Feeds:
Posts
Comments

ಕಂಬನಿ ಕಾಣದಿರಲೆಂದು ಮಳೆಯಲ್ಲಿ ಅಳುತ್ತಿದ್ದವ ಪ್ರತಿ ಹನಿಯಲ್ಲೂ ಅವಳನ್ನೇ ಹುಡುಕುತ್ತಿದ್ದ. ಅವಳು ಕಾಣಲೇ ಇಲ್ಲ. ದಿಗಿಲಾಗಿ ತಲೆಯೆತ್ತಿದ. ಆಕಾಶವಿರಲಿಲ್ಲ ಅಲ್ಲಿ. ಆಕೆಯ ಕಣ್ಣುಗಳಿದ್ದವು!

ಹೀಗೆ ಒಂದು ಬೆಳದಿಂಗಳ ರಾತ್ರಿ ಮಗುವಿಗೆ ತುತ್ತು ಉಣಿಸಲು ತಾಯಿ ಹರ ಸಾಹಸ ಪಡುತ್ತಿದ್ದಳು. ನೀ ತಿನ್ನದಿದ್ದರೆ
 ಚಂದಿರಗೇ ಇವೆಲ್ಲಾ ಎಂದು ಸಣ್ಣಗೆ ಗದರುತ್ತಿದ್ದಳು. ಅವತ್ತು ಚಂದಿರನೇ ಬಂದು ಉಂಡು ಹೋದ ಮತ್ತು ಅವತ್ತಿನಿಂದ ಅವ ಅನಾಥನಾದ!

ಬಂದೂಕುಗಳನ್ನು ನೆಟ್ಟು ಗುಂಡಿನ ಮಳೆಗಾಗಿ ಕಾತರಿಸಿದ್ದೆ. ಬರಗಾಲ ಬಂದಿತು. ಬಂದೂಕುಗಳೆಲ್ಲಾ ಸತ್ತು ಹೋದವು. ಮಳೆ ಬಂದಿತು. ಆದರೆ ಗುಂಡುಗಳದ್ದಲ್ಲ!

ಕಪ್ಪು ಹೊಲವ ತಬ್ಬಿದ ಸೂರ್ಯಕಾಂತಿಯ ಮುಖದ ಮೇಲೆ ಮುಗಿಲಲ್ಲಿ ಮೂಡಿದ ಕಾಮನಬಿಲ್ಲು ಸತ್ತು ತೇಲುತ್ತಿತ್ತು!

(ಕ್ಯಾನ್‌ವಾಸ್‌ನಲ್ಲಿ ಕೆತ್ತುವ ಪೇಂಟಿಂಗ್‌ನಂತ ಸಾಲುಗಳೆಂದರೆ ಅದೇನೋ ಆಕರ್ಷಣೆ. ಅದಕ್ಕೇ ಅವನ್ನು ಚಿತ್ರಿಕೆಗಳು ಅಂತಲೇ ಕರೆಯಬೇಕೆನಿಸಿತು. ಇಂತಹ ಸಾಲುಗಳು ತಾವಾಗೇ ಹುಟ್ಟಿಕೊಳ್ಳುತ್ತವೆ. ನಂತರ ವಲಯವೊಂದನ್ನು ನಿರ್ಮಿಸುತ್ತವೆ.ಮತ್ತೆ ಮತ್ತೆ ಓದಿದಾಗ ಹೊಸ ಅರ್ಥಗಳನ್ನು ನೇಯುತ್ತವೆ. ಅಂತೆಯೇ ಕೆಲವು ಸಾಲುಗಳು ಹುಟ್ಟಿಕೊಂಡಿವೆ. )

ಹೊಸ ಚಿತ್ರ ಬರೆಯುವ ಮನಸ್ಸಿತ್ತು. ಬ್ರಶ್, ಕ್ಯಾನ್‌ವಾಸ್ ಎಲ್ಲವೂ ಸಿದ್ಧವಿದ್ದವು. ಮೆತ್ತುವುದೊಂದು ಬಾಕಿಯಿತ್ತು. ಈಗ ಅದೂ ಆಗಿದೆ. ‘ಚಿತ್ರ’ ನಿಮ್ಮ ಮುಂದಿದೆ, ‘ಕುಲುಮೆ’ಯೊಟ್ಟಿಗೆ.

ಲಿಂಕ್ ಇಲ್ಲಿದೆ: http://chitrakulume.wordpress.com/

ಹೆಡ್ಡಿಂಗ್ ಬರೆದು ಎನು ಬರೆಯೋದು ಅಂತ ಯೋಚಿಸುತ್ತಿದ್ದೇನೆ. ಅದು ದೀಪವೋ, ಬೆಂಕಿಯೋ ಎಂಬುದನ್ನೂ ನಿರ್ಧರಿಸಲಾರದಂತಾಗಿದ್ದೇನೆ. ಬ್ಲಾಗ್ ಕಡೆಗೊಂದು ದಿವ್ಯ ನಿರ್ಲಕ್ಷ್ಯ ಬಿಸಾಕಿ ತಿಂಗಳುಗಳೇ ಸರಿಯಿತು. ಅಂತದ್ದೊಂದು ನಿರ್ಲಕ್ಷ್ಯಕ್ಕೆ ಸೋಮಾರಿತನವೆನ್ನುವುದೇ ಸೂಕ್ತವೇನೋ. ಅದೇನೇ ಇರಲಿ ಕಳೆದ ತಿಂಗಳು ಚಿಲ್ಲರೆ ದಿನಗಳು ಪುನಃ ವಾಪಸಾಗುವುದಿಲ್ಲವೆಂಬುದು ಕಹಿ ಸತ್ಯವೆಂಬ ಅರಿವಿದೆ.
     ಈ ಪುರಾಣಗಳೆಲ್ಲಾ ಒತ್ತಟ್ಟಿಗಿರಲಿ. ಇವತ್ತು ಏನಾದರೂ ಟೈಪಿಸಲೇ ಬೇಕೆಂಬ ಹಠ ಹೊತ್ತು ಕುಳಿತಿದ್ದೇನೆ. ಗೆಳೆಯರೆಲ್ಲಾ ಮತ್ತೆ ಮತ್ತೆ ಎಚ್ಚರಿಸುತ್ತಿದ್ದಾರೆ. ನಿನ್ನ ಬ್ಲಾಗ್ ಹಿಟ್ಸ್ ಸದಾ ಬಿದ್ದುಕೊಂಡಿರುವ ಹೆಬ್ಬಾವಿನಂತೆ ಆಗಿಬಿಟ್ಟಿದೆಯಲ್ಲಾ ಮಾರಾಯ, ಎನನ್ನಾದರೂ ತುರುಕೋ ಅಂತ. ಆ ಪ್ರೀತಿಗೆ ಒಂದು ಧನ್ಯವಾದದ ಹೊರತು ಬೇರೇನೂ ಹೇಳಲಾರೆ.
     ಕೆಲವು ದಿನ ಒಂದಿಷ್ಟು ಸುಮ್ಮನೆ ಯೋಚನೆಗಳು ತಲೆಯೆತ್ತಿತ್ತು. ಇಷ್ಟಕ್ಕೂ ಬ್ಲಾಗ್ ಶುರು ಮಾಡಿದ್ದು ಏಕೆ? ನಾವಡರ ಬಲವಂತಕ್ಕೋ? ಬರವಣಿಗೆಗೆ ಇಂಬು ದೊರೆಯಲೆಂದೋ? ನನ್ನೆಲ್ಲಾ ಯಕಶ್ಚಿತ್ ಬರಹಗಳನ್ನು ಕೂಡಿಡಲೋ? ಇವೆಲ್ಲಕ್ಕಿಂತ ಹೆಚ್ಚಾಗಿ ನಾನೂ ಬರೆಯಬಲ್ಲೆ ಎಂದು ಸಾರಲೆಂದೋ? ಅಥವಾ ನನ್ನ ಖಾಸಗಿಗಳನ್ನೆಲ್ಲಾ ಬಹಿರಂಗ ಮಾಡಲೋ? ಬ್ಲಾಗ್ ಹಿಟ್ಸ್ ಹಿಮಾಲಯ ಮುಟ್ಟೋಕೆ ಅಂತ ಬರೀಬೇಕಾ?  ಅಂತಲೂ ಅನ್ನಿಸಿ,  ಒಂದೂ ತಿಳಿಯದೇ ಪ್ರಶ್ನೆಗಳ ನಡುವೆಯೇ ಉಸಿರುತ್ತಿದ್ದೆ.
    ಒಂದಷ್ಟು ದಿನ ಛೆ, ಬೇಕಾ ಇವೆಲ್ಲಾ ರಾಮಾಯಣ? ಎನಿಸಿದ್ದೂ ಇದೆ. ಅಂದರೆ ಈಗ ಆ ಮೊದಲಿನ ಪ್ರಶ್ನೆಗಳೆಲ್ಲಾ ಮಾಯವಾದವಾ ಎಂಬುದಕ್ಕೂ ಉತ್ತರವಿಲ್ಲ. ಈ ಹೊತ್ತಿನಲ್ಲಿ ಅವು ಕಾಣುತ್ತಿಲ್ಲ ಎಂಬುದಷ್ಟೇ ನಿಜ. ನಾಳೆ ಹೇಗೋ ಗೊತ್ತಿಲ್ಲ. ನನಗೆ ಇವೆಲ್ಲಾ ಸಂಗತಿಗಳು ಕಾಡುತ್ತಿವೆ, ಅದಕ್ಕೆ ಅವು ತೀರುವಷ್ಟು ದಿನ ಬ್ಲಾಗ್ ಕದ ತಟ್ಟುವುದಿಲ್ಲ. ಎಂದು ಒಂಬ ಒಂದು ಒಕ್ಕಣೆಯನ್ನಾದರೂ ಪೋಸ್ಟ್ ಮಾಡೋಣವೆಂದುಕೊಂಡಿದ್ದೆ. ಆದರೆ ನನ್ನ ತಳಮಳಗಳನ್ನು ಹೀಗೆಲ್ಲಾ ಹರಡಬೇಕಾ? ಅದನ್ನೂ ಬ್ಲಾಗಿಗೆ ತುರುಕಿ ಅದಕ್ಕೂ ಒಂದು ಬೆಲೆ ಕಟ್ಟಬೇಕಾ ಎಂದೆನಿಸಿ ಸುಮ್ಮನಾದೆ. ಸದ್ಯ ಇವತ್ತು ಆ ಎಲ್ಲಾ ಅನಿಸಿಕೆಗಳಿಗೂ ಸ್ಟಾಪ್ ಸಿಗ್ನಲ್ ತೋರಿಸಿದ್ದೇನೆ!
      ಬದುಕೂ ಕೆಲವೊಮ್ಮೆ ಹೀಗೇ ಸವಾಲೆಸೆಯುತ್ತದಲ್ವಾ? ಬಗೆಹರಿಸು ನೋಡೋಣ ಅಂತ ಅದು ತೊಡೆ ತಟ್ಟಿ ನಿಂತುಬಿಟ್ಟರೆ ಸಾಕು. ಜಟ್ಟಿಯೊಬ್ಬನ ಭರ್ಜರಿ ಪಟ್ಟಿನಲ್ಲಿ ಸಿಕ್ಕಿಕೊಂಡು ಸಿರ ಸಿರ ಉಸಿರಾಡುವವರ ಪಾಡಾಗಿಬಿಡುತ್ತದೆ ನಮ್ಮದು. ನಿಲುಗಡೆಯೇ ಇಲ್ಲದ ಎಕ್ಸ್‌ಪ್ರೆಸ್ ರೈಲಿನಂತಾಗಿಬಿಡಬೇಕು ಅನಿಸುತ್ತದೆ ಒಮ್ಮೊಮ್ಮೆ. ಆದರೆ ಮರುಕ್ಷಣವೇ ಅಂತಹ ರೈಲಿಗೂ ಹೊರಡುವ ಮತ್ತು ಕೊನೆಯ ಒಂದು ನಿಲ್ದಾಣವಿರುತ್ತದೆ ಎಂಬುದು ಹೊಳೆಯುತ್ತದೆ. ಹೊಸ ಹೊಸ ತಿರುವುಗಳು, ನಿಲ್ದಾಣಗಳು, ಅನಾಮಿಕ ಪ್ರಯಾಣಿಕರು ಎಲ್ಲರೂ ವೃತ್ತವೊಂದರ ಭಾಗವಾಗಿಯೇ ಅದು ಸಂಪೂರ್ಣ ವೃತ್ತವಾಗುವುದು ಎಂಬುದು ನಿಟ್ಟುಸಿರು ಬಿಡಿಸುತ್ತದೆ. ಬೋದಿಲೇರನ, ಬದುಕೆಂದರೆ ಜೂಜುಗಾರನ ಕೈಲಿ ಮುಗಿದುಳಿದ ನಾಣ್ಯದ ಚೀಲ, ಅರ್ಧ ಉಳಿದ ಸಿಗರೇಟ್ ಮತ್ತು ಧುತ್ತೆಂದು ಕೊನೆಯಾಗುವ ದಾರಿ ಎಂಬ ಸಾಲುಗಳು ಮತ್ತಷ್ಟು ಚಿಂತನೆಗೆ ಹಚ್ಚುತ್ತವೆ. ಒಂದಂತೂ ನಿಜ ಯಾವ ಬರವಣಿಗೆಯೂ, ಯಾವ ಮಾದರಿಗಳೂ ನಮ್ಮ ಬದುಕನ್ನು ನಿರ್ಧರಿಸಲಾರವು. ನಿರ್ದೇಶಿಸಬಹುದಷ್ಟೇ! ಈ ಸಾಲುಗಳು ಸಹ ನಾನ್ಯಾರದ್ದೋ ಭಾಷಣದಲ್ಲಿ ಕೇಳಿದ್ದೋ, ಬರಹದಲ್ಲಿ ಓದಿದ್ದೋ ಇರಬೇಕು!! ನಿಜವೆಂತೂ ಹೌದು ತಾನೆ? ಎಲ್ಲಾ ಗೊತ್ತಿಲ್ಲಗಳ ನಡುವೆಯೇ ದಾರಿಗಳು ಹುಟ್ಟಿಕೊಳ್ಳುತ್ತವೋ ಅದೂ ಗೊತ್ತಿಲ್ಲ!
         ಯಾಕೋ ಇಲ್ಲಿಗೆ ನಿಲ್ಲಿಸೋಣವೆನಿಸುತ್ತಿದೆ…. ಮತ್ತೆ ಸಿಗುತ್ತೇನೆ…

