Archive for the ‘ನೆನಪಿನ ಬೊಂತೆ’ Category

‘ಉಪ್ಪು’ ನೀರಿನ ಸರೋವರದ ‘ಸಿಹಿ’ ನೆನೆಕೆಗಳು

ವಿಸ್ತಾರ ದಿಗಂತದ ಅಂಚನ್ನು ಚುಂಬಿಸೋ ಅಗಾಧ ಜಲರಾಶಿ, ಗುಳೆ ಬರುವ ನೂರೆಂಟು ಪ್ರಬೇಧದ ಹಕ್ಕಿಗಳ ಪಕ್ಷಿಕಾಶಿ, ಇವೆಲ್ಲವುಗಳ ನಡುವೆ ದೋಣಿಯೇರಿ ಹೊರಟರೆ ಖುಶಿಯೋ ಖುಶಿ. ಏಷ್ಯಾದ ಅತಿ ದೊಡ್ಡ ಉಪ್ಪು ನೀರಿನ ಸರೋವರವೆಂಬ ಖ್ಯಾತಿ ಹೊತ್ತ ‘ಚಿಲ್ಕಾ’ ಸರೋವರದ ನಡುವಿನ ಒಂದಿಷ್ಟು ಹಸಿ ನೆನಪುಗಳು.

ಭಾರತದ ಪೂರ್ವ ಕಡಲಿನಂಚಿನ ನಾಡು ಓರಿಸ್ಸಾ. ದೇವಾಲಯಗಳ ನಗರವೆಂದೇ ಪ್ರಸಿದ್ಧವಾದ ಭುವನೇಶ್ವರ ಇಲ್ಲಿನ ರಾಜಧಾನಿ. ಇಲ್ಲಿಂದ ಸರಿ ಸುಮಾರು ನೂರು ಕಿಲೋ ಮೀಟರುಗಳ ಅಂತರಕ್ಕಿದೆ ಚಿಲ್ಕಾ ಸರೋವರ. ಇಲ್ಲಿಂದ ಪುರಿಗೆ ಒಂದು ಒಂದೂವರೆ ಗಂಟೆಯ ಪ್ರಯಾಣವಷ್ಟೆ. ಮೂವತ್ತು ಜನರಿದ್ದ ನಮ್ಮ ತಂಡ, ವಾಸ್ತವ್ಯ ಹೂಡಿದ್ದ ಪುರಿಯಿಂದ ಮುಂಜಾವಿನ ಶುರುವಿಗೇ ಹೊರಟು ನಸುಕು ಹರಿವಷ್ಟರಲ್ಲಿ ಕೋನಾರ್ಕದ ‘ಸೂರ್ಯ’ ದರ್ಶನಕ್ಕೆ ಹಾಜರಾಗಿದ್ದೆವು. ಕೋನಾರ್ಕದ ಭೇಟಿಯ ನಂತರ ಪುರಿಗೆ ವಾಪಸಾಗುವ ನಮ್ಮ ಯೋಜನೆಯನ್ನು ಬದಲಾಯಿಸಿದ್ದು ನಮ್ಮೊಡನೆ ಹರಟೆ, ಹಾಡುಗಳಲ್ಲಿ ಒಂದಾಗಿಯೂ ಅನಾಮಿಕವಾಗಿಯೇ ಉಳಿದ ನಮ್ಮ ಬಸ್‌ನ ಕ್ಲೀನರ್. ಮುಂಜಾವಿಗೇ ಎದ್ದಿದ್ದ ನಮಗೇನೋ ಪುನಃ ಪುರಿಗೆ ಹೋಗಿ ಗಡದ್ದಾಗಿ ನಿದ್ದೆ ತೆಗೆಯುವ ಕುರಿತು ವಿಪರೀತ ಆಸಕ್ತಿ ಇತ್ತು. ಆದರೆ ಚಿಲ್ಕಾದಲ್ಲಿ ಡಾಲ್ಫಿನ್‌ಗಳು ಕಾಣ ಸಿಗುತ್ತವೆ ಎಂಬ ಕ್ಲೀನರ್‌ನ ಮಾತೇ ಚಿಲ್ಕಾ ಸರೋವರದತ್ತ ನಮ್ಮ ಚಿತ್ತ ತಿರುಗಿಸಿದ್ದು. ಡಿಸ್ಕವರಿಗಳಲ್ಲಿ ಕಂಡ ಮುದ್ದಾದ ಡಾಲ್ಫಿನ್‌ಗಳ ಆಕರ್ಷಕ ಜಿಗಿತ ನಮ್ಮ ಕಣ್ಣುಗಳಲ್ಲಿ ಗಿರಗಿಟ್ಲೆಯಾಗಿತ್ತು. ಸರಿ, ನಮ್ಮ ಬಸ್ ಚಿಲ್ಕಾದತ್ತ ಮುಖ ಮಾಡಿತು.

