ಶೌಚಾಲಯದಲ್ಲೂ ಹೂ ಕುಕ್ಕೆಯಿಡುವ ರಂಗಶಂಕರದಲ್ಲಿ ಮೊನ್ನಿನ ಭಾನುವಾರದ ಸಂಜೆ ಘಮ್ಮೆನಿಸುವಂತಿತ್ತು!
ಅಲ್ಲೇ ಬುಡದಲ್ಲಿ ಸಿಗುವ ಅರವತ್ತು ರುಪಾಯಿಯ ಅಕ್ಕಿ ರೊಟ್ಟಿಯೂ, 50 -60ಕ್ಕೆ ಕಮ್ಮಿಯಿಲ್ಲದ ಇತರ ಮಾಂಸಾಹಾರಿ ಖಾದ್ಯಗಳು ಅಸಮಾನ ‘ಸಾಂಸ್ಕೃತಿಕ ಜಗತ್ತಿ’ನ ಪ್ರತಿಬಿಂಬಗಳಾಗಿ ಕಂಡು ತಣ್ಣನೆ ಆವೇಗ ಹುಟ್ಟಿಸುವಂತಿದ್ದವು. ಅಂದಹಾಗೆ ಅವತ್ತಿನ ನಾಟಕ ‘ನಾ ತುಕಾರಾಂ ಅಲ್ಲ’!
ಕಳೆದ ಮಾರ್ಚಲ್ಲೋ, ಮೇನಲ್ಲೋ ಈ ನಾಟಕವನ್ನು ನೋಡಿದ್ದು ಮರೆತಿರಲಿಲ್ಲ. ಅವತ್ತಿನ ಒಂದು ಮಜಾ ಘಟನೆಯೂ ಮೊನ್ನೆ ರಂಗಶಂಕರದಲ್ಲಿ ನೆನಪಾಯಿತು. ಅವತ್ತು ಹೀಗಾಗಿತ್ತು. ತಮಿಳಿನ ಹುಡುಗಿಯೊಬ್ಬಳು ಬಹಳ ಉತ್ಸಾಹದಿಂದ ನಮ್ಮೊಡನೆ ನಾಟಕಕ್ಕೆ ಬಂದಿದ್ದಳು. ಸುತಾರಾಂ ಕನ್ನಡ ಅರ್ಥವಾಗದಿದ್ದರೂ ಆಕೆಗೆ ನಾಟಕದ ಹುಚ್ಚು. ದುರದೃಷ್ಟವಶಾತ್(?) ಅವತ್ತಿನ ಶೋಗೆ ಪ್ರಕಾಶ್ ರೈ ಕೂಡ ಬಂದಿದ್ದರು. ಆಕೆಗೋ, ನಾಟಕ ನೋಡುವುದೋ ಪ್ರಕಾಶರನ್ನು ನೋಡುವುದೋ ಎಂಬ ಗೊಂದಲ. ಸಿನಿಮಾದವ್ರೂ ನಾಟಕವನ್ನು, ಅದರಲ್ಲೂ ಬುಡದಿಂದ ಕೊನೆವರೆಗೂ ಕುಳಿತು ನೋಡ್ತಾರಾ? ಎಂಬ ಅಚ್ಚರಿ ಆಕೆಗೆ. ನಾವು ತನ್ಮಯರಾಗಿ ನಾಟಕದಲ್ಲಿ ಮುಳುಗಿದ್ದರೆ ಆಕೆ ನಡು ನಡುವೆ ತನ್ನ ಬ್ಯಾಗ್ ಒಳಕ್ಕೆ ಕೈ ಹಾಕಿ (ಮೊಬೈಲ್ ಹೊರತೆಗೆಯಬಾರದೆಂಬ ನಮ್ಮ ಎಚ್ಚರಿಕೆಗೆ ಬೆಲೆಗೊಟ್ಟು..!) ಗೆಳೆಯ, ಗೆಳತಿಯರಿಗೆಲ್ಲ ನಾನು ಪ್ರಕಾಶ್ ರೈ ಜೊತೆ ನಾಟಕ ನೋಡ್ತಿದೇನೆ(?), ಎಂಬ ಸಂದೇಶ ಕಳ್ಸಿದ್ದೇ ಕಳ್ಸಿದ್ದು 🙂
