ದೀಪ ಉರಿಯುತ್ತಿದೆ…!!!

ಹೆಡ್ಡಿಂಗ್ ಬರೆದು ಎನು ಬರೆಯೋದು ಅಂತ ಯೋಚಿಸುತ್ತಿದ್ದೇನೆ. ಅದು ದೀಪವೋ, ಬೆಂಕಿಯೋ ಎಂಬುದನ್ನೂ ನಿರ್ಧರಿಸಲಾರದಂತಾಗಿದ್ದೇನೆ. ಬ್ಲಾಗ್ ಕಡೆಗೊಂದು ದಿವ್ಯ ನಿರ್ಲಕ್ಷ್ಯ ಬಿಸಾಕಿ ತಿಂಗಳುಗಳೇ ಸರಿಯಿತು. ಅಂತದ್ದೊಂದು ನಿರ್ಲಕ್ಷ್ಯಕ್ಕೆ ಸೋಮಾರಿತನವೆನ್ನುವುದೇ ಸೂಕ್ತವೇನೋ. ಅದೇನೇ ಇರಲಿ ಕಳೆದ ತಿಂಗಳು ಚಿಲ್ಲರೆ ದಿನಗಳು ಪುನಃ ವಾಪಸಾಗುವುದಿಲ್ಲವೆಂಬುದು ಕಹಿ ಸತ್ಯವೆಂಬ ಅರಿವಿದೆ.
     ಈ ಪುರಾಣಗಳೆಲ್ಲಾ ಒತ್ತಟ್ಟಿಗಿರಲಿ. ಇವತ್ತು ಏನಾದರೂ ಟೈಪಿಸಲೇ ಬೇಕೆಂಬ ಹಠ ಹೊತ್ತು ಕುಳಿತಿದ್ದೇನೆ. ಗೆಳೆಯರೆಲ್ಲಾ ಮತ್ತೆ ಮತ್ತೆ ಎಚ್ಚರಿಸುತ್ತಿದ್ದಾರೆ. ನಿನ್ನ ಬ್ಲಾಗ್ ಹಿಟ್ಸ್ ಸದಾ ಬಿದ್ದುಕೊಂಡಿರುವ ಹೆಬ್ಬಾವಿನಂತೆ ಆಗಿಬಿಟ್ಟಿದೆಯಲ್ಲಾ ಮಾರಾಯ, ಎನನ್ನಾದರೂ ತುರುಕೋ ಅಂತ. ಆ ಪ್ರೀತಿಗೆ ಒಂದು ಧನ್ಯವಾದದ ಹೊರತು ಬೇರೇನೂ ಹೇಳಲಾರೆ.
     ಕೆಲವು ದಿನ ಒಂದಿಷ್ಟು ಸುಮ್ಮನೆ ಯೋಚನೆಗಳು ತಲೆಯೆತ್ತಿತ್ತು. ಇಷ್ಟಕ್ಕೂ ಬ್ಲಾಗ್ ಶುರು ಮಾಡಿದ್ದು ಏಕೆ? ನಾವಡರ ಬಲವಂತಕ್ಕೋ? ಬರವಣಿಗೆಗೆ ಇಂಬು ದೊರೆಯಲೆಂದೋ? ನನ್ನೆಲ್ಲಾ ಯಕಶ್ಚಿತ್ ಬರಹಗಳನ್ನು ಕೂಡಿಡಲೋ? ಇವೆಲ್ಲಕ್ಕಿಂತ ಹೆಚ್ಚಾಗಿ ನಾನೂ ಬರೆಯಬಲ್ಲೆ ಎಂದು ಸಾರಲೆಂದೋ? ಅಥವಾ ನನ್ನ ಖಾಸಗಿಗಳನ್ನೆಲ್ಲಾ ಬಹಿರಂಗ ಮಾಡಲೋ? ಬ್ಲಾಗ್ ಹಿಟ್ಸ್ ಹಿಮಾಲಯ ಮುಟ್ಟೋಕೆ ಅಂತ ಬರೀಬೇಕಾ?  ಅಂತಲೂ ಅನ್ನಿಸಿ,  ಒಂದೂ ತಿಳಿಯದೇ ಪ್ರಶ್ನೆಗಳ ನಡುವೆಯೇ ಉಸಿರುತ್ತಿದ್ದೆ.
    ಒಂದಷ್ಟು ದಿನ ಛೆ, ಬೇಕಾ ಇವೆಲ್ಲಾ ರಾಮಾಯಣ? ಎನಿಸಿದ್ದೂ ಇದೆ. ಅಂದರೆ ಈಗ ಆ ಮೊದಲಿನ ಪ್ರಶ್ನೆಗಳೆಲ್ಲಾ ಮಾಯವಾದವಾ ಎಂಬುದಕ್ಕೂ ಉತ್ತರವಿಲ್ಲ. ಈ ಹೊತ್ತಿನಲ್ಲಿ ಅವು ಕಾಣುತ್ತಿಲ್ಲ ಎಂಬುದಷ್ಟೇ ನಿಜ. ನಾಳೆ ಹೇಗೋ ಗೊತ್ತಿಲ್ಲ. ನನಗೆ ಇವೆಲ್ಲಾ ಸಂಗತಿಗಳು ಕಾಡುತ್ತಿವೆ, ಅದಕ್ಕೆ ಅವು ತೀರುವಷ್ಟು ದಿನ ಬ್ಲಾಗ್ ಕದ ತಟ್ಟುವುದಿಲ್ಲ. ಎಂದು ಒಂಬ ಒಂದು ಒಕ್ಕಣೆಯನ್ನಾದರೂ ಪೋಸ್ಟ್ ಮಾಡೋಣವೆಂದುಕೊಂಡಿದ್ದೆ. ಆದರೆ ನನ್ನ ತಳಮಳಗಳನ್ನು ಹೀಗೆಲ್ಲಾ ಹರಡಬೇಕಾ? ಅದನ್ನೂ ಬ್ಲಾಗಿಗೆ ತುರುಕಿ ಅದಕ್ಕೂ ಒಂದು ಬೆಲೆ ಕಟ್ಟಬೇಕಾ ಎಂದೆನಿಸಿ ಸುಮ್ಮನಾದೆ. ಸದ್ಯ ಇವತ್ತು ಆ ಎಲ್ಲಾ ಅನಿಸಿಕೆಗಳಿಗೂ ಸ್ಟಾಪ್ ಸಿಗ್ನಲ್ ತೋರಿಸಿದ್ದೇನೆ!
      ಬದುಕೂ ಕೆಲವೊಮ್ಮೆ ಹೀಗೇ ಸವಾಲೆಸೆಯುತ್ತದಲ್ವಾ? ಬಗೆಹರಿಸು ನೋಡೋಣ ಅಂತ ಅದು ತೊಡೆ ತಟ್ಟಿ ನಿಂತುಬಿಟ್ಟರೆ ಸಾಕು. ಜಟ್ಟಿಯೊಬ್ಬನ ಭರ್ಜರಿ ಪಟ್ಟಿನಲ್ಲಿ ಸಿಕ್ಕಿಕೊಂಡು ಸಿರ ಸಿರ ಉಸಿರಾಡುವವರ ಪಾಡಾಗಿಬಿಡುತ್ತದೆ ನಮ್ಮದು. ನಿಲುಗಡೆಯೇ ಇಲ್ಲದ ಎಕ್ಸ್‌ಪ್ರೆಸ್ ರೈಲಿನಂತಾಗಿಬಿಡಬೇಕು ಅನಿಸುತ್ತದೆ ಒಮ್ಮೊಮ್ಮೆ. ಆದರೆ ಮರುಕ್ಷಣವೇ ಅಂತಹ ರೈಲಿಗೂ ಹೊರಡುವ ಮತ್ತು ಕೊನೆಯ ಒಂದು ನಿಲ್ದಾಣವಿರುತ್ತದೆ ಎಂಬುದು ಹೊಳೆಯುತ್ತದೆ. ಹೊಸ ಹೊಸ ತಿರುವುಗಳು, ನಿಲ್ದಾಣಗಳು, ಅನಾಮಿಕ ಪ್ರಯಾಣಿಕರು ಎಲ್ಲರೂ ವೃತ್ತವೊಂದರ ಭಾಗವಾಗಿಯೇ ಅದು ಸಂಪೂರ್ಣ ವೃತ್ತವಾಗುವುದು ಎಂಬುದು ನಿಟ್ಟುಸಿರು ಬಿಡಿಸುತ್ತದೆ. ಬೋದಿಲೇರನ, ಬದುಕೆಂದರೆ ಜೂಜುಗಾರನ ಕೈಲಿ ಮುಗಿದುಳಿದ ನಾಣ್ಯದ ಚೀಲ, ಅರ್ಧ ಉಳಿದ ಸಿಗರೇಟ್ ಮತ್ತು ಧುತ್ತೆಂದು ಕೊನೆಯಾಗುವ ದಾರಿ ಎಂಬ ಸಾಲುಗಳು ಮತ್ತಷ್ಟು ಚಿಂತನೆಗೆ ಹಚ್ಚುತ್ತವೆ. ಒಂದಂತೂ ನಿಜ ಯಾವ ಬರವಣಿಗೆಯೂ, ಯಾವ ಮಾದರಿಗಳೂ ನಮ್ಮ ಬದುಕನ್ನು ನಿರ್ಧರಿಸಲಾರವು. ನಿರ್ದೇಶಿಸಬಹುದಷ್ಟೇ! ಈ ಸಾಲುಗಳು ಸಹ ನಾನ್ಯಾರದ್ದೋ ಭಾಷಣದಲ್ಲಿ ಕೇಳಿದ್ದೋ, ಬರಹದಲ್ಲಿ ಓದಿದ್ದೋ ಇರಬೇಕು!! ನಿಜವೆಂತೂ ಹೌದು ತಾನೆ? ಎಲ್ಲಾ ಗೊತ್ತಿಲ್ಲಗಳ ನಡುವೆಯೇ ದಾರಿಗಳು ಹುಟ್ಟಿಕೊಳ್ಳುತ್ತವೋ ಅದೂ ಗೊತ್ತಿಲ್ಲ!
         ಯಾಕೋ ಇಲ್ಲಿಗೆ ನಿಲ್ಲಿಸೋಣವೆನಿಸುತ್ತಿದೆ…. ಮತ್ತೆ ಸಿಗುತ್ತೇನೆ…

Comments on: "ದೀಪ ಉರಿಯುತ್ತಿದೆ…!!!" (2)

  1. ಬ್ಲಾಗ್ ಬರೆಯಲು ಹಲವಾರು ಕಾರಣಗಳನ್ನು ಹುಡುಕಬಹುದು. ನನ್ನ ಒಂದು ಅನಿಸಿಕೆ ಏನೆಂದರೆ, ಹತ್ತು ವರ್ಷ ಕಳೆದ ಮೇಲೆ ನಾವು ನಮ್ಮ ಬದುಕಿನತ್ತ ಹಿಂತಿರುಗಿ ನೋಡಲು ಯೋಚಿಸಿದರೆ, ಈ ಬ್ಲಾಗ್ ಉಪಯೋಗಕ್ಕೆ ಬರಬಹುದು. ನೆನಪಿನ ಶಕ್ತಿಯ ಮೇಲೆ ನನಗೆ ಅಷ್ಟೊಂದು ಭರವಸೆ ಇಲ್ಲ.

  2. ಜಿತೇಂದ್ರ ಸಿ.ರಾ.ಹುಂಡಿ said:

    ಒಮ್ಮೆ ನನಗೂ ಹೀಗೆ ಕಾಡಿದ್ದುಂಟು. ‘ಬರಹ ನಮ್ಮೊಳಗೆ ಒಂದು ಅಲೆಯನ್ನು ಹುಟ್ಟಿಸಿದರೆ ಸಾಕು. ಆಗ ಕಮೆಂಟು ಮಾಡ್ತಾರೆ’ ಅಂತಂದು ನಾವಡರು ಹೇಳಿದ್ದರು. ನನಗೂ ಹಾಗೇ ಅನ್ನಿಸಿದೆ. ಈ ಹಿಟ್ಸು, ಕಮೆಂಟು ಎಲ್ಲದರ ಗೋಚು-ಮುಲಾಜು ನೋಡ್ದೆ ಸುಮ್ನೆ ಬರೀತಾ ಇರ್ಬೇಕು. ನಮ್ಮ ಸಮಾಧಾನಕ್ಕೆ. ಅಷ್ಟೇ!

    ಬರೀತಾನೆ ಇರು. ಅಷ್ಟೇ!

    -ಜಿತೇಂದ್ರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: