ನಿನ್ನೆ ದಿನ ಅಜ್ಜಿ ಕೊಟ್ಟ ಮಾತಪೆಟ್ಟಿಗೆ
ಎರಡು ಓಲೆಗಳು ಬೆಚ್ಚಗಾಗಿವೆ
ವಿರುದ್ಧ ದಿಕ್ಕಿಗೊಡುವ ಫೆವಿಕಾಲ್ ಆನೆಗಳು
ಅಂಟಿನ ಮೇಲೆ ನಂಟು ಕಳಕೊಂಡಿವೆ
ತೋರಣ, ಹೊಗೆ ಅಂಡೆ
ರಂಗೋಲಿ, ಪ್ರಧಾನ್ ಬಾಗ್ಲು ಎಲ್ಲವೂ
ಕಾಣದ
ಎದುರಾಳಿ ಪಟ್ಟನ್ನು ಯೋಚಿಸುತ್ತಿವೆ
ಬೋನಲ್ಲಿದ್ದ ಟೈಗರ್ ಕೂಗಿ ಸುಮ್ಮನಾಗಿದೆ
ತುಳಸಿ ಮದುವೆಗೆ ಹಚ್ಚಿದ ಬಣ್ಣ
ಕಟ್ಟೆಯ ಮೇಲೆ ಫಳ ಫಳಿ ಸುತ್ತಿದೆ
ಆಚೆ ಅಂಗಳಕ್ಕೋ, ಈಚೆಗೋ ತಿಳಿಯದೆ
ಗಿಡ ಹೊಯ್ದಾಡುತ್ತಿದೆ,
ಹುಯಿಲೆಬ್ಬಿಸದ ಗಾಳಿ ಅತ್ತಿಂದಿತ್ತ ತೆವಳುತ್ತ
ಕೊನೆಯ ಬಾರಿಗೆಂಬಂತೆ
ನೇವರಿಸುತ್ತಿದೆ
ಒಳ ಕೋಣೆಯ ಬೀರು
ತನ್ನೊಳಗಿನ ಬಣ್ಣದ ಲೋಹಗಳನ್ನು
ಮತ್ತೆ ಮತ್ತೆ ಕಣ್ದುಂಬಿಕೊಳ್ಳುತ್ತಿದೆ
ಹೊಸ ಜಾಗ ಸೇರುವ ಖುಷಿ,
ಯಾಕೋ ಯಾವುದಕ್ಕೂ ಇಲ್ಲ
ಯಾರಿಗೆ ಸೇರಬಹುದು ಮಾಳಿಗೆಯ ಬೆಲ್ಲ?!
ಅಜ್ಜ ನೆಟ್ಟ ಚಂದ್ರ ಪೇರಲೆ
ತೋಟದಂಚಿನ ಸಿಹಿ ನೇರಳೆ
ಅಗಲದ ಚುಕ್ಕಿ ದಾಸವಾಳ
ಕೊಯ್ದಷ್ಟೂ ಬಿಡುವ ಚಪ್ಪರದ ತೊಂಡೆ
ಎಲ್ಲವೂ ಪಾಲಾಗುವುದರಲ್ಲಿವೆ
ಮನಸ್ಸುಗಳ ಕೆಲಸ ಈಗಾಗಲೇ ಮುಗಿದಿದೆ
ಜಗಲಿ ಮೇಲೆ ಜೋಡಿಸಿದ್ದ
ರವಿವರ್ಮನ ದೀಪಸುಂದರಿಗೆ
ಮಬ್ಬು ಹಿಡಿದಿದೆ
ಗಂಧದ ಕಲ್ಲಿಗೆ ಒಡೆ ಬಂದಿದೆ
ಗಿಳಿಗೂಟದ ಕಥೆ ಕೇಳುವವರ್ಯಾರು?
ಅವೂ ಭಾವಗಳಂತೆ…
ಅಟ್ಟದ ಮೇಲಿನ ಮೂರನೆತ್ತೆಯ
ನನ್ನ ಟಯರ್
ಮುನಿಸಿ ಕೂತಂತಿದೆ
ಅರಿಶಿನದ ಬಟ್ಟಲಲ್ಲಿ
ಕುಂಕುಮ ಖಾಲಿಯಾಗಿದೆ
ನಡುಮನೆಯೂ
ಇಲ್ಲವಾಗುವುದರಲ್ಲಿದೆ
ಹೊಸ ಹಾಸಿಗೆ, ಅಡ್ಡಾದಿಡ್ಡಿ ಗೋಡೆಗಳು
ಇನ್ನೊಂದು ದೋಸೆ ಬಂಡಿ,
ಎರಡೆರಡು ಗುದ್ದಲಿ, ಪಿಕಾಸು, ಹಾರೆಗಳು
ಗೆರೆಕೊರೆದ ಗದ್ದೆ ತೋಟಗಳು
ಆತ್ಮವಿಲ್ಲದ ಪ್ರತಿಮೆಗಳು
ನಿಜಕ್ಕೂ
ಸಂಕಟ ಹುಟ್ಟಿಸುತ್ತವೆ
ಎಲ್ಲವೂ ಬದಲಾದೀತು
ಹೇಳಿ ಕೇಳಿ ಅಜ್ಜಿಯ ಮಾತು…!
ಹಲವು ಬರಿದಾಗುತ್ತ
ಮತ್ತೆ ಕೆಲವು ಬಲಿಯಾಗುತ್ತ
ಇತರೇ ಸಂಗತಿಗಳು ಚಿಗುರೊಡೆಯುತ್ತ
ಗಂಟಲ ನರ ನಡುಗುತ್ತದೆ
ಸೋಣೆ ಗಿಡ ತುಂಬಿಕೊಳ್ಳುತ್ತದೆ
ಮತ್ತೆ….
ತೊಟ್ಟಿಲು ನಗುತ್ತದೆ
Comments on: "ಹಳೆ ಮುದುಕಿಯ ಹಕೀಕತ್ತು…!" (6)
chennagide Banagiyavare……
ಧನ್ಯವಾದಗಳು ಶ್ವೇತಾ….
tottilugalu naguttive
Gode ache eeche..!
ತೊಟ್ಟಿಲು ನಗುವಾಗ ಗೋಡೆಗಳು ಕರಗಲೂಬಹುದು ಚಿರು.. 🙂
“ಮನಸ್ಸುಗಳ ಕೆಲಸ ಈಗಾಗಲೇ ಮುಗಿದಿದೆ..”
“ಆತ್ಮವಿಲ್ಲದ ಪ್ರತಿಮೆಗಳು
ನಿಜಕ್ಕೂ
ಸಂಕಟ ಹುಟ್ಟಿಸುತ್ತವೆ…”
ಬಹಳ ಹಿಡಿಸಿದ ಕವಿತೆ..ಅಭಿನಂದನೆಗಳು!
-ಟೀನಾ.
ಟೀನಾ, ಧನ್ಯವಾದಗಳು…..