ಮುಚ್ಚಿದ ಬಾಗಿಲುಗಳನ್ನು
ತೆರೆದ ಕಿಟಕಿಗಳು
ಸಮಾಧಾನಿಸುತ್ತಿದ್ದವು!

ಕನ್ನಡಿಯ ತುಂಬೆಲ್ಲಾ
ಸೀಳುಗಳು, ಛಿದ್ರ ಚಿತ್ತಾರ
ಪ್ರತಿ ಚೂರೂ ನಿನ್ನ ನೆನಪನ್ನೇ ಸಾರುತ್ತಿತ್ತು
ಬರುವನ್ನೇ ಕಾಯುತ್ತಿತ್ತು.

ಸುಭೀಕ್ಷವಾದ ಒಂದೂರಿನಲ್ಲಿ ಜನರಿಗೆ ತಮ್ಮ ಕೆಲಸದ ಸಮಯ ಗ್ರಹಿಸಲು ಯಾವುದೇ ಮಾಧ್ಯಮ ಇರಲಿಲ್ಲ. ಬುದ್ಧಿವಂತನೊಬ್ಬ ಬೆಳಿಗ್ಗೆ, ಸಂಜೆ ಬಾನಲ್ಲಿ ಹಾರುವ ಹಕ್ಕಿಗಳ ಪುಕ್ಕ ಹಿಡಿದು ಸಮಯ ಗುರುತಿಸಿದ. ಕೆಲವು ದಿನಗಳಲ್ಲಿ ಆ ಊರಿನ ತುಂಬಾ ಪುಕ್ಕಗಳೇ ತುಂಬಿಕೊಂಡವು. ನಂತರ ಪುಕ್ಕಗಳೇ ಸಿಗುತ್ತಿರಲಿಲ್ಲ. ಈ ನಡುವೆ ಊರಿನ ಎಲ್ಲರೂ ಬಿಲ್ಲುವಿದ್ಯಾ ಪ್ರವೀಣರಾಗಿದ್ದರು!
ಬಿಚ್ಚಲು ನವಿಲಿಗೆ ಗರಿಗಳೇ ಇರಲಿಲ್ಲ. ಉದುರಿದ ಎಲ್ಲಾ ಗರಿಗಳ ಮುಖದಲ್ಲೂ ಒಂದೊಂದು ನವಿಲು ಗರಿ ಬಿಚ್ಚಿ ನರ್ತಿಸುತ್ತಿತ್ತು. ಆ ಎಲ್ಲಾ ನವಿಲುಗಳ ಗರಿಗಳ ಮೇಲೂ ಹೆಣ್ಣು ನವಿಲುಗಳು ಕಣ್ಣು ಮುಚ್ಚಿ ಕುಳಿತಿದ್ದವು!
ಕತ್ತಲೆಯ ಕೋಣೆಯೊಳಗಿನ ಕಣವೊಂದು ಉಸಿರಾಡಲು ಕಷ್ಟವಾಗಿ ಪಕ್ಕದ ಕಣದಲ್ಲಿ ತನ್ನ ಕಷ್ಟ ತೋಡಿಕೊಂಡಿತು. ಈ ವಿಷಯ ಎಲ್ಲವಕ್ಕೂ ಗೊತ್ತಾಗಿ, ಎಲ್ಲವೂ ಸೇರಿ ಕಿಟಕಿ ತೆರೆದವು. ಗಾಳಿ ಮತ್ತು ಬೆಳಕು ಒಟ್ಟಾಗೇ ಬಂದವು.

