Archive for the ‘ಇತರೆ’ Category

ಬೆಡ್ ಶೀಟ್ ಗಳು, ಕನಸುಗಳು ಮತ್ತು ಬೆಕ್ಕಿನ ಬಾಲ

ತುಂಟ ಗೆಳತಿಯರಿಬ್ಬರಿದ್ದಾರೆ. ಆಗಾಗ ಹೊಸ ಮುಖದಲ್ಲಿ ಎದುರ್ಗೊಂಡು ಹೊಟ್ಟೆ ಕಿಚ್ಚೆಬ್ಬಿಸುವವರು. ಒಬ್ಬಾಕೆ ರವೀಂದ್ರರ ಶಾಂತಿ ನಿಕೇತನದಲ್ಲಿ ಹೊಸ ದಾರಿ ಹುಡುಕುತ್ತ, ಇನ್ನೊಬ್ಬಳು ತಣ್ಣನೆಯ ಮೈಸೂರಲ್ಲಿ ಬೆಕ್ಕುಗಳನ್ನು ಪ್ರೀತಿಸುತ್ತಾ ಅಚ್ಚರಿ ಹುಟ್ಟಿಸುತ್ತಿದ್ದಾರೆ. ಅವರ ಕಾಮಗಾರಿಗಳನ್ನು ಬೆರಗುಗಣ್ಣಲ್ಲಿ ನೋಡುತ್ತಿದ್ದರೆ ಅವರನ್ನು ಗೋಳು ಹುಯ್ದುಕೊಂಡು ಸುಖಾ ಸುಮ್ಮನೆ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾ ಕುಳಿತು ಬಿಡೋಣವೆನ್ನಿಸುತ್ತದೆ. ಗೆಳತಿಯರ ಹೊಸ ಸಾಹಸಕ್ಕಾಗಿ ಇಲ್ಲಿ (ವನಿತಾ) ಮತ್ತು ಇಲ್ಲಿ (ಆಶಿತಾ) ಕ್ಲಿಕ್ಕಿಸಿ.

ತಿರುವುಗಳಲ್ಲಿ ಕಳೆದು ಹೋಗುತ್ತಾ…

ಎರಡು ದಿನದಿಂದ ಹುಚ್ಚು ಹತ್ತಿದವನಂತೆ ಶಿವಾಜಿನಗರದ ಗಲ್ಲಿಗಳನ್ನು ತಡಕಾಡುತ್ತಿದ್ದೇನೆ. ಹೊಸದಾಗಿ ಕೊಂಡ ಅಕ್ವೇರಿಯಂ ಅಂದಗಾಣಿಸುವುದೇ ನೆಪವಾಗಿ ಪ್ರತಿ ದಿನ ಸಂಜೆ ಆಪೀಸು ಮುಗಿಸಿ ಹೊಸ ಗಲ್ಲಿಗಳನ್ನು ಹುಡುಕುವ ಒಳ್ಳೆಯ ಸಾಹಸ ಮಾಡುವುದು ನನಗೆ ರಾಶಿ ಮಜಾ ಅನ್ನಿಸುತ್ತಿದೆ. ಮೊನ್ನೆ ಹೋಗುತ್ತಾ ಮೀನು ಹುಡುಕುವುದೇ, ತಿರುಗುವ ಉದ್ದೇಶವಾಗಿತ್ತು. ಶಿವಾಜಿನಗರದ ಸುತ್ತ ತೆಳುವಾಗಿ ಹರಡಿಕೊಂಡ ಮೀನಿನಂಗಡಿಗಳನ್ನು ಒಂದೊಂದೇ ಎಡತಾಕುತ್ತಾ ಹೊಸದಾಗಿ ಮತ್ಯಾವ ಪ್ರಾಣಿಗಳನ್ನು ನಾನಿರೋ ಪರಿಸ್ಥಿತಿಯಲ್ಲಿ ಸಾಕಬಹುದು ಎಂದು ಯೋಚಿಸುತ್ತಿದ್ದರೂ ಬಣ್ಣದ ಮೀನುಗಳೇ ತಲೆಯಲ್ಲಿ ಬಾಲ ಬಡಿಯುತ್ತಿದ್ದವು. ತಟ್ಟನೆ ರವೀಂದ್ರರ ‘ಶಾಂತಿ ನಿಕೇತನ’ ನೆನಪಾಗಿಬಿಟ್ಟಿತು.
ನಾಲ್ಕೋ ಐದೋ ವರ್ಷಕ್ಕೆ ಮೊದಲು ಶಾಂತಿ ನಿಕೇತನಕ್ಕೆ ದಿಕ್ಕುಗೆಟ್ಟ ವಲಸಿಗರಂತೆ ದಾಂಗುಡಿಯಿಟ್ಟಾಗ  ಪುಟ್ಟ ಮಣ್ಣಿನ ಪಾಟುಗಳಲ್ಲಿ ಮೊಸರು ಮಾರುತ್ತಿದ್ದರು. ಅಲ್ಲಿನ ಕ್ಯಾಂಟೀನಿನಲ್ಲಿ ಮದ್ಯಾಹ್ನದ ಊಟಕ್ಕೆ ಹೋದಾಗ ರುಚಿಯಾದ ಅಚ್ಚ ಹಳದಿ ಕಲರಿನ ದಾಲ್ ಇತ್ತು. ಖುಷಿಯಾಗಿ ಒಂದೆರಡು ತುತ್ತು ಹೊಟ್ಟೆಗಿಳಿಸುತ್ತಿದ್ದಂತೆ ಪಕ್ಕದಲ್ಲಿದ್ದ ಪಲ್ಯ ಚಳಕ್ಕನೆ ಹೊಳೆಯಿತು! ಕೈ ಹಾಕಿದರೆ ಸಿಕ್ಕಿದ್ದೇ ಮೀನ ಪೀಸು! ಪಕ್ಕಾ ಶಾಖಾಹಾರಿ ಊಟವೆಂದು ನಮಗೆ ಪಸೆ ಹಾಕಿದ ತಲೆ ಕೆರದುಕೊಳ್ಳುತ್ತಿದ್ದವ ಅವತ್ತು ಎಡ ಮಗ್ಗುಲಲ್ಲೆದ್ದಿರಬೇಕು. ಆದರೆ ಆಮೇಲಷ್ಟೇ ನಮಗೆ ಗೊತ್ತಾಗಿದ್ದು. ಕೋಲ್ಕತ್ತಾ ಜನಕ್ಕೆ ಮೀನು ಅಪ್ಪಟ ಸಸ್ಯಾಹಾರ. ಅಲ್ಲಿಂದಾಮೇಲೆ ನಾನು ತಿಂದಿದ್ದು ಬಿಸ್ಕತ್ ಮತ್ತು ಶಾಂತಿನಿಕೇತನದ ಕುಖ್ಯಾತ ಹುಡಿ ಧೂಳನ್ನು ಮಾತ್ರ! ಹಾಗಾಗಿ ಮೀನಿನೊಡನೆ ಸಹಾ ನೆನಪುಗಳ ಬೆಸುಗೆ ನನಗಿವೆಯಲ್ಲಾ ಎಂದು ಸುಮ್ಮನೆ ಖುಷಿಪಟ್ಟೆ ಮೊನ್ನೆದಿನ.
ಇಡೀ ಭಾರತವನ್ನೇ ರೈಲಿನಲ್ಲಿ ಕಂಡೆ, ಬಸ್ಸಿನಲ್ಲಿ ಕಂಡೆ ಎಂಬೆಲ್ಲಾ ಬಡ ಪದಗಳನ್ನು ಜೋಡಿಸುತ್ತಿದ್ದವರನ್ನು ನೆನೆದು ‘ನಾನು ಶಿವಾಜಿನಗರದಲ್ಲಿ ಅದನ್ನು ಕಂಡೆ’ ಎಂದು ಅವರಿಗೆಲ್ಲ ಮನಸ್ಸಲ್ಲೇ ಸಂದೇಶ ಮುಟ್ಟಿಸಿದೆ. ಮತ್ತು ಹಾಗನಿಸಿದ್ದು ಅದೆಷ್ಟು ಅರ್ಥಪೂರ್ಣ ಅಂದುಕೊಂಡು, ಕತ್ತಲಿದ್ದಿದ್ದರಿಂದ ನಕ್ಕುಬಿಟ್ಟೆ. ಅಂದ ಹಾಗೆ ಅಲ್ಲಿನ ರಸಲ್ ಮಾರ್ಕೆಟಿನ  ಮೊದಲ ಅಂಗಡಿಯ ಹೆಸರು ಶ್ರೀ ವಿನಾಯಕ ಫ್ಲವರ್ ಸ್ಟಾಲ್! ಇನ್ನೊಂದು ವಿಶೇಷ ಕೇಳಿ. 1927 ರಲ್ಲಿ ಕಣ್ಣುಬಿಟ್ಟ ರಸಲ್ ಮಾರ್ಕೆಟ್, 1882 ರಷ್ಟು ಹಿಂದೆ ಕಟ್ಟಿದ ಮತ್ತು ರಾಜ್ಯದ ಏಕೈಕ ಪುಟ್ಟ ಬೆಸೆಲಿಕಾಳನ್ನು ಪೂಜಿಸುವ, ಬೆಂಗಳೂರಿನ ಅತಿ ಹಳೆಯ ಚರ್ಚ್  ಸೇಂಟ್ ಮೇರಿ ಬೆಸಲಿಕಾ ಚರ್ಚಿನ ತುಸು ಕೆಳಕ್ಕೆ ಚಾಚಿಕೊಂಡಿದೆ. ರಸೆಲ್ ಮಾರ್ಕೆಟ್ ನಲ್ಲಿ ಸಿಗುವ ವಸ್ತು ವೈವಿಧ್ಯಗಳೇ ಕುತೂಹಲ ಹುಟ್ಟಿಸುವಂತಿದೆ. ಮೀನಾಕ್ಷಿ ಕೊಯಲ್ ರಸ್ತೆ, ಚಾಂದಿನಿ ಚೌಕ್ ರಸ್ತೆ, ಜುಮ್ಮಾ ಮಸೀದಿ ರಸ್ತೆ ಎಲ್ಲವೂ ಒಂದರೊಳಗೊಂದು ಥಳುಕು ಹಾಕಿಕೊಂಡು ಶಿವಾಜಿನಗರವನ್ನು ಶೃಂಗರಿಸಿವೆ. ನೀವು ಊಹಿಸಿಕೊಳ್ಳಿ, ನಾನು ಗ್ರಹಿಸಿದಂತೆ ಶಿವಾಜಿನಗರ ಹೀಗಿದೆ. ಸುತ್ತ ಒಂದು ಪದರ ಮುಸಲ್ಮಾನರದ್ದು, ನಡುವಿನ ಬಹಳಷ್ಟು ಮಳಿಗೆಗಳು ಹಿಂದೂ ತಮಿಳರದ್ದು. ಮತ್ತು ನಡುವಿನ ಬಹಳಷ್ಟು ಮನೆಗಳು ಸಾಮಾನ್ಯವಾಗಿ ಕ್ರಿಶ್ಚಿಯನ್ನರದ್ದು. ಇಂತಹ ಹಲವು ವೈರುಧ್ಯಗಳು ತುಂಬಿ ಶಿವಾಜಿನಗರ ಅಚ್ಚರಿಯ ತಾಣವಾಗಿ ನನ್ನನ್ನು ಮತ್ತೆ ಕರೆಯುವಂತಿದೆ.


