Archive for the ‘ಕವನ’ Category

ಅವನ ಪ್ರೇಮದ ಪರಿ

ಹೀಗೆ ಒಂದು ಸಂಜೆ
ಕತ್ತಲೆ ಬಾಗಿಲಲ್ಲಿತ್ತು
ಹಾವು ರಾಜಕುಮಾರನಾಯಿತು
ತಾರೆಯೊಂದು ತೂರಿಬಂದು
ತೊಡೆಯಂಚಿಗೆ  ಸಿಕ್ಕಿಕೊಂಡಿತು!

ಅಜ್ಜನ ಸಂಚಿಯ ಮೇಲೆ
ಕವಳದ ಕೆಂಪು ಕೋನ
ಅಂತಹದ್ದೇ ಇತರೇ ಒಂದೆರಡು
ಮತ್ತೆ ಕಡಿಯುವ ಚಟ ಪಟ ಸದ್ದು
ಪಂಚೆಯ ಮೇಲೂ ಪ್ರೇಮ ಮುದ್ರೆ

ರೆಕ್ಕೆ ಬಂದಿವೆ
ಗೂಡಿನ ಹಕ್ಕಿ-ಗಳಿಗೆ ಹೊಲಿದಂತೆ
ಅವಕ್ಕೆ ಜೀವವೂ ಬಂದಿದೆ
ಮುಸಿ ಮುಲುಕಾಟ ಗಂಭೀರವಾಗಿದೆ
ಹಿತ್ತಿಲ ಬಾಗಿಲಿನಷ್ಟೇ ಭದ್ರವಾಗಿ

ಸಂಪಿಗೆ ಮುಡಿಯಲ್ಲೇ ಕೆಂಪಾಗಿದೆ
ಈಗಲೂ ಪಲ್ಲವಿಸಬಹುದು
…ರೆ
ಹಿಂಬಾಗಿಲ ಕೆಡವಬೇಕು
ಬೇಲಿಯನ್ನೂ ಕೀಳಬೇಕು
ಹೆಚ್ಚಾಗಿ ‘ಅವ’ ಸರಿಯಬೇಕು

ಒಳಮನೆಯ ವೀಣೆಯ ತಂತಿಗಳು
ಸೇರಿ ಘಮ ಘಮಿಸಿದ ಸ್ವರ
ಜೀರುಂಡೆ ಕೂಗಲ್ಲೇ ಸುತ್ತುತ್ತಿದೆ
ಮನೆಯ ಮಾಳಿಗೆ ಒಸರುತ್ತಿದೆ
ಕಂಬಳಿಯೂ ಒದ್ದೆಯಾಗಿದೆ!!!

[ನಾಲ್ಕೈದು ವರ್ಷಕ್ಕೆ ಮುಂಚೆ ಕೆಂಡಸಂಪಿಗೆಯಲ್ಲಿ ಬಂದಿದ್ದ ಕವನ (?), ಬೆಂಗಳೂರಿಗೇ ಮಳೆಯಿಲ್ಲದೆ ಬ್ಲಾಗ್ ಬೆಳೆ ಬೆಳೆಯೋದು ಹ್ಯಾಗೆ ಹೇಳಿ? ಹಳೆ ಫಸಲೇ ಗತಿ…!]

 

ಹಳೆ ಮುದುಕಿಯ ಹಕೀಕತ್ತು…!

 

 

 

 

 

 

ನಿನ್ನೆ ದಿನ ಅಜ್ಜಿ ಕೊಟ್ಟ ಮಾತಪೆಟ್ಟಿಗೆ
ಎರಡು ಓಲೆಗಳು ಬೆಚ್ಚಗಾಗಿವೆ
ವಿರುದ್ಧ ದಿಕ್ಕಿಗೊಡುವ ಫೆವಿಕಾಲ್ ಆನೆಗಳು
ಅಂಟಿನ ಮೇಲೆ ನಂಟು ಕಳಕೊಂಡಿವೆ

ತೋರಣ, ಹೊಗೆ ಅಂಡೆ
ರಂಗೋಲಿ, ಪ್ರಧಾನ್ ಬಾಗ್ಲು ಎಲ್ಲವೂ
ಕಾಣದ
ಎದುರಾಳಿ ಪಟ್ಟನ್ನು ಯೋಚಿಸುತ್ತಿವೆ
ಬೋನಲ್ಲಿದ್ದ ಟೈಗರ್ ಕೂಗಿ ಸುಮ್ಮನಾಗಿದೆ

ತುಳಸಿ ಮದುವೆಗೆ ಹಚ್ಚಿದ ಬಣ್ಣ
ಕಟ್ಟೆಯ ಮೇಲೆ ಫಳ ಫಳಿ ಸುತ್ತಿದೆ
ಆಚೆ ಅಂಗಳಕ್ಕೋ, ಈಚೆಗೋ ತಿಳಿಯದೆ
ಗಿಡ ಹೊಯ್ದಾಡುತ್ತಿದೆ,
ಹುಯಿಲೆಬ್ಬಿಸದ ಗಾಳಿ ಅತ್ತಿಂದಿತ್ತ ತೆವಳುತ್ತ
ಕೊನೆಯ ಬಾರಿಗೆಂಬಂತೆ
ನೇವರಿಸುತ್ತಿದೆ

ಒಳ ಕೋಣೆಯ ಬೀರು
ತನ್ನೊಳಗಿನ ಬಣ್ಣದ ಲೋಹಗಳನ್ನು
ಮತ್ತೆ ಮತ್ತೆ ಕಣ್ದುಂಬಿಕೊಳ್ಳುತ್ತಿದೆ
ಹೊಸ ಜಾಗ ಸೇರುವ ಖುಷಿ,
ಯಾಕೋ ಯಾವುದಕ್ಕೂ ಇಲ್ಲ
ಯಾರಿಗೆ ಸೇರಬಹುದು ಮಾಳಿಗೆಯ ಬೆಲ್ಲ?!

ಅಜ್ಜ ನೆಟ್ಟ ಚಂದ್ರ ಪೇರಲೆ
ತೋಟದಂಚಿನ ಸಿಹಿ ನೇರಳೆ
ಅಗಲದ ಚುಕ್ಕಿ ದಾಸವಾಳ
ಕೊಯ್ದಷ್ಟೂ ಬಿಡುವ ಚಪ್ಪರದ ತೊಂಡೆ
ಎಲ್ಲವೂ ಪಾಲಾಗುವುದರಲ್ಲಿವೆ
ಮನಸ್ಸುಗಳ ಕೆಲಸ ಈಗಾಗಲೇ ಮುಗಿದಿದೆ

ಜಗಲಿ ಮೇಲೆ ಜೋಡಿಸಿದ್ದ
ರವಿವರ್ಮನ ದೀಪಸುಂದರಿಗೆ
ಮಬ್ಬು ಹಿಡಿದಿದೆ
ಗಂಧದ ಕಲ್ಲಿಗೆ ಒಡೆ ಬಂದಿದೆ
ಗಿಳಿಗೂಟದ ಕಥೆ ಕೇಳುವವರ್ಯಾರು?
ಅವೂ ಭಾವಗಳಂತೆ…

ಅಟ್ಟದ ಮೇಲಿನ ಮೂರನೆತ್ತೆಯ
ನನ್ನ ಟಯರ್
ಮುನಿಸಿ ಕೂತಂತಿದೆ
ಅರಿಶಿನದ ಬಟ್ಟಲಲ್ಲಿ
ಕುಂಕುಮ ಖಾಲಿಯಾಗಿದೆ
ನಡುಮನೆಯೂ
ಇಲ್ಲವಾಗುವುದರಲ್ಲಿದೆ

ಹೊಸ ಹಾಸಿಗೆ, ಅಡ್ಡಾದಿಡ್ಡಿ ಗೋಡೆಗಳು
ಇನ್ನೊಂದು ದೋಸೆ ಬಂಡಿ,
ಎರಡೆರಡು ಗುದ್ದಲಿ, ಪಿಕಾಸು, ಹಾರೆಗಳು
ಗೆರೆಕೊರೆದ ಗದ್ದೆ ತೋಟಗಳು
ಆತ್ಮವಿಲ್ಲದ ಪ್ರತಿಮೆಗಳು
ನಿಜಕ್ಕೂ
ಸಂಕಟ ಹುಟ್ಟಿಸುತ್ತವೆ

ಎಲ್ಲವೂ ಬದಲಾದೀತು
ಹೇಳಿ ಕೇಳಿ ಅಜ್ಜಿಯ ಮಾತು…!

ಹಲವು ಬರಿದಾಗುತ್ತ
ಮತ್ತೆ ಕೆಲವು ಬಲಿಯಾಗುತ್ತ
ಇತರೇ ಸಂಗತಿಗಳು ಚಿಗುರೊಡೆಯುತ್ತ
ಗಂಟಲ ನರ ನಡುಗುತ್ತದೆ
ಸೋಣೆ ಗಿಡ ತುಂಬಿಕೊಳ್ಳುತ್ತದೆ

ಮತ್ತೆ….

ತೊಟ್ಟಿಲು ನಗುತ್ತದೆ

ಸನಿಹ ದಿಗಂತ!

ಇತ್ತ ಚಿತ್ತ ಹಾಯಿಸಿ…

ಗಿಜಿಗುಡುವ ಮಾರ್ಕೇಟ್ ರಸ್ತೆ

ಮೊನ್ನೆಯ ಮಳೆಯಿಂದಾದ ಕೆಸರು ಕುಂಡಗಳು

ಅನಾಥವಾಗಿ ಬಿದ್ದ ಕೊಳೆತ ಕೋಸು

ಉರುಳುರುಳಿ ಬಂದ ನಿಂಬೆ ಹಣ್ಣು

ದೇಖರಿಕೆಯಿಲ್ಲದೇ ನಾರುವ

ಕಾರ್ಪೋರೇಶನ್ ತೊಟ್ಟಿ

ಪ್ಲಾಸ್ಟಿಕ್ ಧೂಮಕ್ಕೆ ತಲೆಯಾನಿಸುವ ಮತ್ತರು

ಚಿಂತೆಯೇಕೋ ಗೆಳೆಯಾ..? ಎಂಬ ಸಮಾಧಾನಗಳು

ರಪ್ಪಡಕ ಕೆಂಪು ಮೆತ್ತಿದ ಸ್ತಂಭ

ತೂತು ಬಿದ್ದ ನಾಲ್ಕಾರು ಪತಾಕೆಗಳು

ಬುಡದಲ್ಲಿ ಒಣಗಿದ ಮೈಸೂರ ಮಲ್ಲಿಗೆಯ ಹಾರ

ಅಲ್ಲಲ್ಲೇ ಕಕ್ಕಕ್ಕೆ ಕುಳಿತ ಸಿಂಬಳ ಸುರುಕ ಕೂಸುಗಳು

ಅವರ ಚೊಣ್ಣದಲ್ಲಿ ಬಣ್ಣಗಳ ದಿಬ್ಬಣ

ಮರೆಮಾಚಲು ಸಮರ್ಥವಾದ ಸೆರಗಿಲ್ಲದೇ

ಉಬ್ಬಿ ಕಾಣುವ ಕಡು ಕಪ್ಪು ಚೆಲುವೆಯ ಸ್ತನ

ರೆಪ್ಪೆಯಾಡಿಸದೇ ದೃಷ್ಟಿ ನೆಟ್ಟ ಪುಂಡರು

ನಿನ್ನದೆನ್ನಲು ತನುವೂ ಇಲ್ಲ, ಮನವೂ ಇಲ್ಲ

ಕಂಗಳಲ್ಲಿನ ಕನಸುಗಳೆಲ್ಲಾ ಸತ್ತು ತೇಲುತ್ತಿವೆ!

