ಪ್ರೀತಿಯ ತಂಗಿಗೆ,
ನೆನಪಿದೆಯಾ ನಿನಗೆ? ಬೆಳ್ಳಂಬೆಳಗ್ಗೆ ಎದ್ದು, ಓದುವ ನೆಪವನ್ನಿಡಿದು, ಬಚ್ಚಲಿನ ಒಲೆಗೆ ರಾತ್ರಿಯೇ ಅಮ್ಮ ಹಾಕಿದ ಬೆಂಕಿಯೆದುರು ನಾವಿಬ್ಬರೂ ಒಕ್ಕೂರಲಾಗಿ ಕುಳಿತು ತೂಕಡಿಸಿದ ನೆನಪು, ಅಮ್ಮ ಕೊಡುವ ಹಬೆಯಾಡುವ ಕಾಫಿ ಬರುವವರೆಗೆ ಒತ್ತರಿಸಿ ಬಂದ ನಿದ್ದೆಗೆ ಬಲವಂತದ ತಡೆಯೊಡ್ಡಿ ಕಾಫಿ ಸೇವೆಯ ನಂತರ ಪೂರ್ಣ ನಿದ್ದೆಗೆ ಶರಣಾದ ನೆನಪು, ನಿದ್ರಿಸುತ್ತಿದ್ದುದ್ದನ್ನು ನೋಡಿ ಅಮ್ಮ ಕೊಟ್ಟ ಧರ್ಮದೇಟಿಗೆ ತಿಂಡಿ ಬಿಟ್ಟು ಮುಷ್ಕರ ಹೂಡಿದ್ದ ನೆನಪು, ಅಜ್ಜಿ ರಮಿಸಿ ಹೇಳಿದಾಗಲೂ ಜಗ್ಗದೇ, ಮತ್ತದೇ ಅಮ್ಮನ ಪೀತಿ ಸೂಸುವ ಒಂದೇ ಮಾತಿಗೆ ಮರುಳಾಗಿ ಒಟ್ಟೊಟ್ಟಿಗೆ ಎಂಟೆಂಟು ದೋಸೆಗಳನ್ನು ಸದಾ ಡಬ್ಬದಲ್ಲಿರುತ್ತಿದ್ದ ಚಟ್ನಿ ಪುಡಿಯೊಂದಿಗೆ ಚಪ್ಪರಿಸಿ ತಿಂದ ನೆನಪು, ನಮಗಿಂತ ಬೇಗ ಎದ್ದು ಕೊಟ್ಟಿಗೆ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ ಅಪ್ಪನಿಗೆ ಅಲ್ಲೇ ಹೋಗಿ ರಗಳೆ ಕೊಡುತ್ತಿದ್ದ ನೆನಪು, ಅಪ್ಪ ಹಾಲು ಕರೆಯುವಾಗ ಉಮೇದಿನಿಂದ ನಾವೂ ಹಾಲು ಕರೆಯಲು ಹೋಗಿ ಗೌರಿಯು ಬಳಿ ಒದೆ ತಿಂದ ನೆನಪು,(ಇದೇ ಗೌರಿ ಮಳೆಗಾಲದಲ್ಲೊಂದು ದಿನ ರಸ್ತೆ ಬದಿಯ ಗಟಾರಕ್ಕೆ ಬಿದ್ದು ಸತ್ತಾಗ ನೀನು ವಾರಗಟ್ಟಲೇ ಮರುಗಿದ್ದು ನನಗಿನ್ನೂ ನೆನಪಿದೆ.) ಓರಗೆಯ ಗೆಳೆಯರೊಡನೆ ಬಣ್ಣದ ಕೊಡೆಯನ್ಹಿಡಿದು ಸುರಿಯುವ ಜಿಟಿ ಜಿಟಿ ಮಳೆಯಲ್ಲಿ ಖುಷಿ ಖುಷಿಯಿಂದ ಶಾಲೆಗೆ ನಡೆಯುತ್ತಿದ್ದ ನೆನಪು, ದಾರಿಯಲ್ಲಿ ಬೆಟ್ಟದಿಂದ ಹರಿದು ಬರುವ ಪುಟ್ಟ ಪುಟ್ಟ ಝರಿಗಳನ್ನು ಕಾಣುತ್ತಾ ಸಂತೋಷ ಪಟ್ಟ ನೆನಪು, ರಸ್ತೆಯ ಇಕ್ಕೆಲಗಳಲ್ಲಿ ಕೆಂಪಾದ ಕೋಡಿ ನೀರು ಭಯಂಕರ ವೇಗದಿಂದ ಕಸ ಕಡ್ಡಿಗಳನ್ನು ಸೇರಿಸಿಕೊಂಡು ಹರಿಯುವುದನ್ನು ಭಯಭೀತರಾಗಿ ನೋಡುತ್ತಾ ನಿಂತ ನೆನಪು, ಬೀಸುವ ಗಾಳಿಗೆ ಆಗಾಗ ಕೊಡೆ ಉಲ್ಟಾ ಆದಾಗ ಉಕ್ಕಿ ಬಂದ ನಗುವನ್ನು ಇಂಚೂ ಕೂಡಾ ಹಿಡಿದಿಡದೇ ಪೂರ್ತಿಯಾಗಿ ಚೆಲ್ಲಿದ ನೆನಪು, ಶಾಲೆಯಲ್ಲಿ ಉದ್ದ ಬೆಳೆದ ಉಗುರಿನೊಂದಿಗೆ ಪ್ರಾರ್ಥನೆಗೆ ನಿಂತಾಗ ಉಗುರು ನೋಡುವ ಪದ್ಧತಿಗೆ ಹೆದರಿ ಹಲ್ಲಿನಿಂದ ಕಚ್ಚಿ ಕಚ್ಚಿ ಅದನ್ನು ತೆಗೆದ ನೆನಪು, ಪ್ರತಿ ಬುಧವಾರ ಬಣ್ಣದ ಬಟ್ಟೆ ಹಾಕಿಕೊಳ್ಳಲು ಸಂಭ್ರಮ ಪಡುತ್ತಿದ್ದ ನೆನಪು, ನಿತ್ಯ ಪಂಚಾಂಗ ಹೇಳುವಲ್ಲಿ ಎಡವಿ ಬಸ್ಕಿ ಹೊಡೆದ ನೆನಪು, ಶಾಲೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ಕುಳಿತುಕೊಳ್ಳಬೇಕಾದ್ದರಿಂದ ಒಟ್ಟಿಗಿರಲಾಗದೆಂದು ಚಡಪಡಿಸಿದ ನೆನಪು, ಆಗಾಗ ಉಚ್ಚೆ ಹೊಯ್ಯುವ, ನೀರು ಕುಡಿಯುವ ಪಿಳ್ಳೆ ನೆಪವೊಡ್ಡಿ ಕ್ಲಾಸಿನಿಂದ ಹೊರಬಂದು ಇಬ್ಬರೂ ಸೇರದೆ ಬಹು ಕಾಲವಾಯಿತೇನೋ ಎಂಬಂತೆ ಕುಳಿತು ಮಾತನಾಡುತ್ತಿದ್ದಾಗ ಪಿ.ಟಿ.ಮಾಸ್ತರರು ಕಂಡು ಬೈದರೂ ಎಂಥಾ ಅಣ್ಣ ತಂಗಿಯಪ್ಪಾ ಎಂದಾಗ ಗರ್ವ ಪಟ್ಟ ನೆನಪು, ಸಂಜೆ ಆಟಕ್ಕೆ ಬಿಡುವುದನ್ನೇ ಕಾಯ್ದು ಕೊಂಡು ಹುಮ್ಮಸ್ಸಿನಿಂದ ಮುಂದಿನ ಮೈದಾನಕ್ಕೆ ಓಡಿದ ನೆನಪು, ದೊಡ್ಡ ಆಳ್ತನದ ನಮ್ಮನೆ ಕೆಲಸದ ಈಶನ ಮಗ ವೆಂಕ್ಟ ನನ್ನೆದುರು ಕಬಡ್ಡಿಗೆ ನಿಂತಾಗ ಥರಗುಟ್ಟಿದ ನೆನಪು, ಬದಿಯಲ್ಲಿ ನಿಂತು ನೀನು ಚಪ್ಪಾಳೆ ತಟ್ಟುತ್ತಾ ಕುಪ್ಪಳಿಸುತ್ತಿದ್ದ ನೆನಪು, ಲಕ್ಷಕ್ಕೆಷ್ಟು ಸೊನ್ನೆ ಎಂಬುದನ್ನೂ ಹೇಳಲಾಗದೇ ಮಾಲಿನಿ ಅಕ್ಕೋರರ ಗಾಳಿ ಕೋಲಿನಿಂದ ಪೆಟ್ಟು ತಿಂದು ನಾಲ್ಕಾರು ಬರೆ ಬಿದ್ದ ನನ್ನ ಕಾಲುಗಳನ್ನು ಕಂಡು ನಿನ್ನ ಕಣ್ಣಲ್ಲೂ ನೀರು ಚಿಮ್ಮಿದ ನೆನಪು, ಶಾಲೆ ಬಿಟ್ಟೊಡನೆಯೇ ಕೌಳಿ ಹಣ್ಣು ತಿನ್ನುವ ಆಸೆಯನ್ನು ಹೊತ್ತು ಕೌಳಿ ಗುಡ್ಡಕ್ಕೆ ಓಡಿದ ನೆನಪು, ಮೈಯೆಲ್ಲಾ ತರಚಿಕೊಂಡು ಮನೆಗೆ ಮರಳಿ ಬೈಸಿಕೊಂಡ ನೆನಪು, ಸಂಜೆ ಅಮ್ಮ ಮಾಡಿ ಕೊಡುತಿದ್ದ ಅವಲಕ್ಕಿ-ಮಜ್ಜಿಗೆಗೆ ಹಾತೊರೆಯುತ್ತಿದ್ದ ನೆನಪು, ಅದರೊಡನೆ ಅಪ್ಪ ಪೇಟೆಯಿಂದ ತಂದ ಚಿಪ್ಸ್ ಬೆರೆಸಿ ತಿಂದ ನೆನಪು, ಚೌತಿ ಹಬ್ಬದ ಸಮಯದಲ್ಲಿ ಮಾಡಿಟ್ಟಿರುತ್ತಿದ್ದ ಪಂಚಕಜ್ಜಾಯಕ್ಕೆ ಕಿತ್ತಾಡುತ್ತಿದ್ದ ನೆನಪು, ಸಂಜೆ ಮೇಲಿನ ಕೇರಿಯ ಸುಬ್ಬುವಿನ ಮನೆಗೆ ವಾರಿಗೆಯ ಮಕ್ಕಳೊಟ್ಟಿಗೆ ಹೋಗಿ ಕಂಬದಾಟ ಆಡುತ್ತಿದ್ದ ನೆನಪು, ಅಲ್ಲೇ ಆಟವಾಡುತ್ತಾ ಸಂಜೆಯಾಗಿ ಮನೆಗೆ ವಾಪಸ್ ಹಿಂದಿರುಗಲು ಭಯ ಪಡುತ್ತಿದ್ದ ನೆನಪು, ಅಪ್ಪ ರಾತ್ರಿ ಕೆಲಸ ಮುಗಿಸಿ ಬರುವಾಗ ನಮ್ಮನ್ನು ಬೈದುಕೊಂಡು ಕರೆತರುತ್ತಿದ್ದ ನೆನಪು, ಅಜ್ಜಿ ರಾತ್ರಿ ಒಪ್ಪತ್ತಿನ ಹೆಸರಲ್ಲಿ ತಿಂಡಿ ತಿನ್ನುತ್ತಿದ್ದನ್ನು ಕಂಡು ನಾವೂ ಊಟದ ಬದಲು ತಿಂಡಿಗೇ ಆಸೆ ಪಡುತ್ತಿದ್ದ ನೆನಪು, ರಾತ್ರಿ ಕೈಕಾಲು ತೊಳೆಯಲು ತೋಟದ ದಿಡ್ಡಿಯಲ್ಲಿದ್ದ ಬಚ್ಚಲಿಗೆ ಭೂತದ ಭಯದಿಂದ ಹೋಗಲು ಹಿಂಜರಿಯುತ್ತಿದ್ದ ನೆನಪು, ಆದರೂ ರಾತ್ರಿ ಅಜ್ಜನ ಬಳಿ ದೆವ್ವ-ಭೂತದ ಕಥೆ ಹೇಳಲು ಪಟ್ಟು ಹಿಡಿಯುತ್ತಿದ್ದ ನೆನಪು, ಅಪ್ಪ ಹೊಸದಾಗಿ ಟಿ.ವಿ ತಂದಾಗ ಅಜ್ಜ ಕಥೆ ಹೇಳುತ್ತಿದ್ದ ರೂಢಿ ತಪ್ಪಿ ಹೋಗಿದ್ದಕ್ಕೆ ಮರುಗಿದ ನೆನಪು, ಮನೆಯ ಮೇಲಿನ ಸೂರಿನ ಕೆಳಗೆ ಮಲಗಿದರೆ ರಾತ್ರಿ ಕೆಟ್ಟ ಕನಸು ಬೀಳುತ್ತದೆ ಎಂಬ ಅಜ್ಜನ ಮಾತನ್ನು ಪ್ರಮಾಣೀಕರಿಸಿಕೊಳ್ಳಲು ಹೋಗಿ ಅಪ್ಪನ ಬಳಿ ಲತ್ತೆ ತಿಂದ ನೆನಪು, ಎರಡೆರಡು ಕಂಬಳಿಯ ಕೆಳಗೆ ಚಾದರವೊಂದನ್ನು ಸೇರಿಸಿ ಹೊದ್ದು ಬೆಚ್ಚಗೆ ಮಲಗಿ ಮಗ್ಗುಲು ಬದಲಿಸುತ್ತಿದ್ದ ನೆನಪು… …
