ಒಂದು ಸುಂದರ ಮುಸ್ಸಂಜೆ. ಕೊಂಚ ಸಮಯಕ್ಕೆ ಮುಂಚೆ ತಾನೇ ಹೊತ್ತಿಕೊಂಡ ಜಗಮಗಿಸುವ ವಿದ್ಯುತ್ ದೀಪಗಳು ದೂರದ ಪಟ್ಟಣದಲ್ಲಿ, ಆಗಸದ ತಾರೆಗಳಿಗಿಂತ ತೀವ್ರವಾಗಿ ಕಣ್ಣು ಕೋರೈಸುತ್ತಿವೆ. ಮಿಣ್ಣಗೆ ಮಿನುಗುತ್ತಿರುವ ಪಾರ್ಕಿನ ದೀಪಗಳು ಕಣ್ಣಿಗೆ ರಾಚಿ ಕಿರಿಕಿರಿಯನ್ನುಂಟು ಮಾಡದೇ ಹಿತವಾಗಿದೆ. ಮುಂಜಾನೆ ಹೊಟ್ಟೆಪಾಡಿಗಾಗಿ ದೂರದೆಡೆಗೆ ಸಾಗಿದ ಹಕ್ಕಿಗಳು ತಮ್ಮ ಪರಿವಾರದೊಡನೆ ತಿರುಗಿ ಬರುತ್ತಾ, ಗೂಡಿಗೆ ಸೇರಿ ಮರಿಗಳೀಗೆ ಆಹಾರವುಣ್ಣಿಸುವ ತವಕದಲ್ಲಿ ಕಿಚಿಗುಟ್ಟುತ್ತಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ಹಿಕ್ಕೆಗಳು ಸುರಿಸುತ್ತಾ !
ಪಕ್ಕದ ರಸ್ತೆ ಪಟ್ಟಣಕ್ಕೇ ಹೋಗುತ್ತಾದರೂ ಅಲ್ಲಿ ವಾಹನಗಳ ಆರ್ಭಟ ಅಷ್ಟೊಂದಿಲ್ಲ. ಆಗೊಮ್ಮೆ ಈಗೊಮ್ಮೆ ಹಾದು ಹೋದ ಸರಕು ವಾಹನಗಳು ಚೆಲ್ಲಿದ ಹೊಗೆಯ ಕಮಟು ವಾಸನೆಯಿನ್ನೂ ಅಡರಿಲ್ಲ. ಆದರೆ ನಿಧಾನವಾಗಿ ಮೂಗಿಗೆ ಒತ್ತುತ್ತಿರುವ ಸೂಜಿ ಮಲ್ಲಿಗೆಯದರದ್ದೋ ಎಂಥದರದ್ದೋ ಸುವಾಸನೆ ಕಮಟು ವಾಸನೆಯನ್ನು ಮೀರಿಸುವಂತಿದೆ. ಅನಂದಲ್ಲೊಂದೆಡೆ ಕಾಣುವ ಸುಂದರ ಗೋಪುರಕ್ಕೆ ಹಿಂಡು ಹಿಂಡು ಮೋಡಗಳು ಬಂದು ಮುತ್ತಿಕ್ಕಿ ಮುಂದೆ ಸಾಗುತ್ತಿವೆ. ಆ ಗೋಪುರ, ಅದರಾಚೆಗಿನ ತಿಳಿನೀಲಿ ಮಿಶ್ರಿತ ಮಸುಗು ಪ್ರದೇಶ ಕಲಾವಿದನೊಬ್ಬ ಕ್ಯಾನ್ವಾಸಿನಲ್ಲಿ ಕುಂಚ ಬಣ್ಣಗಳೊಡನೆ ಆಡಿದ ಆಟದಂತಿದೆ. ಪೃಥ್ವಿಯ ಸಾಂಗತ್ಯವನ್ನು ತ್ಯಜಿಸಿ ಸೂರ್ಯದೇವನಿಗೆ ಅದನ್ನು ಕರುಣಿಸುವ ಉದ್ದೇಶವಿಲ್ಲವೆಂಬಂತೆ ಚಂದ್ರ ಮಹಾಶಯ ನಿಧಾನವಾಗಿ ಭೂತಾಯಿಯಿಂದ ದೂರವಾಗಿ ಆಗಸ ಸೇರುವ ಹುನ್ನಾರದಲ್ಲಿದ್ದಾನೆ. ಸೂರ್ಯ ಮುಳುಗಿ ಸಮಯವಾದರೂ ಆತನ ಕಿರಣಗಳಿಂದೆದ್ದ ಬೆಳಕು ಪೂರ್ತಿಯಾಗಿ ಕಳೆದು ಹೋಗದೇ ಆಕಾಶದಲ್ಲೆಡೆ ರಂಗವಲ್ಲಿಗಳನ್ನು ಚಿತ್ತಾರವಾಗಿ ಚಿತ್ರಿಸಿದೆ. ಅದರಲ್ಲೊಂದು ಮೋಡ, ಬಾಯಿಗೆ ಬೆರಳಿಟ್ಟು ಮಲಗಿದ ಮುಗ್ಧ ಮಗುವನ್ನು ಹೋಲುತ್ತಿದೆ. ಪಕ್ಕದಲ್ಲೇ ಇರುವ ಇನ್ನೊಂದು ಮೇಘ ನಿದ್ದೆಗೆ ಜಾರುವ ಮೊದಲು, ಮಗು ಕುಡಿದು ಬಿಟ್ಟ ಹಾಲಿನ ಬಾಟಲಿಯಂತೆ ತೋರುತ್ತಿದೆ !