ದೂರದಲ್ಲೆಲ್ಲೋ ಚುನಾವಣಾ ಭಾಷಣ

ಮೇರಾ ಭಾರತ್ ಮಹಾನ್…

ಮೈಕ್ ಒದರುತ್ತಿದೆ ಬದಿಯಲ್ಲಿ…………

ಟುರುಗುಟ್ಟುವ ಜಾತ್ರೆಯ ಉದ್ದನೆಯ ಪಿಸ್ತೂಲುಗಳು!

ಒಂದೇ ಮೊಳೆಯಲ್ಲಿ ತೂಗುವ, ಮುರಿದ ಫ್ರೇಮಿನ

ಒಡೆದ ಗಾಜಿನ, ಫೋಟೋದಡಿ ನಸು ನಗುವ ಗಾಂಧಿ

ಇತ್ತ ಚಿತ್ತ ಹಾಯಿಸಿ,

ಪಟ್ಟ ತೊಟ್ಟವರೇ…

ಹೇವರವ ಹೈರಾಣಾಗಿಸಿ

ಕೃಪೆ ತೋರಿರಿ…

ಸೊಕ್ಕಿನ ಬೆಕ್ಕಿನ ಬಗ್ಗೆ ಒಂದಿಷ್ಟು…

ಬೆಕ್ಕುಗಳಿಗೆ ಬಡಿವಾರವಿಲ್ಲ
ಮೆಲ್ಲನೆ ತೊಡೆಗೇರಿಸುತ್ತವೆ ಗಲ್ಲ
ಹೆಂಗಸರೋ ಗಂಡಸರೋ
ಅಥವಾ ಮತ್ತಿನ್ಯಾರೋ
ವಯಸಿನಂತರವೂ ಇಲ್ಲ
ಲಿಂಗ ಬೇಧವೂ ಇಲ್ಲ
ಉಣ್ಣುವ, ಮಲಗುವ
ಮುಂಚಿನ ಹೊರತು ರಿವಾಜೂ ಸಲ್ಲ!
ಮಡಿಲು ಬೆಚ್ಚಗಿದ್ದರೆ ಸರಿ

ಮಡಿಲೇರಿದ ಬೆಕ್ಕು
ಅಂಗಾಲು ಅಗಲಿಸಿ ನೆಕ್ಕು
ನೀಟಾಗಿ ಮಡಿಸಿ ಮಲಗಿ-
ದರೆ ದೃಷ್ಟಿಯಾಗಬೇಕು
ಮರುದಿನ ತಟ್ಟೆಗೆ ಹಾಕಿದ
ಹಾಲನ್ನೂ ಬಿಡೋವಷ್ಟು
ಅಥವಾ ಕುಡಿದು ಬಿಡೋವಷ್ಟು!

ಪಾಪಿ ಬೆಕ್ಕುಗಳು ಪಾಪದ
ಹಕ್ಕಿಗಳನ್ನು ಹೊಟ್ಟೆಗಾಕಿಕೊಳ್ಳುತ್ತವೆ
ಬರೀ ಚಕ್ಕಳದ ಗೂಡಿನ
ಚೆಂದದ ಬಟ್ಟೆತೊಟ್ಟವಾದರೂ
ತಿನ್ನುವ ಚಪಲವೇಕೋ?
ಮೊನ್ನೆ ಚಿಟ್ಟೆಯ ರೆಕ್ಕೆಯ
ಬಣ್ಣದ ರವೆ ನಮ್ಮನೆ ಬೆಕ್ಕಿನ
ಬಲ ಮೀಸೆಗಂಟಿತ್ತು!

ಬೆಕ್ಕು ನಮ್ಮನೆಯದೋ?
ಲಂಡನ್ನಿನ ರಾಣಿಯದೋ?
ಉದ್ದದ ನಿಲುವಂಗಿ ತೊಟ್ಟ
ಮಾಯಾಂಗನೆಯದೋ?
ಬೆಕ್ಕು ಬೆಕ್ಕಲ್ಲದೇ ಮತ್ತೇನಲ್ಲ!!!