ದನದ ದೇಹವನ್ನು ನೇತು ಬಿಟ್ಟಿರುವ, ನಂಗೆ ಮತ್ತು ನನ್ನಂತವರಿಗೆ ಕರಾಳವೆನಿಸುವ ಅಂಗಡಿಯಲ್ಲೇ ಉಪ್ಪು, ಕೊತ್ತುಂಬರಿ ಸೊಪ್ಪು ಹಾಕಿ ಹದವಾಗಿರುವ ಮಜ್ಜಿಗೆಯೂ ಸಿಗುತ್ತದೆ. ನಡು ನಡುವೆ ಶ್ರೀ ವೆಂಕಟೇಶ್ವರ ಆಯಿಲ್ ಶಾಪ್, ಅಬ್ದುಲ್ ರೆಹಮಾನ್ ಮಿಲ್ಕ್ ದುಕಾನ್ ಎಲ್ಲವೂ ಬಯಲು ಗದ್ದೆಯ ನಡುವಿನ ಮರಗಳಂತೆ ಎದ್ದು ಕಾಣುತ್ತವೆ. ರಸಲ್ ಮಾರುಕಟ್ಟೆ, ಬೀಫ್ ಮಾರುಕಟ್ಟೆಯ ಸುತ್ತಣ ಜಾಗದಲ್ಲಿ ಬರಿ ಹಿಂದಿ, ತಮಿಳುಗಳಷ್ಟೇ ಗಿಲಿಗಿಲಿಯೆನ್ನುತ್ತವೆ. ಕನ್ನಡದಲ್ಲಿ ದಾರಿ ಕೇಳಿದ ನಂಗೆ ಎಲ್ಲೂ ಅದು ಗೀಟಲಿಲ್ಲ. ರಸೆಲ್ ಮಾರುಕಟ್ಟೆಯ ಕೂಗಳತೆಯ ದೂರದಲ್ಲೇ ಬೀಫ್ ಮಾರುಕಟ್ಟೆಯಿದೆ. ಆಸುಪಾಸು ಹೆಜ್ಜೆಯಿಡುತ್ತಿದ್ದಂತೆ ಅಲ್ಲೆಲ್ಲ ಪಸರಿಸಿರೋ ಕಮಟು ಘಮಲು ನಮ್ಮದೇ ಬೆವರ ನಾತವೋ ಎಂಬಂತೆ ಹಿಂಬಾಲಿಸುತ್ತದೆ. ಇನ್ ಫ್ಯಾಂಟರೀ ರಸ್ತೆಯ ನೆಲ ಮಹಡಿಯಲ್ಲಿರುವ ‘ವೆಟ್ ಪೆಟ್‘ ಅಂಗಡಿಯಲ್ಲಿ ಅನೇಕ ಸಾಕು ಪಕ್ಷಿ, ಪ್ರಾಣಿ, ಜಲಚರಗಳು ಸಿಗುತ್ತವೆ. ಅದೇ ಹೆಸರಿಟ್ಟುಕೊಂಡ ಅಂಗಡಿ ಬೀಫ್ ಮಾರುಕಟ್ಟೆಯ ಬಲ ಪಾರ್ಶ್ವದಲ್ಲೂ ಇದೆ. ಆದರೆ ಅದು ಮತ್ತಷ್ಟು ಅಗಾಧ. ಪುಟ್ಟ ಬೆಕ್ಕು, ಕುನ್ನಿಮರಿಗಳು, ಸುಂಡಿಲಿ ಇತ್ಯಾದಿಗಳು, ಬಾತು, ಹಮ್ಮಿಂಗ್, ಪಾರಿವಾಳಗಳು, ಹತ್ತೆಂಟು ಸಾವಿರ ಬೆಲೆಬಾಳುವ ಮೀನಕುಲ ಎಲ್ಲವೂ ಅಲ್ಲಿ ಓಡಾಡಿಕೊಂಡಿರುತ್ತವೆ. ಮೆದು ಮನಸ್ಸಿನವರಿಗೆ ಇವೆಲ್ಲ ಕಿರಿಕಿರಿ ಹಿಂಸೆ ಎನಿಸುವುದೇನೋ ಸರಿಯೇ. ಆದರೆ ಅಲ್ಲಿ ಸಿಗುವ ತಾಜಾ ಜೀವನ ಶೈಲಿ ನಮ್ಮನ್ನೇ ಮರೆಸುವುದು. ಅಲ್ಲಿನ ಮೆತ್ತಿಯ ಮೇಲೆ ಪಾಚಿ ಹಿಡಿದು ಗಲೀಜಾದ ನೀರಲ್ಲಿ ಗಟ್ಟಿ ಜೀವದ ಮೀನುಗಳು ಬದುಕುತ್ತವೆ. ಐವತ್ತೋ, ಅರವತ್ತೋ ತೆತ್ತರೆ ಅಲ್ಲಿನ ಕೆಲ ಮೀನುಗಳಿಗೆ ಶಿವಾಜಿನಗರದ ಸಂಗ ಖಾಯಂ ಆಗಿ ತಪ್ಪುತ್ತದೆ. ಅಲ್ಲಿನ ಅಕ್ವೇರಿಯಂಗಳಲ್ಲಿರುವ ‘ಕಿಸ್ಸಿಂಗ್ ಗೌರಾಮಿ’ ಎಂಬ ಚೆಂದದ ಹೆಸರಿಟ್ಟುಕೊಂಡ ಮೀನುಗಳಿಗೆ ತಮ್ಮ ಹೆಸರ ಅರ್ಥ ತಿಳಿದುಕೊಳ್ಳೋ ಹುಮ್ಮಸ್ಸೂ ಇರಲಿಕ್ಕಿಲ್ಲ. (ನಿಜವೇನೆಂದರೆ ಈ ಮೀನುಗಳು ತುಟಿ ತಾಗಿಸಿ ಎದುರು ಬದುರಾಗುವ ನಿಜವಾದ ಉದ್ದೇಶ ಬೇರೆಯದೇ ಇದೆಯಂತೆ. ಪರಸ್ಪರ ಸಾಮರ್ಥ್ಯ ನಿರೂಪಣೆಯೇ ಇದಕ್ಕೆ ಕಾರಣವಂತೆ…) ಆ ಕಿರಿ ಓಣಿಯಲ್ಲಿ ಅಕ್ಕ ಪಕ್ಕ ತುಂಬಿಕೊಂಡಿರೋ ಮಾರಾಟದ ಎಲ್ಲ ಜೀವಗಳೂ ನಮ್ಮನ್ನೇ ಕ್ಷೀಣವಾಗಿ ನೋಡಿ ಆರ್ತಿಸಿದಂತೆ ಕಂಡರೆ ಅವುಗಳ ಮೇಲೆ ಪ್ರೀತಿ ಹುಟ್ಟುವುದಕ್ಕಿಂತ, ಅಂತಹ ಸ್ಥಿತಿಯನ್ನೂ ಆಸ್ವಾದಿಸುವ ಬುದ್ಧಿ ಹುಟ್ಟುವ ನಮ್ಮ ಮೇಲೆ ನಮಗೇ ಕನಿಕರ ಹುಟ್ಟಬಹುದೇನೋ…!  ಈ ಯಾವ ಸಂಗತಿಗಳೂ ಅಲ್ಲಿ ನೆನಪಾಗದಿದ್ದುದು ನನ್ನನ್ನು ಮತ್ತಷ್ಟು ನೀಚನನ್ನಾಗಿಸಿ ನಂತರ ಈಗ ಕಾಡುತ್ತಿದೆ.