ಮಳೆ ಬರೇ ಮಳೆಯಲ್ಲ! ಅದೊಂದು ಸುಮಧುರ ಕಾವ್ಯ, ದಿಗಂತದಾಚೆಗೆ ದೊರೆಯಬಹುದಾದ ಅನುಭೂತಿ, ಸೃಷ್ಟಿಯ ಸುಂದರ ದೃಶ್ಯಾವಳಿಗಳ ಮುಖವಾಣಿ, ಬದುಕು ಮತ್ತದರ ಬವಣೆಗಳನ್ನು ಮರೆಯಿಸುವ ತಾಕತ್ತುಳ್ಳ ಜಾದೂಗಾರ…ಮತ್ತಿನ್ನೇನೋ… 
ಅದು ಭಾವನೆಗಳ ಕೇಂದ್ರವೂ ಹೌದು ಭಕುತಿಯದ್ದೂ ಸರಿ.  ಮನುಷ್ಯ ಮತ್ತು ಮಳೆಯ ನಡುವಿನ ನಂಟು ಕೇವಲ ಕನಸು, ಕನವರಿಕೆ, ನೆನಪುಗಳಿಗಷ್ಟೇ ಸಂಬಂಧಿಸಿದ್ದಲ್ಲ. ಅದು ಜೀವಂತಿಕೆಯ, ಉಮೇದಿನ ಚಿಲುಮೆ. ಭೂಮಿಯ ಕ್ಯಾನ್‌ವಾಸ್ ಮೇಲೆ ಮುಗಿಲ ಕುಂಚ ಚಿಮುಕಿಸುವ ಬಣ್ಣದ ಗೊಂಚಲು. 
ವರ್ಷ ಋತುವಿನ ಮೊದಲ ಮೋಡ ಆಗಸದಲ್ಲಿ ಇಣಿಕಿದ್ದನ್ನು ಕಂಡು ಖುಷಿ ಪಡದ ಮಂದಿಯಿದ್ದಾರೆಯೇ? ಮಂದಿಯ ಮಾತು ಬಿಡಿ. ಮೊದಲ ಮಳೆಯ ಮುಂಚಿನ ಹನಿಗೆ ಚಿಪ್ಪಿನೊಳಗಣ ಮೆದು ಜೀವಿಯೂ ಉಸಿರು ಬಿಗಿ ಹಿಡಿದು ಬಾಯಿ ಬಿಡುತ್ತಂತೆ! ಉಳುವ ಯೋಗಿ ಮತ್ತವನ ಹೊಲವೂ ಬಾಯ್ಬಿಟ್ಟು ನಿಂತು ಕಾಯುವವರ ಸಾಲಿಗೆ ಸೇರಿಕೊಳ್ಳುತ್ತದೆ. ಮಳೆ, ಮತ್ತದು ಹಿಡಿಯುವ ಮಗುರೂಪಿ ರಚ್ಚೆ ತುಸು ಬೇಗನೇ ಕಿರಿ ಕಿರಿ ಹುಟ್ಟಿಸುತ್ತದಾದರೂ ಅದು ಉಳಿದೆರಡು ಕಾಲಗಳ ಬೇಸರಕ್ಕೆ ಸಮವಲ್ಲ.     
ಬೇಸಿಗೆಯ ಬಿಸಿಲಿನಲ್ಲಿ ಕಾದು, ಬಿರುಕಾಗಿ ನಿಂತ ನೆಲದ ಮುಕ್ತಿಗೆ ವರುಣನ ಆಗಮನವಾಗಲೇ ಬೇಕು. ಮೊದಲ ಮಳೆಗೆ ಮಿದುವಾಗುವ ನೆಲವು ಚಿಮ್ಮಿಸುವ ಘಮ್ಮನೆ ವಾಸನೆಯೂ ಬಲು ಹಿತ. ಅಂದ ಹಾಗೆ ಮಳೆಯ  ವೈಖರಿ ನಿಖರವೇನಲ್ಲ. ಮಳೆಯೆಂಬುದು ಒಂದೆಡೆ ತಲೆದೂಗಿಸುವ ಭಾವಗೀತೆ, ಮತ್ತೊಂದೆಡೆ ಮೈ ಮರೆಯಿಸುವ ಶಾಸ್ತ್ರೀಯ, ಇನ್ನೊಂದೆಡೆ ಅಬ್ಬರಿಸುವ, ಹುಚ್ಚೆಬ್ಬಿಸುವ, ಕುಣಿಸುವ ವೆಸ್ಟರ್ನ್ ಕೂಡ!
ಬಯಲು ಸೀಮೆಯ ಮಳೆ ಪ್ರಕೃತಿಯ ಪೊರೆಯುವ ಉದ್ದೇಶವಿರುವ ತುಂತುರಾಗಬಹುದಷ್ಟೇ. ಆದರೆ ಮಲೆನಾಡಿನ ಮಳೆಯ ಆರ್ಭಟ ಬಲು ಜೋರು.
ತೀರ್ಥಳ್ಳಿ ಗೌಡ, ಭಟ್ಟರ ಅಡಿಕೆ ತೋಟಗಳ ಬೇಲಿ ತಡಿಕೆ
ದಾಟಿ ಬುಡದಡಿಯ ಮೌನದ ಮಡಿಕೆ
ಗಳ ಮಡಿಗೊಳಿಸಿ ಶಬ್ದದಿಂದ
ಕಬ್ಬು ಭತ್ತವ ಥಳಿಸಿ,
ಬೆಟ್ಟಗಳನಳಿಸಿ,
ಸೋಂಭೇರಿ ಬಿಸಿಲ ಹೊಡೆದಟ್ಟಿ
ಬಾನಗಲ ಬಿಡಾರಗಳ ಕಟ್ಟಿ…
ಇದು ನಿಸಾರರು ಕಂಡ ಮಲೆನಾಡಿನ ಸಂಜೆ ಮಳೆ. ಭೋರಿಡುವ ಗಾಳಿ, ಗುಡುಗಿ ನಡುಗಿಸುವ ಗುಡುಗು, ಬಾನು-ಭೂಮಿಯನ್ನು ಒಂದಾಗಿಸುವ ಕೋಲ್ಮಿಂಚು, ಛಳ್ಳನೆ ಬೆಳಗುವ ಸಿಡಿಲು, ರೇಜಿಗೆ ಹುಟ್ಟಿಸುವ ಕಚ-ಪಿಚ ಕೆಸರು, ವಾರಕ್ಕೊಮ್ಮೆ ಇಣುಕಿದರೂ ಪ್ರಖರತೆ ಮರೆತ ಸೂರ್ಯ, ಮಳೆಗಾಲ ಬಂದೊಂಡನೆ ವರ್ಷದ ರಜೆ ಹಾಕಿ ಹೊರಡುವ ವಿದ್ಯುತ್… ಇವೆಲ್ಲಾ ಮಳೆಗಾಲದ ಮಲೆನಾಡಿನ ನಿತ್ಯ ಸ್ಥಿಥಿಗಥಿಗಳು. ಅಂತೆಯೇ ಮಳೆಯಿಂದ ರಸ್ತೆಯ ಇಕ್ಕೆಲಗಳ ಕಾಲುವೆಗಳಲ್ಲಿ ತುಂಬಿ ಹರಿಯುವ, ಕೆಂಪು ವರ್ಣದ ನೀರೆಬ್ಬಿಸುವುದು ಜುಳು ಜುಳು ನಾದವನ್ನಲ್ಲ, ಅಬ್ಬರವನ್ನ! ಆದರೆ ಈ ಎಲ್ಲಾ ಸಣ್ಣ ಪುಟ್ಟ ಕಷ್ಟಗಳು ಮಧುರಾತಿ ಮಧುರ ಸಂವೇದನೆಗೆ ಸಹಕಾರಿಗಳು. ಏತನ್ಮಧ್ಯೆ ಮಳೆಯೊಂದಿಗೇ ಪುನಃ ಚಾಲೂ ಆಗುವ ನಾಡೆಂಚಿನ ಶಾಲೆಗಳಿಗೆ ಪುಟ್ಟ ಬಣ್ಣದ ಛತ್ರಿ, ರೇನ್ ಕೋಟ್‌ನೊಡನೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕುವ ಪುಟಾಣಿಗಳು, ಕಂಬಳಿ ಹೊದ್ದು ಹಸಿರ ಬೆಟ್ಟದಲ್ಲಿ ದನ ಮೇಯಿಸುವ ಬಗೆ, ಸಂಜೆಯಾದೊಡನೆ ಗದ್ದಲವೆಬ್ಬಿಸುವ ಮಳೆ ಹುಳುಗಳ ವಾದ್ಯವೃಂದ! ಕಲ್ಪನೆಯೇ ನೆನಪುಗಳನ್ನು ಕೆದಕುವ ಕೆಲಸಕ್ಕೆ ಕೈ ಹಚ್ಚುತ್ತದಲ್ಲವಾ? ಅದೇ ಮಳೆಯ, ಅದರಲ್ಲೂ ಮಲೆನಾಡ ಮಳೆಯ ಕರಾಮತ್ತು. 
    
ಛೇ! ಎನ್ನಿಸುವ ಬೇಸರದ ನಡುವೆ, ಹೊರಗೆ ಜಿಟಿ ಜಿಟಿ ಮಳೆ ಹೊಯ್ಯುತ್ತಿರುವಾಗ, ಅಮ್ಮ ಮಾಡಿಕೊಟ್ಟ ಬೆಚ್ಚಗಿನ ಹಬೆಯಾಡುವ ಕಾಫಿ ಸೇವನೆಯ ಅದ್ಭುತ ಅನುಭವ ಮಳೆಗಾಲದಲ್ಲಷ್ಟೇ ಸಾಧ್ಯ ತಾನೇ? ಹಳೆಯ ನೋಟ್ ಬುಕ್ಕಿನ ಒಂದೊಂದೇ ಪುಟವನ್ನು ಕತ್ತರಿಸಿ, ಒಂದು ಕಡೆ ಊನವಾದ ದೋಣಿ ಮಾಡಿ ಅದರೊಳಗೊಂದು ಚಿಕ್ಕ ಕಲ್ಲಿಟ್ಟು ಹರಿಯುವ ನೀರಿನಲ್ಲಿ ತೇಲಿಬಿಡುವ ಆಸೆಯೂ ಮಳೆಯೊಂದಿಗೆ ಮತ್ತೆ ಕುಡಿಯೊಡೆಯುತ್ತದೆ. 
ಸುರಿಯುವುದರೊಂದಿಗೆ ಮನಸುಗಳನ್ನೂ ಒದ್ದೆ ಮಾಡುವ ಮಳೆಯೆಂಬ ಲಗಾಟಿಕೋರನೆಬ್ಬಿಸುವ ದಾಂಧಲೆಗೂ ಲೆಕ್ಕವಿಲ್ಲವೆನ್ನಿ! ಆದುದರಿಂದಲೇ ಮಳೆ ಕೆಲವೊಮ್ಮೆ ಯಾರಿಗೂ ಬೇಡದ, ಎಲ್ಲರೂ ತೆಗಳುವ ಬಿಕನಾಶಿಯಾಗಿಬಿಡುತ್ತದೆ. 
ಕಂಪೆಬ್ಬಿಸುವ ವರ್ಷಧಾರೆಗೊಂದು ಚರಣ ಹಾಡುತ್ತಾ, ಮೈ ಮನಸುಗಳನ್ನು ಆರ್ದ್ರಗೊಳಿಸುವ ಮಳೆ ಸುರಿವ ರೀತಿಗೆ ಅದರ ಬೆರಗಿಗೆ ಬಾಗುತ್ತಾ, ಸೃಷ್ಟಿಯ ಸುಂದರ ರೂಪಕಗಳ ಅಭಿವ್ಯಕ್ತಿಯಲ್ಲಿ ಚಿಣ್ಣಾಟವಾಡುವ ಮಗುವಾಗುತ್ತಾ, ಹರಿವ ಕೆಂಪು ಕೋಡಿಯನ್ನು ಸುಮ್ಮನೇ ನೋಡುತ್ತಾ ಹಾಗೇ ಒಮ್ಮೆ ಒದ್ದೆಯಾಗಿಬಿಡೋಣ ಬನ್ನಿ.