ನಡು ಮದ್ಯಾಹ್ನದ ಹೊತ್ತಿಗೆ ನಾವು ಚಿಲ್ಕಾ ಸೇರಿದ್ದೆವು. ಎಲ್ಲರ ಹೊಟ್ಟೆಗಳೂ ಹಸಿವಿಗೆ ಚುರುಗುಟ್ಟುತ್ತಿತ್ತು. ಆ ಹೋಟೆಲ್‌ನ ಹೆಸರ ಬುಡದಲ್ಲಿ ‘ವೆಜ್ ಅಂಡ್ ನಾನ್‌ವೆಜ್’ ಎಂಬುದನ್ನು ಕಂಡದ್ದೇ ತಡ ನಮ್ಮ ವೆಜ್ ಟ್ರೂಪ್‌ನವರ ಮುಖಗಳು ಕಿರಿದಾಯ್ತು. ಆದರೂ ಚಿಲ್ಕಾದಲ್ಲಿ ಮತ್ತೆಲ್ಲೂ ಸಸ್ಯಾಹಾರಿ ಹೋಟೆಲ್‌ಗಳಿಲ್ಲವೆಂಬ ತಿಳಿವು ನಮ್ಮನ್ನು ಆ ಹೋಟೆಲ್‌ಗೇ ನುಗ್ಗಿಸಿತ್ತು. ಸಸ್ಯಾಹಾರಿಗಳಿಗೆಲ್ಲಾ ಮತ್ತೊಂದು ಕೊಠಡಿಯ ವ್ಯವಸ್ಥೆಯೂ ಆಯಿತು. ಅಂತೂ ಎಲ್ಲಾ ಮುಗಿಸಿ ಒಂದೆರಡು ಕಿಲೋ ಮೀಟರುಗಳಷ್ಟು ಒಳ ಸಾಗಿ ಸರೋವರದ ತೀರಕ್ಕೆ ಬಂದೆವು. ಮೂರು ತಾಸಿನ ವಿಹಾರಕ್ಕೆ, ಹತ್ತು ಜನರಿಗೆ ಏಳುನೂರು ರೂಪಾಯಿಗಳನ್ನು ತೆತ್ತು ಮಷಿನ್ ಬೋಟ್ ಒಂದನ್ನು ಏರಿದ್ದೂ ಆಯ್ತು.

ನೀರ ಮೇಲೂ ವಿಸ್ಮಯ ಲೋಕವೊಂದರ ಅನಾವರಣ ಸಾಧ್ಯ ಎಂಬ ಕಲ್ಪನೆ ಅವತ್ತು ನನ್ನೆದುರೇ ತೆರೆದುಕೊಳ್ಳುವ ಸಂಧಿಕಾಲವೆನಿಸಿತ್ತು. ತೀರದಲ್ಲೇ ಒಂದೆರಡು ಸುತ್ತು ಹಾಕಿದ ನಮ್ಮ ದೋಣಿ ನಡೆಸುವವ ಡಾಲ್ಫಿನ್‌ಗಳು ಇಲ್ಲೇ ಕಾಣಬಹುದು ನೋಡಿ ಎಂದ. ಅವನು ತೋರಿಸಿದೆಡೆ ಕತ್ತು ತಿರುಗಿಸುವಷ್ಟರಲ್ಲಿ ಅವು ಮಾಯವಾಗುತ್ತಿದ್ದವು. ಡಾಲ್ಫಿನ್‌ಗಳ ತುಂಟಾಟ, ಅವುಗಳ ಸರ್ಕಸ್‌ನ ಕುರಿತು ಏನೇನೋ ಕಲ್ಪಿಸಿಕೊಂಡಿದ್ದ ನಮಗೆ ನಿರಾಶೆಯಾಗಿದ್ದು ಸುಳ್ಳಲ್ಲ. ನೀರಿನಿಂದ ಮೇಲೆ ಬರಲೂ ಅವು ನಾಚುತ್ತಿದ್ದಂತೆ ಅನಿಸಿತು. ಆದರೂ ಒಂದು ಡಾಲ್ಫಿನ್ (ಅರ್ಧ ಎನ್ನುವುದೇ ಸೂಕ್ತವೇನೋ!) ನನ್ನ ಕ್ಯಾಮರಾದೊಳಗೆ ಬಂಧಿಯಾಗಿ ನನ್ನ ಹಿಗ್ಗನ್ನು ಹೆಚ್ಚಿಸಿತ್ತು. ಇಷ್ಟೊತ್ತಿಗೆ ಸೂರ್ಯ ಪಶ್ಚಿಮದ ಕಡೆ ವಾಲಿದ್ದ. ನಾವೂ ಅತ್ತಲೇ ಹೊರಟೆವು! ಒಂದು ಬದಿಗೆ ಅದ್ಯಾವುದೋ ಯಂತ್ರ ಸಿಕ್ಕಿಸಿ ಉದ್ದನೆಯ ಕೋಲಿನಿಂದ ದಿಕ್ಕು ನಿರ್ಧರಿಸುತ್ತಾ ಚಲಿಸುವ ಆ ಬೋಟ್ ನೇಸರನ ಒಡ್ಡೋಲಗಕ್ಕೇ ನಮ್ಮನ್ನು ಕರೆದೊಯ್ಯುವ ‘ತೇರಿ’ನಂತೆ ಕಂಡಿತು. ಸಾಕಷ್ಟು ವಿಸ್ತಾರವಾಗಿರುವ  ‘ಚಿಲ್ಕಾ ಸರೋವರ’, ಸಾಗರವೆನಿಸಿದ್ದು ಆಗಲೇ. ಅಲ್ಲಲ್ಲಿ ಸಿಗುವ ನಡುಗಡ್ಡೆಗಳಲ್ಲಿನ ಪಕ್ಷಿಗಳ ಕಲರವ ಸೂರ್ಯನಿಗೆ ಕೋರುವ ಶುಭವಿದಾಯದಂತೆ ಭಾಸವಾಗತೊಡಗಿತು. ದೊಡ್ಡ ಮಟ್ಟದಲ್ಲಿ ಮೀನುಗಾರಿಕೆಯೂ ನಡೆಯುವ ಸರೋವರದಲ್ಲಿ ಆ ಸಲುವಾಗಿಯೇ  ನಡು ನಡುವೆ ನೆಟ್ಟ ಕಂಬದ ಸಾಲುಗಳು ಕಣ್ಣೆದುರಿಗಿನ ಕಲಾಕೃತಿಯ ಭಾಗವಾದಂತೆ ಅನ್ನಿಸಿತು. ಆ ಕಂಬದ ಮೇಲೇ ಠಿಕಾಣಿ ಊರಿರುವ ತರಹೇವಾರಿ ಹಕ್ಕಿಗಳೂ ಸಹ.


ನಂತರ ನಾವು ಸೀದಾ ಸಾಗಿದ್ದು ‘ಹನಿಮೂನ್ ದ್ವೀಪ’ ವೆಂದು ಕರೆಯಲ್ಪಡುವ ಪ್ರದೇಶಕ್ಕೆ. ಮರಳಿನ ಗುಡ್ಡವದು. (ನಮ್ಮ ತಲಕಾಡನ್ನು ನೆನಪಿಸುವಂತಿದೆ) ಅಲ್ಲಿ ಬೋಟ್ ನಿಲ್ಲಿಸಿ ತಿರುಗಾಡಲು ಒಂದಿಷ್ಟು ಸಮಯ ಘೋಷಿಸಲಾಯಿತು. ಅಲ್ಲಿ ಕೂಡ ಅನೇಕ  ಪುಟ್ಟ, ಪೆಟ್ಟಿಗೆ ದುಕಾನುಗಳಿವೆ. ಎಳನೀರು ಮಾರುವವರು, ಫೀಷ್ ಫ್ರೈ ಎಂದು ಕಿರಿಚುವವರು ಎಲ್ಲರೂ ಅಲ್ಲಿದ್ದಾರೆ. ನಡುವೆ ಒಂದೆಡೆ ಸೇರಿದ್ದ ಗುಂಪೊಂದು ನಮ್ಮ ತಂಡವನ್ನೂ ಸೆಳೆಯಿತು. ಅಲ್ಲಿ ಟಬ್ ಒಂದರಲ್ಲಿ ಚಿಪ್ಪುಗಳ ರಾಶಿ ಹಾಕಿಕೊಂಡು ಕುಳಿತ ಕಪ್ಪುಕಲೆಗಳ ಮುಖದವ ‘ಟೆನ್ ರುಪೀಸ್ ಫಾರ್ ಒನ್ ಪರ್ಲ್’ ಎಂದು ವ್ಯಾಪಾರ ಕುದುರಿಸುತ್ತಿದ್ದ. ಅವನ ಮುಂದೆಲ್ಲಾ ಒಡೆದ ಚಿಪ್ಪುಗಳು ಹರಡಿ ಬಿದ್ದಿತ್ತು. ಗಿರಾಕಿಗಳು ಅಕ್ಷರಶಃ ಕ್ಯೂ ನಿಂತಿದ್ದರು! ಮುತ್ತುಗಳು ಬಿಕರಿಯಾಗಿ ಪ್ರವಾಸಿಗಳ ಕೈ ಸೇರುತ್ತಿತ್ತು. ಚಿಪ್ಪಿನೊಳಗಿನ ಪುಟಾಣಿ ಮೆತ್ತನೆಯ ಹುಳುಗಳು ಮರಳು ಸೇರುತ್ತಿದ್ದವು!

ಪುನಃ ನಾವು ಬೋಟ್‌ನ ಬಳಿ ತಲುಪುವಷ್ಟರಲ್ಲಿ ಸೂರ್ಯನ ಸವಾರಿ ಮತ್ತಷ್ಟು ಮುಂದೆ ಹೋಗಿತ್ತು. ಈಗ ನಾವು ಮುಳುಗುತ್ತಿರುವ ಸೂರ್ಯನಿಗೆ ವಿಮುಖವಾಗಿ ಹೊರಟೆವು ಮತ್ತು ತಿರುಗಿ ಕುಳಿತೆವು! ಅಚ್ಚರಿಯೆಂಬಂತೆ ನೂರಾರು ಡಾಲ್ಫಿನ್‌ಗಳ ದಂಡು ದೂರದಲ್ಲಿ ಕಂಡಂತಾಗಿ ಎಲ್ಲರೂ ಅತ್ತ ದಿಟ್ಟಿಸಿದರೆ ಅಲ್ಲಿಯೂ ನಮಗೆ ನಿರಾಶೆಯೇ ಕಾದಿತ್ತು. ಅವೆಲ್ಲಾ ಸರಾಗವಾಗಿ ನೀರಿನಲ್ಲಿ ಈಜುತ್ತಿರುವ ಎಮ್ಮೆಗಳು! ಇಷ್ಟೊತ್ತಿಗಾಗಲೇ ಸೂರ್ಯ ತನ್ನ ಮೊಹರುಗಳನ್ನು ಸರೋವರದ ನೀರಿನ ಮೇಲೆಲ್ಲಾ ಒತ್ತಲು ಪ್ರಾರಂಬಿಸಿದ್ದ. ಒಟ್ಟಾರೆ ದೃಶ್ಯದಲ್ಲಿ ನಾವೂ ಒಂದಾಗಿ, ಈ ಕ್ಷಣ ನಿರಂತರವಾಗಿರಬಾರದೇಕೆ ಎಂದೆನಿಸಲು ಶುರುವಾಗಿತ್ತು. ನಡುಗಡ್ಡೆಗಳ ಮೇಲೆ ಗುಡಿಸಲು ಕಟ್ಟಿಕೊಂಡು, ದಿನದ ಫಸಲನ್ನು ಗುಡ್ಡೆ ಹಾಕಿ, ಭವಿಷ್ಯವನ್ನು ತಮ್ಮ ಹರಕು ಬಲೆಗಳ ನಡುವೆ ದಿಟ್ಟಿಸಿ ಕುಳಿತಿದ್ದ ಬೆಸ್ತರ ಮುಖಗಳು ಬಾಡಿದಂತಿದ್ದವು. ಕೂಡಲೇ ನಮ್ಮ ದೋಣಿ ನಡೆಸುವವನ ಮುಖ ನೋಡಿದೆ. ಆತ ಅದೇನು ಅರ್ಥ ಮಾಡಿಕೊಂಡನೋ ತಿಳಿಯದು. ಇದ್ದಕ್ಕಿದ್ದಂತೆ ಕಿರು ನಕ್ಕು ಓಡಿಯಾ ಮಿಶ್ರಿತ ಹರಕು ಹಿಂದಿಯಲ್ಲಿ ‘ನನಗೆ ದಿನಕ್ಕೆ ನೂರು ಸಂಬಳ. ಬರುವ ಪ್ರವಾಸಿಗರು ಕೊಡುವ ಟಿಪ್ಸ್ ಸೇರಿ ಬದುಕು ಚೆಂದಾಗೇ ಇದೆ’ ಎಂದಾಗ ನಾನು ಮತ್ತೊಮ್ಮೆ ನನ್ನ ನೋಟದ ಕುರಿತು ಚಿಂತಿಸಬೇಕಾಯ್ತು!