ಮೆಲುವಾಗಿ ಬೀಸಿದ ತಂಗಾಳಿ, ವೀಣೆಯ ತಂತಿಯನ್ನು ಮೀಟಿದಂತೆ ಸುಂದರ ನಾದವನ್ನು ಎಬ್ಬಿಸುತ್ತಿದೆ. ಗಾಳಿಯಿಂದ ಮರಗಳು ತುಯ್ಡಾಡಿ ಒಂದಕ್ಕೊಂದು ಉಜ್ಜುತ್ತಾ ಗಾಳಿಯ ಸ್ವರಕ್ಕೆ “ಸಾಥ್’ಕೊಡುತ್ತಿವೆ. ಯಾರೋ ಓದಿ ಬಿಸುಟು ಹೋದ ವೃತ್ತಪತ್ರಿಕೆಯೊಂದು ಗಾಳಿಯೊಂದಿಗೆ ಬೆರೆತು ಆಚೀಚೆ ಸುತ್ತುತ್ತಾ ಮಗದೊಂದು ಸ್ವರವನ್ನು ಎಬ್ಬಿಸುತ್ತಿದೆ. ಪಕ್ಕದಲ್ಲಿರುವ ದೃಢಕಾಯ ಮರದ ಬುಡವನ್ನೇ ಆಧಾರವಾಗಿಸಿಕೊಂಡು ಹಬ್ಬಿದ ರಾತ್ರಿ ರಾಣಿ ಹೂವಿನ ಗಿಡ, ಇಂದು ರಾತ್ರಿಯ ರಂಗಸ್ಥಳಕ್ಕೆ ಕಲಾವಿದರನ್ನು ಸಿದ್ಧಪಡಿಸುತ್ತಿದೆ. ಬಿರಿಯಲು ಸಿದ್ಧವಾಗಿ ನಿಂತ ಹೂಗಳ ಭಾರದಿಂದಾಗಿ ಗಿಡದ ಕೊಂಬೆಗಳು ಸ್ವಲ್ಪ ಬಾಗಿದಂತಿದೆ. ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಗಾಳೀ ಸೇವನೆಗೆ ಬಂದ ಸಂತೃಪ್ತ ಜನರು ಈಗಾಗಲೇ ತಿರುಗಿ ನಡೆದಿದ್ದಾರೆ. ಜೀವನದ ತುಂಬೆಲ್ಲಾ ಕಷ್ಟವನ್ನೇ ಕಂಡ, ಕಾಣುತ್ತಿರುವ ಜೀವಗಳು ಇದುವರೆಗೂ ಕುಳಿತು ಭೂತ-ಭವಿಷ್ಯತ್ತನ್ನು ನೆನೆದು ತಿರುಗಿ ಮನೆಗೆ ನಡೆಯುವ ಧಾವಂತದಲ್ಲಿದ್ದಾರೆ. ಅವರಲ್ಲಿ ಕೆಲವರು ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿದ ಖುಷಿಯಲ್ಲಿದ್ದರೆ ಹಲವರು ಬರುವಾಗ ಹೊತ್ತು ತಂದ ಒಣಮುಖ, ಮನಸ್ಸೊಡನೆಯೇ ವಾಪಸಾಗುತ್ತಿದ್ದಾರೆ. ಅಲ್ಲೇ ಇರುವ ನಳವೊಂದು ಅದ್ಹೇಗೋ ಸ್ವಲ್ಪ ಮುರಿದು ಅದರಿಂದ ಚಿಮ್ಮುತ್ತಿದ್ದ ನೀರಿನ ಕಾರಂಜಿ ಆ ನಸುಗತ್ತಲಲ್ಲೂ ಸುಂದರ ದೃಶ್ಯಗಳನ್ನು ಸೃಷ್ಟಿಸುತ್ತಿದೆ.