ಹರ್ಬ್ ಗಾರ್ಡನರ್ ನ ‘ಐ ಯಾಮ್ ನಾಟ್ ರ್ರ್ಯಾಪ್ಪಪೋರ್ಟ್ ‘ ನಾಟಕದ ಕನ್ನಡ ಅನುವಾದ ‘ನಾ ತುಕಾರಾಂ ಅಲ್ಲ’, ಸುರೇಂದ್ರನಾಥರ ಸಮರ್ಥ ಅನುವಾದದಲ್ಲಿ ಕನ್ನಡದ ಮೂಲ ನಾಟಕವೆಂಬಂತೆ ಭಾಸವಾಗುತ್ತದೆ. ಅದು ನಿಸ್ಸಂಶಯವಾಗಿ ಅನುವಾದಕನ ಗೆಲುವು. ಇಳಿ ವಯಸ್ಸಿನವರೆಲ್ಲರ ವೇದನಾ ಸುಳಿಯ ಕೇಂದ್ರವು ಸರ್ವೇ ಸಾಮಾನ್ಯವಾಗಿ ಒಂದೇ ಆಗಿರುವುದು ಆ ಗೆಲುವಿಗೆ ಮೆಟ್ಟಿಲಾಗಿದೆ. ಯಾವುದೇ ನಾಟಕದ ಪೂರ್ಣ ಉದ್ದೇಶವಾದ ರಸೋಲ್ಲಾಸ ಸಾಕಾರಗೊಳ್ಳುವುದು, ಕೃತಿ ರಂಗವೇರಿದಾಗ ಮಾತ್ರ. ಬಿ.ಸುರೇಶ, ಏಣಗಿ ನಟರಾಜ್, ಮೇಘ ನಾಡಿಗೇರ್ ಮತ್ತಿತರರ ಮೂಲಕ ಅದು ಪೂರ್ತಿಯಾಗಿದೆ. ಹೀಗೆಲ್ಲವೂ ಒಟ್ಟಿಗೆ ಸಂಭವಿಸಿತೆಂದರೆ ನಾಟಕ ಯಶಸ್ವಿಯಾದಂತೆಯೇ ತಾನೇ? ಹಾಗಾಗಿಯೇ ಟಿಕೆಟ್ ದರ ನಲವತ್ತೋ, ಅರವತ್ತೋ ಇದ್ದಿದ್ದು ಮೊನ್ನೆ ಹೋಗುವಷ್ಟರಲ್ಲಿ ನೂರಾಗಿತ್ತು! ಆ ಕುರಿತೇನೂ ಬೇಜಾರಿಲ್ಲ ಬಿಡಿ. ಮಸಾಲೆ ದೋಸೆಗೆ 30 ಪೈಸೆ ಹೆಚ್ಚಿಸಿದಕ್ಕೆ ನಗರವೇ ನಡುಗುವಂತೆ ಪ್ರತಿಭಟನೆ ಮಾಡುವವರು ಸೈಡಿಗಿರಲಿ. ಆ ಬಗ್ಗೆ ಸಣ್ಣ ಮಟ್ಟಿಗಿನ ವಿರೋಧಾಭಾವ ವ್ಯಕ್ತಪಡಿಸುವಷ್ಟೂ ಸಂವೇದನೆಗಳಿಲ್ಲದ (ಬರೀ ವೇದನೆಯೇ ತುಂಬಿರುವ…!) ಸಮಾಜದಲ್ಲಿ ನಾನೂ ಒಬ್ಬನಲ್ಲವೇ? ‘ನಾಟಕದ ಯಶಸ್ಸನ್ನು ಟಿಕೆಟ್ ರೇಟಲ್ಲಿ ನೋಡು’ ಎಂಬ ಹೊಸ ಗಾದೆಯನ್ನು ನನ್ನಷ್ಟಕ್ಕೆ ನಾನೇ ಕಟ್ಟಿಕೊಂಡೆ.
ಮತ್ತೆ ನಾಟಕದ ಕಡೆ ಬರೋಣ. ಇಡೀ ನಾಟಕವನ್ನು ತುಂಬಿರೋದು ಬಿ.ಸುರೇಶರು, ಅವರ ನಟನೆ ಮತ್ತು ಮಾತಿನ ಓಘದಲ್ಲಿ ನಾಟಕ ಓಡುತ್ತದೆ! ಕೆಲವೊಮ್ಮೆ ಅವರ ಜಾಗದಲ್ಲಿ ದತ್ತಣ್ಣ ಇದ್ದಿದ್ದರೆ ಎಂಬ ಕಲ್ಪನೆ ಹುಟ್ಟುತ್ತಿದ್ದುದು ಕೇವಲ ಆಕಸ್ಮಿಕ! ಸುರೇಶ, ಏಣಗಿ ನಟರಾಜ್ ಜೋಡಿ ಗಟ್ಟಿಯಾಗಿ ನಗಿಸುತ್ತಲೇ ಕಣ್ಣಂಚು ಒದ್ದೆ ಮಾಡುತ್ತಾರೆ. ಅದೂ ಗೊತ್ತಾಗದಂತೆ ಪ್ರೇಕ್ಷಕರು ಮತ್ತೆ ಮತ್ತೆ ಹುಯಿಲೆಬ್ಬಿಸಿ ನಗುತ್ತಾರೆ. ಬಹುಷಃ ಅದು ಒಂದರ್ಥದಲ್ಲಿ ನಾಟಕದ ಸೋಲೂ ಇರಬಹುದು. ವಿಷಾದವೇ ತುಂಬಿಕೊಂಡ ಸಂಭಾಷಣೆ, ಸನ್ನಿವೇಶಗಳು ಬರಿ ಸುಮ್ಮನೆ ನಗುವಿನಲ್ಲಿ ಕಳೆದು ಹೋಗುತ್ತವೆಯೇನೋ ಎಂಬಂತೆ ಭಾಸವಾಗುತ್ತವೆ. ವಿಷಾದವು ನಗುವಿನೊಡನೆ ಕಲೆತರೆ ಮತ್ತಷ್ಟು ಗಾಢವಾಗಿ ಮನಸಲ್ಲುಳಿಯುವುದೋ ಎಂಬ ಪ್ರಶ್ನೆ ನನಗಿನ್ನೂ ಬಗೆಹರಿದಿಲ್ಲ. ‘ಎಂದೂ ಮುಗಿಯದ ಹಾದಿಯಲ್ಲಿ ನಿಧಾನವಾಗಿ ನಡೆಯುತ್ತಿರುವ ತಪ್ಪಿಗೆ’ ಭಾಗೀದಾರರಾದ ಇಬ್ಬರು ವೃದ್ಧರೂ ವಿಭಿನ್ನ ಧ್ರುವಗಳು. ವಾಸ್ತವವನ್ನು ಒಪ್ಪಿಕೊಂಡು, ಈಗ ಕಳೆದ ಬದುಕನ್ನೇ ಮುಂದುವರೆಸಿದರಾಯಿತು ಎಂಬುವವ ಒಬ್ಬ, ಇರುವಷ್ಟು ಬಾಳನ್ನು ಹೀರಿ ದಿನವೂ ಹೊಸದೆನಿಸುವಂತೆ ಬದುಕಬೇಕೆಂಬ ಹಠ ತೊಟ್ಟವನೊಬ್ಬ. ಅವರ ದ್ವಂಧ್ವಗಳು, ವೈರುಧ್ಯಗಳು ಸಂಗಮಿಸುವ ಕ್ಷೇತ್ರ ಲಾಲ್ ಬಾಗ್. ಅದೆಷ್ಟೋ ಹಿರಿಜೀವಗಳು ಕೂತು ವಿಷಣ್ಣರಾದ ಬೆಂಚುಗಳಿಗೆ ಕೃಷ್ಣಸ್ವಾಮಿ ಮತ್ತು ಡಾ.