ಅಲ್ಲಿನ ಹುಡಿಗಳನ್ನೆಲ್ಲ ಹಚ್ಚಿಕೊಂಡು ವಾಪಸ್ ಅದೇ ದಾರಿಯಲ್ಲೇ ಬರುವ ಮನಸ್ಸಾಗದೇ ಹೊಸ ದಾರಿ ಹುಡುಕ ಹೊರಟರೆ ಹೊಸ ಪ್ರಪಂಚವೇ ಎದುರಾಯಿತು. ಗಲ್ಲಿಗಳಲ್ಲಿ ನುಗ್ಗುತ್ತಾ ಬಂದವನಿಗೆ ಕಾರು, ಸ್ಕೂಟರುಗಳ ಬಿಡಿ ಭಾಗಗಳು  ಮುಕ್ಕಾಗಿ, ತುಕ್ಕು ಹಿಡಿದು ಕುಯ್ಯೋ ಮರ್ರೂ ಎನ್ನುತ್ತಿದ್ದ ಜಾಗ ಸಿಕ್ಕಿತು. ಇದೇ ಶಿವಾಜಿನಗರಕ್ಕೆ ಒಂದು ಹಂತದ ಕುಖ್ಯಾತಿ ಬರಲು ಕಾರಣವಾದ ಪ್ರದೇಶವಿರಬಹುದು. ಬೆಂಗಳೂರಲ್ಲಿ ರಾತ್ರೋ ರಾತ್ರಿ ಕಾಣೆಯಾಗುವ ವಾಹನಗಳು ಎಲ್ಲವನ್ನೂ ಕಳಕೊಂಡು ಕೊನೆಗೆ ಸೊನ್ನೆಯಾಗುವುದು ಇಲ್ಲೇ ಎಂಬುದು ಚಾಲ್ತಿಯ ಮಾತು. ಹಾಗಾಗಿ ವೈಪರೀತ್ಯ ಸನ್ನಿವೇಶಗಳಿಗೆ ಸಿದ್ಧನಾಗುವ ಹುಸಿ ಹುಂಬನಂತೆ ಮುರುಟಿಕೊಂಡು ಹೆಜ್ಜೆ ಹಾಕಿದ್ದೆ. ಅಂತಹ ವಿಶೇಷಗಳೇನೂ ಸಿಗದೇ ಬಣ್ಣದ ಟಾರ್ಪಾಲುಗಳಿಂದ ಮರೆಯಾಗಿ ಅಲ್ಲಲ್ಲಿ ಮಾತ್ರ ಇಣುಕುತ್ತಿದ್ದ ವಾಹನದ ಬಾಗಗಳನ್ನೇ ಇದು ಎಂತ ಖದೀಮನದ್ದಿರಬಹುದು, ಆತನಿಗೆ ಎಂತಹ ಗಡ್ದವಿರಬಹುದು, ಕಳಕೊಂಡ ಆತ ಹೇಗೆ ರೋಧಿಸಿರಬಹುದು ಎಂದೆಲ್ಲ ಹುಚ್ಚು ಹುಚ್ಚಾಗಿ ಯೋಚಿಸುತ್ತ ನಾನು ಹಾದಿ ಹಿಡಿದೆ. ದಾರಿಯ ಇಕ್ಕಟ್ಟಾದ ಗಲ್ಲಿಗಳಲ್ಲಿ ಮಕ್ಕಳ ಉಚ್ಚೆಯಷ್ಟು ಚಿಕ್ಕದಾದ ಧಾರೆಯ ನೀರ ನಲ್ಲಿಗಳ ಬುಡದಲ್ಲಿ ಕೆಂಪು, ಹಸಿರು ಕೊಡಗಳು ತಮ್ಮ ಸರದಿಗೆ ಕಾಯುತ್ತಾ ಆಕಳಿಸುತ್ತಿದ್ದವು. ಸಂಧಿಗಳ ನಡುವಿನ ಮನೆಗಳಲ್ಲಿನ ಏಸು ಮೂರ್ತಿಗೆ ಹತ್ತಿಸಿದ ಮೇಣದ ಬತ್ತಿ ಆಚೆಗೂ ಈಚೆಗೂ ಅಲ್ಲಾಡುತ್ತಾ ನನ್ನ ತಲೆಯಲ್ಲೇ ಕುಣಿಯುತ್ತಿತ್ತು. ನಂತರ ನಾನು ಬೆಸೆಲಿಕಾ ಚರ್ಚ್ ಕಮಾನಿನ ಸಂಧಿಯಲ್ಲೇ ನುಗ್ಗಿ ಈಚೆ ಬಂದೆ.

ಆಗಲೇ ವಿವೇಕಾನಂದರೂ, ದಿನೇಶ್ ಮಟ್ಟು ಬರಹವೂ, ಪ್ರತಿಕ್ರಿಯೆಗಳೂ ಇತರೆ ವಾದ ವಿವಾದಗಳೂ ಮತ್ತೆ ಸುಮ್ಮನೆ ನೆನಪಾಗಿ ಮತ್ತೆ ಮರೆತು ಹೋದವು. ಕ್ಷುಲ್ಲಕನಾಗಿರುವುದೇ ಸೌಭಾಗ್ಯ ಅನಿಸಿತು!
ಮುಂದಿನ ಸಾರಿ ಈ ಗಲ್ಲಿಗಳಲ್ಲಿ ಕಳೆಯುವಾಗ ಕ್ಯಾಮರಾ ಕೈಲಿರಲೇ ಬೇಕೆಂದುಕೊಂಡು ನಾನು ಮಲ್ಲೇಶ್ವರದ ಬಸ್ಸಿಗೆ ಕಾಯುತ್ತಾ ನಿಂತೆ.

ಚಿತ್ರಗಳು: ಅಂತರ್ಜಾಲ

‘ಪುಣ್ಯ, ನನಗಿನ್ನೂ ವಯಸ್ಸಾಗಿಲ್ಲ…ನಾ ತುಕಾರಾಂ ಅಲ್ಲ..!’

ಶೌಚಾಲಯದಲ್ಲೂ ಹೂ ಕುಕ್ಕೆಯಿಡುವ ರಂಗಶಂಕರದಲ್ಲಿ ಮೊನ್ನಿನ ಭಾನುವಾರದ ಸಂಜೆ ಘಮ್ಮೆನಿಸುವಂತಿತ್ತು!
ಅಲ್ಲೇ ಬುಡದಲ್ಲಿ ಸಿಗುವ ಅರವತ್ತು ರುಪಾಯಿಯ ಅಕ್ಕಿ ರೊಟ್ಟಿಯೂ, 50 -60ಕ್ಕೆ ಕಮ್ಮಿಯಿಲ್ಲದ ಇತರ ಮಾಂಸಾಹಾರಿ ಖಾದ್ಯಗಳು ಅಸಮಾನ ‘ಸಾಂಸ್ಕೃತಿಕ ಜಗತ್ತಿ’ನ ಪ್ರತಿಬಿಂಬಗಳಾಗಿ ಕಂಡು ತಣ್ಣನೆ ಆವೇಗ ಹುಟ್ಟಿಸುವಂತಿದ್ದವು. ಅಂದಹಾಗೆ ಅವತ್ತಿನ ನಾಟಕ ‘ನಾ ತುಕಾರಾಂ ಅಲ್ಲ’!