ಇವೆಲ್ಲದರ ನಡುವೆ ಮೂಲೆಯಲ್ಲಿ ಜಗತ್ತಿನ ಪರಿವೇ ಇಲ್ಲದಂತೆ ಬೆನ್ನು ತಾಗಿಸಿ ಕುಳಿತು ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಯುವ ಪ್ರೇಮಿಗಳು ದೂರ ದಿಗಂತಕ್ಕೆ ದೃಷ್ಟಿ ನೆಟ್ಟು ಭವಿತವ್ಯದ ಸುಂದರ ಕಲ್ಪನೆಯ ಸೌಧಕ್ಕೆ ಕಲಶ ಕೂರಿಸುತ್ತಿದ್ದಾರೆ. ಯಾರ ಹಂಗೂ ಇಲ್ಲದೇ…ಅವರ ಪಿಸುಮಾತಿಗಿಂತ ಎದೆ ಬಡಿತ ಸ್ಪಷ್ಟವಾಗಿ ಕೇಳಿಸುತ್ತಿದೆ. ಈ ಪ್ರೇಮಿಗಳ ಬಳಿಯಲ್ಲೇ ಕೆಳಗೆ ಕುಳಿತ ಕಪ್ಪು ಬೀದಿ ನಾಯಿಯೊಂದು ಮಧ್ಯಾಹ್ನದಿಂದ ಒಂದೇ ಭಂಗಿಯಲ್ಲಿ ಕುಳಿತ ಪ್ರೇಮಿಗಳ ಕೈನಲ್ಲಿರುವ ಪ್ಲಾಸ್ಟಿಕ್ ಚೀಲದಿಂದ ಹೊಮ್ಮುತ್ತಿರುವ “ಎಣ್ಣೆ ತಿಂಡಿ’ ಯ ಘಮಕ್ಕೆ ಮನಸೋತು ಅದನ್ನು ಎಗರಿಸಿಕೊಂಡು ಹೋಗಲು ಆಷಾಢಭೂತಿತನದಿಂದ ಹೊಂಚು ಹಾಕುತ್ತಿದೆ. ಅದಕ್ಕೂ ಗೊತ್ತಿರಬಹುದು, ಪ್ರೇಮಿಗಳಿಬ್ಬರು ಜತೆಯಾದರೆ ಬಾಹ್ಯಲೋಕ ಅವರ ಪಾಲಿಗೆ ಮುಚ್ಚಿಹೋಗುತ್ತದೆ, ಅಂತರಂಗ ಮಾತನಾಡಿಕೊಳ್ಳುತ್ತದೆ ಎಂದು.
-ಈ ಎಲ್ಲ ಸಂಗತಿಗಳು ನಿತ್ಯನಡೆಯುವುದು ತಿಳಿದಿದ್ದರೂ ದಿನಾ ದಿನಾ ಹೊಸತನ್ನು ಹುಡುಕುವ ನೆಪ ಮುಸ್ಸಂಜೆಯನ್ನು ಬೋರಾಗಿಸಿಲ್ಲ, ಬದಲಾಗಿ ಇನ್ನಷ್ಟು ಮುದಗೊಳಿಸಿದೆ ಎಂದರೆ ತಪ್ಪೆನ್ನುವವರೆಷ್ಟು ಮಂದಿ ?
ಮಧುರ ಸಂಜೆಗೊಂದು ಮಾಲೆ ತೊಡಿಸಿ…
ಡಿಸೆಂಬರ್ 19, 2007
ನಿಮ್ಮದೊಂದು ಉತ್ತರ