(ಮೊನ್ನೆ ಅಧಿಕೃತವೆಂಬಂತೆ ಮೈಸೂರಲ್ಲಿ ಮಳೆಗಾಲ ಶುರುವಾದ ಸಂದರ್ಭದಲ್ಲಿ ಒಂದಷ್ಟು ಖಾಯಂ ಕಾಡುವ ಸಂಗತಿಗಳಿಗೆ ಜೀವ ಬಂತು. ಮಲೆನಾಡ ನಮ್ಮನೆ ಕರೆಯಿತು! ಈ ನಡುವೆ ದಾಖಲಾದ ಬರಹವಿದು)

ಅಮ್ಮಾ ಎಂದರೆ ಏನೋ ಹರುಷವು… ನಮ್ಮ ಬಾಳಿಗೆ ನೀನೇ ದೈವವು… ಅಮ್ಮನ ಬೆಚ್ಚನೆ ಮಡಿಲಿನ ನೆನಪು ಈಗಾಗಲೇ ಆಗಿರಬೇಕಲ್ವಾ? ಬಾಲ್ಯದ ಆರ್ದೃ ನೆನಪುಗಳ ಬುಟ್ಟಿ ಬಿಚ್ಚಿ ನೋಡಿ. ಅಮ್ಮನಿಲ್ಲದೇ ಕುಡಿಯೊಡೆದ ಕನಸುಗಳೊಂದೂ ಸಿಗದು. ಅಮ್ಮನ ನೆರವಿಲ್ಲದೇ ಸಾಧಿಸಿದ ಕೆಲಸಗಳೂ ವಿರಳ.
        
ಅಪ್ಪನ ಪ್ರವಾಹದಂತ ಕೋಪಕ್ಕೆ ತುತ್ತಾಗಿ ಅಳುಮೋರೆ ಮಾಡಿಕೊಂಡು ಮೂಲೆಗೆ ಮೊರೆ ಹೊಕ್ಕಾಗ ರಮಿಸಿದ, ಕಷ್ಟದ ಪರೀಕ್ಷೆ ಎದುರಿಸಿ ಬಂದು ಫೇಲಾಗುವ ಭೀತಿಯಲ್ಲಿದ್ದಾಗ ಧೈರ್ಯ ತುಂಬಿದ, ಮೊದಲ ಸಲ ಬೀಡಿ ಸೇದಿ ಸಿಕ್ಕಿ ಬಿದ್ದಾಗ ಬಾಸುಂಡೆ ಬರುವಂತೆ ಬಾರಿಸಿದರೂ ಅಪ್ಪನ ಬಳಿ ಹೇಳದೇ ತಿಳಿ ಹೇಳಿದ, ಸೈಕಲ್ ಕಲಿಯಲು ಹೋಗಿ ಬಿದ್ದು ಕಾಲಿಗೆ ಭಯಂಕರ ಗಾಯವಾದಾಗ ಮುಲಾಮು ತಿಕ್ಕುತ್ತಾ ಸಮಾಧಾನಿಸಿದ ಎಲ್ಲರ ಪ್ರೀತಿಯ ಅಮ್ಮ ಮನಸಿನಿಂದ ಮರೆಯಾಗುವುದು ಸಾಧ್ಯವೇ? ತಾಯಿಯೆಂಬ ಧೀಃ ಶಕ್ತಿಯ ಮಹತ್ವವೇ ಅಂಥಹುದು.

ಅಂತಹ ಅಮ್ಮನನ್ನು ಮತ್ತೆ ನೆನೆಸಿಕೊಳ್ಳುವ ದಿನ ಬಂದಿದೆ. ಹೌದು. ಮೇ ೧೧ ವಿಶ್ವ ಅಮ್ಮಂದಿರ ದಿನ. ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವನ್ನಾಗಿ ಆಚರಿಸುವುದು ಲೋಕರೂಢಿ. ಈ ಅಭ್ಯಾಸಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಗ್ರೀಕರು. ಗ್ರೀಕ್ ದೇವತೆಯಾದ ರೆಯಾಳನ್ನು ಸಮಸ್ತ ಜಗತ್ತಿನ ಮಾತೆಯೆಂದು ನಂಬಲಾಗಿತ್ತು. ನಂತರ ಇಂಗ್ಲೆಂಡ್‌ನಲ್ಲಿ ಕ್ರಿ.ಶ ೧೬೦೦ ರಿಂದ ಪ್ರತೀ ವರ್ಷದ ಒಂದು ಭಾನುವಾರವನ್ನು ಅಮ್ಮಂದಿರ ದಿನವನ್ನಾಗಿ ಆಚರಿಸುವ ಪದ್ಧತಿಗೆ ನಾಂದಿ ಹಾಡಲಾಯಿತು. ದೂರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು ಆ ದಿನದಂದು ತಾಯಿಯನ್ನು ನೋಡಲು ವಿಶೇಷ ಉಡುಗೊರೆ, ಸಿಹಿತಿಂಡಿಗಳೊಡನೆ ಬರುತ್ತಿದ್ದರೆಂಬುದು ಚರಿತ್ರೆ.

ಆದರೂ ಪಶ್ಚಿಮ ವರ್ಜೀನಿಯಾದ ಗ್ರಾಫ್ಟನ್ ಊರಿನವಳಾದ ಆಯ್ಯನಾ ಜರ್ವೀಸ್ ಎಂಬಾಕೆ ಅಮ್ಮಂದಿರ ದಿನಕ್ಕೆ ಹೊಸ ಭಾಷ್ಯ ಬರೆಯುವವರೆಗೂ ಅದು ನಿಯಮಿತವಾಗಿ ಆಚರಿಸಲ್ಪಟ್ಟಿರಲೇ ಇಲ್ಲ. ಆಕೆ  ೧೯೦೮ರಲ್ಲಿ ಅಮ್ಮನ ಸವಿ ನೆನಪಿಗಾಗಿ ಚರ್ಚ್ ಒಂದನ್ನು ನಿರ್ಮಿಸಿದಳು. ಆನಂತರ ಫಿಲಡೆಲ್ಫಿಯಾಗೆ ತೆರಳಿದ ಜರ್ವೀಸ್ ಅಲ್ಲಿನ ಪ್ರಮುಖರಿಗೆ ಅಮ್ಮಂದಿರ ದಿನವನ್ನು ಆಚರಿಸಿ ಅದನ್ನು ರಾಷ್ಟ್ರೀಯ ದಿನವೆಂದು ಘೋಷಿಸಲು ವಿನಂತಿಸಿಕೊಂಡಳು. ಈ ವಿನಂತಿಯ ಕರೆಗೆ ಓಗೊಟ್ಟ ಅಧ್ಯಕ್ಷ ವುಡ್ರೋ ವಿಲ್ಷನ್ ಪ್ರತೀ ವರ್ಷದ ಮೇ ಎರಡನೇ ಭಾನುವಾರವನ್ನು ಅಮ್ಮಂದಿರ ದಿನವೆಂದು ಘೋಷಿಸಿದರು.

ನಿಧಾನವಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಅಮ್ಮಂದಿರ ದಿನ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದವು. ಹೀಗೆ ಚಾಲ್ತಿಗೆ ಬಂದ ಅಮ್ಮಂದಿರ ದಿನಾಚರಣೆ ಅನೇಕ ರಾಷ್ಟ್ರಗಳಲ್ಲಿ ಅದ್ದೂರಿಯಾಗಿಯೇ ಆಚರಿಸಲ್ಪಡುತ್ತದೆ. ಆದರೆ ಅಮ್ಮಂದಿರ ದಿನದ ಆಚರಣೆಯಲ್ಲೂ ಭಾರತ ಬಡರಾಷ್ಟ್ರವೆಂದೇ ಗುರುತಿಸಿಕೊಳ್ಳುತ್ತಿರುವುದು ವಿಷಾದನೀಯ. 

