ಹದಗೆಟ್ಟ ತರಕಾರಿ ಪಲ್ಯದೊಡನೆ
ಸೀದು ಹೋದ ಅನ್ನ
ಬೀಡು ಬಿಡುಸಾಗಿ ಎಸೆದದ್ದು
ಪ್ರತೀ ಕೊಚ್ಚಲೂ ಬರೀ ನಾರು
ಅಜ್ಜಿ ಹೇಳುವ ಕಥೆಗಳಂತೆ!
ಬುರುಡೆ ಉರಿಯುವ ಸದ್ದು
ಚಿಟಿ ಪಿಟಿ ಠೇಂಕರಿಸಿದ್ದು, ಠಪ್ಗುಟ್ಟಿದ್ದು
ಭಯದ ಅರ್ಥ ಕವುಚಿಕೊಂಡಿದ್ದಲ್ಲೇ
ಎದೆಯ ಮೇಲೆ ಚಿಮುರು ಕೂದಲುಗಳು
ಮೊಳೆಯಲಾರಂಭಿಸಿದಾಗ,
ಬೆವರ ಹನಿಗಳಲ್ಲಿ ಸಾಲುಗಟ್ಟತೊಡಗಿದಾಗ.
ಬೀಡಾಡಿ ಬಸವ ನೀನು, ಬೈಗುಳಗಳ ಬುಟ್ಟಿ,
ತೀರಾ ಕೊನೆಗೆ ಕಿಂಚಿತ್ ಭಾವನೆಗಳನ್ನೂ
ಆಪೋಶನ ತೆಗೆದು ಕೊಂಡಿದ್ದು.
ಶುಷ್ಕ ನೆಲದೊಳಗೆ ಅವಿತೇ ಇದ್ದೆ ನಾನು
ಗಮ್ಯ ಮಾತ್ರ ಅನಂತದೆತ್ತರಕ್ಕೆ ಯಾನ
ಪ್ರೇಯಸಿಯ ಸೆಟೆದ ಮೊಲೆಗಳಿಗೆ ಸಮಾನ
ಯೌವ್ವನದ ಕಸುವು ತುಂಬಿದ ಉಮೇದಿನಲ್ಲಿ
ಅಂದಾಜಿಗೆ ನಿಲುಕದ್ದು ಆಳೆತ್ತರಗಳು!
ಇನ್ನಾದರೂ ಹೊರಟೀತೆ ಮೆರವಣಿಗೆ;
ಪಲ್ಲಂಗವಿರುವ ಸಾಲು ಪಲ್ಲಕ್ಕಿಗಳೊಡನೆ?
ಇಂದಿಗೂ ಬಡಿದಾಡಲು ಸಿದ್ಧ;
ದೃಢವಾಗಿರಲೂ, ಬಂಡೆಗಲ್ಲಿನಂತೆ
ಆದರೆ ಬೆಳ್ಳಂಬೆಳಗಿನ ಹಸಿರಸಿರು ಚಿಗುರು,
ಬೆಚ್ಚಗೆ ತಬ್ಬಿದ ಮಿನುಗುವ ಇಬ್ಬನಿ,
ಪರಿಸ್ಥಿತಿಯನ್ನೇ ಕೆದಕುವ ಮುದಿ ಕೋಲುಗಳು,
ದಪ್ಪನೆಯ ಉಲ್ಲನ್ ಸ್ವೆಟರ್
ಕಪ್ಪು ಫ್ರೇಮಿನ ಅಗಲ ಕನ್ನಡಕದಡಿ
ಮಂಜುಗಟ್ಟಿದ ಅಣಕಿಸುವ ಕಿರುಗಣ್ಣುಗಳು…
ತೀರಾ ಅಧೀರನೆನಿಸುತ್ತಿದೆ
ಕೋಟ್ಯಂತರ ವರ್ಷಗಳೇ ಮುಗಿದು ಹೋದವಾ?
ನನಸಾಗುವ ನಿಟ್ಟಿನಲ್ಲಿ ಬಡಿದಾಡುತ್ತಿದ್ದ
ಕನಸುಗಳೂ ಕದನ ವಿರಾಮ ಘೋಷಿಸಿಬಿಟ್ಟವಾ?
ನನಗೀಗ ಅಂಜಿಕೆ!
ಬದುಕುವ ಭಯ
ಎದೆಯ ಮೇಲಿನ ಕೂದಲುಗಳು
ಮತ್ತೆ ಮತ್ತೆ ನಗುತ್ತಿವೆ
ಕಪ್ಪು ಕಪ್ಪಾಗೇ…
ಅದಕ್ಕೇ ಹೆದರಿಕೆ!!