ಕಳೆದ ಮಾರ್ಚಲ್ಲೋ, ಮೇನಲ್ಲೋ ಈ ನಾಟಕವನ್ನು ನೋಡಿದ್ದು ಮರೆತಿರಲಿಲ್ಲ. ಅವತ್ತಿನ ಒಂದು ಮಜಾ ಘಟನೆಯೂ ಮೊನ್ನೆ ರಂಗಶಂಕರದಲ್ಲಿ ನೆನಪಾಯಿತು. ಅವತ್ತು ಹೀಗಾಗಿತ್ತು. ತಮಿಳಿನ ಹುಡುಗಿಯೊಬ್ಬಳು ಬಹಳ ಉತ್ಸಾಹದಿಂದ  ನಮ್ಮೊಡನೆ ನಾಟಕಕ್ಕೆ ಬಂದಿದ್ದಳು. ಸುತಾರಾಂ ಕನ್ನಡ ಅರ್ಥವಾಗದಿದ್ದರೂ ಆಕೆಗೆ ನಾಟಕದ ಹುಚ್ಚು. ದುರದೃಷ್ಟವಶಾತ್(?) ಅವತ್ತಿನ ಶೋಗೆ ಪ್ರಕಾಶ್ ರೈ ಕೂಡ ಬಂದಿದ್ದರು. ಆಕೆಗೋ, ನಾಟಕ ನೋಡುವುದೋ ಪ್ರಕಾಶರನ್ನು ನೋಡುವುದೋ ಎಂಬ ಗೊಂದಲ. ಸಿನಿಮಾದವ್ರೂ ನಾಟಕವನ್ನು, ಅದರಲ್ಲೂ ಬುಡದಿಂದ ಕೊನೆವರೆಗೂ ಕುಳಿತು ನೋಡ್ತಾರಾ? ಎಂಬ ಅಚ್ಚರಿ ಆಕೆಗೆ. ನಾವು ತನ್ಮಯರಾಗಿ ನಾಟಕದಲ್ಲಿ ಮುಳುಗಿದ್ದರೆ ಆಕೆ ನಡು ನಡುವೆ ತನ್ನ  ಬ್ಯಾಗ್ ಒಳಕ್ಕೆ ಕೈ ಹಾಕಿ (ಮೊಬೈಲ್ ಹೊರತೆಗೆಯಬಾರದೆಂಬ ನಮ್ಮ ಎಚ್ಚರಿಕೆಗೆ ಬೆಲೆಗೊಟ್ಟು..!) ಗೆಳೆಯ, ಗೆಳತಿಯರಿಗೆಲ್ಲ ನಾನು ಪ್ರಕಾಶ್ ರೈ ಜೊತೆ ನಾಟಕ ನೋಡ್ತಿದೇನೆ(?), ಎಂಬ ಸಂದೇಶ ಕಳ್ಸಿದ್ದೇ ಕಳ್ಸಿದ್ದು 🙂
ಹರ್ಬ್ ಗಾರ್ಡನರ್ ನ ‘ಐ ಯಾಮ್ ನಾಟ್ ರ್ರ್ಯಾಪ್ಪಪೋರ್ಟ್ ‘ ನಾಟಕದ ಕನ್ನಡ ಅನುವಾದ ‘ನಾ ತುಕಾರಾಂ ಅಲ್ಲ’, ಸುರೇಂದ್ರನಾಥರ ಸಮರ್ಥ ಅನುವಾದದಲ್ಲಿ ಕನ್ನಡದ ಮೂಲ ನಾಟಕವೆಂಬಂತೆ ಭಾಸವಾಗುತ್ತದೆ. ಅದು ನಿಸ್ಸಂಶಯವಾಗಿ ಅನುವಾದಕನ ಗೆಲುವು. ಇಳಿ ವಯಸ್ಸಿನವರೆಲ್ಲರ ವೇದನಾ ಸುಳಿಯ ಕೇಂದ್ರವು ಸರ್ವೇ ಸಾಮಾನ್ಯವಾಗಿ ಒಂದೇ ಆಗಿರುವುದು ಆ ಗೆಲುವಿಗೆ ಮೆಟ್ಟಿಲಾಗಿದೆ. ಯಾವುದೇ ನಾಟಕದ ಪೂರ್ಣ ಉದ್ದೇಶವಾದ ರಸೋಲ್ಲಾಸ ಸಾಕಾರಗೊಳ್ಳುವುದು, ಕೃತಿ ರಂಗವೇರಿದಾಗ ಮಾತ್ರ. ಬಿ.ಸುರೇಶ, ಏಣಗಿ ನಟರಾಜ್, ಮೇಘ ನಾಡಿಗೇರ್ ಮತ್ತಿತರರ ಮೂಲಕ ಅದು ಪೂರ್ತಿಯಾಗಿದೆ. ಹೀಗೆಲ್ಲವೂ ಒಟ್ಟಿಗೆ ಸಂಭವಿಸಿತೆಂದರೆ ನಾಟಕ ಯಶಸ್ವಿಯಾದಂತೆಯೇ ತಾನೇ? ಹಾಗಾಗಿಯೇ ಟಿಕೆಟ್ ದರ ನಲವತ್ತೋ, ಅರವತ್ತೋ ಇದ್ದಿದ್ದು ಮೊನ್ನೆ ಹೋಗುವಷ್ಟರಲ್ಲಿ ನೂರಾಗಿತ್ತು! ಆ ಕುರಿತೇನೂ ಬೇಜಾರಿಲ್ಲ ಬಿಡಿ. ಮಸಾಲೆ ದೋಸೆಗೆ 30 ಪೈಸೆ ಹೆಚ್ಚಿಸಿದಕ್ಕೆ ನಗರವೇ ನಡುಗುವಂತೆ ಪ್ರತಿಭಟನೆ ಮಾಡುವವರು ಸೈಡಿಗಿರಲಿ. ಆ ಬಗ್ಗೆ ಸಣ್ಣ ಮಟ್ಟಿಗಿನ ವಿರೋಧಾಭಾವ ವ್ಯಕ್ತಪಡಿಸುವಷ್ಟೂ ಸಂವೇದನೆಗಳಿಲ್ಲದ (ಬರೀ ವೇದನೆಯೇ ತುಂಬಿರುವ…!) ಸಮಾಜದಲ್ಲಿ ನಾನೂ ಒಬ್ಬನಲ್ಲವೇ? ‘ನಾಟಕದ ಯಶಸ್ಸನ್ನು ಟಿಕೆಟ್ ರೇಟಲ್ಲಿ ನೋಡು’ ಎಂಬ ಹೊಸ ಗಾದೆಯನ್ನು ನನ್ನಷ್ಟಕ್ಕೆ ನಾನೇ ಕಟ್ಟಿಕೊಂಡೆ.
ಮತ್ತೆ ನಾಟಕದ ಕಡೆ ಬರೋಣ. ಇಡೀ ನಾಟಕವನ್ನು ತುಂಬಿರೋದು ಬಿ.ಸುರೇಶರು, ಅವರ ನಟನೆ ಮತ್ತು ಮಾತಿನ ಓಘದಲ್ಲಿ ನಾಟಕ ಓಡುತ್ತದೆ! ಕೆಲವೊಮ್ಮೆ ಅವರ ಜಾಗದಲ್ಲಿ ದತ್ತಣ್ಣ ಇದ್ದಿದ್ದರೆ ಎಂಬ ಕಲ್ಪನೆ ಹುಟ್ಟುತ್ತಿದ್ದುದು ಕೇವಲ ಆಕಸ್ಮಿಕ! ಸುರೇಶ, ಏಣಗಿ ನಟರಾಜ್ ಜೋಡಿ ಗಟ್ಟಿಯಾಗಿ ನಗಿಸುತ್ತಲೇ ಕಣ್ಣಂಚು ಒದ್ದೆ ಮಾಡುತ್ತಾರೆ. ಅದೂ ಗೊತ್ತಾಗದಂತೆ ಪ್ರೇಕ್ಷಕರು ಮತ್ತೆ ಮತ್ತೆ ಹುಯಿಲೆಬ್ಬಿಸಿ ನಗುತ್ತಾರೆ. ಬಹುಷಃ ಅದು ಒಂದರ್ಥದಲ್ಲಿ ನಾಟಕದ ಸೋಲೂ ಇರಬಹುದು. ವಿಷಾದವೇ ತುಂಬಿಕೊಂಡ ಸಂಭಾಷಣೆ, ಸನ್ನಿವೇಶಗಳು ಬರಿ ಸುಮ್ಮನೆ ನಗುವಿನಲ್ಲಿ ಕಳೆದು ಹೋಗುತ್ತವೆಯೇನೋ ಎಂಬಂತೆ ಭಾಸವಾಗುತ್ತವೆ. ವಿಷಾದವು ನಗುವಿನೊಡನೆ ಕಲೆತರೆ ಮತ್ತಷ್ಟು ಗಾಢವಾಗಿ ಮನಸಲ್ಲುಳಿಯುವುದೋ ಎಂಬ ಪ್ರಶ್ನೆ ನನಗಿನ್ನೂ ಬಗೆಹರಿದಿಲ್ಲ.  ‘ಎಂದೂ ಮುಗಿಯದ ಹಾದಿಯಲ್ಲಿ ನಿಧಾನವಾಗಿ ನಡೆಯುತ್ತಿರುವ ತಪ್ಪಿಗೆ’ ಭಾಗೀದಾರರಾದ ಇಬ್ಬರು ವೃದ್ಧರೂ ವಿಭಿನ್ನ ಧ್ರುವಗಳು. ವಾಸ್ತವವನ್ನು ಒಪ್ಪಿಕೊಂಡು, ಈಗ ಕಳೆದ ಬದುಕನ್ನೇ ಮುಂದುವರೆಸಿದರಾಯಿತು ಎಂಬುವವ ಒಬ್ಬ, ಇರುವಷ್ಟು ಬಾಳನ್ನು ಹೀರಿ ದಿನವೂ ಹೊಸದೆನಿಸುವಂತೆ ಬದುಕಬೇಕೆಂಬ ಹಠ  ತೊಟ್ಟವನೊಬ್ಬ. ಅವರ ದ್ವಂಧ್ವಗಳು, ವೈರುಧ್ಯಗಳು  ಸಂಗಮಿಸುವ ಕ್ಷೇತ್ರ ಲಾಲ್ ಬಾಗ್. ಅದೆಷ್ಟೋ ಹಿರಿಜೀವಗಳು ಕೂತು ವಿಷಣ್ಣರಾದ ಬೆಂಚುಗಳಿಗೆ ಕೃಷ್ಣಸ್ವಾಮಿ ಮತ್ತು ಡಾ.ಶ್ರೀಪಾದ್ ಡಾಂಗೆ, ಮಿ. ಮಯ್ಯರ್ ಮತ್ತು ಏನೇನೂ ಆಗಿರುವ, ಮತ್ತಷ್ಟು ಹೊಸ ಅವತಾರಗಳನ್ನೆತ್ತುವ ಬಯಕೆಯುಳ್ಳ, ನೊಂದವರಿಗೆ ಆಪದ್ಭಾಂದವನಾಗಬೇಕು ಎಂದುಕೊಳ್ಳುವ ವ್ಯಕ್ತಿ ನಿತ್ಯ ಸದಸ್ಯರಾಗಿರುತ್ತಾರೆ. ಕ್ರಮೇಣ ಕ್ರಾಂತಿ ಮತ್ತು ಶಾಂತಿಯ ಕೆಲ ಮಜಲುಗಳು (ನನಗನ್ನಿಸಿದಂತೆ) ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಮೊದಲೇ ಹೇಳಿದಂತೆ ನಗೆ ನಾಟಕವೆಂಬ ಹಣೆಪಟ್ಟಿಯಲ್ಲಿಯೇ ‘ನಾ ತುಕಾರಾಂ ಅಲ್ಲ’ ನೋಡುಗರಲ್ಲಿ ಸಂಚಲನವೆಬ್ಬಿಸುವಂತಿದೆ. ಅದಕ್ಕೆ ಇರಬೇಕು ಮೊನ್ನೆಯ ಶೋದಲ್ಲೂ (ಅದೆಷ್ಟನೆಯ ಶೋ ಗೊತ್ತಿಲ್ಲ.) 300 ಕ್ಕೂ ಮಿಕ್ಕಿದ ಜನಸಂದಣಿಯಿತ್ತು. ‘ಮುದುಕರ ಗೋಳು’ ಎಂದು ಬಿಸಿರಕ್ತದವರು ಕಡೆಗಾಣಿಸಿ ಬಿಡಬಹುದಾದ ಸಂದರ್ಭಗಳಲ್ಲಿನ ಅವರ ‘ತಲ್ಲಣ’ಗಳು ‘ಬಿಸಿ’ ಮುಟ್ಟಿಸುತ್ತವೆ. ಕೂತಲ್ಲೇ ಕನಲುವಂತೆ ಮಾಡುತ್ತವೆ. ನನಗೆ ವಯಸ್ಸಾಗುವುದೇ ಬೇಡ ಎಂದು ಆ ಕ್ಷಣಕ್ಕೆ ಅನ್ನಿಸಿದ್ದರಲ್ಲಿ ಆಶ್ಚರ್ಯವಿದೆಯೇ?!