ತಂದೆ, ತಾಯಂದಿರ ಕೂದಲು ಬೆಳ್ಳಗಾಗುತ್ತಿದ್ದಂತೆ ಬೆಳೆದು ನಿಂತ ಮಗ ಅವರನ್ನು ಕಡೆಗಣಿಸಲು ಶುರುವಿಟ್ಟುಕೊಳ್ಳುತ್ತಾನೆ. ಹೆಂಡತಿಯೊಡನೆ ಸೇರಿಕೊಂಡು ಜನ್ಮವಿತ್ತ ತಂದೆ-ತಾಯಿಯರ ಮೇಲೇ ಹಗೆ ಸಾಧಿಸಲು ಪ್ರಾರಂಭಿಸುತ್ತಾನೆ. ಕಡಿಮೆ ಬೆಲೆಯ ವೃದ್ಧಾಶ್ರಮಗಳಿಗಾಗಿ ಅರಸಿ ಅವರನ್ನು ಸಾಗು ಹಾಕಲು ಪ್ರಯತ್ನಿಸುತ್ತಾರೆ. ಇಂತಹ ದೇಶದಲ್ಲಿ ತಾಯಂದಿರ ದಿನವನ್ನು ನೆನಪಿಟ್ಟುಕೊಂಡು ಆಡಂಬರದಿಂದ ಆಚರಿಸುವುದು ಹೇಗೆ ಹೇಳಿ? ಪರಿಸ್ಥಿತಿ ಬದಲಾಗಬೇಕು. ತಾಯಿಯೆಂಬ ಕಣ್ಣೆದುರಿನ ದೇವತೆಯನ್ನು ಕೊನೆಯವರೆಗೂ ಪ್ರೀತ್ಯಾದರಗಳಿಂದ ನೋಡಿಕೊಳ್ಳುವುದು ಪ್ರತೀ ಮಕ್ಕಳ ಕರ್ತವ್ಯವಾಗಬೇಕು. ಹೆಂಡತಿ ಬರುವವರೆಗಿನ ಅಕ್ಕರೆಯ ಅಮ್ಮ ಖಾಯಂ ಪ್ರೀತಿಯ ಅಮ್ಮನಾಗೇ ಇರಬೇಕು. ನಮ್ಮನ್ನು ಮಮಕಾರದಿಂದ ಪೋಷಿಸಿದ ಅಮ್ಮನಿಗೆ ವಯಸ್ಸಾದಾಗ ಕೈಲಾಗದವಳೆಂದು ಗಣಿಸದೇ ಕೊನೆಗಾಲದವರೆಗೂ ಪ್ರೀತಿಯನ್ನು ಪರತ್ ಮಾಡುತ್ತಿರಬೇಕು. ಅಕ್ಕರೆಯ ಅವ್ವ ಇಂದಿನ ಬಿಜಿ ಬದುಕಿನ ನಡುವೆ ಕಳೆದು ಹೋಗದಿರಲೆಂಬ ಆಶಯ ನಮ್ಮದಾಗಲಿ. ತಾಯಂದಿರ ದಿನಕ್ಕೆ ಮಹತ್ವ ದೊರಕುವುದು. ಆಗಲೇ… ಏನಂತೀರಾ?        

ಅಟ್ಟದ ಮೇಲೆ ನೇರ
ಬಿದ್ದ ಬಿಸಿಲ ಕೋಲು
ಅಲ್ಲಿನ ಸಂದಿಗೊಂದುಗಳ ನಡುವೆ
ನರಳಿ, ಕೊನೆಗೊಮ್ಮೆ ಹೊರಳಿ
ಅಂಗಳದಲ್ಲಿ ಅರಳುತ್ತಿತ್ತು,
ಸ್ಮಿತೆ ನೆರಳಲ್ಲಿದ್ದಳು!

ಮಾಡಿಗೆ ಅಲ್ಲಲ್ಲಿ ಸಿಕ್ಕಿಸಿದ
ಬೆಳ್ಳಿ ಹಾಳೆಗಳನ್ನು ತೇವವಾಗಿಸಿ
ಅದರ ಇರುವನ್ನೂ
ಸೋಲಿನ ಇತಿಹಾಸವಾಗಿ
ಜೋರುಮಳೆ,
ಸ್ಮಿತೆಯನ್ನು ತೋಯಿಸಲಿಲ್ಲ!

ಕೌದಿಯ ಮೇಲೆರಡು ಕಂಬಳಿ
ಹೊರಗೆ ಚಾಚಿದ ಕುಳಿರ್ಗಾಳಿ
ಅದೆಲ್ಲಿಂದಲೋ ನುಸುಳಿ
ಹಲ್ಲುಗಳ ನಡುವೆ ಕಾದಾಟ
ಮೈಗೆ ಮತ್ತಷ್ಟು ಹೊದಿಕೆಯ ಹಸಿವೆ,
ಸ್ಮಿತೆ ಗಪ್ಪಾಗಿ ನಿದ್ರಿಸಿದ್ದಳು!

ಕೊಲ್ಲಿಯ ಅಲೆಗಳೇ ತಂದು ಕೊಡವಿದ
ಚಿಪ್ಪು ಶಂಖಗಳು !!
ಸ್ಮಿತೆ ಸಮುದ್ರವಾದಳು,
ತೆರೆಯಾದಳು;
ವಿಪರ್ಯಾಸ,
ತೀರಕ್ಕೆ ತಟ್ಟಲೇ ಇಲ್ಲ!!!

 

ನೂರು ಸಾಲುಗಳು ಹೇಳದ್ದನ್ನು ಒಂದು ಚಿತ್ರ ಹೇಳುತ್ತಂತೆ. ಮಾತು ಸವಕಲಾದರೂ ಸತ್ಯ.

ಬ್ಲಾಗ್ ಹೆಡ್ಡರ್ ಗೆ ಬಳಸಿದ ಚಿತ್ರ ಹೇಳುವುದು ಏನೇ ಇರಲಿ ನಾನು ಹೇಳಬೇಕಾದ್ದು ಒಂದಷ್ಟಿದೆ. ನನ್ನ ಮಧುರಾತಿ ಮಧುರ ನೆನಪುಗಳು ಅವಿತು ಕುಳಿತಿವೆ, ಈ ಚಿತ್ರದ ನಡುವಲ್ಲಿ. ಉತ್ತರ ಭಾರತ ಪ್ರವಾಸ ಹೊರಟಿದ್ದ ನಾವು ಕೆಲವು ಪ್ರದೇಶಗಳನ್ನು ನೋಡಿದ್ದೆವು. ಹಲವನ್ನು ನೋಡುವುದರಲ್ಲಿದ್ದೆವು! ಈ ಮಧ್ಯೆ ಭಾರತದ ಅತಿದೊಡ್ಡ ಉಪ್ಪು ನೀರಿನ ಸರೋವರ ಚಿಲ್ಕಾ ದಲ್ಲಿ ಒಂದು ಸುಂದರ ಮುಸ್ಸಂಜೆ ಕಳೆದದ್ದು. ಆಗಲೇ ಮೇಲಿನ ಚಿತ್ರ ಸಿಕ್ಕಿದ್ದು.

ತಲಾ ತೊಂಭತ್ತು ರುಪಾಯಿಗಳಷ್ಟು ತೆತ್ತು, ಒಂಭತ್ತು ಜನರ ನಮ್ಮ ಗುಂಪು ದೋಣಿ ವಿಹಾರ ಸವಿ ಉಣ್ಣುತ್ತಿದ್ದೆವು. ಮೀನುಗಾರನೊಬ್ಬ ತನ್ನ ದೋಣಿಯನ್ನು ತೀರ ತಲುಪಿಸಿ, ದಿನದ ಫಸಲನ್ನು ಗುಡ್ಡೆಹಾಕಿ ಅದರ ಹಂಚಿಕೆಯೊಡನೆ ತನ್ನ ಭವಿಷ್ಯದ ಕವಲುಗಳನ್ನು ಎಣಿಸುತ್ತಿರುವಂತೆ ಕಂಡ. ಅಲ್ಲಿನ ಮತ್ಸ್ಯಗಾರರ ದುರ್ದರ ಬದುಕಿನ ಕುರಿತು ನಮ್ಮ ದೋಣಿ ನಡೆಸುವವ ವಿವರಿಸಲು ಪ್ರಾರಂಭಿಸಿದ. ದೂರದಲ್ಲಿ ಭಾಸ್ಕರನೂ ದಿನದ ಡ್ಯೂಟಿ ಮುಗಿಸಿ ಸಾಗರದ ಸನ್ನಿಧಿ ಸೇರುತ್ತಿದ್ದ. ಆತ ಕೊನೆಯದಾಗಿ ಬೀರಿದ ಬೆಳಕು ಮೀನುಗಾರನಿಗೆ ಮುಟ್ಟುತ್ತಿರಲಿಲ್ಲ!

ಮುಂದೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಿಮಗೆ…!!!

ಅದ್ಯಾಕೋ ಅಂದು ತಟ್ಟನೇ ಬಿ.ಎಂ.ಶ್ರೀ ಯವರ ಕರುಣಾಳು ಬಾ ಬೆಳಕೇ ನೆನಪಾಗಿ ಬಿಟ್ಟಿತು. ಅದು ಇಂದು ಮತ್ತೆ ನೆನಪಾಯಿತು!

