ಆಕೆಗೋ ತುಂಬಿದ ಬಸಿರು. ಹೊರಗೆ ಮಳೆರಾಯ ರಚ್ಚೆ ಹಿಡಿದ ಮಗುವಿನಂತೆ ಉಧೋ ಎಂದು ಒಂದೇ ಸಮನೆ ಬಿಡುವು ಕೊಡದೆ ಸುರಿಯುತ್ತಿದ್ದಾನೆ. ಮೂರು ವರ್ಷಕ್ಕೆ ಮುಂಚೆಯೇ ಲಾಟರಿಯಲ್ಲಿ ಬಂದ ಮೋಟಾರು ಕಾರಿನಲ್ಲಿದ್ದ ಹನಿ ಪೆಟ್ರೋಲ್ ಒಮ್ಮೆ ಆಘ್ರಾಣಿಸುವಷ್ಟರಲ್ಲೇ ಇಂಗಿ ಹೋಯಿತು. ಮಾವ ಕೊಟ್ಟ ಬೈಕನಲ್ಲೇ ಹೋಗಿ ವೈದ್ಯರನ್ನು ಕರೆತರೋಣವೆಂದರೆ, ಅದರ ಒಂದು ಚಕ್ರ ಎಂದೋ ಟುಸಾಗಿತ್ತು. ಈ ನಡುವೆ ಮೂಲೆಯಲ್ಲಿ ಸ್ವಂತ ದುಡಿಮೆಯಲ್ಲಿ ಕೊಂಡ ಇಪ್ಪತ್ತ್ನಾಲಕ್ಕಿಂಚಿನ ಗಟ್ಟಿ ಮುಟ್ಟಾದ ಸೈಕಲ್ ನನ್ನನ್ನೇ ನೋಡಿ ಅಣಕಿಸಿದಂತೆ ಭಾಸವಾಯಿತು!
* * *
ಮಗ ನಿರಾಳನಿಗೆ ಈಗ ಭರ್ತಿ ಹನ್ನೆರಡು ವಸಂತಗಳು. ಅವನಿಗೆ ಬೈಕ್ ಹೇಳಿಕೊಡಬೇಕಂತೆ. ಅದಕ್ಕೆ ಮೊದಲು ಸೈಕಲ್ ಕಲಿ ಎಂದು ನಾನು ಹೇಳಿದ್ದು ಅವನ ಕಿವಿಗೆ ಬಿದ್ದಂತಿಲ್ಲ.
* * *
ನಿರಾಳನ ಮಡದಿಗೀಗ ಹೆರುವ ಸಂಕಟ. ಮನೆಯಲ್ಲಿದ್ದ ಕಾರು, ಬೈಕ್ಗಳು ಕಳೆದೆರಡು ತಿಂಗಳಿಗೆ ಮೊದಲೇ ಮಾಡಿದ್ದ ಸಾಲ ತೀರಿಸಲಾಗದೇ ಹರಾಜಾಗಿ ಹೋದವು. ಮತ್ತದೇ ಸೈಕಲ್ ಮೂಲೆಯಿಂದ ಕಣ್ಣು ಮಿಟುಕಿಸುತ್ತಿತ್ತು. ನಿರಾಳ ಅದನ್ನು ನೋಡಿ ಸುಮ್ಮನೇ ನಿಡುಸುಯ್ದನಷ್ಟೇ….. ಈಗ ಮತ್ತೆ ಅಂತಹುದೇ ಮಳೆ, ಕೊಚ್ಚೆ ರಸ್ತೆ, ಹಳೇ ಸೈಕಲ್. ಆದರೆ ಮೈಚರ್ಮ ನೆರಿಗೆಗಟ್ಟಿರುವ ನಾನು ಸೈಕಲ್ ತುಳಿಯುತ್ತಿರುವೆ!
* * *
e kate super… muru bari odide… yako bala kushi yahitu.
mechikondiddakke dhanyavadagalu. nimma sahakara nanage agatya….. heege munduvareyali idu……dhanyavadagalu….