ಅದೆಷ್ಟು ಸುಮಧುರವಲ್ಲವಾ ಬಾಲ್ಯದ ನೆನಪುಗಳು? ಬಹುಷಃ ನೀನು ಕೂಡ ಇವೆಲ್ಲವನ್ನೂ ನೆನೆಸಿಕೊಳ್ಳುತ್ತಿರುವೆ ಎಂದು ಕೊಳ್ಳುವೆ ಅಥವಾ ಬೆಂಗಳೂರಿನ ಗಡಿಬಿಡಿಯ ಬದುಕಿನಲ್ಲಿ, ಅಟ್ಟ ಸೇರಿದ ಜಾಡಿಯೊಳಗೆ ಈ ಸವಿ ನೆನಪುಗಳನ್ನೆಲ್ಲಾ ಬಾಯಿಕಟ್ಟಿ ಇಟ್ಟಿರುವೆಯೋ? ಎಳೆದಷ್ಟು ಬಿಚ್ಚಿಕೊಳ್ಳುವ ರೇಷ್ಮೆ ನೂಲುಗಳಲ್ವಾ ಅವು? ಇಂದಿನ ಕಾನ್ವೆಂಟ್-ಕಾಂಕ್ರೀಟ್ ಸಂಸ್ಕ್ರತಿಯ ಮಕ್ಕಳನ್ನು ನೋಡಿದರೆ ದುರದೃಷ್ಟಶಾಲಿಗಳೆನಿಸುತ್ತದೆ. ನಿನ್ನ ಮಗಳೂ ಇದಕ್ಕೆ ಹೊರತಾಗಿರಲಾರಳು. ವರ್ಷಕ್ಕೊಮ್ಮೆಯಾದರೂ ನೀನವಳನ್ನು ತವರು ಮನೆಗೆ ಕರೆದುಕೊಂಡು ಬರುವುದಿಲ್ಲವಲ್ಲಾ ಅದಕ್ಕೆ ಹೇಳಿದೆ. ಇರಲಿ ಬರುವ ಮೇನಲ್ಲಾದರೂ ಮನಸ್ಸು ಮಾಡು. ನಿನ್ನ ಪತಿರಾಯರು ಹೇಗೂ ಕೆಲಸದಿಂದ ತಪ್ಪಿಸಿಕೊಳ್ಳುವಂತಿಲ್ಲ. ಮಗಳನ್ನಾದರೂ ಕಳಿಸು. ದಾರಿ ಕಾಯುತ್ತಿರುವೆ.
ಪ್ರೀತಿಯಿಂದ ಅಣ್ಣ
(ನನ್ನವೊಂದಿಷ್ಟು ನೆನಪುಗಳಿದ್ದವು. ಅವನ್ನೆಲ್ಲಾ ಕೂಡಿಸಬೇಕೆನಿಸಿತು. ಅದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹೀಗೆ ಒಂದೇ ಪಟ್ಟಿಗೆ ಅವನ್ನು ಜೋಡಿಸುವ ಯತ್ನ ಮಾಡಿದೆ. ಹುಟ್ಟಿದ್ದು ಮೇಲಿನ ಬರಹ. ಹ್ಞಾಂ ! ನಿಮಗೆ ಸಮಯವಿದ್ದಲ್ಲಿ ನೆನಪು ಪದ ಪ್ರಯೋಗ ಎಷ್ಟು ಬಾರಿ ಆಗಿದೆ ಎಂದು ಎಣಿಸಿಕೊಳ್ಳಬಹುದು!)
nenapugala meravanege yalena patra changide…
nenapina galiiyoLage kaLedu hOdare vapassu nbaralu mansE aagolla…