 

ಪ್ರೀತಿಯ ತಂಗಿಗೆ,
           ನೆನಪಿದೆಯಾ ನಿನಗೆ? ಬೆಳ್ಳಂಬೆಳಗ್ಗೆ ಎದ್ದು, ಓದುವ ನೆಪವನ್ನಿಡಿದು, ಬಚ್ಚಲಿನ ಒಲೆಗೆ ರಾತ್ರಿಯೇ ಅಮ್ಮ ಹಾಕಿದ ಬೆಂಕಿಯೆದುರು ನಾವಿಬ್ಬರೂ ಒಕ್ಕೂರಲಾಗಿ ಕುಳಿತು ತೂಕಡಿಸಿದ ನೆನಪು, ಅಮ್ಮ ಕೊಡುವ ಹಬೆಯಾಡುವ ಕಾಫಿ ಬರುವವರೆಗೆ ಒತ್ತರಿಸಿ ಬಂದ ನಿದ್ದೆಗೆ ಬಲವಂತದ ತಡೆಯೊಡ್ಡಿ ಕಾಫಿ ಸೇವೆಯ ನಂತರ ಪೂರ್ಣ ನಿದ್ದೆಗೆ ಶರಣಾದ ನೆನಪು, ನಿದ್ರಿಸುತ್ತಿದ್ದುದ್ದನ್ನು ನೋಡಿ ಅಮ್ಮ ಕೊಟ್ಟ ಧರ್ಮದೇಟಿಗೆ ತಿಂಡಿ ಬಿಟ್ಟು ಮುಷ್ಕರ ಹೂಡಿದ್ದ ನೆನಪು, ಅಜ್ಜಿ ರಮಿಸಿ ಹೇಳಿದಾಗಲೂ ಜಗ್ಗದೇ, ಮತ್ತದೇ  ಅಮ್ಮನ ಪೀತಿ ಸೂಸುವ ಒಂದೇ ಮಾತಿಗೆ ಮರುಳಾಗಿ ಒಟ್ಟೊಟ್ಟಿಗೆ ಎಂಟೆಂಟು ದೋಸೆಗಳನ್ನು ಸದಾ ಡಬ್ಬದಲ್ಲಿರುತ್ತಿದ್ದ ಚಟ್ನಿ ಪುಡಿಯೊಂದಿಗೆ ಚಪ್ಪರಿಸಿ ತಿಂದ ನೆನಪು, ನಮಗಿಂತ ಬೇಗ ಎದ್ದು ಕೊಟ್ಟಿಗೆ ಕೆಲಸದಲ್ಲಿ ತೊಡಗಿಕೊಂಡಿರುತ್ತಿದ್ದ ಅಪ್ಪನಿಗೆ ಅಲ್ಲೇ ಹೋಗಿ ರಗಳೆ ಕೊಡುತ್ತಿದ್ದ ನೆನಪು, ಅಪ್ಪ ಹಾಲು ಕರೆಯುವಾಗ ಉಮೇದಿನಿಂದ ನಾವೂ ಹಾಲು ಕರೆಯಲು ಹೋಗಿ ಗೌರಿಯು ಬಳಿ ಒದೆ ತಿಂದ ನೆನಪು,(ಇದೇ ಗೌರಿ ಮಳೆಗಾಲದಲ್ಲೊಂದು ದಿನ ರಸ್ತೆ ಬದಿಯ ಗಟಾರಕ್ಕೆ ಬಿದ್ದು ಸತ್ತಾಗ ನೀನು ವಾರಗಟ್ಟಲೇ ಮರುಗಿದ್ದು ನನಗಿನ್ನೂ ನೆನಪಿದೆ.) ಓರಗೆಯ ಗೆಳೆಯರೊಡನೆ ಬಣ್ಣದ ಕೊಡೆಯನ್ಹಿಡಿದು ಸುರಿಯುವ ಜಿಟಿ ಜಿಟಿ ಮಳೆಯಲ್ಲಿ ಖುಷಿ ಖುಷಿಯಿಂದ ಶಾಲೆಗೆ ನಡೆಯುತ್ತಿದ್ದ ನೆನಪು, ದಾರಿಯಲ್ಲಿ ಬೆಟ್ಟದಿಂದ ಹರಿದು ಬರುವ ಪುಟ್ಟ ಪುಟ್ಟ ಝರಿಗಳನ್ನು ಕಾಣುತ್ತಾ ಸಂತೋಷ ಪಟ್ಟ ನೆನಪು, ರಸ್ತೆಯ ಇಕ್ಕೆಲಗಳಲ್ಲಿ ಕೆಂಪಾದ ಕೋಡಿ ನೀರು ಭಯಂಕರ ವೇಗದಿಂದ ಕಸ ಕಡ್ಡಿಗಳನ್ನು ಸೇರಿಸಿಕೊಂಡು ಹರಿಯುವುದನ್ನು ಭಯಭೀತರಾಗಿ ನೋಡುತ್ತಾ ನಿಂತ ನೆನಪು, ಬೀಸುವ ಗಾಳಿಗೆ ಆಗಾಗ ಕೊಡೆ ಉಲ್ಟಾ ಆದಾಗ ಉಕ್ಕಿ ಬಂದ ನಗುವನ್ನು ಇಂಚೂ ಕೂಡಾ ಹಿಡಿದಿಡದೇ ಪೂರ್ತಿಯಾಗಿ ಚೆಲ್ಲಿದ ನೆನಪು, ಶಾಲೆಯಲ್ಲಿ ಉದ್ದ ಬೆಳೆದ ಉಗುರಿನೊಂದಿಗೆ ಪ್ರಾರ್ಥನೆಗೆ ನಿಂತಾಗ ಉಗುರು ನೋಡುವ ಪದ್ಧತಿಗೆ ಹೆದರಿ ಹಲ್ಲಿನಿಂದ ಕಚ್ಚಿ ಕಚ್ಚಿ ಅದನ್ನು ತೆಗೆದ ನೆನಪು, ಪ್ರತಿ ಬುಧವಾರ ಬಣ್ಣದ ಬಟ್ಟೆ ಹಾಕಿಕೊಳ್ಳಲು ಸಂಭ್ರಮ ಪಡುತ್ತಿದ್ದ ನೆನಪು, ನಿತ್ಯ ಪಂಚಾಂಗ ಹೇಳುವಲ್ಲಿ ಎಡವಿ ಬಸ್ಕಿ ಹೊಡೆದ ನೆನಪು, ಶಾಲೆಯಲ್ಲಿ ಬೇರೆ ಬೇರೆ ಕೋಣೆಯಲ್ಲಿ ಕುಳಿತುಕೊಳ್ಳಬೇಕಾದ್ದರಿಂದ ಒಟ್ಟಿಗಿರಲಾಗದೆಂದು ಚಡಪಡಿಸಿದ ನೆನಪು, ಆಗಾಗ ಉಚ್ಚೆ ಹೊಯ್ಯುವ, ನೀರು ಕುಡಿಯುವ ಪಿಳ್ಳೆ ನೆಪವೊಡ್ಡಿ ಕ್ಲಾಸಿನಿಂದ ಹೊರಬಂದು ಇಬ್ಬರೂ ಸೇರದೆ ಬಹು ಕಾಲವಾಯಿತೇನೋ ಎಂಬಂತೆ ಕುಳಿತು ಮಾತನಾಡುತ್ತಿದ್ದಾಗ ಪಿ.ಟಿ.ಮಾಸ್ತರರು ಕಂಡು ಬೈದರೂ ಎಂಥಾ ಅಣ್ಣ ತಂಗಿಯಪ್ಪಾ ಎಂದಾಗ ಗರ್ವ ಪಟ್ಟ ನೆನಪು, ಸಂಜೆ ಆಟಕ್ಕೆ ಬಿಡುವುದನ್ನೇ ಕಾಯ್ದು ಕೊಂಡು ಹುಮ್ಮಸ್ಸಿನಿಂದ ಮುಂದಿನ ಮೈದಾನಕ್ಕೆ ಓಡಿದ ನೆನಪು, ದೊಡ್ಡ ಆಳ್ತನದ ನಮ್ಮನೆ ಕೆಲಸದ ಈಶನ ಮಗ ವೆಂಕ್ಟ ನನ್ನೆದುರು ಕಬಡ್ಡಿಗೆ ನಿಂತಾಗ ಥರಗುಟ್ಟಿದ ನೆನಪು, ಬದಿಯಲ್ಲಿ ನಿಂತು ನೀನು ಚಪ್ಪಾಳೆ ತಟ್ಟುತ್ತಾ ಕುಪ್ಪಳಿಸುತ್ತಿದ್ದ ನೆನಪು, ಲಕ್ಷಕ್ಕೆಷ್ಟು ಸೊನ್ನೆ ಎಂಬುದನ್ನೂ ಹೇಳಲಾಗದೇ ಮಾಲಿನಿ ಅಕ್ಕೋರರ ಗಾಳಿ ಕೋಲಿನಿಂದ ಪೆಟ್ಟು ತಿಂದು ನಾಲ್ಕಾರು ಬರೆ ಬಿದ್ದ ನನ್ನ ಕಾಲುಗಳನ್ನು ಕಂಡು ನಿನ್ನ ಕಣ್ಣಲ್ಲೂ ನೀರು ಚಿಮ್ಮಿದ ನೆನಪು, ಶಾಲೆ ಬಿಟ್ಟೊಡನೆಯೇ ಕೌಳಿ ಹಣ್ಣು ತಿನ್ನುವ ಆಸೆಯನ್ನು ಹೊತ್ತು ಕೌಳಿ ಗುಡ್ಡಕ್ಕೆ ಓಡಿದ ನೆನಪು, ಮೈಯೆಲ್ಲಾ ತರಚಿಕೊಂಡು ಮನೆಗೆ ಮರಳಿ ಬೈಸಿಕೊಂಡ ನೆನಪು, ಸಂಜೆ ಅಮ್ಮ ಮಾಡಿ ಕೊಡುತಿದ್ದ ಅವಲಕ್ಕಿ-ಮಜ್ಜಿಗೆಗೆ ಹಾತೊರೆಯುತ್ತಿದ್ದ ನೆನಪು, ಅದರೊಡನೆ ಅಪ್ಪ ಪೇಟೆಯಿಂದ ತಂದ ಚಿಪ್ಸ್ ಬೆರೆಸಿ ತಿಂದ ನೆನಪು, ಚೌತಿ ಹಬ್ಬದ ಸಮಯದಲ್ಲಿ ಮಾಡಿಟ್ಟಿರುತ್ತಿದ್ದ ಪಂಚಕಜ್ಜಾಯಕ್ಕೆ ಕಿತ್ತಾಡುತ್ತಿದ್ದ ನೆನಪು, ಸಂಜೆ ಮೇಲಿನ ಕೇರಿಯ ಸುಬ್ಬುವಿನ ಮನೆಗೆ ವಾರಿಗೆಯ ಮಕ್ಕಳೊಟ್ಟಿಗೆ ಹೋಗಿ ಕಂಬದಾಟ ಆಡುತ್ತಿದ್ದ ನೆನಪು, ಅಲ್ಲೇ ಆಟವಾಡುತ್ತಾ ಸಂಜೆಯಾಗಿ ಮನೆಗೆ ವಾಪಸ್ ಹಿಂದಿರುಗಲು ಭಯ ಪಡುತ್ತಿದ್ದ ನೆನಪು, ಅಪ್ಪ ರಾತ್ರಿ ಕೆಲಸ ಮುಗಿಸಿ ಬರುವಾಗ ನಮ್ಮನ್ನು ಬೈದುಕೊಂಡು ಕರೆತರುತ್ತಿದ್ದ ನೆನಪು, ಅಜ್ಜಿ ರಾತ್ರಿ ಒಪ್ಪತ್ತಿನ ಹೆಸರಲ್ಲಿ ತಿಂಡಿ ತಿನ್ನುತ್ತಿದ್ದನ್ನು ಕಂಡು ನಾವೂ ಊಟದ ಬದಲು ತಿಂಡಿಗೇ ಆಸೆ ಪಡುತ್ತಿದ್ದ ನೆನಪು, ರಾತ್ರಿ ಕೈಕಾಲು ತೊಳೆಯಲು ತೋಟದ ದಿಡ್ಡಿಯಲ್ಲಿದ್ದ ಬಚ್ಚಲಿಗೆ ಭೂತದ ಭಯದಿಂದ ಹೋಗಲು ಹಿಂಜರಿಯುತ್ತಿದ್ದ ನೆನಪು, ಆದರೂ ರಾತ್ರಿ ಅಜ್ಜನ ಬಳಿ ದೆವ್ವ-ಭೂತದ ಕಥೆ ಹೇಳಲು ಪಟ್ಟು ಹಿಡಿಯುತ್ತಿದ್ದ ನೆನಪು, ಅಪ್ಪ ಹೊಸದಾಗಿ ಟಿ.ವಿ ತಂದಾಗ ಅಜ್ಜ ಕಥೆ ಹೇಳುತ್ತಿದ್ದ ರೂಢಿ ತಪ್ಪಿ ಹೋಗಿದ್ದಕ್ಕೆ ಮರುಗಿದ ನೆನಪು, ಮನೆಯ ಮೇಲಿನ ಸೂರಿನ ಕೆಳಗೆ ಮಲಗಿದರೆ ರಾತ್ರಿ ಕೆಟ್ಟ ಕನಸು ಬೀಳುತ್ತದೆ ಎಂಬ ಅಜ್ಜನ ಮಾತನ್ನು ಪ್ರಮಾಣೀಕರಿಸಿಕೊಳ್ಳಲು ಹೋಗಿ ಅಪ್ಪನ ಬಳಿ ಲತ್ತೆ ತಿಂದ ನೆನಪು, ಎರಡೆರಡು ಕಂಬಳಿಯ ಕೆಳಗೆ ಚಾದರವೊಂದನ್ನು ಸೇರಿಸಿ ಹೊದ್ದು ಬೆಚ್ಚಗೆ ಮಲಗಿ ಮಗ್ಗುಲು ಬದಲಿಸುತ್ತಿದ್ದ ನೆನಪು… …
 ಅದೆಷ್ಟು ಸುಮಧುರವಲ್ಲವಾ ಬಾಲ್ಯದ ನೆನಪುಗಳು? ಬಹುಷಃ ನೀನು ಕೂಡ ಇವೆಲ್ಲವನ್ನೂ ನೆನೆಸಿಕೊಳ್ಳುತ್ತಿರುವೆ ಎಂದು ಕೊಳ್ಳುವೆ ಅಥವಾ ಬೆಂಗಳೂರಿನ ಗಡಿಬಿಡಿಯ ಬದುಕಿನಲ್ಲಿ, ಅಟ್ಟ ಸೇರಿದ ಜಾಡಿಯೊಳಗೆ ಈ ಸವಿ ನೆನಪುಗಳನ್ನೆಲ್ಲಾ ಬಾಯಿಕಟ್ಟಿ ಇಟ್ಟಿರುವೆಯೋ? ಎಳೆದಷ್ಟು ಬಿಚ್ಚಿಕೊಳ್ಳುವ ರೇಷ್ಮೆ ನೂಲುಗಳಲ್ವಾ ಅವು?  ಇಂದಿನ ಕಾನ್ವೆಂಟ್-ಕಾಂಕ್ರೀಟ್ ಸಂಸ್ಕ್ರತಿಯ ಮಕ್ಕಳನ್ನು ನೋಡಿದರೆ ದುರದೃಷ್ಟಶಾಲಿಗಳೆನಿಸುತ್ತದೆ. ನಿನ್ನ ಮಗಳೂ ಇದಕ್ಕೆ ಹೊರತಾಗಿರಲಾರಳು. ವರ್ಷಕ್ಕೊಮ್ಮೆಯಾದರೂ ನೀನವಳನ್ನು ತವರು ಮನೆಗೆ ಕರೆದುಕೊಂಡು ಬರುವುದಿಲ್ಲವಲ್ಲಾ ಅದಕ್ಕೆ ಹೇಳಿದೆ. ಇರಲಿ ಬರುವ ಮೇನಲ್ಲಾದರೂ ಮನಸ್ಸು ಮಾಡು. ನಿನ್ನ ಪತಿರಾಯರು ಹೇಗೂ ಕೆಲಸದಿಂದ ತಪ್ಪಿಸಿಕೊಳ್ಳುವಂತಿಲ್ಲ. ಮಗಳನ್ನಾದರೂ ಕಳಿಸು. ದಾರಿ ಕಾಯುತ್ತಿರುವೆ.                        
                                  ಪ್ರೀತಿಯಿಂದ ಅಣ್ಣ

(ನನ್ನವೊಂದಿಷ್ಟು ನೆನಪುಗಳಿದ್ದವು. ಅವನ್ನೆಲ್ಲಾ ಕೂಡಿಸಬೇಕೆನಿಸಿತು. ಅದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹೀಗೆ ಒಂದೇ ಪಟ್ಟಿಗೆ ಅವನ್ನು ಜೋಡಿಸುವ ಯತ್ನ ಮಾಡಿದೆ. ಹುಟ್ಟಿದ್ದು ಮೇಲಿನ ಬರಹ. ಹ್ಞಾಂ ! ನಿಮಗೆ ಸಮಯವಿದ್ದಲ್ಲಿ ನೆನಪು ಪದ ಪ್ರಯೋಗ ಎಷ್ಟು ಬಾರಿ ಆಗಿದೆ ಎಂದು ಎಣಿಸಿಕೊಳ್ಳಬಹುದು!)
                                             

ಧೋ ಎಂದು ಪೃಥ್ವಿಯನ್ನೇ ಕಬಳಿಸುವೋಪಾದಿಯಲ್ಲಿ ವರುಣನ ಆರ್ಭಟ. ದಟ್ಟ ಕಾಡು. ಹೆಚ್ಚಾಗಿ ಅದು ನಮ್ಮೂರು. ನಂಗೆ ಆ ಪ್ರದೇಶದ ಇಂಚಿಂಚೂ ಗೊತ್ತೆಂಬ ಹೆಗ್ಗಳಿಕೆಯಿದೆ. ಅಲ್ಲಿ ಏರ್ಪಾಟಾಗಿದ್ದು ರಸಪ್ರಶ್ನೆ ಸ್ಪರ್ಧೆ! ಪ್ರಪಂಚದ ಮೂಲೆ ಮೂಲೆಯಿಂದ ವಿವಿಧ ಹಂತಗಳಲ್ಲಿ ವಿಜಯಿಗಳಾಗಿ ಇಲ್ಲಿ ಆಗಮಿಸಿದ್ದಾರೆ ಸ್ಪರ್ಧಿಗಳು. ಆದರೆ ಅಚ್ಚರಿಯೆಂದರೆ ಹಾಗೆ ಬಂದವರೆಲ್ಲರ ಕೈನಲ್ಲೂ ಮಾರುದ್ದದ್ದ ಹಗ್ಗ! ಬುಡ ಸ್ಪರ್ಧಿಗಳ ಕೈನಲ್ಲಾದರೆ, ತುದಿ ಎಮ್ಮೆ, ಕೋಣಗಳ ಕತ್ತಿನಲ್ಲಿ. ಅವುಗಳೆಲ್ಲವುಗಳ ಕೋಡು ಮಾತ್ರ ಒಂದೇ ಥರ! ದೊಡ್ಡದು..ಅವು ಯಾಕೋ ಗೊತ್ತಿಲ್ಲ.ಸ್ಪರ್ಧೆ ಶುರುವಾಗೇ ಬಿಟ್ಟಿತು. ಪ್ರಶ್ನೆ ಕೇಳುತ್ತಿದ್ದವ ಉದ್ದನೆಯ ಕಿರೀಟ, ನೀಲಿ ನಿಲುವಂಗಿ ಧರಿಸಿದ್ದ. ಅವ ನಮ್ಮೂರಿನವನಂತೂ ಅಲ್ಲ. ಅಂತಹ ಮಳೆ ಹೊಯ್ಯುತ್ತಿದ್ದರೂ ಯಾರ ಮೈಯೂ ನೆನೆಯದಂತೆ ವ್ಯವಸ್ಥೆ ಮಾಡಿದ್ದು ಅವನೇ. ಹಾಗಂತ ಮೇಗಡೆ ಯಾವ ಸೂರಿನ ಸೃಷ್ಟಿಯೂ ಆಗಿಲ್ಲ. ಆದರೂ ಯಾರಿಗೂ ಈ ವ್ಯವಸ್ಥೆ ವಿಶೇಷವಿನಿಸುತ್ತಿಲ್ಲ. ಉಪಸ್ಥಿತರಿದ್ದ ನೂರೆಂಟು ಸ್ಪರ್ಧಿಗಳು, ಜೊತೆಗೆ ಅವರು ತಂದಿದ್ದ ಕೋಣ, ಎಮ್ಮೆಗಳು ಅಲ್ಲದೇ ನಮ್ಮೂರಿನ ಬಹುತೇಕ ಎಲ್ಲಾ ಹಿರಿ ಕಿರಿ ತಲೆಗಳೂ ಕಾತರರಾಗಿ ಸುತ್ತ ನೆರೆದಿದ್ದಾರೆ. ಮೂರು-ನಾಲ್ಕು ಹಂತವನ್ನು ದಾಟಿ ಸ್ಪರ್ಧೆ ಮುಂದುವರೆಯುತ್ತಿತ್ತು. ಸುಮ್ಮನೇ ನಿಂತಿದ್ದ ಕೋಣವೊಂದು ಚಡಪಡಿಸಿತು. ಇದ್ದಕ್ಕಿದ್ದಂತೆ ಎಲ್ಲಾ ಎಮ್ಮೆ, ಕೋಣಗಳಿಗೂ ಇದು ಸಾಂಕ್ರಾಮಿಕವಾಯಿತು. ಇದ್ದಕ್ಕಿಂದಂತೆ ಎಲ್ಲವೂ ಮಾಲೀಕರ ಕೈನಿಂದ ತಪ್ಪಿಸಿಕೊಂಡು ಯದ್ವಾ ತದ್ವಾ ಓಡತೊಡಗಿದವು. ಹದಿನೆಂಟೋ ಇಪ್ಪತ್ತೋ ಜನರ ಮೈಮೇಲೆ ಎರಗಿದ ಅವುಗಳು ಕೆಂಬಣ್ಣ ಚೆಲ್ಲಿದವು. ಸುತ್ತ ನಿಂತವರಿಗೆಲ್ಲಾ ಒಂದು ಕ್ಷಣದ ಗಾಬರಿಗೆ ಮಾತ್ರ ಅವಕಾಶವಿದ್ದುದು. ಪರಿಸ್ಥಿತಿಯ ಅರಿವು ಮುಟ್ಟಿದ ಅವರುಗಳೆಲ್ಲಾ ಅಂಡಿಗೆ ಕಾಲು ಹಚ್ಚಿ ಕೋಣ, ಎಮ್ಮೆಗಳಿಗೆ ಸೆಡ್ಡು ಹೊಡೆಯುವರಂತೆ ಓಡ ಹತ್ತಿದರು. ಸಿಕ್ಕ ಸಿಕ್ಕಲ್ಲಿ ಅವಿತು ಕೂತರು. ಅಂತಹ ಸಂದರ್ಭದಲ್ಲೂ ನಾನು ಗಮನಿಸಿದ್ದೇನೆಂದರೆ ಎತ್ತು, ಕೋಣಗಳಿಗೆ ನಿರ್ದೇಶಿಸುತ್ತಿದವ ಕಿರೀಟ, ನೀಲಿ ನಿಲುವಂಗಿ ತೊಟ್ಟವ. ಆದರೆ ಆ ಕುರಿತು ನಿಂತು ಯೋಚಿಸಲು ಸಮಯವನ್ನು ವೆಚ್ಚ ಮಾಡುವುದು ಮೂರ್ಖತನವೆಂದೆನಿಸಿ ಓಟ ಕಿತ್ತಿದ್ದೆ.

ಒಬ್ಬೊಬ್ಬರದೇ ಸ್ವರ ಭೂಮಿಯ ಸಮತಟ್ಟಿನಿಂದ ಉಪಕ್ರಮಿಸಿ, ಮರಗಿಡಗಳನ್ನು ದಾಟಿ, ಮೋಡಗಳನ್ನು ಹಾದು ಅನತಿ ದೂರದಲ್ಲಿ ಪರಿಸಮಾಪ್ತಿಯಾಗುತ್ತಿತ್ತು! ನಾನು ನಿಶ್ಚಯಿಸಿಕೊಂಡಂತೆ, ನನಗೆ ಮೊದಲೇ ತಿಳಿದ್ದಿದ್ದ, ಕೋಣ, ಎಮ್ಮೆಗಳ್ಯಾವುದೂ ಬರಲಾಗದ ಎತ್ತರದ ಧರೆಯ ಇಕ್ಕಟ್ಟಿನ ಸ್ಥಳದಲ್ಲಿ ನಾಜೂಕಾಗಿ ನಿಂತಿದ್ದೆ. ಅಲ್ಲಿಗೆ ಮತ್ತೊಬ್ಬ ಮನುಷ್ಯನ ಆಗಮನವೂ ಅಪಾಯಕಾರಿಯಾಗಿತ್ತು. ನಿಂತಿದ್ದ ನೆಲವೇ ಕುಸಿಯುವ ಭಯವಿತ್ತು. ಸಮಯ ಸರಿದಂತೆ ಆಕಾಶದೆತ್ತರದ ಕೂಗುಗಳು ಕಡಿಮೆಯಾದವು. ಅಲ್ಲಲ್ಲಿ ಕೊನೆಯ ನರಳಿಕೆಗಳು ಮಾತ್ರ ಕಿವಿ ಮುಟ್ಟುತ್ತಿದ್ದವು. ನಿಧಾನವಾಗಿ ಅವು ಕೂಡ ನಿಂತು ಹೋದವು.

ನಾನು ಭದ್ರವೆಂಬ ಭಾವ ನನಗಿತ್ತು. ಅಷ್ಟರಲ್ಲಿ ಕಾಣಿಸಿಕೊಂಡವನು ಅದೇ ಕಿರೀಟ, ನೀಲಿ ನಿಲುವಂಗಿ ತೊಟ್ಟವನು. ಅರೆ! ಅವನಿಗೆ ಕಿರೀಟವಿದ್ದಲ್ಲೀಗ ಕೋಡು ಕಾಣಿಸುತ್ತಿದೆ!! ಖಂಡಿತವಾಗಿ ಆತ ಬರುತ್ತಿರುವುದು ನನ್ನನ್ನೇ ಇರಿಯಲು ಎಂದು ಥರಗುಟ್ಟಿದೆ. ನಿಂತ ಜಾಗದಿಂದ ಒಂದೇ ಉಸುರಿಗೆ ಬದುಕಿದರೆ ಬದುಕಲಿ ಎಂದುಕೊಂಡು ಕಣ್ಮುಚ್ಚಿ ಅಲ್ಲಿಂದ ಹಾರಿದವನು ಹೋಗಿ ಬಿದ್ದಿದ್ದು ಕೊಟ್ಟಿಗೆಗೆ! ಆದರೆ ಅಲ್ಲಿ ಎಮ್ಮೆ ಕೋಣಗಳಿರಲಿಲ್ಲ. ಬಿಳಿ ಬಣ್ಣದಲ್ಲಿ ಮಿಂದೆದ್ದು ಬಂದಂತಿದ್ದ ಸಾವಿರಾರು ಹಸುಗಳು!! ಅವುಗಳೆಲ್ಲದರ ಬಣ್ಣವೂ ಬಿಳಿಯೇ!!! ಬಿದ್ದಲ್ಲೇ ಮಲಗಿದೆ. ಅಲ್ಲೇ ನಿದ್ದೆ ಹತ್ತಿತು.

ಮರುದಿನ ಶಾಲೆಗೆ ಹೊರಟಿದ್ದೆ. ಇವತ್ತು ಮಳೆಯಿರಲಿಲ್ಲ, ಹಿಮ ಸುರಿಯುತ್ತಿತ್ತು. ದಾರಿಯಲ್ಲೊಂದು ಭೀಮಾಕಾರದ ಲಾರಿ, ಎದುರಿಗೆ ನವ ಜೋಡಿಯಿರುವ ಕಾರನ್ನು ಅಟ್ಟಿಸಿ ನಡೆದಂತಿತ್ತು. ಒಂದರೆಕ್ಷಣ ತಬ್ಬಿಬ್ಬಾದೆ. ಆತ ಅವನೇ? ಹೌದು. ಹೌದು ಅದು ಆತನೇ! ಲಾರಿಯನ್ನು ಓಡಿಸುತ್ತಿದ್ದವ ಕಿರೀಟ, ನೀಲಿ ನಿಲುವಂಗಿ ತೊಟ್ಟಿದ್ದ!! ತಕ್ಷಣ ಕಾರಿನಲ್ಲಿದ್ದವರಿಗೆ ಕೇಳಿಸಲಿ ಎಂದುಕೊಂಡು ಹೋ ಎಂದು ಅರಚಿದೆ. ಅಮ್ಮ ಬಂದು ಶಾಲೆಗೆ ಹೊತ್ತಾಯಿತು, ಹೋಗಲ್ವಾ? ಎಂದು ಗದರಿದಳು !!!

(ಕನಸುಗಳಿಗೆ ಬುಡವಿಲ್ಲ, ತುದಿಯಿಲ್ಲ, ಅರ್ಥ ಸಂಭಂಧವಿಲ್ಲ ಅಥವಾ ಎಲ್ಲವೂ ಇವೆ. ಬಿದ್ದ ಕನಸುಗಳಲ್ಲಿ ಬಹಳಷ್ಟು ಮರೆತು ಹೋಗುವುದೂ ನಿಜ. ಹೀಗೆ ಇತ್ತೀಚೆಗೆ ನನಗೆ ಬಿದ್ದ ಕನಸನ್ನು ಯಥಾವತ್ತಾಗಿ ಬ್ಲಾಗಿಗೆ ತುರುಕುತ್ತಿದ್ದೇನೆ, ಹಾಗೇ ಓದಿಕೊಳ್ಳಿ) ಲೇಖನದ ಕಟ್ಟ ಕೊನೆಯ ಸಾಲನ್ನು ಹೊರತುಪಡಿಸಿ ಉಳಿದವೆಲ್ಲಾ ಸತ್ಯ(?)
 

Older Posts »