ಮೂರು ತಾಸಿನ ಬೋಟಿಂಗ್ ಸುದೀರ್ಘ ಜೀವನದ ವಿಹಾರಕ್ಕೆ ಒಂದಿಷ್ಟು ನೆನಪುಗಳ ಬುತ್ತಿ ಕಟ್ಟಿಕೊಟ್ಟಿತ್ತು. ಅದನ್ನು ಹೊತ್ತುಕೊಂಡು ಬಸ್ಸಿನ ಬುಡ ಸೇರುವಷ್ಟರಲ್ಲಿ ಸಂಜೆ ಆರೂವರೆಯಾಗಿತ್ತು. ಅವತ್ತೇ ರಾತ್ರಿ ಎಂಟರ ರೈಲ್ವೆಗೆ ಪುರಿಯಿಂದ ಕಲ್ಕತ್ತಾಗೆ (ಅದ್ಯಾಕೋ ಕೋಲ್ಕತ್ತಾಗಿಂತ ಕಲ್ಕತ್ತಾ ಎಂಬ ಹೆಸರೇ ಆಪ್ಯಾಯ) ತೆರಳಲು ನಮ್ಮ ಮುಂಗಡ ಸೀಟುಗಳು ನಿಗದಿಯಾಗಿದ್ದವು.(ಅಂದು ಪುರಿಯಿಂದ ಕಲ್ಕತ್ತಾಗೆ ಹೋದ ರೈಲ್ವೆ ಯಾನ ಯಾವತ್ತಿಗೂ ಮರೆಯದಂತದ್ದು, ಆ ಉಪದ್ವ್ಯಾಪಗಳನ್ನು ಮತ್ತೊಮ್ಮೆ ನೆನೆಪಿಸಿಕೊಳ್ಳುವೆ) ಅದೇ ದುಗುಡದಲ್ಲಿದ್ದ ನನಗೆ ಪುನಃ ಅವತ್ತು ಚಿಲ್ಕಾ ನೆನಪಾಗಲೇ ಇಲ್ಲ!

ನಂತರ ಬಹಳಷ್ಟು ಸಂಜೆಗಳು ಸರಿದು ಹೋಗಿವೆ. ಅವುಗಳ ನಡುವಿನ ಅನೇಕ ಸಂಜೆಗಳನ್ನು ನಾನು ಕಳೆದಿದ್ದು ಚಿಲ್ಕಾದಲ್ಲಿ, ಅರ್ಥಾತ್ ಅಲ್ಲಿನ ನೆನಪುಗಳಲ್ಲಿ!

(ಕೆಂಡಸಂಪಿಗೆಯಲ್ಲಿ ‘ಅಂದ ಕಾಲತ್ತಿಲ್’ ಬಂದ ನನ್ನ ಬರಹವಿದು . ನಾನು ಚಿಲ್ಕಾಗೆ ಹೋಗಿ ಬಂದು ಐದಾರು ಮಳೆಗಾಲಗಳೇ ಆಗಿಹೋಯ್ತು. ಕಾಲೇಜು ದಿನಗಳ ಆ ಪ್ರವಾಸಗಳೆಲ್ಲ ಯಾವತ್ತಿಗೂ ತಂಪೇ ಹೌದು. ಇವತ್ತೂ ಬೆಳಗಿನಿಂದ ಲ್ಯಾವೆಲ್ಲೆ ರಸ್ತೆಯ ನನ್ನ   ಆಫೀಸಿನ ಸುತ್ತ ಮಂಜು ಮಂಜು. ಆಫೀಸಿನಂತೆಯೇ ಮನಸ್ಸೂ. ಅದಕ್ಕೆ ಮತ್ತೆ ಚಿಲ್ಕಾಗೆ ಹೋಗುವ ಬಯಕೆಯಾಗಿದ್ದು…..!)

ರಾಮನಗರದಲ್ಲಿ ಹನುಮಂತನಾಟ…!!!

ಕೆಲ ತಿಂಗಳಿಗೆ ಮೊದಲು ಗೆಳೆಯರೊಡನೆ ರಾಮನಗರಕ್ಕೆ ಹೋಗಿದ್ದೆ. ಅವತ್ತಿನಿಂದಲೂ ರಾಮನಗರದ ಬೆಟ್ಟಗಳನ್ನೆಲ್ಲ ಹತ್ತಿಳಿಯಬೇಕೆಂಬ ಚಟ ಹತ್ತಿಕೊಂಡಿದೆ. ಮುಂಜಾನೆ ಹತ್ತಿದ ರಾಮದೇವರ ಬೆಟ್ಟ, ಅದರೆದುರಿಗಿನ ಗುಹೆಯಿರುವ ಬೆಟ್ಟ ಎಲ್ಲವೂ ದೇಹದ ಬಹುತೇಕ ಬೆವರನ್ನು ಹೀರಿದ್ದವು ಅವತ್ತು.

ಕಳೆದ ತಿಂಗಳು ಆಫೀಸಿನಿಂದ ಮತ್ತೆ ರಾಮನಗರಕ್ಕೆ ಪುಟ್ಟ ಪಿಕ್ ನಿಕ್ ಹೊರಟಾಗ ಅದೇ ಗುಂಗಿನಲ್ಲಿದ್ದೆ.. ಗಡಣದಲ್ಲಿ ಹೋಗಿ ಸುತ್ತುವುದು  ಹೊಸದಲ್ಲದ್ದರಿಂದ ಹೇಳಿಕೊಳ್ಳುವಂತಹ ನಿರೀಕ್ಷೆಗಳಿರಲಿಲ್ಲ. ನಮ್ಮ ಅಪರಿಮಿತ ಉತ್ಸಾಹಗಳನ್ನೆಲ್ಲವೂ ಅದುಮಿಯೇ ಇಡಬೇಕಾದ ಪರಿಸ್ಥಿತಿ ಗುಂಪಿನಲ್ಲಿದ್ದಾಗ ಇರುತ್ತದೆ. ರಾಜಸ್ಥಾನ, ಸಿಕ್ಕಿಂ, ಬಂಗಾಳದ ಟೈಗರ್ ಹಿಲ್ ಹೀಗೆ ಅನೇಕ ಪ್ರವಾಸಗಳಲ್ಲಿ ಇದು ಅನುಭವಕ್ಕೆ ದಕ್ಕಿದೆ. ನನ್ನ ಮಟ್ಟಿಗಂತೂ ಇದು ಚೇತೋಹಾರಿಯಲ್ಲ. ಹೇಳುವವರು, ಕೇಳುವವರು ಇಲ್ಲದೆ ಮಂಗನಂತಾಗುವುದರಲ್ಲೇ ನಿಜವಾದ ಜಂಗಮ ಖುಷಿಯಿರುವುದು….! ಹೀಗಿದ್ದರೂ ರಾಮನಗರದ ಕೆಲ ಚಟುವಟಿಕೆಗಳು ಮಸ್ತಾಗಿದ್ದವು. ಸೂರ್ಯ ಕಂತುವವರೆಗೂ ರಾಮದೇವರ ಬೆಟ್ಟದ ಇನ್ನೊಂದು ಪಾರ್ಶ್ವದಲ್ಲಿ ನಮ್ಮ ಚೇಷ್ಟೆಗಳು ಸಾಗಿದ್ದವು. ಅದರ ಕೆಲವು ಮೆಲುಕುಗಳು ಇಲ್ಲಿವೆ.

                                                                                                    ನಾನು, ರಾಘವೇಂದ್ರ, ಕಲಾವಿದರಾದ ಗುಜ್ಜಾರ್, ಲಕ್ಷ್ಮಿ ನಾರಾಯಣ್ ಜೊತೆಯಾಗಿ…

 


ಮತ್ತೊಮ್ಮೆ ರಾಮನಗರ ಯಾವಾಗ ಕರೆಸಿಕೊಳ್ಳುವುದೋ…..?!!!  🙂

 