ಶ್ರೀಪಾದ್ ಡಾಂಗೆ, ಮಿ. ಮಯ್ಯರ್ ಮತ್ತು ಏನೇನೂ ಆಗಿರುವ, ಮತ್ತಷ್ಟು ಹೊಸ ಅವತಾರಗಳನ್ನೆತ್ತುವ ಬಯಕೆಯುಳ್ಳ, ನೊಂದವರಿಗೆ ಆಪದ್ಭಾಂದವನಾಗಬೇಕು ಎಂದುಕೊಳ್ಳುವ ವ್ಯಕ್ತಿ ನಿತ್ಯ ಸದಸ್ಯರಾಗಿರುತ್ತಾರೆ. ಕ್ರಮೇಣ ಕ್ರಾಂತಿ ಮತ್ತು ಶಾಂತಿಯ ಕೆಲ ಮಜಲುಗಳು (ನನಗನ್ನಿಸಿದಂತೆ) ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಮೊದಲೇ ಹೇಳಿದಂತೆ ನಗೆ ನಾಟಕವೆಂಬ ಹಣೆಪಟ್ಟಿಯಲ್ಲಿಯೇ ‘ನಾ ತುಕಾರಾಂ ಅಲ್ಲ’ ನೋಡುಗರಲ್ಲಿ ಸಂಚಲನವೆಬ್ಬಿಸುವಂತಿದೆ. ಅದಕ್ಕೆ ಇರಬೇಕು ಮೊನ್ನೆಯ ಶೋದಲ್ಲೂ (ಅದೆಷ್ಟನೆಯ ಶೋ ಗೊತ್ತಿಲ್ಲ.) 300 ಕ್ಕೂ ಮಿಕ್ಕಿದ ಜನಸಂದಣಿಯಿತ್ತು. ‘ಮುದುಕರ ಗೋಳು’ ಎಂದು ಬಿಸಿರಕ್ತದವರು ಕಡೆಗಾಣಿಸಿ ಬಿಡಬಹುದಾದ ಸಂದರ್ಭಗಳಲ್ಲಿನ ಅವರ ‘ತಲ್ಲಣ’ಗಳು ‘ಬಿಸಿ’ ಮುಟ್ಟಿಸುತ್ತವೆ. ಕೂತಲ್ಲೇ ಕನಲುವಂತೆ ಮಾಡುತ್ತವೆ. ನನಗೆ ವಯಸ್ಸಾಗುವುದೇ ಬೇಡ ಎಂದು ಆ ಕ್ಷಣಕ್ಕೆ ಅನ್ನಿಸಿದ್ದರಲ್ಲಿ ಆಶ್ಚರ್ಯವಿದೆಯೇ?!
ಕಳೆದ ವರ್ಷ ಕಾಣಿಸದಿದ್ದ ಕೆಲ ಅಂಶಗಳು ಮೊನ್ನೆ ಕಂಡವು. ಸುರೇಶರ ಸ್ವರ ಗಂಭೀರವಾಗಿಯೂ, ದೃಢವಾಗಿಯೂ ಇದೆ ನಿಜ. ಆದರೆ ಕೆಲವೊಂದು ಸಂಭಾಷಣೆಗಳ ಟೋನ್ ಒಂದೇ ಸಮನೆ ಕಿರಿಕಿರಿ ಹುಟ್ಟಿಸುವಷ್ಟು ಪುನರಾವರ್ತನೆಯಾಗುತ್ತವೆ. ಕೆಲ ಪದಗಳ ಬಳಕೆ ಅತಿಯಾಗಿ ಅಸಹನೆ ಹುಟ್ಟಿಸುತ್ತದೆ. (ಮೇಘಾ ನಾಡಿಗೇರ್ ಜೊತೆಗಿನ ಸನ್ನಿವೇಶಗಳಲ್ಲಿ ಮರಿ, ಮರಿ ಎನ್ನುವುದು, ಏಣಗಿ ಜೊತೆಗಿನ ಕೆಲ ಸನ್ನಿವೇಶಗಳಲ್ಲಿ ಪ್ರತಿ ವಾಕ್ಯದ ಕೊನೆಗೂ ಸ್ವಾಮಿ, ಸ್ವಾಮೀ ಸೇರಿಸುವುದು ಇತ್ಯಾದಿ. ನಾಟಕದ ಪಟ್ಯದಲ್ಲೇ ಹಾಗಿರುವುದಾದರೆ ಈ ಕಂಪ್ಲೇಂಟ್ ಸುರೇಂದ್ರನಾಥ್ ಗೆ ವರ್ಗಾವಣೆ!) ಮೆಘಾ ನಾಡಿಗೇರ್ ಇರುವ 3,4 ನಿಮಿಷಗಳನ್ನು ತಮ್ಮದೇ ಮಾಡಿಕೊಳ್ಳುತ್ತಾರೆ. ಮಾವಳ್ಳಿ ಪಾಂಡು (ಶಿಕಾರಿ ಚಂದ್ರು ಇರಬೇಕು), ಮಿ. ನರಸೀಪುರ್ (ಬಾಲಾಜಿ ಮನೋಹರ್ ಇರಬೇಕು) ಹೀಗೆ ಬಂದು ಹಾಗೆ ಹೋದರೂ ಪಾತ್ರಗಳಿಗೆ ಒಂದಿನಿತೂ ಮೋಸ ಮಾಡಿಲ್ಲ. ಇಂಟರ್ನೆಟ್ ನಲ್ಲಿ ಓದಿ ಸಿಹಿಕಹಿ ಚಂದ್ರುರವರ ನಟನೆಯನ್ನು ಕಲ್ಪಿಸಿಕೊಂಡಿದ್ದ ನನಗೆ ನೋಡಿದ ಎರಡೂ ಪ್ರದರ್ಶನದಲ್ಲೂ ನಿರಾಸೆಯೇ ಆಯಿತು. ಅವರು ನಾಟಕದಲ್ಲಿದ್ದಿದ್ದರೂ ಯಾವ ಪಾತ್ರ ನಿರ್ವಹಿಸುತ್ತಿದ್ದರು? ಅಥವಾ ಅವರ ಯಾವ ಪಾತ್ರ ನಾನು ನೋಡಿದ ಶೋಗಳಲ್ಲಿ ಇಲ್ಲವಾಗಿದೆ? ಎಂಬ ಕುತೂಹಲವಂತೂ ನನಗಿದ್ದೇ ಇದೆ. ನಾಟಕಕ್ಕೆ ಎರಡು ಭಾಗಗಳು. ಮೊದಲರ್ಧದ ನಂತರ 10 ನಿಮಿಷ ವಿರಾಮ. ಸಾಮಾನ್ಯವಾಗಿ ನಾಟಕ ಹುಟ್ಟಿಸುವ ಉದ್ವೇಗಕ್ಕೂ ಆಗ ವಿರಾಮ. ಆದರೆ ತುಕಾರಾಂ ವಿಷಯದಲ್ಲಿ ಇದು ಸುಳ್ಳಾಯಿತು 🙂
ಇಷ್ಟು ಮಾತ್ರ ಹೇಳಬಲ್ಲೆ. ಎರಡು ಬಾರಿ ನೋಡಿಯೂ ಪುನಹ ನೋಡುವ ಆಸಕ್ತಿಯನ್ನು ಉಳಿಸಿಕೊಂಡ, ಮತ್ತೆ ನೋಡಿದರೆ ಹೊಸದೇನಾದರೂ ದಕ್ಕೀತು ಎಂಬ ನಿರೀಕ್ಷೆಯನ್ನು ಹುಟ್ಟಿಹಾಕಿದ್ದು ‘ನಾ ತುಕಾರಾಂ ಅಲ್ಲ’.
(ಚಿತ್ರ ಋಣ: ಅವಧಿ ಮತ್ತು ಇಂಟರ್ನೆಟ್; ಕ್ಯಾಮರಾ ತೆಗೆದುಕೊಂಡು ಹೋಗಿಯೂ ರಂಗ ಶಂಕರದಲ್ಲಿ ಕ್ಲಿಕ್ಕಿಸಬಾರದೆಂಬ ನಿಯಮವಿರುವುದು ನನಗೆ ಪಿಚ್ಚೆನಿಸಿದರೂ ಒಳ್ಳೆಯ ಬೆಳವಣಿಗೆಯೇ ಅನ್ನಿಸಿತು.)
Comments on: "‘ಪುಣ್ಯ, ನನಗಿನ್ನೂ ವಯಸ್ಸಾಗಿಲ್ಲ…ನಾ ತುಕಾರಾಂ ಅಲ್ಲ..!’" (2)
en sir. anyayavagi vimarshaka agtidiri!
‘ವಿಮರ್ಶಕಿ’ ‘ಬ್ಲಾಗ್ಲಾ’ಕಿದ್ಮೇಲೆ ವಿಮರ್ಶಕ ಹುಟ್ಕೊಂಡಾಂಗಾಯ್ತು ಅಂಗಾರೆ, ಅಲ್ವರಾ?!