                        

ಕಸುವಿಲ್ಲದ ಕನಸುಗಳು!

ಹದಗೆಟ್ಟ ತರಕಾರಿ ಪಲ್ಯದೊಡನೆ
ಸೀದು ಹೋದ ಅನ್ನ
ಬೀಡು ಬಿಡುಸಾಗಿ ಎಸೆದದ್ದು
ಪ್ರತೀ ಕೊಚ್ಚಲೂ ಬರೀ ನಾರು
ಅಜ್ಜಿ ಹೇಳುವ ಕಥೆಗಳಂತೆ!

ಬುರುಡೆ ಉರಿಯುವ ಸದ್ದು
ಚಿಟಿ ಪಿಟಿ ಠೇಂಕರಿಸಿದ್ದು, ಠಪ್‌ಗುಟ್ಟಿದ್ದು
ಭಯದ ಅರ್ಥ ಕವುಚಿಕೊಂಡಿದ್ದಲ್ಲೇ
ಎದೆಯ ಮೇಲೆ ಚಿಮುರು ಕೂದಲುಗಳು
ಮೊಳೆಯಲಾರಂಭಿಸಿದಾಗ,
ಬೆವರ ಹನಿಗಳಲ್ಲಿ ಸಾಲುಗಟ್ಟತೊಡಗಿದಾಗ.
ಬೀಡಾಡಿ ಬಸವ ನೀನು, ಬೈಗುಳಗಳ ಬುಟ್ಟಿ,
ತೀರಾ ಕೊನೆಗೆ ಕಿಂಚಿತ್ ಭಾವನೆಗಳನ್ನೂ
ಆಪೋಶನ ತೆಗೆದು ಕೊಂಡಿದ್ದು.

ಶುಷ್ಕ ನೆಲದೊಳಗೆ ಅವಿತೇ ಇದ್ದೆ ನಾನು
ಗಮ್ಯ ಮಾತ್ರ ಅನಂತದೆತ್ತರಕ್ಕೆ ಯಾನ
ಪ್ರೇಯಸಿಯ ಸೆಟೆದ ಮೊಲೆಗಳಿಗೆ ಸಮಾನ
ಯೌವ್ವನದ ಕಸುವು ತುಂಬಿದ ಉಮೇದಿನಲ್ಲಿ
ಅಂದಾಜಿಗೆ ನಿಲುಕದ್ದು ಆಳೆತ್ತರಗಳು!
ಇನ್ನಾದರೂ ಹೊರಟೀತೆ ಮೆರವಣಿಗೆ;
ಪಲ್ಲಂಗವಿರುವ ಸಾಲು ಪಲ್ಲಕ್ಕಿಗಳೊಡನೆ?

ಇಂದಿಗೂ ಬಡಿದಾಡಲು ಸಿದ್ಧ;
ದೃಢವಾಗಿರಲೂ, ಬಂಡೆಗಲ್ಲಿನಂತೆ
ಆದರೆ ಬೆಳ್ಳಂಬೆಳಗಿನ ಹಸಿರಸಿರು ಚಿಗುರು,
ಬೆಚ್ಚಗೆ ತಬ್ಬಿದ ಮಿನುಗುವ ಇಬ್ಬನಿ,
ಪರಿಸ್ಥಿತಿಯನ್ನೇ ಕೆದಕುವ ಮುದಿ ಕೋಲುಗಳು,
ದಪ್ಪನೆಯ ಉಲ್ಲನ್ ಸ್ವೆಟರ್
ಕಪ್ಪು ಫ್ರೇಮಿನ ಅಗಲ ಕನ್ನಡಕದಡಿ
ಮಂಜುಗಟ್ಟಿದ ಅಣಕಿಸುವ ಕಿರುಗಣ್ಣುಗಳು…

ತೀರಾ ಅಧೀರನೆನಿಸುತ್ತಿದೆ
ಕೋಟ್ಯಂತರ ವರ್ಷಗಳೇ ಮುಗಿದು ಹೋದವಾ?
ನನಸಾಗುವ ನಿಟ್ಟಿನಲ್ಲಿ ಬಡಿದಾಡುತ್ತಿದ್ದ
ಕನಸುಗಳೂ ಕದನ ವಿರಾಮ ಘೋಷಿಸಿಬಿಟ್ಟವಾ?

ನನಗೀಗ ಅಂಜಿಕೆ!
ಬದುಕುವ ಭಯ
ಎದೆಯ ಮೇಲಿನ ಕೂದಲುಗಳು
ಮತ್ತೆ ಮತ್ತೆ ನಗುತ್ತಿವೆ
ಕಪ್ಪು ಕಪ್ಪಾಗೇ…
ಅದಕ್ಕೇ ಹೆದರಿಕೆ!!

ಗುರಿಯ ತುದಿಯಲ್ಲಿ ಗುಲಗಂಜಿ…!

ನನಗೆ ಎಂಟೋ ಒಂಭತ್ತೋ, ಅಪ್ಪನ ಕಳ
ಕೊಂಡು ತಿಂಗಳೊಂದೋ ಎರಡೋ
ಸಲಿಗೆತ್ತು ಆತನಲ್ಲಿ
ಸಡಗರ”ತ್ತು ಆತನಿದ್ದಲ್ಲಿ
ಈಗ ಆ ಜಾಗದಲ್ಲಿ
“ಷಾದವೋ ತಿಳಿಯದನೋ”ದೆ ಅನ್ನಿಸುತ್ತಿದೆ

ಗುಲಗಂಜಿಯ ಗುಡ್ಡೆ ಹಾಕು
ಅಪ್ಪ ಹುಡುಕಿ ಬರುತ್ತಾನೆ ಎಂದವ
ಹನ್ನೆರಡರ ಮದ್ಯಾಹ್ನದ
ಭೂರೀ ಭೋಜನದ
ನಂತರ ಪತ್ತೆಗೆ ಸಿಗಲಿಲ್ಲ,
’ಡೆಲ್ಲಿ’ಗೇ ಹೋಗಿರಬೇಕು…!
ಬರುವನೇನೋ ಇಂದು, ನಾಳೆ

ಅಮ್ಮ ಭದ್ರ ಮಾಡಿದ್ದ
ಅಪ್ಪನ ಮಾಸಿದ ಪಂಚೆಗೆ
ಗುಲಗಂಜಿ ತುಂಬಿಸಿ ಬಿಗಿಗೊಳಿಸಿದ್ದೇನೆ
ನಡುರಾತ್ರಿ ದಾಟಿದರೂ
ನಿದ್ದೆ ಹತ್ತುತ್ತಿಲ್ಲವಲ್ಲ ?! ಕಾಯು”ಕೆಗೆ
ಕನಸಲ್ಲೂ ಹಾಜರಿ ಕಡ್ಡಾಯ
ಹ್ಞಾ ! ಈಗ ನಿದ್ರೆ ಬರುತ್ತಿದೆ!!

ಆ ’ಕೆಂಪು’ ಮರಗಳ ನಡುವೆ
ಮೊಲಗಳ ಗುಂಪೇ ಅದು?
ಅಸ್ಪಷ್ಟ ಕಾಡೋ, ಕಣ್ಣೋ? ಓಹ್…!
ಗುಲಗಂಜಿ ತುಂಬಿಸಿಟ್ಟ ಚೀಲಗಳು
ಬಹಳಿವೆ ಎಲ್ಲಾ ಅರೆ ಬೆತ್ತಲು
ನನ್ನ ಗಂಟು…, ಅದೋ ಆ ಮೂಲೆಗಿದೆ
ಬಿಳಿ ಮೊಲದ ಸನಿಹದಲ್ಲಿ, ಅಷ್ಟು ಕೆಂಪಗಾಗಿ…!!