ಕಳೆದ ವರ್ಷ ಕಾಣಿಸದಿದ್ದ ಕೆಲ ಅಂಶಗಳು ಮೊನ್ನೆ ಕಂಡವು. ಸುರೇಶರ ಸ್ವರ ಗಂಭೀರವಾಗಿಯೂ, ದೃಢವಾಗಿಯೂ ಇದೆ ನಿಜ. ಆದರೆ ಕೆಲವೊಂದು ಸಂಭಾಷಣೆಗಳ ಟೋನ್ ಒಂದೇ ಸಮನೆ ಕಿರಿಕಿರಿ ಹುಟ್ಟಿಸುವಷ್ಟು ಪುನರಾವರ್ತನೆಯಾಗುತ್ತವೆ. ಕೆಲ ಪದಗಳ ಬಳಕೆ ಅತಿಯಾಗಿ ಅಸಹನೆ ಹುಟ್ಟಿಸುತ್ತದೆ. (ಮೇಘಾ ನಾಡಿಗೇರ್ ಜೊತೆಗಿನ ಸನ್ನಿವೇಶಗಳಲ್ಲಿ ಮರಿ, ಮರಿ ಎನ್ನುವುದು, ಏಣಗಿ ಜೊತೆಗಿನ ಕೆಲ ಸನ್ನಿವೇಶಗಳಲ್ಲಿ ಪ್ರತಿ ವಾಕ್ಯದ ಕೊನೆಗೂ ಸ್ವಾಮಿ, ಸ್ವಾಮೀ ಸೇರಿಸುವುದು ಇತ್ಯಾದಿ.  ನಾಟಕದ ಪಟ್ಯದಲ್ಲೇ ಹಾಗಿರುವುದಾದರೆ ಈ ಕಂಪ್ಲೇಂಟ್ ಸುರೇಂದ್ರನಾಥ್ ಗೆ ವರ್ಗಾವಣೆ!) ಮೆಘಾ ನಾಡಿಗೇರ್ ಇರುವ 3,4 ನಿಮಿಷಗಳನ್ನು ತಮ್ಮದೇ ಮಾಡಿಕೊಳ್ಳುತ್ತಾರೆ. ಮಾವಳ್ಳಿ ಪಾಂಡು (ಶಿಕಾರಿ ಚಂದ್ರು ಇರಬೇಕು), ಮಿ. ನರಸೀಪುರ್ (ಬಾಲಾಜಿ ಮನೋಹರ್ ಇರಬೇಕು) ಹೀಗೆ ಬಂದು ಹಾಗೆ ಹೋದರೂ ಪಾತ್ರಗಳಿಗೆ ಒಂದಿನಿತೂ ಮೋಸ ಮಾಡಿಲ್ಲ. ಇಂಟರ್ನೆಟ್ ನಲ್ಲಿ ಓದಿ  ಸಿಹಿಕಹಿ ಚಂದ್ರುರವರ ನಟನೆಯನ್ನು ಕಲ್ಪಿಸಿಕೊಂಡಿದ್ದ ನನಗೆ ನೋಡಿದ ಎರಡೂ ಪ್ರದರ್ಶನದಲ್ಲೂ ನಿರಾಸೆಯೇ ಆಯಿತು. ಅವರು ನಾಟಕದಲ್ಲಿದ್ದಿದ್ದರೂ ಯಾವ ಪಾತ್ರ ನಿರ್ವಹಿಸುತ್ತಿದ್ದರು? ಅಥವಾ ಅವರ ಯಾವ ಪಾತ್ರ ನಾನು ನೋಡಿದ ಶೋಗಳಲ್ಲಿ ಇಲ್ಲವಾಗಿದೆ? ಎಂಬ ಕುತೂಹಲವಂತೂ ನನಗಿದ್ದೇ ಇದೆ. ನಾಟಕಕ್ಕೆ ಎರಡು ಭಾಗಗಳು. ಮೊದಲರ್ಧದ ನಂತರ 10 ನಿಮಿಷ ವಿರಾಮ. ಸಾಮಾನ್ಯವಾಗಿ ನಾಟಕ ಹುಟ್ಟಿಸುವ ಉದ್ವೇಗಕ್ಕೂ ಆಗ ವಿರಾಮ. ಆದರೆ ತುಕಾರಾಂ ವಿಷಯದಲ್ಲಿ ಇದು ಸುಳ್ಳಾಯಿತು 🙂
ಇಷ್ಟು ಮಾತ್ರ ಹೇಳಬಲ್ಲೆ. ಎರಡು ಬಾರಿ ನೋಡಿಯೂ ಪುನಹ ನೋಡುವ ಆಸಕ್ತಿಯನ್ನು ಉಳಿಸಿಕೊಂಡ, ಮತ್ತೆ ನೋಡಿದರೆ ಹೊಸದೇನಾದರೂ ದಕ್ಕೀತು ಎಂಬ ನಿರೀಕ್ಷೆಯನ್ನು  ಹುಟ್ಟಿಹಾಕಿದ್ದು ‘ನಾ ತುಕಾರಾಂ ಅಲ್ಲ’.

(ಚಿತ್ರ ಋಣ: ಅವಧಿ ಮತ್ತು ಇಂಟರ್ನೆಟ್; ಕ್ಯಾಮರಾ ತೆಗೆದುಕೊಂಡು ಹೋಗಿಯೂ ರಂಗ ಶಂಕರದಲ್ಲಿ ಕ್ಲಿಕ್ಕಿಸಬಾರದೆಂಬ ನಿಯಮವಿರುವುದು ನನಗೆ ಪಿಚ್ಚೆನಿಸಿದರೂ ಒಳ್ಳೆಯ ಬೆಳವಣಿಗೆಯೇ ಅನ್ನಿಸಿತು.)

ನಾಮವೊಂದೇ.. ಭಾವ ಹಲವು….!

ಅಬನೀಂದ್ರನಾಥ್ ಟ್ಯಾಗೋರ್ (7 ಆಗಸ್ಟ್ 1871 – 5 ಡಿಸೆಂಬರ್ 1951) ರ ಒಂದು ಚಿತ್ರ ಗಮನ ಸೆಳೆಯಿತು. “ಪ್ರಯಾಣದ ಕೊನೆ” ಎಂಬರ್ಥದ ಕಲಾಕೃತಿ ಇದು. ಇದೆ ಅರ್ಥ ಬರುವ ಕೆಲವು ಪಾಶ್ಚಾತ್ಯರ ಚಿತ್ರಗಳನ್ನೂ ‘ಕಲೆ’ ಹಾಕಿದೆ. ಪರಿಣಾಮ ಕೆಳಗಿದೆ. ಅನುಭವ ನಿಮಗಿದೆ..!


ಮೇಲಿನದು ಅಬನೀಂದ್ರರ ಕಲಾಕೃತಿ. ನವ ದೆಹಲಿಯ ಆಧುನಿಕ ಕಲಾ ಸಂಗ್ರಹಾಲಯದಲ್ಲಿದೆ.

 

ಮೇಲಿನದು ವರ್ಜೀನಿಯಾದ ಕಲಾವಿದೆ ‘ನೋರ್ಮಾ ವಿಲ್ಸನ್’ ರ ‘ಪ್ರಯಾಣದ ಕೊನೆ’

ಮೇಲಿರುವ ಕಲಾಕೃತಿ ಫ್ಲೋರಿಡಾದ ‘ಜಾಕ್ಸನ್ ವಿಲ್ಲೆ’ ಮೂಲದ ‘ಡೆನ್ನಿಸ್ ಟಾವಾಸ್’ (1954) ರದ್ದು.

ಮೇಲಿನದು ಜ್ಹೆಕೋಸ್ಲಾವಾಕಿಯ ಮೂಲದ ‘ಆಂಡ್ರ್ಯೂವಾಲ್ಕೋ’ ಎಂಬಾತನ Journey’s End ಚಿತ್ರ.


ಅಮೆರಿಕಾದ ‘ಡೇವಿಡ್ ಜೆ ಫೆಡೆಲಿ’ (1959) ಬಿಡಿಸಿದ ಚಿತ್ರ ಮೇಲ್ಕಂಡಂತಿದೆ.