ನೆನಪುಗಳ ನೆನಪಲ್ಲಿ…

ಪ್ರೀತಿಯ ತಂಗಿಗೆ,
           ನೆನಪಿದೆಯಾ ನಿನಗೆ? ಬೆಳ್ಳಂಬೆಳಗ್ಗೆ ಎದ್ದು, ಓದುವ ನೆಪವನ್ನಿಡಿದು, ಬಚ್ಚಲಿನ ಒಲೆಗೆ ರಾತ್ರಿಯೇ ಅಮ್ಮ ಹಾಕಿದ ಬೆಂಕಿಯೆದುರು ನಾವಿಬ್ಬರೂ ಒಕ್ಕೂರಲಾಗಿ ಕುಳಿತು ತೂಕಡಿಸಿದ ನೆನಪು, ಅಮ್ಮ ಕೊಡುವ ಹಬೆಯಾಡುವ ಕಾಫಿ ಬರುವವರೆಗೆ ಒತ್ತರಿಸಿ ಬಂದ ನಿದ್ದೆಗೆ ಬಲವಂತದ ತಡೆಯೊಡ್ಡಿ ಕಾಫಿ ಸೇವೆಯ ನಂತರ ಪೂರ್ಣ ನಿದ್ದೆಗೆ ಶರಣಾದ ನೆನಪು, ನಿದ್ರಿಸುತ್ತಿದ್ದುದ್ದನ್ನು ನೋಡಿ ಅಮ್ಮ ಕೊಟ್ಟ ಧರ್ಮದೇಟಿಗೆ ತಿಂಡಿ ಬಿಟ್ಟು ಮುಷ್ಕರ ಹೂಡಿದ್ದ ನೆನಪು, ಅಜ್ಜಿ ರಮಿಸಿ ಹೇಳಿದಾಗಲೂ ಜಗ್ಗದೇ, ಮತ್ತದೇ  ಅಮ್ಮನ ಪೀತಿ ಸೂಸುವ ಒಂದೇ ಮಾತಿಗೆ ಮರುಳಾಗಿ ಒಟ್ಟೊಟ್ಟಿಗೆ ಎಂಟೆಂಟು ದೋಸೆಗಳನ್ನು ಸದಾ ಡಬ್ಬದಲ್ಲಿರುತ್ತಿದ್ದ ಚಟ್ನಿ ಪುಡಿಯೊಂದಿಗೆ ಚಪ್ಪರಿಸಿ ತಿಂದ ನೆನಪು, ನಮಗಿಂತ ಬೇಗ ಎದ್ದು ಕೊಟ್ಟಿಗೆ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ ಅಪ್ಪನಿಗೆ ಅಲ್ಲೇ ಹೋಗಿ ರಗಳೆ ಕೊಡುತ್ತಿದ್ದ ನೆನಪು, ಅಪ್ಪ ಹಾಲು ಕರೆಯುವಾಗ ಉಮೇದಿನಿಂದ ನಾವೂ ಹಾಲು ಕರೆಯಲು ಹೋಗಿ ಗೌರಿಯು ಬಳಿ ಒದೆ ತಿಂದ ನೆನಪು,(ಇದೇ ಗೌರಿ ಮಳೆಗಾಲದಲ್ಲೊಂದು ದಿನ ರಸ್ತೆ ಬದಿಯ ಗಟಾರಕ್ಕೆ ಬಿದ್ದು ಸತ್ತಾಗ ನೀನು ವಾರಗಟ್ಟಲೇ ಮರುಗಿದ್ದು ನನಗಿನ್ನೂ ನೆನಪಿದೆ.) ಓರಗೆಯ ಗೆಳೆಯರೊಡನೆ ಬಣ್ಣದ ಕೊಡೆಯನ್ಹಿಡಿದು ಸುರಿಯುವ ಜಿಟಿ ಜಿಟಿ ಮಳೆಯಲ್ಲಿ ಖುಷಿ ಖುಷಿಯಿಂದ ಶಾಲೆಗೆ ನಡೆಯುತ್ತಿದ್ದ ನೆನಪು, ದಾರಿಯಲ್ಲಿ ಬೆಟ್ಟದಿಂದ ಹರಿದು ಬರುವ ಪುಟ್ಟ ಪುಟ್ಟ ಝರಿಗಳನ್ನು ಕಾಣುತ್ತಾ ಸಂತೋಷ ಪಟ್ಟ ನೆನಪು, ರಸ್ತೆಯ ಇಕ್ಕೆಲಗಳಲ್ಲಿ ಕೆಂಪಾದ ಕೋಡಿ ನೀರು ಭಯಂಕರ ವೇಗದಿಂದ ಕಸ ಕಡ್ಡಿಗಳನ್ನು ಸೇರಿಸಿಕೊಂಡು ಹರಿಯುವುದನ್ನು ಭಯಭೀತರಾಗಿ ನೋಡುತ್ತಾ ನಿಂತ ನೆನಪು, ಬೀಸುವ ಗಾಳಿಗೆ ಆಗಾಗ ಕೊಡೆ ಉಲ್ಟಾ ಆದಾಗ ಉಕ್ಕಿ ಬಂದ ನಗುವನ್ನು ಇಂಚೂ ಕೂಡಾ ಹಿಡಿದಿಡದೇ ಪೂರ್ತಿಯಾಗಿ ಚೆಲ್ಲಿದ ನೆನಪು, ಶಾಲೆಯಲ್ಲಿ ಉದ್ದ ಬೆಳೆದ ಉಗುರಿನೊಂದಿಗೆ ಪ್ರಾರ್ಥನೆಗೆ ನಿಂತಾಗ ಉಗುರು ನೋಡುವ ಪದ್ಧತಿಗೆ ಹೆದರಿ ಹಲ್ಲಿನಿಂದ ಕಚ್ಚಿ ಕಚ್ಚಿ ಅದನ್ನು ತೆಗೆದ ನೆನಪು, ಪ್ರತಿ ಬುಧವಾರ ಬಣ್ಣದ ಬಟ್ಟೆ ಹಾಕಿಕೊಳ್ಳಲು ಸಂಭ್ರಮ ಪಡುತ್ತಿದ್ದ ನೆನಪು, ನಿತ್ಯ ಪಂಚಾಂಗ ಹೇಳುವಲ್ಲಿ ಎಡವಿ ಬಸ್ಕಿ ಹೊಡೆದ ನೆನಪು, ಶಾಲೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ಕುಳಿತುಕೊಳ್ಳಬೇಕಾದ್ದರಿಂದ ಒಟ್ಟಿಗಿರಲಾಗದೆಂದು ಚಡಪಡಿಸಿದ ನೆನಪು, ಆಗಾಗ ಉಚ್ಚೆ ಹೊಯ್ಯುವ, ನೀರು ಕುಡಿಯುವ ಪಿಳ್ಳೆ ನೆಪವೊಡ್ಡಿ ಕ್ಲಾಸಿನಿಂದ ಹೊರಬಂದು ಇಬ್ಬರೂ ಸೇರದೆ ಬಹು ಕಾಲವಾಯಿತೇನೋ ಎಂಬಂತೆ ಕುಳಿತು ಮಾತನಾಡುತ್ತಿದ್ದಾಗ ಪಿ.ಟಿ.ಮಾಸ್ತರರು ಕಂಡು ಬೈದರೂ ಎಂಥಾ ಅಣ್ಣ ತಂಗಿಯಪ್ಪಾ ಎಂದಾಗ ಗರ್ವ ಪಟ್ಟ ನೆನಪು, ಸಂಜೆ ಆಟಕ್ಕೆ ಬಿಡುವುದನ್ನೇ ಕಾಯ್ದು ಕೊಂಡು ಹುಮ್ಮಸ್ಸಿನಿಂದ ಮುಂದಿನ ಮೈದಾನಕ್ಕೆ ಓಡಿದ ನೆನಪು, ದೊಡ್ಡ ಆಳ್ತನದ ನಮ್ಮನೆ ಕೆಲಸದ ಈಶನ ಮಗ ವೆಂಕ್ಟ ನನ್ನೆದುರು ಕಬಡ್ಡಿಗೆ ನಿಂತಾಗ ಥರಗುಟ್ಟಿದ ನೆನಪು, ಬದಿಯಲ್ಲಿ ನಿಂತು ನೀನು ಚಪ್ಪಾಳೆ ತಟ್ಟುತ್ತಾ ಕುಪ್ಪಳಿಸುತ್ತಿದ್ದ ನೆನಪು, ಲಕ್ಷಕ್ಕೆಷ್ಟು ಸೊನ್ನೆ ಎಂಬುದನ್ನೂ ಹೇಳಲಾಗದೇ ಮಾಲಿನಿ ಅಕ್ಕೋರರ ಗಾಳಿ ಕೋಲಿನಿಂದ ಪೆಟ್ಟು ತಿಂದು ನಾಲ್ಕಾರು ಬರೆ ಬಿದ್ದ ನನ್ನ ಕಾಲುಗಳನ್ನು ಕಂಡು ನಿನ್ನ ಕಣ್ಣಲ್ಲೂ ನೀರು ಚಿಮ್ಮಿದ ನೆನಪು, ಶಾಲೆ ಬಿಟ್ಟೊಡನೆಯೇ ಕೌಳಿ ಹಣ್ಣು ತಿನ್ನುವ ಆಸೆಯನ್ನು ಹೊತ್ತು ಕೌಳಿ ಗುಡ್ಡಕ್ಕೆ ಓಡಿದ ನೆನಪು, ಮೈಯೆಲ್ಲಾ ತರಚಿಕೊಂಡು ಮನೆಗೆ ಮರಳಿ ಬೈಸಿಕೊಂಡ ನೆನಪು, ಸಂಜೆ ಅಮ್ಮ ಮಾಡಿ ಕೊಡುತಿದ್ದ ಅವಲಕ್ಕಿ-ಮಜ್ಜಿಗೆಗೆ ಹಾತೊರೆಯುತ್ತಿದ್ದ ನೆನಪು, ಅದರೊಡನೆ ಅಪ್ಪ ಪೇಟೆಯಿಂದ ತಂದ ಚಿಪ್ಸ್ ಬೆರೆಸಿ ತಿಂದ ನೆನಪು, ಚೌತಿ ಹಬ್ಬದ ಸಮಯದಲ್ಲಿ ಮಾಡಿಟ್ಟಿರುತ್ತಿದ್ದ ಪಂಚಕಜ್ಜಾಯಕ್ಕೆ ಕಿತ್ತಾಡುತ್ತಿದ್ದ ನೆನಪು, ಸಂಜೆ ಮೇಲಿನ ಕೇರಿಯ ಸುಬ್ಬುವಿನ ಮನೆಗೆ ವಾರಿಗೆಯ ಮಕ್ಕಳೊಟ್ಟಿಗೆ ಹೋಗಿ ಕಂಬದಾಟ ಆಡುತ್ತಿದ್ದ ನೆನಪು, ಅಲ್ಲೇ ಆಟವಾಡುತ್ತಾ ಸಂಜೆಯಾಗಿ ಮನೆಗೆ ವಾಪಸ್ ಹಿಂದಿರುಗಲು ಭಯ ಪಡುತ್ತಿದ್ದ ನೆನಪು, ಅಪ್ಪ ರಾತ್ರಿ ಕೆಲಸ ಮುಗಿಸಿ ಬರುವಾಗ ನಮ್ಮನ್ನು ಬೈದುಕೊಂಡು ಕರೆತರುತ್ತಿದ್ದ ನೆನಪು, ಅಜ್ಜಿ ರಾತ್ರಿ ಒಪ್ಪತ್ತಿನ ಹೆಸರಲ್ಲಿ ತಿಂಡಿ ತಿನ್ನುತ್ತಿದ್ದನ್ನು ಕಂಡು ನಾವೂ ಊಟದ ಬದಲು ತಿಂಡಿಗೇ ಆಸೆ ಪಡುತ್ತಿದ್ದ ನೆನಪು, ರಾತ್ರಿ ಕೈಕಾಲು ತೊಳೆಯಲು ತೋಟದ ದಿಡ್ಡಿಯಲ್ಲಿದ್ದ ಬಚ್ಚಲಿಗೆ ಭೂತದ ಭಯದಿಂದ ಹೋಗಲು ಹಿಂಜರಿಯುತ್ತಿದ್ದ ನೆನಪು, ಆದರೂ ರಾತ್ರಿ ಅಜ್ಜನ ಬಳಿ ದೆವ್ವ-ಭೂತದ ಕಥೆ ಹೇಳಲು ಪಟ್ಟು ಹಿಡಿಯುತ್ತಿದ್ದ ನೆನಪು, ಅಪ್ಪ ಹೊಸದಾಗಿ ಟಿ.ವಿ ತಂದಾಗ ಅಜ್ಜ ಕಥೆ ಹೇಳುತ್ತಿದ್ದ ರೂಢಿ ತಪ್ಪಿ ಹೋಗಿದ್ದಕ್ಕೆ ಮರುಗಿದ ನೆನಪು, ಮನೆಯ ಮೇಲಿನ ಸೂರಿನ ಕೆಳಗೆ ಮಲಗಿದರೆ ರಾತ್ರಿ ಕೆಟ್ಟ ಕನಸು ಬೀಳುತ್ತದೆ ಎಂಬ ಅಜ್ಜನ ಮಾತನ್ನು ಪ್ರಮಾಣೀಕರಿಸಿಕೊಳ್ಳಲು ಹೋಗಿ ಅಪ್ಪನ ಬಳಿ ಲತ್ತೆ ತಿಂದ ನೆನಪು, ಎರಡೆರಡು ಕಂಬಳಿಯ ಕೆಳಗೆ ಚಾದರವೊಂದನ್ನು ಸೇರಿಸಿ ಹೊದ್ದು ಬೆಚ್ಚಗೆ ಮಲಗಿ ಮಗ್ಗುಲು ಬದಲಿಸುತ್ತಿದ್ದ ನೆನಪು… …
 ಅದೆಷ್ಟು ಸುಮಧುರವಲ್ಲವಾ ಬಾಲ್ಯದ ನೆನಪುಗಳು? ಬಹುಷಃ ನೀನು ಕೂಡ ಇವೆಲ್ಲವನ್ನೂ ನೆನೆಸಿಕೊಳ್ಳುತ್ತಿರುವೆ ಎಂದು ಕೊಳ್ಳುವೆ ಅಥವಾ ಬೆಂಗಳೂರಿನ ಗಡಿಬಿಡಿಯ ಬದುಕಿನಲ್ಲಿ, ಅಟ್ಟ ಸೇರಿದ ಜಾಡಿಯೊಳಗೆ ಈ ಸವಿ ನೆನಪುಗಳನ್ನೆಲ್ಲಾ ಬಾಯಿಕಟ್ಟಿ ಇಟ್ಟಿರುವೆಯೋ? ಎಳೆದಷ್ಟು ಬಿಚ್ಚಿಕೊಳ್ಳುವ ರೇಷ್ಮೆ ನೂಲುಗಳಲ್ವಾ ಅವು?  ಇಂದಿನ ಕಾನ್ವೆಂಟ್-ಕಾಂಕ್ರೀಟ್ ಸಂಸ್ಕ್ರತಿಯ ಮಕ್ಕಳನ್ನು ನೋಡಿದರೆ ದುರದೃಷ್ಟಶಾಲಿಗಳೆನಿಸುತ್ತದೆ. ನಿನ್ನ ಮಗಳೂ ಇದಕ್ಕೆ ಹೊರತಾಗಿರಲಾರಳು. ವರ್ಷಕ್ಕೊಮ್ಮೆಯಾದರೂ ನೀನವಳನ್ನು ತವರು ಮನೆಗೆ ಕರೆದುಕೊಂಡು ಬರುವುದಿಲ್ಲವಲ್ಲಾ ಅದಕ್ಕೆ ಹೇಳಿದೆ. ಇರಲಿ ಬರುವ ಮೇನಲ್ಲಾದರೂ ಮನಸ್ಸು ಮಾಡು. ನಿನ್ನ ಪತಿರಾಯರು ಹೇಗೂ ಕೆಲಸದಿಂದ ತಪ್ಪಿಸಿಕೊಳ್ಳುವಂತಿಲ್ಲ. ಮಗಳನ್ನಾದರೂ ಕಳಿಸು. ದಾರಿ ಕಾಯುತ್ತಿರುವೆ.                        
                                  ಪ್ರೀತಿಯಿಂದ ಅಣ್ಣ

(ನನ್ನವೊಂದಿಷ್ಟು ನೆನಪುಗಳಿದ್ದವು. ಅವನ್ನೆಲ್ಲಾ ಕೂಡಿಸಬೇಕೆನಿಸಿತು. ಅದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹೀಗೆ ಒಂದೇ ಪಟ್ಟಿಗೆ ಅವನ್ನು ಜೋಡಿಸುವ ಯತ್ನ ಮಾಡಿದೆ. ಹುಟ್ಟಿದ್ದು ಮೇಲಿನ ಬರಹ. ಹ್ಞಾಂ ! ನಿಮಗೆ ಸಮಯವಿದ್ದಲ್ಲಿ ನೆನಪು ಪದ ಪ್ರಯೋಗ ಎಷ್ಟು ಬಾರಿ ಆಗಿದೆ ಎಂದು ಎಣಿಸಿಕೊಳ್ಳಬಹುದು!)