂದಂಟಿದ ಸನ್ನಿವೇಶ ನನಗೆ ನೆನಪಿಲ್ಲ ಇವತ್ತು. ನಿನಗೆ ಧಾರಿಣಿಯೊಡನೆಗಿನ ಸಂಬಂಧ ಮತ್ತಷ್ಟು ಆಪ್ತಬಾಗಬೇಕೆಂದು ಅನ್ನಿಸಿರಲಿಕ್ಕೂ ಸಾಕು ಅವತ್ತು. ಕಾರಣಗಳಿಗಿಂತ ಸಾಧನೆ, ಪರಿಣಾಮ ಮುಖ್ಯವಲ್ಲವೇ? ಬಿಡು…

ಅವತ್ತು ಅಮ್ಮನೊಡನೆ ಅಮ್ಮಾ ನಂಗಿವತ್ತು ನಿನ್ನ ಮಡಿಲು ಬೇಕಿಲ್ಲ, ಒಬ್ಬನೇ ಮಲಗಿ ಕಾದು ನಿಂತ ಕನಸುಗಳಿಗೆ ಸ್ವಾಗತ ಕೋರುತ್ತೇನೆ ಎಂದಾಗಲೇ ಮೋಡ ಕಟ್ಟಿತ್ತು. ಜೋರು ಮಳೆ ಶುರುವಾಗಿದ್ದು ಅಂದುಕೊಂಡಿದ್ದಕ್ಕಿಂತ ಬೇಗ. ಗಾಳಿಯ ಅರ್ಭಟವೂ ಜೋರಿತ್ತು. ಮರ ಮುರಿದು ಬಿತ್ತು. ಅನಾಥವಾಗಲಿಲ್ಲ! ಬದಲಾಗಿ ಇನ್ನೊಂದು ಮರದ ಅರಸುವಿಕೆಗೆ ತೊಡಗಿತು. ನನಗೆ ಎಚ್ಚರವಾಯ್ತು.

ಬಹುಶಃ ಭವಿಷ್ಯದ ಕನಸನ್ನೂ ಹೇಳುವುದು ಪ್ರಸ್ತುತವೆನಿಸುತ್ತಿದೆ. ಇವನ್ನೆಲ್ಲವನ್ನೂ ನೀನು ಓದಲೇ ಬೇಕೆಂಬ ಕಟ್ಟುನಿಟ್ಟು ನಾ ಹಾಕೊಲ್ಲ. ಈ ಬರಹದ ಮೂಲಕ, ನೀನು ನನ್ನೆಲ್ಲಾ ಭಾವನೆಗಳನ್ನು ಗುಡಿಸಿ ಹಾಕಿದೆ ಎಂಬ ಆರೋಪ ಮಾಡುವ ಮನಸ್ಸೂ ನನ್ನದಲ್ಲ. ನನ್ನೊಬ್ಬಳು ಗೆಳತಿ ಹೇಳಿದ್ದಳು ಭಾವುಕತೆಯಿಂದ ಬುದ್ಧಿ ಕುಂಠಿತವಂತೆ. ನಾನಿಷ್ಟು ಹೊತ್ತು ಹೊತ್ತುಕೊಂಡಿದ್ದು ಅದನ್ನೇ. ಭಾವೋತ್ಕರ್ಷವೇ ಇಷ್ಟೆಲ್ಲಾ ಸಾಲುಗಳ ಜನುಮಕ್ಕೆ ಕಾರಣ. ನಾನು ಭಾವನಾ ಜೀವಿ ನಿಜ. ಇವತ್ತಿಗೂ ನನ್ನ ಕಂಪ್ಯೂಟರ್, ಐ ಪಾಡ್ ಗಳಲ್ಲಿ ತುಂಬಿರುವುದು ಅಪ್ಪಟ ಭಾವಗೀತೆ, ಶಾಸ್ತ್ರೀಯಗಳೇ. ಉನ್ನಿಕೃಷ್ಣನ್ ನಂಗೆ ಯಾವತ್ತೂ ಇಷ್ಟ ಅಂತ ನಿಂಗೂ ಗೊತ್ತು. ನಾನು ಆತನ ಅನಿಲ ತರಲ ಹಾಡನ್ನು ಮತ್ತೆ ಮತ್ತೆ ಕೇಳ್ತಿದ್ದಾಗ ನೀನು ಉರಿಬಿದ್ದಿದ್ದು, ಟೇಸ್ಟೇ ಇಲ್ಲ ನಿಂಗೆ ಅಂತ ಜರಿದಿದ್ದು ಎಲ್ಲಾ ನೆನಪಿದೆ ನಂಗೆ. ಆದರೂ ನಾನವತ್ತು ನೊಂದುಕೊಂಡಿರಲಿಲ್ಲ. ನಾನು ಬೇಸರಿಸಿಕೊಂಡರೆ ನೀನು ಪರಿತಾಪ ಪಡುವೆಯೆಂಬ ಗುಮನಿಯಿತ್ತು ನಂಗೆ.

ಇವತ್ತು ನಾನು ಖುಷಿಯಿಂದ ಹೇಳುವುದಿಷ್ಟೇ. ನನ್ನನ್ನು ತೊರೆದು ಹೋಗಿದ್ದಕ್ಕೆ ನಿನಗೆ ಭರಿಸಲಾರದಷ್ಟು ಥ್ಯಾಂಕ್ಸ್ ! ಅದೇ ನಗೆ ಬದುಕಿನ ಸಾಧ್ಯತೆಗಳನ್ನು, ವಿಕ್ಷಿಪ್ತತೆಗಳನ್ನು ಗಾಢವಾಗಿ ಪರಿಚಯಿಸಿದ್ದು. ನನಗೀಗ ಬಳ್ಳಿಯಾಗಿ ಬದುಕುವ ಹಂಬಲವಿಲ್ಲ. ಮರವಾಗಬೇಕು. ಲೆಕ್ಕ ತಪ್ಪಿಹೋಗುವಷ್ಟು ಬಳ್ಳಿಗಳನ್ನು ಪೊರೆಯಬೇಕು. ಬಳ್ಳಿಗಳೆಲ್ಲಾ ಬಲವಾದ ಮೇಲೊಮ್ಮೆ ಜೋರು ಮಳೆ, ಸಿಡಿಲಿಗೆ ಸಿಕ್ಕಿ ಜರ್ಜರಿತಗೊಂಡು ಬಿದ್ದು, ಭೂಮಿಯ ನಡುವೆ ಕರಗಿ ಕಳೆದು ಹೋಗೇಕು, ಅಷ್ಟೇ… ನನಗೀಗ ಮತ್ತೆ ನಕ್ಷತ್ರಗಳನ್ನು ಎಣಿಸುವಾಸೆ, ಮುಗಿಲು ಮುಟ್ಟುವಾಸೆ, ಶತಮಾನಗಟ್ಟಲೆ ದೋಣಿಗಾಗಿ ಕಾಯಬೇಕೆಂಬ ಬಯಕೆ, ಎಲ್ಲಕ್ಕಿಂತ ಹೆಚ್ಚಾಗಿ ಇವೆಲ್ಲಾ ನನ್ನಿಂದ ಮತ್ತು ನನ್ನೊಬ್ಬನಿಂದಲೇ ಸಾಧ್ಯವೆಂಬ ಅಚಲ ನಂಬಿಕೆ.

ಮತ್ತೊಮ್ಮೆ ಥ್ಯಾಂಕ್ಸ್, ಎಲ್ಲದಕ್ಕೂ…