(ಈ ಪೋಸ್ಟ್ ಕಳೆದ ಒಂದು ತಿಂಗಳಿನಿಂದಲೂ ನನ್ನ ಬ್ಲಾಗ್ ಬುಟ್ಟಿಯಲ್ಲೇ ಕೊಳೆಯುತ್ತಿತ್ತು. ಇದನ್ನು ಬ್ಲಾಗ್ ಗೆ ಹಾಕಲೋ ಬೇಡವೋ ಎಂಬ ವಿಚಿತ್ರ ಮನಸ್ಥಿತಿ ನನಗಿತ್ತು. ಕಾರಣ ಮತ್ತೇನಿಲ್ಲ, ವರ್ಡ್ ಪ್ರೆಸ್ ನವರು ಕೊಟ್ಟ ಪುಕ್ಕಟೆ ಜಾಗವನ್ನು ಅನರ್ಥಕವಾಗಿ (ಅನರ್ಥಕ ಎಂದರೆ ತಪ್ಪಾದೀತು. ಕಲೆ ಹೇಗೂ ಇರಲಿ, ಯಾವ ಪರಿಣಾಮವನ್ನೇ ಬೀರಲಿ, ಅದು ಒಂದಿಲ್ಲೊಂದು ವಿಚಾರದ ಸಾಕ್ಷಿಯಂತೂ ಹೌದಲ್ಲ..) ತುಂಬಿಸುತ್ತಿರುವೆನೇನೋ ಎಂಬ ಬಡಿವಾರವಷ್ಟೇ. ಆದರೆ ನನಗೆ ಮೂಡಿದ ಆಸಕ್ತಿ, ಕಂಡ ಮಿಂಚುಗಳು ಮತ್ತಷ್ಟು ಜನರಲ್ಲಿ, ಪುಟ್ಟ ಕಂಪನಗಳನ್ನಾದರೂ ಎಬ್ಬಿಸಬಹುದೇನೋ ಅನ್ನಿಸಿತು. ಹಾಗಾದ ಪಕ್ಷದಲ್ಲಿ ಒಂದೆರಡು ಸಾಲುಗಳು ನನಗಿರಲಿ.)


“ಪುಸ್ತಕ ಪ್ರಪಂಚ – 2011”

ಬೆಂಗಳೂರು ಮತ್ತೊಂದು ಬೃಹತ್ ಪುಸ್ತಕ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಲಿದೆ. ನೀವೂ ಆಗಬಹುದು.

“ಆರಿದ ದೀಪ” ಮತ್ತು “ಮಿಂಚಿದ ಕ್ಯಾಮರಾ”

ಸ್ಟೀವ್ ಮ್ಯಾಕ್ ಕರ್ರಿ ಜಗತ್ತು ಕಂಡ ಅದ್ಭುತ ಛಾಯಾ ಪತ್ರಕರ್ತ. ಸರ್ವೇ ಸಾಮಾನ್ಯ ವಿಷಯವೂ ಆತನ ಕ್ಯಾಮರಾ ಕಣ್ಣಲ್ಲಿ ಭಿನ್ನವಾಗೇ ಕಾಣುತ್ತದೆಂಬುದು ಆತನ ಹೆಚ್ಚುಗಾರಿಕೆ. 1950 ರಲ್ಲಿ  ಹುಟ್ಟಿದ ಆತ, ಸುತ್ತದ ದೇಶಗಳು ಕಮ್ಮಿ. ಅಫ್ಘಾನಿಸ್ತಾನ-ಸೋವಿಯತ್ ಯುದ್ಧದಲ್ಲಿ ಶುರುವಾದ ಆತನ ಚಿತ್ರ ಸರಣಿಗಳು ಆತನಿಗೆ ಬಹಳಷ್ಟು ಹೆಸರನ್ನು ತಂದುಕೊಟ್ಟವು. ಇರಾನ್-ಇರಾಕ್ ಯುದ್ಧ, ಕಾಂಬೋಡಿಯದ ಅಂತರ್ಯುದ್ಧಗಳು, ಗಲ್ಫ್ ಯುದ್ಧ ಎಲ್ಲವೂ ಸ್ಟೀವ್ ಗೆ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಲು ನೆರವಾದವು…!

ಇಷ್ಟಾಗಿಯೂ ಬಹುಮಟ್ಟಿಗೆ ಸ್ಟೀವ್ ವಿಶ್ವ ವಿಖ್ಯಾತನಾಗಿದ್ದು ‘ನ್ಯಾಷನಲ್ ಜಿಯೋಗ್ರಾಫಿಕ್’ ಗಾಗಿ ತೆಗೆದ ‘ಅಫ್ಘಾನ್ ಹುಡುಗಿ’ಯ ಚಿತ್ರದಿಂದಾಗಿ. ‘ನ್ಯಾಷನಲ್ ಜಿಯೋಗ್ರಾಫಿಕ್’ ಪತ್ರಿಕೆಯ, 1985-ಜೂನ್ ಸಂಚಿಕೆಯಲ್ಲಿ, ಮುಖಪುಟದಲ್ಲಿ ಅಚ್ಚಾದ ಈ ಚಿತ್ರ  ಸಂಚಲನವನ್ನೇ ಸೃಷ್ಟಿಸಿತು. ಅದಾಗಿ ಬಹಳ ವರ್ಷಗಳ ನಂತರ ಪುನಃ ‘ಅಫ್ಘಾನ್ ಹುಡುಗಿ’ಗಾಗಿ ಅರಸಿ ಆಕೆಯನ್ನು ಸ್ಟೀವ್ ಪತ್ತೆ ಮಾಡಿದ್ದು ಮತ್ತೊಂದು ರೋಚಕ ಕಥೆ.


ಈಗ ಮತ್ತೆ ಸ್ಟೀವ್ ನೆನಪಾಗಲು ಕಾರಣವಿಷ್ಟೇ. 2011 ರ ಜಪಾನ್ ನ ಭಯಂಕರ ತ್ಸುನಾಮಿಯ ನಂತರದ ಸನ್ನಿವೇಶಗಳು ಸ್ಟೀವ್ ನ ಕ್ಯಾಮರಾದಲ್ಲಿ ಬಂಧಿಯಾಗಿವೆ. ಮತ್ತೆ ಸಂಕಟದ ಊಟೆ ಒಡೆಯುವಂತೆ ಮಾಡಬಹುದಾದ ಈ ಚಿತ್ರಗಳನ್ನು ಸ್ಟೀವ್ ತನ್ನ ಅಧಿಕೃತ ತಾಣದಲ್ಲಿ upload ಮಾಡಿದ್ದಾನೆ. ಇವತ್ತು ಆ ಫೋಟೋಗಳನ್ನು ನೋಡುತ್ತಾ ಅದ್ಯಾಕೋ ಮನಸ್ಸು ಆರ್ದ್ರವಾಯಿತು. ಸ್ಟೀವ್ ನ ಖಾಸಗೀ ತಾಣಕ್ಕೆ ಲಿಂಕ್ ಇಲ್ಲಿದೆ. ಅಲ್ಲಿ ಬಲಬಾಗದಲ್ಲಿರುವ ಗ್ಯಾಲರಿಗೆ ಹೋಗಿ ಜಪಾನ್ 5 -2011 ರ ಮೇಲೆ ‘ಕ್ಲಿಕ್’ ಮಾಡಿದರೆ ನೇರವಾಗಿ ಜಪಾನ್ ಗೆ ಹೋಗಿಳಿಯಬಹುದು…!

 (ಚಿತ್ರಗಳು ಕಾಣಲು ಸ್ವಲ್ಪ ಕಾಯಬೇಕಾಗಬಹುದು, ತಾಳ್ಮೆಯಿರಲಿ…!)